ಬೆಂಗಳೂರು, (ಜುಲೈ.28): ಭೂಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ಜಾರಿಗೆ ತರುವ ವಿಚಾರವಾಗಿ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಅಲ್ಲದೇ ರಾಜ್ಯ ಬಿಜೆಪಿ ಸರ್ಕಾರ ಪ್ರತಿಭಟನೆಯನ್ನ ಸಹ ಮಾಡಿದೆ.ಇದೀಗ ರಾಜ್ಯಸಭಾ ಸದಸ್ಯ, ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ಅಖಾಡಕ್ಕಿಳಿದಿದ್ದಾರೆ. 

ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ ಮೂಲಕ ರೈತರು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರು ಬೀದಿ ಪಾಲಾಗಲಿದ್ದಾರೆ. ಹೀಗಾಗಿ ಈ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೂರು ಬಾರಿ ಪತ್ರ ಬರೆದಿದ್ದೇನೆ. ಆದರೆ ಉತ್ತರಿಸದೇ ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆಗಳನ್ನು ಜಾರಿ ಮಾಡಿರುವುದು ವಿಷಾಧನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರಿ: ಕೃಷಿಗೆ ಸಂಬಂಧಿಸಿದ 2 ಸುಗ್ರೀವಾಜ್ಞೆ!

ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ರೈತರ, ಕಾರ್ಮಿಕರ ವಿರೋಧಿ ತಿದ್ದುಪಡಿ ಗಳನ್ನು ತಂದು ಸುಗ್ರೀವಾಜ್ಞೆ ಮೂಲಕ ರೈತರನ್ನು ಮತ್ತು ಕಾರ್ಮಿಕರನ್ನು ಬೀದಿ ಪಾಲು ಮಾಡಿದೆ ಎಂದು ದೇವೇಗೌಡರು ಆರೋಪಿಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ಮಾರಕವಾಗಿದೆ. ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಜ ರೈತ ವಿರೋಧಿ ನೀತಿ ಅನುಸರಿಸಿದ್ದು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಬಹುಮತ ಇದೆ ಎಂದು ಏನು ಬೇಕಾದರೂ ಮಾಡಬಹುದು ಅನ್ನುವ ಮನಸ್ಥಿತಿಯಲ್ಲಿ ಸರ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ದ ಎಚ್‌ಡಿಡಿ ಕಿಡಿ

ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆ ತಿದ್ದುಪಡಿ, ನೂತನ ಕೈಗಾರಿಕೆ ನೀತಿ. ಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ಸಣ್ಣ ಸಣ್ಣ ರೈತರಿಗೆ ತೊಂದರೆಯಾಗಲಿದೆ. ಕೇವಲ ಕಾರ್ಪೋರೇಟ್ ಕುಳಗಳಿಗಳಿಗಷ್ಟೇ ಲಾಭವಾಗಲಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಭೂಸುಧಾರಣೆ ಕಾಯ್ದೆ 1961 ಸೆಕ್ಷನ್ 79 ಎ, 79 ಬಿ, 79 ಸಿ ಗಳನ್ನು ತಿದ್ದುಪಡಿ ಹಾಗೂ ಕರ್ನಾಟಕ ಕೃಷಿ ಉತ್ಪನ್ಮ ಮಾರುಕಟ್ಟೆ ಸಮಿತಿ 1966 ಕ್ಕೆ ಮಾಡಿರುವ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಬೇಕು ಒತ್ತಾಯಿಸಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ಪರಿಣಾಮ ಏನಾಗಲಿದೆ. ಈ ಬಗ್ಗೆ ಸರ್ಕಾರ ಮಾಹಿತಿ ನೀಡದೆ ಕಾಯ್ದೆ ಜಾರಿ ಮಾಡಿದೆ. ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲ ಆಗಲಿದೆ.ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲೂ ಮಾಫಿಯಾ ನಡೆಯುತ್ತದೆ. ಮಾಫಿಯಾಗೆ ಅನುಕೂಲ ಮಾಡಿಕೊಡುತ್ತದೆ .ಇದು ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ ಎಂದು ವಾಗ್ದಾಳಿ ನಡೆಸಿದರು. 

ಯಾರೋ ಕೈಗಾರಿಕೋದ್ಯಮಿ ಬಂದು ಭೂಮಿ ಪಡೆಯುತ್ತಾರೆ. ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. 7 ವರ್ಷಗಳ ನಂತರ ಅದೇ ಭೂಮಿಯನ್ನು ಪರಾಭಾರೆ ಮಾಡಬಹುದು. 7 ವರ್ಷಗಳ ನಂತರ ಅಂದಿನ ಬೆಲೆಗೆ ಮಾರಾಟ ಮಾಡುತ್ತಾರೆ ಎಂದರು.

ಹೋರಾಟದ ಎಚ್ಚರಿಕೆ

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ತಿದ್ದುಪಡಿ ಕಾಯ್ದೆ ವಾಪಸ್ಸು ಪಡೆಯುವಂತೆ ಕೋರಿರುವುದಾಗಿ ತಿಳಿಸಿದರು.ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಬೇಕಿತ್ತು ಎಂದ ಅವರು, ಸರ್ಕಾರದ ನೀತಿ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ರೈತ ವಿರೋಧಿ ನೀತಿ ತಂದಿದ್ದಾರೆ. ಇದರ ವಿರುದ್ಧ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡುತ್ತೇವೆ ಎಂದರು.ಕೊರೋನಾ ಕಾರಣ ನಾನು ಮಾತನಾಡಲು ಆಗಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದು ಅಂತ ಹಿಂದೆ ಸರಿದಿದ್ದೆ ಎಂದು ತಿಳಿಸಿದರು.