ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ನಾಳೆಯಿಂದಲೇ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಇಳಿಯಲಿದ್ದಾರೆ. ಇದರಿಂದ ಜೆಡಿಎಸ್‌ ಅಭ್ಯರ್ಥಿಗಳಿಗೆ ಆನೆಬಲ ಸಿಕ್ಕಂತಾಗಲಿದೆ.

ಬೆಂಗಳೂರು (ಏ.10): ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಇಳಿಯಲಿದ್ದಾರೆ. ಇದರಿಂದ ಜೆಡಿಎಸ್‌ ಅಭ್ಯರ್ಥಿಗಳಿಗೆ ಆನೆಬಲ ಸಿಕ್ಕಂತಾಗಲಿದೆ ಎಂದು ಜೆಡಿಎಸ್‌ ನಾಯಕರು ತಿಳಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮ್ಮೆಯಾದರೂ ಜೆಡಿಎಸ್‌ನಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎನ್ನುವುದು ದೇವೇಗೌಡರ ಕನಸಾಗಿದೆ. ಇನ್ನು ತಮ್ಮ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸ್ವತಂತ್ರ ಸರ್ಕಾರದ ಹಾಗೂ ಒಂದು ಅವಧಿಗೆ ಪೂರ್ಣವಾಗಿ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಂಚರತ್ನ ಯಾತ್ರೆ ಮಾಡಿದ್ದಾರೆ. ಆದರೆ, ದೇವೇಗೌಡರು ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತ್ರ ಭಾಗವಹಿಸಿದ್ದರು. ಈಗ ಚುನಾವಣೆಯ ಮತದಾನ ದಿನಕ್ಕೆ ಒಂದು ತಿಂಗಳು ಬಾಕಿ ಇರುವಾಗ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.

ದೇವೇಗೌಡರ ಸಾವು ಬಯಸಿದವರಿಗೆ ತಕ್ಕ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ಕೊನೆಯ ಹಂತದಲ್ಲಿ ಜೆಡಿಎಸ್‌ಗೆ ದೊಡ್ಡಗೌಡ್ರ ಬಲ: ರಾಜ್ಯ ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಜೆಡಿಎಸ್‌ಗೆ ಬಲ ಹೆಚ್ಚಿಸಲು ದೇವೆಗೌಡರು ಪ್ರಯತ್ನ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗಗಳಲ್ಲಿ ಅನಾರೋಗ್ಯದ ನಡುವೆಯೂ ದೇವೆಗೌಡರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ, ಜೆಡಿಎಸ್‌ ಪ್ರಾಭಲ್ಯವಿರುವ ಹಾಗೂ ಈ ಹಿಂದೆ ಜೆಡಿಎಸ್‌ ಅಭ್ಯರ್ಥಿಗಳು ಇದ್ದ ಪ್ರದೇಶಗಳಾದ ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿಯೂ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್‌ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆಯಿಂದಲೇ ಚುನಾವಣಾ ಅಖಾಡಕ್ಕೆ ಎಂಟ್ರಿ: ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಏಪ್ರಿಲ್ 10 ರ ಬಳಿಕ ಚುನಾವಣಾ ಅಖಾಡದಲ್ಲಿ ಪ್ರಚಾರ ಮಾಡೋದಾಗಿ ದೇವೆಗೌಡರು ಸಂದೇಶ ತಿಳಿಸಿದ್ದರು. ಅದರಂತೆ, ನಾಳೆಯಿಂದಲೇ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ನೀರಾವರಿ ಹರಿಕಾರ ಎಂದು ಕರೆಯುವ ದೇವೇಗೌಡರು ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಲು ತೀರ್ಮಾನಿಸಿದ್ದಾರೆ. ಈ ಹಿಂದೆ ತಾವು ಅಧಿಕಾರದಲ್ಲಿ ಇದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ನೀಡಿದ್ದ ನೀರಾವರಿ ಯೋಜನೆಗಳನ್ನು ಮನದಟ್ಟು ಮಾಡಲಿದ್ದಾರೆ.

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಮೆಲುಕು: ರಾಜ್ಯದ ಉತ್ತರ ಕರ್ನಾಟಕದ ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಹಿಂದೆ ದೇವೇಗೌಡರು ಒದಗಿಸಿದ್ದ ನೀರಾವರಿ ಯೋಜನೆಗಳನ್ನು ಅವರ ಮುಂದಿಟ್ಟು, ಜನರ ಪತಗಳನ್ನು ಗಳಿಸುವ ಲೆಕ್ಕಾಚಾರವನ್ನು ಮಾಡಲಾಗಿದೆ. ಜೊತೆಗೆ, ಇನ್ನು ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಇನ್ನಷ್ಟು ನೀರಾವರಿ ಯೋಜನೆಗಳ ಜೊತೆಗೆ ಜನಸಾಮಾನ್ಯರ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಕುರಿತು ಭರವಸೆಯನ್ನೂ ನೀಡಲಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಅವರು ಘೋಷಣೆ ಮಾಡಿರುವ ಪ್ರಣಾಳಿಕೆ ವಿಷಯಗಳನ್ನು ಜನರ ಮುಂದಿಡಲಿದ್ದಾರೆ. ಈ ಮೂಲಕ ಒಟ್ಟಾರೆ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ದ ಜೆಡಿಎಸ್ ಟಫ್ ಫೈಟ್ ನೀಡಲು ದೇವೇಗೌಡರ ಅಸ್ತ್ರವನ್ನು ಬಳಕೆ ಮಾಡಲಾಗುತ್ತಿದೆ. 

ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್‌ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ

ಈವರೆಗೂ ರೇವಣ್ಣ ನನ್ನೊಂದಿಗೆ ಮಾತನಾಡಿಲ್ಲ: ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ನಾಡಿದ್ದು 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಅದರಲ್ಲಿ ಹಾಸನ ಇರೋದಿಲ್ಲ. ಹಾಸನ ಗೊಂದಲ ಬೇರೆ ಎರಡನೇ ಪಟ್ಟಿಯ ವಿಳಂಬವಾಗಲು ಹಾಸನ ಕಾರಣವಲ್ಲ. 42 ಜನರ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಹಾಸನ ವಿಚಾರದಲ್ಲಿ ಕಠಿಣ ಎನ್ನುವದೇನಿಲ್ಲ‌ ಕಾರ್ಯಕರ್ತರ ಭಾವನೆ ಮೇರೆಗೆ ಟಿಕೆಟ್ ಘೋಷಣೆ ಮಾಡಲಾಗುವುದು. ಈವರೆಗೂ ರೇವಣ್ಣ ನನ್ನ ಜೊತೆಗೆ ಮಾತನಾಡಿಲ್ಲ. ಎಲ್ಲರಿಗೂ ಅಸೆ ಇರುತ್ತದೆ. ಹಾಸನದ ಬಿಜೆಪಿ ಅಭ್ಯರ್ಥಿ ಸೋಲಿಸಲು ನಮ್ಮ ಕುಟುಂಬದ ಅಭ್ಯರ್ಥಿ ಬೇಕಿಲ್ಲ‌ ಸಾಮಾನ್ಯ ಕಾರ್ಯಕರ್ತ ಸಾಕು ಎಂದು ಹೇಳಿದರು.