ಒಳ ಮೀಸಲಾತಿ: ಬೊಮ್ಮಾಯಿ ಸರ್ಕಾರಕ್ಕೆ ಸಿಗುತ್ತಾ ಬೂಸ್ಟರ್ ಡೋಸ್?
ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿಪಕ್ಷಗಳಿಗೆ ಟೀಕಿಸಲು ಅಥವಾ ವಿರೋಧ ಮಾಡಲು ಅವಕಾಶ ಇಲ್ಲದ ಒಂದು ಸೂಕ್ಷ್ಮ ವಿಷಯ ಒಳಮೀಸಲಾತಿ ಜಾರಿಗೆ ಉತ್ಸಾಹ ತೋರಿದೆ.
ವರದಿ- ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ.14): ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದೊಂದೇ ಆಡಳಿತಾತ್ಮಕ ಅಸ್ತ್ರವನ್ನು ಬುಟ್ಟಿಯಿಂದ ಹೊರ ತೆಗೆದು ರಾಜಕೀಯವಾಗಿ ವಿಪಕ್ಷಗಳಿಗೆ ಏಟು ನೀಡುವ ಪ್ರಯತ್ನ ಮಾಡುತ್ತಿದೆ. ಸಹಜವಾಗಿ ಯಾವುದೇ ಸರ್ಕಾರವಾಗಿರಲಿ, ಯಾವುದೇ ಪಕ್ಷವಾಗಲಿ ತಾವು ತೆಗೆದುಕೊಳ್ಳುವ ನಿರ್ಧಾರದಿಂದ ರಾಜಕೀಯವಾಗಿ ತಮಗೆ ಎಷ್ಟು ಮತಗಳು ಹೆಚ್ಚಳ ಆಗಬಹದು, ಯಾವೆಲ್ಲಾ ಭಾಗಗಳಲ್ಲಿ ಇಂಪ್ಯಾಕ್ಟ್ ಮಾಡಬಲ್ಲದು ಮತ್ತು ತಮ್ಮ ತೀರ್ಮಾನಗಳಿಂದ ವಿಪಕ್ಷಗಳ ಧ್ವನಿ ಅಡಗಿಸಬಹುದೇ ಎನ್ನುವ ಯೋಚನೆ ಮಾಡುತ್ತವೆ. ಈ ಲೆಕ್ಕಾಚಾರ ಲಾಭ-ನಷ್ಟದ ಪರಿಣಾಮವನ್ನು ಗ್ರಹಿಸಿಯೆ ಸೂಕ್ಷ್ಮ ವಿಷಯಗಳನ್ನು ಚುನಾವಣೆ ಸಮೀಪ ಇರುವಾಗ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತಾರೆ. ಈಗ ಅಂತಹುದೇ ರಾಜಕೀಯ ಚತುರ ನಡೆಯನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಲು ಹೊರಟಿದೆ.
ಚುನಾವಣೆ ಸಮೀಪದಲ್ಲಿ ಬಿಜೆಪಿ ಭಾವನಾತ್ಮಕ ವಿಚಾರ ಮುಂದಿಟ್ಟು, ಧಾರ್ಮಿಕ ಆಚರಣೆ ನಂಬಿಕೆ ಪ್ರಸ್ತಾಪಿಸಿ ಮತ ಪಡೆಯುತ್ತದೆ ಎನ್ನುವ ಗಂಭೀರ ಆರೋಪವನ್ನು ಪ್ರತಿಪಕ್ಷಗಳು ಸದಾ ಮಾಡುತ್ತಾ ಬಂದಿವೆ. ಆದರೆ ಈಗ ವಿಪಕ್ಷಗಳಿಗೆ ಟೀಕೆ ಮಾಡಲು ಅಥವಾ ವಿರೋಧ ಮಾಡಲು ಅವಕಾಶ ಇಲ್ಲದ ಒಂದು ಸೂಕ್ಷ್ಮ ವಿಷಯ ಒಳಮೀಸಲಾತಿ ಜಾರಿಗೆ ಬೊಮ್ಮಾಯಿ ಸರ್ಕಾರ ಉತ್ಸಾಹ ತೋರಿದೆ.
