ಗಂಭೀರ ಆರೋಪ ಬಂದಾಗ ಭಂಡತನ ಬೇಡ: ಸಿದ್ದರಾಮಯ್ಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ಸರ್ಕಾರ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶಿಸಬಾರದು. ಬದಲಿಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಒಳಪಡಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರು (ಆ.27): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗಂಭೀರ ಆರೋಪಗಳು ಬಂದಾಗ ಸರ್ಕಾರ ನೆಪ ಹೇಳುವ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಭಂಡತನ ಪ್ರದರ್ಶಿಸಬಾರದು. ಬದಲಿಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆಗೆ ಒಳಪಡಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು, ವಿಧಾನಸೌಧದ ಗೋಡೆಗಳು ಮಾತನಾಡುತ್ತಿವೆ ಎಂದರು.
ಈ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪಕ್ಕೆ ಸಿಎಂ ದಾಖಲೆ ಕೇಳುತ್ತಿದ್ದಾರೆ. ಗುತ್ತಿಗೆದಾರರು ತಮಗೆ ಕಿರುಕುಳ ನೀಡುತ್ತಾರೆ, ಮತ್ತೆ ಕಾಮಗಾರಿ ನೀಡುವುದಿಲ್ಲ ಎಂಬ ಕಾರಣಕ್ಕೆ ಸುಮ್ಮನಿದ್ದರು. ಆದರೆ ಸ್ವತಂತ್ರ್ಯ ಸಂಸ್ಥೆಯಿಂದ ತನಿಖೆ ನಡೆಸಿದರೆ ಅವರು ದಾಖಲೆ ಕೊಡಲು ಸಿದ್ಧರಿದ್ದಾರೆ. ಅದು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಶಿಕ್ಷೆಗೆ ಗುರಿಯಾಗಲು ಸಿದ್ಧ ಎಂದೂ ಕೂಡ ತಿಳಿಸಿರುವುದಾಗಿ ಸಿದ್ದರಾಮಯ್ಯ ಹೇಳಿದರು. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆ ಏನು? ಎಂದು ಅವರು ಪ್ರಶ್ನಿಸಿದರು.
ನಾನು ಯಾವ ಗುತ್ತಿಗೆದಾರರ ಪರವೂ ಇಲ್ಲ: ಸಿದ್ದರಾಮಯ್ಯ
22,000 ಕೋಟಿ ಬಾಕಿ: ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿ 22,000 ಕೋಟಿ ಬಿಲ್ ಹಣ ಬಿಡುಗಡೆಗೆ ಬಾಕಿ ಇದೆ. ಶೇ. 40 ಸರ್ಕಾರಕ್ಕೆ, ಶೇ. 20 ಗುತ್ತಿಗೆದಾರನಿಗೆ, ಶೇ. 15 ಜಿಎಸ್ಟಿಗೆ, ಉಳಿದ ಶೇ. 25ರಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಿದ್ದಾಗ ಗುಣಮಟ್ಟದ ಕಾಮಗಾರಿ ಹೇಗೆ ಸಾಧ್ಯ? ನಮ್ಮ ಸರ್ಕಾರದ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿ, ಕಟ್ಟಿಸಿಕೊಟ್ಟಿದ್ದೆವು. ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಮನೆ ಕಟ್ಟಿಸಿದ ಉದಾಹರಣೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ಸ್ವಾತಂತ್ರ್ಯ ಬಂದ ನಂತರದಿಂದ 2018ರ ಬಜೆಟ್ ಮಂಡನೆ ಮಾಡುವ ವೇಳೆಗೆ ಕರ್ನಾಟಕದ ಮೇಲೆ ಇದ್ದ ಒಟ್ಟು ಸಾಲ 2.42 ಲಕ್ಷದ ಕೋಟಿ. ಇದು ಈ ವರ್ಷದ ಕೊನೆಗೆ 5.40 ಲಕ್ಷ ಕೋಟಿಗೆ ಹೆಚ್ಚಾಗುತ್ತದೆ. 14,000 ಕೋಟಿ ಅಸಲು ಮತ್ತು 29,000 ಕೋಟಿ ಬಡ್ಡಿ, ಒಟ್ಟು 43,000 ಕೋಟಿ ರೂಪಾಯಿ ಕಟ್ಟಬೇಕು. ಈ ಹಣ ಅಭಿವೃದ್ಧಿ ಕಾರ್ಯಗಳಿಗೆ ಸಿಗುವುದಿಲ್ಲ. ಇವೆಲ್ಲಾ ಬದ್ಧತಾ ಖರ್ಚುಗಳು. ಹಾಗಾಗಿ ಕಳೆದ ಮೂರು ವರ್ಷದಿಂದ ರಾಜಸ್ವ ಕೊರತೆ ಉಂಟಾಗಿದೆ. ಈ ವರ್ಷ ಸರ್ಕಾರ 80,000 ಕೋಟಿ ಸಾಲ ಮಾಡಿದೆ ಎಂದು ದೂರಿದರು.
