ನವದೆಹಲಿ(ಜು.22): ಇತ್ತೀಚೆಗೆ ಕರ್ನಾಟಕದಲ್ಲಿ ರೈತರು, ನಿಗದಿತ ಮಾರುಕಟ್ಟೆಹೊರತಾಗಿ ತಮಗೆ ಬೇಕಾದ ಕಡೆ ಕೃಷಿ ಉತ್ಪನ್ನ ಮಾಡಬಹುದು ಎಂದು ಅಲ್ಲಿನ ಸರ್ಕಾರ ಅಧ್ಯಾದೇಶ ಹೊರಡಿಸಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಕೂಡ ಇದೇ ಮಾದರಿಯ 2 ಸುಗ್ರೀವಾಜ್ಞೆಗಳ ಅಧಿಸೂಚನೆ ಮಂಗಳವಾರ ಪ್ರಕಟವಾಗಿದೆ.

ಈ ಪ್ರಕಾರ ನೋಂದಾಯಿತ ಮಾರುಕಟ್ಟೆಯ ಹೊರತಾಗಿ ರೈತರು ತಮ್ಮ ಇಷ್ಟಕ್ಕೆ ಅನುಗುಣವಾಗಿ ರಾಜ್ಯದ ಗಡಿ ದಾಟಿಯೂ ಕೃಷಿ ಉತ್ಪನ್ನಗಳನ್ನು ಮಾರಲು ಅವಕಾಶ ಸಿಗಲಿದೆ ಹಾಗೂ ಖಾಸಗಿ ಕಂಪನಿಗಳ ಜತೆ ಬೆಳೆ ಬೆಳೆವ ಮುನ್ನವೇ ಒಪ್ಪಂದ ಮಾಡಿಕೊಂಡು ಉತ್ಪನ್ನಗಳನ್ನು ಮಾರಬಹುದಾಗಿದೆ.

ಈ ಕುರಿತಂತೆ ಮಂಗಳವಾರ ‘ಕೃಷಿ ಉತ್ಪನ್ನ ವ್ಯಾಪಾರ ಹಾಗೂ ವಾಣಿಜ್ಯ ಸುಗ್ರೀವಾಜ್ಞೆ’ ಮತ್ತು ‘ಕೃಷಿ ಸಬಲೀಕರಣ ಹಾಗೂ ದರ ರಕ್ಷಣಾ-ಕೃಷಿ ಸೇವೆ ಒಪ್ಪಂದ’ ಎಂಬ ಅಧ್ಯಾದೇಶ ಹೊರಡಿಸಲು ಜೂನ್‌ 5ರಂದೇ ನಿರ್ಧರಿಸಲಾಗಿತ್ತು. ಈ ಅಧ್ಯಾದೇಶಗಳ ಅಧಿಸೂಚನೆಯನ್ನು ಈಗ ಕೃಷಿ ಸಚಿವಾಲಯ ಪ್ರಕಟಿಸಿದೆ.

ಸುಗ್ರೀವಾಜ್ಞೆಯಲ್ಲೇನಿದೆ?:

- ರೈತರು ತಮ್ಮ ಉತ್ಪನ್ನಗಳನ್ನು ನೋಂದಾಯಿತ ಎಪಿಎಂಸಿ ಹೊರತುಪಡಿಸಿ ಅಂತಾರಾಜ್ಯ ಹಾಗೂ ಅಂತರ್‌ಜಿಲ್ಲಾ ಮಾರಾಟ ಮಾಡಬಹುದು.

- ರೈತರು ಉತ್ಪನ್ನಗಳನ್ನು ಗೋದಾಮು, ಕೋಲ್ಡ್‌ ಸ್ಟೋರೇಜ್‌, ಕಾರ್ಖಾನೆ ಆವರಣ- ಹೀಗೆ ಯಾವುದೇ ಸ್ಥಳದಲ್ಲಿ ಮಾರಬಹುದು.

- ನಿರ್ದಿಷ್ಟವ್ಯಾಪಾರ ಪ್ರದೇಶದಲ್ಲಿ ರೈತರು ಇ-ಟ್ರೇಡಿಂಗ್‌ ಮಾಡಬಹುದು.

- ಇ-ಟ್ರೇಡಿಂಗ್‌ ಮೂಲಕ ಖಾಸಗಿ ಕಂಪನಿಗಳು, ಕೃಷಿ ಸೊಸೈಟಿಗಳು, ಕೃಷಿ ಉತ್ಪನ್ನ ಸಂಸ್ಥೆಗಳು ಉತ್ಪನ್ನ ಖರೀದಿಸಬಹುದು.

- ಒಂದು ವೇಳೆ ಇ-ಟ್ರೇಡಿಂಗ್‌ ನಿಯಮ ಉಲ್ಲಂಘಿಸಿದರೆ 50 ಸಾವಿರ ರು.ನಿಂದ 10 ಲಕ್ಷ ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.

- ಉಲ್ಲಂಘನೆ ಇನ್ನೂ ಮುಂದುವರಿದರೆ ದಿನಕ್ಕೆ 10 ಸಾವಿರ ರು.ನಂತೆ ದಂಡ ವಿಧಿಸಲಾಗುವುದು

- ಕೃಷಿ ಉತ್ಪನ್ನಗಳನ್ನು ಖರೀದಿಸಿದವರು ಅದೇ ದಿನವೇ ರೈತನಿಗೆ ಹಣ ಕೊಡಬೇಕು. ಕೆಲವು ನಿರ್ದಿಷ್ಟಸಂದರ್ಭದಲ್ಲಿ 3 ವಾರದೊಳಗೆ ಕೊಡಬೇಕು.

- ರಾಜ್ಯ ಸರ್ಕಾರಗಳು ರೈತರ ಮೇಲೆ ಹಾಗೂ ಇ-ಟ್ರೇಡಿಂಗ್‌ ವೇದಿಕೆಗಳ ಮೇಲೆ ಯಾವುದೇ ಮಾರುಕಟ್ಟೆಶುಲ್ಕ, ಸೆಸ್‌ ವಿಧಿಸಕೂಡದು.

- ಯಾವುದಾದರೂ ವ್ಯಾಪಾರ ವಿವಾದ ಉಂಟಾದಲ್ಲಿ ಆ ಬಗ್ಗೆ ಸಬ್‌ ಜುಡಿಷಿಯಲ್‌ ಮ್ಯಾಜಿಸ್ಪ್ರೇಟರಿಗೆ ದೂರಬಹುದು.

- ರೈತರು ಬೆಳೆ ಬೆಳೆವ ಮುನ್ನವೇ ಅದರ ಮಾರಾಟಕ್ಕೆ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಬಹುದು. ಇದಕ್ಕೆ ಒಪ್ಪಂದದ ಸಂದರ್ಭದಲ್ಲೇ ದರ ನಿಗದಿ ಆಗಿರಬೇಕು.