ಒಳಮೀಸಲಿಗಾಗಿ ಈಗ ದಲಿತರ ಹೋರಾಟ: ಬೆಂಗಳೂರಿನಲ್ಲಿ ಪ್ರತಿಭಟನೆ
ಈಗಾಗಲೇ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಅದರ ರಾಜಕೀಯ ಲಾಭ ಪಡೆಯುವ ಪ್ರಯತ್ನ ರಾಜ್ಯ ಬಿಜೆಪಿಯಿಂದ ಈಗಾಗಲೇ ಸಾಗಿದೆ. ಪ್ರತಿ ರಾಜಕೀಯ ಸಮಾವೇಶದಲ್ಲಿಯೂ ಅದನ್ನು ಜೋರು ದನಿಯಲ್ಲಿ ಹೇಳುವ ಮೂಲಕ ಎಲ್ಲಾ ಬಿಜೆಪಿಗರ ಪ್ರಮುಖ ಭಾಷಣ ವಿಷಯವೇ ಮೀಸಲಾತಿ ಹೆಚ್ಚಳ ಮಾಡಿರುವ ನಿರ್ಣಯದ ಕುರಿತು ಬರುತ್ತಿದೆ. ಈ ಸಮಯದಲ್ಲೇ ಈಗ ಬಹುದಿನಗಳ ಬೇಡಿಕೆಯಾಗಿರುವ ಒಳ ಮೀಸಲಾತಿ ನೀಡುವ ತೀರ್ಮಾನವನ್ನು ಕೈಗೊಳ್ಳಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ ಎನ್ನುವುದು ಇಂಟ್ರಸ್ಟಿಂಗ್ ಸಂಗತಿ.
ಒಳ ಮೀಸಲಾತಿ ಜಾರಿಗೆ ರಾಜಕೀಯ ಬಣ್ಣ: ಒಳ ಮೀಸಲಾತಿ ನೀಡುವ ವಿಚಾರ ರಾಜ್ಯದಲ್ಲಿ ಚರ್ಚೆಗೆ ಬರುತ್ತಿದಂತೆ, ಕಾಂಗ್ರೆಸ್ ಬಿಜೆಪಿ ಸಹಜವಾಗಿ ಪರಸ್ಪರ ಕ್ರೆಡಿಟ್ ವಾರ್ ಶುರು ಮಾಡಿ ಬಿಟ್ಟಿದೆ. ಈಗಾಗಲೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ದಲಿತ ಬಲಗೈ ಪಂಗಡವನ್ನು ರಾಜಕೀಯವಾಗಿ ತಮ್ಮತ್ತ ಸೆಳೆಯಲು ಒಳ ಮೀಸಲಾತಿ ಸಹಕಾರಿ. ಹೀಗಾಗಿಯೇ ಒಳಮೀಸಲಾತಿ ಜಾರಿಗೆ ಬೊಮ್ಮಾಯಿ ಸರ್ಕಾರ ಸಚಿವ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ರಚಿಸಿ, ಕಾಯ್ದೆ ಜಾರಿಗೆ ವೇಗ ನೀಡಿದೆ. ಅದರ ಬೆನ್ನಲ್ಲೆ ಸಿದ್ದರಾಮಯ್ಯ ಇದು ಬೊಮ್ಮಾಯಿ ಸರ್ಕಾರದ ಕಣ್ಣೊರೆಸುವ ತಂತ್ರ ಎಂದು ಕಮೆಂಟ್ ಮಾಡಿದ್ದಾರೆ. ಅದಕ್ಕೆ ಸಿಎಂ ಬೊಮ್ಮಾಯಿ ಸಹ ಕೌಂಟರ್ ಅಟ್ಯಾಕ್ ನೀಡಿದ್ದು, ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಯಾಕೆ ಜಾರಿ ಮಾಡಲಿಲ್ಲ ಎನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ. ಈ ರಾಜಕೀಯ ಟಾಕ್ ವಾರ್ ಒಳಾರ್ಥ ಬಹಳ ಸರಳ. ಅಂತಿಮವಾಗಿ ಯಾವ ಪಂಗಡ ಯಾವ ಪಕ್ಷದ ಜೊತೆ ನಿಲ್ಲುತ್ತಾರೆ ಎನ್ನೋದಷ್ಟೆ. ಹೀಗಾಗಿ ಒಳ ಮೀಸಲಾತಿ ಜಾರಿ ಆಗುವ ಮೊದಲೆ ಕ್ರೆಡಿಟ್ ತಾಲೀಮು ಕೂಡ ಜೋರಾಗಿ ಸಾಗಿದೆ.