ಸಂಸದ ಪ್ರತಾಪ್ ಸಿಂಹನಿಗೆ ಸತ್ಯ ಹೇಳಿಯೇ ಗೊತ್ತಿಲ್ಲ, ಅವನೊಬ್ಬ ಯಕಶ್ಚಿತ್ ರಾಜಕಾರಣಿ. ನಮ್ಮ ಪಕ್ಷದ ಲಕ್ಷ್ಮಣ್ ಸೇರಿದಂತೆ ಅನೇಕರು ಅವರಿಗೆ ಸವಾಲು ಹಾಕಿದ್ದಾರೆ, ಅವರ ಜೊತೆ ಚರ್ಚೆಗೆ ಹೋಗಲಿ ಎಂದು ಹೇಳಿದರು. ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಉಪಾಧ್ಯಕ್ಷ ಎಂ.ಎಸ್. ಬಸವಣ್ಣ, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ಕಾರ್ಯದರ್ಶಿ ರಂಗಸ್ವಾಮಿ ಇದ್ದರು.
ಕೋರ್ಟ್ ತೀರ್ಪು ಸ್ವಾಗತ: ಎಸಿಬಿ ರದ್ದತಿಗೆ ಸಂಬಂಧ ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸಿದ್ದೇವೆ. ಎಸಿಬಿ ಅಧಿಕಾರಿ ಭಾಸ್ಕರ್‌ರಾವ್ ಎಂಬವರ ಪುತ್ರ ಮನೆ ಮನೆಯಲ್ಲೇ ಲಂಚ ಸ್ವೀಕರಿಸುತ್ತಿದ್ದ. ಇದರಿಂದ ಎಸಿಬಿ ರಚಿಸಬೇಕಾಯಿತು. ಸಾವರ್ಕರ್ ಪರ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. ಸಾವಕರ್ರ ಸತ್ತಿದ್ದು 1966ರಲ್ಲಿ, ಅವರು ಜೈಲಿನಿಂದ ಬಿಡುಗಡೆಯಾದದ್ದು 1924 ರಲ್ಲಿ. 1922 ರಿಂದ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೆ ಒಮ್ಮೆಯಾದರು ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಭಾಗಿಯಾಗಿದ್ದಾರ? ಇದೇ ಆಧಾರದ ಮೇಲೆ ನಾನು ಮಾತನಾಡಿದ್ದು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯನವರ ಸಹೋದರ ರಾಮೇಗೌಡ ನಿಧನ
ತಪ್ಪು ದಾರಿಗೆ ಎಳೆಯುತ್ತಾರೆ: ಇಲ್ಲಿ ಸರ್ಕಾರ ಎಲ್ಲಿದೆ? ಸರ್ಕಾರ ಸತ್ತು ಹೋಗಿದೆ, ಕೆಟ್ಟು ನಿಂತಿದೆ. ಇದೇ ಕಾರಣಕ್ಕೆ ಮಾಧುಸ್ವಾಮಿ ಅವರು ರಾಜ್ಯದಲ್ಲಿ ಸರ್ಕಾರವೂ ಇಲ್ಲ, ಆಡಳಿತವೂ ಇಲ್ಲ, ಸುಮ್ಮನೆ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ. ಇಂಥಾ ವಿಚಾರಗಳನ್ನು ನಾನು ಮಾತನಾಡಿದರೆ ಸಿದ್ದರಾಮಯ್ಯ ಮಾಂಸ ತಿಂದ, ಸಾವರ್ಕರ್‌ಗೆ ಅವಮಾನ ಮಾಡಿದ, ಧರ್ಮ, ಜಾತಿ ವಿಚಾರ ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಾರೆ ಎಂದು ಅವರು ಟೀಕಿಸಿದರು. ತಾವಾಗಿಯೇ ಲಂಚ ಕೊಡುವುದು ಬೇರೆ, ಲಂಚ ನೀಡದಿದ್ದರೆ ಬಿಲ್ ಹಣ ಬಿಡುಗಡೆ ಮಾಡಲ್ಲ ಎಂದು ಒತ್ತಡ ಹೇರಿ ಲಂಚ ಪಡೆಯುವುದು ಬೇರೆ. ಈಗ ಶೇ 40 ಕಮಿಷನ್ ಕಡ್ಡಾಯ ಮಾಡಲಾಗಿದೆ. ಲಂಚ ಕೊಡುವುದಿಲ್ಲ ಎನ್ನುವವರು ಸಂತೋಷ್ ಪಾಟೀಲ್‌ನಂತೆ ಸಾಯಬೇಕಾಗುತ್ತದೆ ಎಂದು ಟೀಕಿಸಿದರು.