ಕಾಂಗ್ರೆಸ್‌ನಿಂದ ಗುಲಾಮ್‌ ನಬಿ ನಿರ್ಗಮನ ವಿಷಾದನೀಯ: ಎಚ್‌.ಸಿ.ಮಹದೇವಪ್ಪ

ಕಾಂಗ್ರೆಸ್‌ ಪಕ್ಷ ತೊರೆದ ಗುಲಾಮ್‌ ನಬಿ ಆಜಾದ್‌ ಅವರು ಹೊಸದೊಂದು ಪಕ್ಷ ಸ್ಥಾಪಿಸುವ ಕುರಿತು ಸುದ್ದಿ ಹಬ್ಬಿದೆ. ಬಹುಶಃ ಮುಂದೆ ತಮ್ಮ ರಾಜ್ಯದಲ್ಲಿ ಗೆಲುವು ಸಾಧಿಸಲು ಆಗದಿದ್ದರೂ ಸಾಧ್ಯವಾದಷ್ಟು ಮತಗಳನ್ನು ಒಡೆದು ಕಾಂಗ್ರೆಸ್‌ಗೆ ನಷ್ಟಉಂಟು ಮಾಡುವ ಇರಾದೆಯನ್ನು ಅವರು ಹೊಂದಿರುವುದು ಈ ಮೂಲಕ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

hc mahadevappa talks over ghulam nabi azad at mysuru gvd

ಮೈಸೂರು (ಆ.29): ಕಾಂಗ್ರೆಸ್‌ ಪಕ್ಷ ತೊರೆದ ಗುಲಾಮ್‌ ನಬಿ ಆಜಾದ್‌ ಅವರು ಹೊಸದೊಂದು ಪಕ್ಷ ಸ್ಥಾಪಿಸುವ ಕುರಿತು ಸುದ್ದಿ ಹಬ್ಬಿದೆ. ಬಹುಶಃ ಮುಂದೆ ತಮ್ಮ ರಾಜ್ಯದಲ್ಲಿ ಗೆಲುವು ಸಾಧಿಸಲು ಆಗದಿದ್ದರೂ ಸಾಧ್ಯವಾದಷ್ಟು ಮತಗಳನ್ನು ಒಡೆದು ಕಾಂಗ್ರೆಸ್‌ಗೆ ನಷ್ಟ ಉಂಟು ಮಾಡುವ ಇರಾದೆಯನ್ನು ಅವರು ಹೊಂದಿರುವುದು ಈ ಮೂಲಕ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹೇದವಪ್ಪ ತಿಳಿಸಿದ್ದಾರೆ.

ಈ ಹಿಂದೆ ಪಂಜಾಬ್‌ ಚುನಾವಣಾ ವರ್ಷದಲ್ಲೂ ಆಗಿನ ಪಂಜಾಬ್‌ ಮುಖ್ಯಮಂತ್ರಿ ಆಗಿದ್ದ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರೂ ಇದೇ ಮಾದರಿಯಲ್ಲಿ ನಡೆದುಕೊಂಡು ಹೊಸ ಪಕ್ಷ ಕಟ್ಟಿ, ತಾವು ಗೆಲ್ಲದೇ ಹೋದರೂ ಬಹಳಷ್ಟು ಜನಪ್ರಿಯತೆಯಿಂದ ಕೂಡಿದ್ದ ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸುವಲ್ಲಿ ಸಫಲರಾದರು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಕೋಮುವಾದಿಗಳು ಈ ರೀತಿಯ ಕೆಟ್ಟ ಮಾರ್ಗಗಳಿಂದ ಅಧಿಕಾರ ಪಡೆಯಲು ಸಫಲರಾಗುತ್ತಿದ್ದಾರೆಯೇ ವಿನಃ ಜನರಿಗೆ ಸಹಾಯವಾಗುವಂತಹ ಜನಪರ ಆಡಳಿತ ನೀಡಲು ಅವರ ಕೈಯಲ್ಲಿ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರಿ ಟೆಂಡರ್‌ ಬಾಯ್ಕಟ್‌ ಮಾಡಿ: ಗುತ್ತಿಗೆದಾರರಿಗೆ ಎಚ್ಡಿಕೆ ಕರೆ