ಒಳ ಮೀಸಲಾತಿ ಎಡ-ಬಲ ಅಭಿಪ್ರಾಯ ಬೇಧ ಇದೆಯೆ ?: ಒಳ ಮೀಸಲಾತಿ ಬೇಕು ಎನ್ನುವ ಕೂಗು ದಲಿತ ಎಡ ಪಂಗಡಗಳಿಂದ ಹೆಚ್ಚು ಬಲವಾಗಿ ಕೇಳಿ ಬರುತ್ತಿದೆ. ಇಬ್ಬರಲ್ಲಿಯೂ ಇರುವ ಪರಸ್ಪರ ಆರೋಪ ಏನಂದರೆ ಹೆಚ್ಚಿನ ಸೌಲಭ್ಯಗಳೆಲ್ಲಾ ಬಲ ಪಂಗಡಕ್ಕೆ ಸೇರುತ್ತಿದೆ. ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ನಮಗೆ ಮೀಸಲಾತಿ ಲಾಭ ಕಡಿಮೆ ಎನ್ನುವ ವಾದವನ್ನು ದಲಿತ ಎಡ ಪಂಗಡದವರು ಮಾಡುತ್ತಾರೆ. ನಿಶ್ಚಿತವಾಗಿ ಈ ಒಳಮೀಸಲಾತಿ ರಾಜಕೀಯಕ್ಕೆ ಒಳಪಟ್ಟಿಲ್ಲ. ಒಳ ಮೀಸಲಾತಿ ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತವಾಗಿದೆ. ಆದರೆ ನಮ್ಮಲ್ಲಿ ರಾಜಕೀಯ ವ್ಯವಸ್ಥೆ ಗಟ್ಟಿಗೊಂಡಿದ್ದು ಅಥವಾ ಜಾತಿ ಸಮುದಾಯ ಮೀರಿ ರಾಜಕೀಯ ನಡೆಯೋದು ತೀರಾ ವಿರಳ. ಹೀಗಾಗಿ ಯಾವುದೇ ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡರು ಅದನ್ನು ರಾಜಕೀಯದ ನೆಲೆಗಟ್ಟಿನಲ್ಲಿ ಚರ್ಚೆ ಮಾಡುವುದು ರೂಡಿ ಮತ್ತು ವಾಸ್ತವವಾಗಿದೆ.
