ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಾವು ಬಯಸಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಮಧುಗಿರಿ ಬಳಿ ಕೈಮರದ ಸಮೀಪ ಭಾನುವಾರ ಮಾತನಾಡಿ, ದೇವೇಗೌಡರ ಹೆಸರು ಉಳಿಸಬೇಕಾಗಿದೆ.

ತುಮಕೂರು (ಏ.10): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಾವು ಬಯಸಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಮಧುಗಿರಿ ಬಳಿ ಕೈಮರದ ಸಮೀಪ ಭಾನುವಾರ ಮಾತನಾಡಿ, ದೇವೇಗೌಡರ ಹೆಸರು ಉಳಿಸಬೇಕಾಗಿದೆ. 2008ರ ಉಪ ಚುನಾವಣೆಯಲ್ಲಿ ಮಧುಗಿರಿಯಿಂದ ಪತ್ನಿ ಅನಿತಾ ಸ್ಪರ್ಧೆ ಮಾಡಿ ಗೆದ್ದು ಬಂದರು. ಅನಿತಾ ಮದುವೆಗೂ ಮೊದಲು ನನಗೆ ಷರತ್ತು ಹಾಕಿದ್ದರು. ರಾಜಕೀಯಕ್ಕೆ ಹೋಗಲ್ಲ ಅಂದರೆ ಮಾತ್ರ ಮದುವೆ ಆಗುತ್ತೇನೆ ಅಂದಿದ್ದರು. ಮಧುಗಿರಿ ಕ್ಷೇತ್ರದಲ್ಲಿ ಆ ವೇಳೆ ದೊಡ್ಡ ಹೋರಾಟ ಇತ್ತು. 

ಒಂದು ಕಡೆ ನಮ್ಮ ಕುಟುಂಬದ ಶಂಕ್ರಣ್ಣ ನಿಂತಿದ್ದರು. ಇನ್ನೂ ಈ ರಾಕ್ಷಸ ಕೆ.ಎನ್‌.ರಾಜಣ್ಣ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಎರಡರ ನಡುವೆ ನಾವು ಉಪಚುನಾವಣೆ ಮಾಡಿದ್ದೇವೆ. ದೇವರ ಇಚ್ಛೆ ಅನಿತಾ ಕೂಡ ರಾಜಕೀಯಕ್ಕೆ ಬಂದರು ಎಂದರು. ನಾಯಕ ಸಮುದಾಯದ ಗುರುಗಳು ತೀರಿ ಹೋದಾಗ, ಮಧುಗಿರಿಯ ನಾಯಕ ಸಮುದಾಯದ ಮುಖಂಡ ಗುರುಗಳ ಕುಟುಂಬದ ನೆರವಿಗೆ ಹೋಗಿಲ್ಲ. ನಾನು ಆ ಕುಟುಂಬದ ನೆರವಿಗೆ ಹೋಗಿದ್ದೆ ಎಂದು ರಾಜಣ್ಣ ಅವರ ಹೆಸರೇಳದೆ ಕಿಡಿಕಾರಿದರು. 

ಪ್ರಧಾನಿ ಮೋದಿ ರಾಜ್ಯಕ್ಕೆ ಬರ್ತಿ​ರೋದು ರೆಸ್ಟ್‌ ಪಡೆ​ಯಲು: ಎಚ್‌.ಡಿ.ಕುಮಾ​ರ​ಸ್ವಾಮಿ

ಅಂದು ದೇವೇಗೌಡರ ಆಶೀರ್ವಾದದಿಂದ ಗೆದ್ದ ರಾಜಣ್ಣ ಈಗ ದೇವೇಗೌಡರ ಸಾವು ಬಯಸಿದ್ದಾರೆ. ದೇವೇಗೌಡರು ಕುತಂತ್ರದ ರಾಜಕಾರಣದಿಂದ ತುಮಕೂರಿನಲ್ಲಿ ಸೋತರು. ಆ ನೋವಿನಿಂದ ಮಾನಸಿಕವಾಗಿ ಕುಗ್ಗಿ ಇಂದು ಆರೋಗ್ಯ ತಪ್ಪಿದ್ದಾರೆ. ದೇವೇಗೌಡರು ಇನ್ನೂ ನಮ್ಮ ಜೊತೆ ಜೀವಂತವಾಗಿ ಇರಬೇಕು ಅಂದರೆ, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕು. ತುಮಕೂರು ಜಿಲ್ಲೆಯ ಜನ ಈ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಭಾವುಕರಾದರು.

11ರಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಬ್ಬಳ್ಳಿಗೆ: ಹುಬ್ಬಳ್ಳಿಯ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಚುನಾವಣಾ ಪ್ರಚಾರಕ್ಕೆ ಏ. 11ರಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ನವಲಗುಂದದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ದೇವರಾಜ ಕಂಬಳಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಂದು ಹುಬ್ಬಳ್ಳಿ ನಗರದ ಸಿದ್ಧಾರೂಢ ಮಠ, ದರ್ಗಾಗಳಿಗೆ ಭೇಟಿ ನೀಡಿ ದರ್ಶನ ಪಡೆದು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಇನ್ನು ಗ್ರಾಮ ಮಟ್ಟದಿಂದ ಜೆಡಿಎಸ್‌ ಸಂಘಟನೆ ಮಾಡಲಾಗುತ್ತಿದೆ. ನಾನು ಸಹ ಪ್ರಬಲ ಆಕಾಂಕ್ಷಿಯಾಗಿದ್ದು ರಾಜ್ಯ ನಾಯಕರ ಸೂಚನೆಯಂತೆ ಚುನಾವಣೆ ಎದುರಿಸಲು ಸಿದ್ಧರಾಗುತ್ತೇವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಆಡಳಿತದಿಂದ ಜನರ ಬೇಸತ್ತು ಹೋಗಿದ್ದಾರೆ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್‌ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವಲಗುಂದ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಭ್ಯರ್ಥಿಯಾಗುವ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕಾರ್ಯಕರ್ತರು ಒತ್ತಾಯಿಸುತ್ತೇವೆ ಎಂದರು.

ದೇವೇಗೌಡರ ರೀತಿ ನನ್ನ ಬ್ಲಾಕ್ಮೇಲ್‌ ಅಸಾಧ್ಯ: ಭವಾನಿಗೆ ಪರೋಕ್ಷ ಟಾಂಗ್‌ ಕೊಟ್ಟ ಎಚ್‌ಡಿಕೆ

ಮುಖಂಡರಾದ ಶ್ರೀಶೈಲ ಮೂಲಿಮನಿ, ಶಿವಶಂಕರ ಕಲ್ಲೂರ ಮಾತನಾಡಿದರು. ಈ ಸಂದರ್ಭದಲ್ಲಿ ಟಿಕೆಟ್‌ ಆಕಾಂಕ್ಷಿಗಳಾದ ನಿಂಗಪ್ಪ ಬಡೇಪ್ಪನವರ, ಅಣ್ಣಿಗೇರಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಡಿ.ಎಂ. ಶಲವಡಿ, ನವಲಗುಂದ ತಾಲೂಕು ಅಧ್ಯಕ್ಷ ಫಕ್ಕೀರಪ್ಪ ದೊಡಮನಿ, ಮಂಜು ಆಡಕಾವು ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.