ಕೇವಲ ಕಾರ್ಪೊರೇಟ್‌ಗಳ ಗುಲಾಮಗಿರಿ ಮಾಡುವ ಇವರಿಗೆ ಜನಪರ ಸರ್ಕಾರವಾಗಿ ಆಡಳಿತ ಮಾಡುವ ಯೋಗ್ಯತೆ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ ಮುಂದೆಯೂ ಇರುವುದಿಲ್ಲ. ಇಂತಹವರ ಎದುರು ಜನರು ತಮ್ಮ ಸ್ಪಷ್ಟತೆಯನ್ನು ಬಲವಾಗಿ ಹೊಂದಬೇಕು. ಬಿಜೆಪಿಗರು ಸೃಷ್ಟಿಸಿರುವ ಕ್ರಿಟಿಕಲ್‌ ಸೋಷಿಯಲ್‌ ಡಿಸ್‌ಕೋರ್ಸ್‌ನ ಬಗ್ಗೆ ಅರಿವಿದ್ದೂ ಗುಲಾಮ್‌ ನಬಿ ಆಜಾದ್‌ ಅಂತಹ ಹಿರಿಯ ನಾಯಕರು ತಾವು ಹಂತ ಹಂತವಾಗಿ ಬೆಳೆದ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಬೇಸರದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಇವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಿಂದ ಪಕ್ಷಕ್ಕೆ ಲಾಭ ಆಗುತ್ತದೋ ಇಲ್ಲವೇ ನಷ್ಟವಾಗುತ್ತದೋ ಎಂಬ ಚರ್ಚೆ ಬೇರೆ. ಆದರೆ, ಸಮಾಜದ ತಿಳುವಳಿಕೆಯ ಜೊತೆಗೆ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಕೋಮುವಾದಿಗಳ ಹಾವಳಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹೋರಾಟದ ನೊಗ ಹೊರಬೇಕಿದ್ದ ಗುಲಾಮ್‌ ನಬಿ ಆಜಾದ್‌ ಅವರು, ಹೋರಾಟದಿಂದ ಹಿಂದೆ ಸರಿದಿದ್ದು ರಾಹುಲ್‌ ಅವರನ್ನೇ ಅನಗತ್ಯವಾಗಿ ಟೀಕಿಸುವ ಕೋಮುವಾದಿಗಳ ಪರಿಪಾಠವನ್ನು ಬೆಳೆಸಿಕೊಂಡಿರುವುದು ತರವಲ್ಲ ಎಂದು ಅವರು ಖಂಡಿಸಿದ್ದಾರೆ.

ಈ ಸಂದರ್ಭವು ಚುನಾವಣಾ ಸೋಲು ಗೆಲವು ಮತ್ತು ಅಧಿಕಾರದ ವಿಚಾರವನ್ನು ಮೀರಿ, ಪ್ರಜಾಪ್ರಭುತ್ವದ ಉಳಿವು ಎಂಬ ಸಂದರ್ಭಕ್ಕೆ ಬಂದು ನಿಂತಿದೆ. ಚುನಾವಣಾ ಗೆಲುವುಗಳೇ ಮಾನದಂಡ ಆಗಿದ್ದರೆ ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್‌, ಛತ್ತೀಸ್‌ಗಡ ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದು, ಬಿಜೆಪಿಗರ ಅಕ್ರಮ ಮಾರ್ಗಕ್ಕೆ ಸಿಲುಕಿ ಸರ್ಕಾರ ಕಳೆದುಕೊಳ್ಳುವ ಸಂದರ್ಭ ಎದುರಿಸಿದೆ. ಈ ಎಲ್ಲಾ ಗೆಲುವುಗಳ ಸಂದರ್ಭದಲ್ಲೂ ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿದ್ದರು. ಇಂತಹ ಸರಳ ಸಂಗತಿಗಳನ್ನು ಆಜಾದ್‌ ಅವರು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಅವರು ತಿಳಿಸಿದ್ದಾರೆ.

ಗಂಭೀರ ಆರೋಪ ಬಂದಾಗ ಭಂಡತನ ಬೇಡ: ಸಿದ್ದರಾಮಯ್ಯ

ಪ್ರಬಲವಾದ ಜನಪರ ಸಿದ್ಧಾಂತ ಇಲ್ಲದ ಯಾವುದೇ ವ್ಯಕ್ತಿಗಳಿಂದ ಒಂದು ರಾಜಕೀಯ ಪಕ್ಷವಾಗಲಿ, ಇಲ್ಲವೇ ಸಂವಿಧಾನಾತ್ಮಕ ಪ್ರಜಾಪ್ರಭುತ್ವವಾಗಲೀ ಉಳಿಯುವುದಿಲ್ಲ. ಅದು ಆಜಾದ್‌ ಆದರೂ ಅಷ್ಟೇ ಇನ್ಯಾರೇ ಆದರೂ ಅಷ್ಟೇ ಎಂದು ಅವರು ಹೇಳಿದ್ದಾರೆ.

Latest Videos
Follow Us:
Download App:
  • android
  • ios