ಒಳ ಮೀಸಲಾತಿ ವಿಚಾರ: ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದ ಸಿ.ಟಿ. ರವಿ
ಮೀಸಲು ಕ್ಷೇತ್ರದಲ್ಲಿ ಯಾವ ಪಕ್ಷ ಹೆಚ್ಚು ಗೆದ್ದಿದೆ?: ರಾಜ್ಯದಲ್ಲಿ ಒಟ್ಟು 36 ಮೀಸಲು ವಿಧಾನಸಭೆ ಕ್ಷೇತ್ರಗಳಿವೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಒಟ್ಟು 17 ಸ್ಥಾನದಲ್ಲಿ ಗೆಲುವನ್ನು ಸಾಧಿಸಿತ್ತು. ಬಳಿಕ ಕೊಳ್ಳೆಗಾಲದ ಮಹೇಶ್ ಮತ್ತು ನಾಗೇಶ್ ಬಿಜೆಪಿಗೆ ಬೆಂಬಲ ನೀಡಿದರ ಪರಿಣಾಮ ಈಗ ಬಿಜೆಯಲ್ಲಿ 19 ದಲಿತ ಶಾಸಕರು ಇದ್ದಾರೆ. ಅದೇ ರೀತಿ ಕಾಂಗ್ರೆಸ್ 11 ಕ್ಷೇತ್ರ ಮತ್ತು ಜೆಡಿಎಸ್ 6 ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಒಂದು ಹೆಜ್ಜೆ ಮುಂದಕ್ಕೆ ಹೋಗಿ ಲೆಕ್ಕಾಚಾರ ಮಾಡಿ ನೋಡಿದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ದಲಿತ ಬಲಕ್ಕೆ 8 ಕ್ಷೇತ್ರದಲ್ಲಿ ಟಿಕೆಟ್ ನೀಡಿತ್ತು. ಅದರಲ್ಲಿ ನಾಲ್ವರು ಗೆದ್ದಿದ್ದಾರೆ. ಎಡ ಬಣದಲ್ಲಿ 10 ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿತ್ತು. ಗೆದ್ದಿರೋದು ಐದು ಕ್ಷೇತ್ರ. ಭೋವಿ ಸಮುದಾಯಕ್ಕೆ 7 ಟಿಕೆಟ್ ನೀಡಲಾಗಿದ್ದು, 3 ಕ್ಷೇತ್ರದಲ್ಲಿ ಗೆದ್ದಿದೆ. ಲಂಬಾಣಿ ಸಮುದಾಯಕ್ಕೆ 8 ಟಿಕೆಟ್ ನೀಡಿದ್ದು, ಐದು ಕ್ಷೇತ್ರದಲ್ಲಿ ಗೆದ್ದಿದೆ. ಮುಂಡಾಳ ಸಮುದಾಯ ಒಂದು ಕ್ಷೇತ್ರದಲ್ಲಿ ಒಂದು ಗೆಲುವು. ಕೊರಮ ಮತ್ತು ಕೊರಚ ತಲಾ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು, ಎರಡರಲ್ಲೂ ಸೋಲು ಕಂಡಿದೆ.
ಎಡ, ಬಲ, ಲಂಬಾಣಿ ತಲಾ 12 ಟಿಕೆಟ್ ಹಂಚಿಕೆ: ಈ ಅಂಕಿ ಅಂಶ ಕೊಳ್ಳೆಗಾಲದ ಎನ್.ಮಹೇಶ್ ಮತ್ತು ಕೋಲಾರ ಪಕ್ಷೇತರ ಶಾಸಕ ನಾಗೇಶ್ ಒಳಗೊಂಡಂತೆ ಇದೆ. ಈಗ ಬಿಜೆಪಿಯಲ್ಲಿ ಒಂದು ಬಲವಾದ ಚರ್ಚೆ ಶುರುವಾಗಿದೆ. ಅದೇನೆಂದರೆ 36 ಕ್ಷೇತ್ರದಲ್ಲಿ ದಲಿತ ಎಡ, ಬಲ, ಭೋವಿ, ಲಂಬಾಣಿ ಸಮುದಾಯಕ್ಕೆ ತಲಾ 12 ಟಿಕೆಟ್ ನೀಡಬೇಕು ಎನ್ನುವ ಸಣ್ಣ ಕೂಗು ಪಕ್ಷದ ಒಳಗೆ ಚಾಲ್ತಿಗೆ ಬಂದಿದೆ. ಇನ್ನೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಚುನಾವಣೆಯಲ್ಲಿ ದಲಿತ ಬಲಕ್ಕೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಹೀಗಾಗಿ, ಈ ಬಾರಿ ಕನಿಷ್ಟ ಒಂದು ಟಿಕೆಟ್ ಆದರೂ ನೀಡಿದರೆ ಮಲ್ಲಿಕಾರ್ಜುನ ಖರ್ಗೆ ಅಂತಹ ನಾಯಕರ ವಿರುದ್ಧ ಪಾರ್ಟಿ ಸಂಘಟನೆ ಮಾಡೋದು ರಾಜಕೀಯವಾಗಿ ಸುಲಭವಾಗುತ್ತದೆ. ಇಲ್ಲವಾದರೆ ತಳಮಟ್ಟದಲ್ಲಿ ಪಕ್ಷ ಸಂಘಟನೆ ಕಷ್ಟ ಎನ್ನುವ ವಾದವೂ ಪಕ್ಷದ ಒಳಗೆ ಇದೆ.
