ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಕೇಂದ್ರ ಸಚಿವ ಹೆಚ್‌ಡಿ.ಕುಮಾರಸ್ವಾಮಿ ಸ್ಪಷ್ಟನೆ. ದೇವೇಗೌಡರು ಟಿಕೆಟ್‌ಗೆ ಅರ್ಜಿ ಹಾಕಿರಲಿಲ್ಲ ಎಂದಿರುವ ಅವರು, ಈ ವಿಚಾರವನ್ನಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿ ಒಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆಂದು ಆರೋಪಿಸಿದರು.

ಮಂಡ್ಯ (ಜೂ.10): ಮಾಜಿ ಪ್ರಧಾನಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ಕೈತಪ್ಪಿದ ಕುರಿತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ. ದೇವೇಗೌಡರು ರಾಜ್ಯಸಭೆಯ ಟಿಕೆಟ್‌ಗೆ ಅರ್ಜಿಯನ್ನೇ ಹಾಕಿರಲಿಲ್ಲ ಎಂದಿರುವ ಎಚ್ಡಿಕೆ, ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿ-ಜೆಡಿಎಸ್​​ ಮೈತ್ರಿ ಒಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ದೇವೇಗೌಡರ ಬಗ್ಗೆ ಕಾಂಗ್ರೆಸ್ಸಿಗರಿಗೆ ಈಗ ಅನುಕಂಪ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತಾಲೂಕಿನ ತಗ್ಗಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಿಜೆಪಿಯಿಂದ ದೇವೇಗೌಡರಿಗೆ ರಾಜ್ಯಸಭೆಯ ಟಿಕೆಟ್ ಸಿಗದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಟಿಕೆಟ್ ಕೊಡುವಂತೆ ದೇವೇಗೌಡರು ಯಾರ ಬಳಿಯೂ ಅರ್ಜಿ ಹಾಕಿರಲಿಲ್ಲ. ಬಿಜೆಪಿಯಲ್ಲೇ 60 ಮಂದಿ ಶಾಸಕರಿರುವಾಗ ನಾವು ಟಿಕೆಟ್‌ ಕೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

70 ವರ್ಷದ ಗೌಡರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಹೇಗೆ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ಈಗ ದೇವೇಗೌಡರ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ. ಮುಂಬರುವ ಚುನಾವಣೆ ಬಗ್ಗೆ ಮೈತ್ರಿಪಕ್ಷದ ಬಗ್ಗೆ ಅವರಿಗೆ ಆತಂಕವಿದೆ. ಅದಕ್ಕಾಗಿ ಮೈತ್ರಿಯಲ್ಲಿ ಬಿರುಕು ಮೂಡುವಂತೆ ಮಾಡಲು ಒಕ್ಕಲಿಗರಿಗೆ ಅನ್ಯಾಯ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ದೂಷಿಸಿದರು.

ಈ ಹಿಂದೆಯೂ ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಗೆ ಹೋಗಿರಲಿಲ್ಲ. ದೇವೇಗೌಡರ ವಿರುದ್ಧ ಮತ್ತೊಬ್ಬ ಅಭ್ಯರ್ಥಿ ನಿಲ್ಲುವ ಅವಕಾಶ ಇರಲಿಲ್ಲ. ಹಾಗಾಗಿ ಅವರನ್ನು ಅನಿವಾರ್ಯವಾಗಿ ಬೆಂಬಲಿಸಬೇಕಾಯಿತು. ದೇವೇಗೌಡರದ್ದು ಹೋರಾಟದ ಬದುಕು. ಅಧಿಕಾರ ಕೇಳಿಕೊಂಡು ಇನ್ನೊಬ್ಬರ ಮನೆ ಬಾಗಿಲಿಗೆ ಎಂದೂ ಹೋಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದವರು ಅವರು ಎಂದರು.