ಮೀಸಲಾತಿ ವಿಚಾರ 'ಪಂಜಾಬ್'ನಲ್ಲಿ ಏನಾಗಿತ್ತು? 2011ರ ವರದಿ ಪ್ರಕಾರ ಪಂಜಾಬ್ ನಲ್ಲಿ ಅತಿ ಹೆಚ್ಚು ಅಂದರೆ, ಪಂಜಾಬ್ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 31.94 ರಷ್ಟು ಎಸ್ ಸಿ ಸಮುದಾಯ ಜನಸಂಖ್ಯೆ ಇದೆ. ಈ ರಾಜ್ಯದಲ್ಲಿ 1975 ಮೇ 5ರಂದು ಅಂದಿನ ಸಿಎಂ ಜೈಲ್ ಸಿಂಗ್ ಸರ್ಕಾರ ರಾಮಚಂದ್ರ ಆಯೋಗ ಮಾಡಿದ್ದ ಶಿಪಾರಸು ಜಾರಿಗೆ ತರಲು ನಿರ್ಧರಿಸಿ, ಒಳ ಮೀಸಲಾತಿ ಘೋಷಣೆ ಮಾಡಿತ್ತು. ಬಳಿಕ ಹರಿಯಾಣ ಬಿಹಾರ, ಉತ್ತರ ಪ್ರದೇಶ, ತಮಿಳುನಾಡು ಕೂಡ ಪಂಜಾಬ್ ಮಾದರಿಯಲ್ಲೇ ಮೀಸಲಾತಿ ಪ್ರಕಟಿಸಲು ಮುಂದಾದವು. ಮಾತ್ರವಲ್ಲ ಅಖಂಡ ಆಂಧ್ರಪ್ರದೇಶ ಕೂಡ ರಾಮಚಂದ್ರ ಆಯೋಗದ ಶಿಪಾರಸಿನ ಪ್ರಕಾರ ಮೀಸಲಾತಿ ಘೋಷಣೆ ಮಾಡಿತು. ಸರ್ಕಾರದ ನಿರ್ಣಯವನ್ನು ಹೈಕೋರ್ಟ್ ಪುರಸ್ಕರಿಸಿತು.
ಈಗ ಒಳಮೀಸಲಾತಿ ಅಸ್ತ್ರಕ್ಕೆ ಬಿಜೆಪಿ ಸರ್ಕಾರದಿಂದ ಸಿದ್ಧತೆ
ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ: ಆದರೆ ಮಾಲಾ ಮಹನಾಡು ಸಂಘಟನೆಯ ಇ.ವಿ. ಚಿನ್ನಯ್ಯ ಸರ್ಕಾರ ಜಾರಿಗೆ ತಂದ ನಿರ್ಧಾರದ ವಿರುದ್ಧ ಸುಪ್ರೀಂಗೆ ಹೋದರು. ಸುಧೀರ್ಘ ವಿಚಾರಗಳ ಬಳಿಕ 2005 ರಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಒಳಗೊಂಡ ಐವರ ನ್ಯಾಯಪೀಠ ಒಳ ಮೀಸಲಾತಿ ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ಶೆಡ್ಯುಲ್ ಕಾಸ್ಟ್ ಸಿಂಗಲ್ ಜಾತಿ. ಪಾರ್ಲಿಮೆಂಟ್ ನಲ್ಲಿ ಒಪ್ಪಿಗೆ ಆಗದೆ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವಾಗಲಿ, ಕಡಿಮೆ ಮಾಡೋದಾಗಲಿ, ಯಾವುದೆ ಜಾತಿ ಸೇರಿಸೋದಾಗಲಿ ಸಾಧ್ಯವಿಲ್ಲ ಎಂದು ಸುಪ್ರೀಂ ತೀರ್ಪು ನೀಡಿತ್ತು. ಸುಪ್ರೀಂ ತೀರ್ಪಿನ ಪರಿಣಾಮ ಪಂಜಾಬ್ ಮತ್ತು ಹರಿಯಾಣದಲ್ಲಿ ಒಳ ಮೀಸಲಾತಿ ರದ್ದಾಯಿತು. ಬಳಿಕ ಆಂಧ್ರ ಪ್ರದೇಶ ಸರ್ಕಾರದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ನ್ಯಾ. ಉಷಾ ಮೆಹರಾ ಆಯೋಗ ರಚಿಸಿತು. ಸಮಿತಿ ವರದಿ 2008 ಮೇ 1ಕ್ಕೆ ಸಲ್ಲಿಕೆಯಾಗಿ, ಸಂವಿಧಾನದ 341 ನೇ ವಿಧಿಗೆ ತಿದ್ದುಪಡಿ ತರಲು ಸಮಿತಿ ಶಿಪಾರಸು ಮಾಡಿತು. ಅದಾದ ಬಳಿಕ ಹರಿಯಾಣ, ಪಂಜಾಬ್ ಸರ್ಕಾರ ಸುಪ್ರೀಂ ಮೊರೆ ಹೋಗಿದ್ದು, 2014 ರಲ್ಲಿ ಐವರು ನ್ಯಾಯಮೂರ್ತಿಗಳ ಪಂಚಪೀಠ ರಚನೆ ಆಗಿದ್ದು, ಸುಪ್ರೀಂ ಒಳ ಮೀಸಲಾತಿ ಬೆಂಬಲಿಸಿದೆ.
ಯಾವಾಗ ರಿಸ್ಕ್ ತೆಗೆದುಕೊಳ್ಳುತ್ತೆ ಬೊಮ್ಮಾಯಿ ಸರ್ಕಾರ? : ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಹೇಗೆ ಬಂದಿದೆ. ಸುಪ್ರೀಂ ಕೋರ್ಟ್ ಏನು ಅಭಿಪ್ರಾಯ ವ್ಯಕ್ತಪಡಿಸದೆ ಎನ್ನುವ ಸಂಪೂರ್ಣ ಮಾಹಿತಿ ಇದ್ದರೂ ಆಯಾ ಕಾಲಕ್ಕೆ ಸರ್ಕಾರಗಳು ಕೆಲವೊಮ್ಮೆ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುತ್ತದೆ. ಆ ರಿಸ್ಕ್ ನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ಯಾವ ಸಮಯದಲ್ಲಿ ತೆಗೆದುಕೊಳ್ಳೋಕೆ ಹೊರಟಿದೆ ಎನ್ನುವುದು ಗಮನಾರ್ಹ. ಇನ್ನೇನು 4-5 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಸಹಜವಾಗಿ ಚುನಾವಣೆ ದೃಷ್ಟಿಯಿಂದ ನೋಡಿದಾಗ ಬೊಮ್ಮಾಯಿ ಸರ್ಕಾರದ ನಡೆಯಿಂದ ರಾಜಕೀಯ ಇದ್ದೆ ಇದೆ ಎನ್ನೋದರಲ್ಲಿ ಅನುಮಾನ ಬೇಡ. ರಾಜಕೀಯವಾಗಿ ಒಳ ಮೀಸಲಾತಿ ತೀರ್ಮಾನ ಒಂದು ರಾಜಕೀಯ ಪಕ್ಷಕ್ಕೆ ಸರ್ಕಾರಕ್ಕೆ ಬೂಸ್ಟರ್ ಡೋಸ್ ಕೂಡ ಹೌದು. ಆದರೆ ಇಂತಹ ಮಹಾನ್ ತೀರ್ಮಾನಗಳು ಬೊಮ್ಮಾಯಿ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರಬಲ್ಲದೇ ಕಾಲವೇ ಅದಕ್ಕೆ ಉತ್ತರ.