ಹಾಸನ, (ಸೆ.18): ಜೆಡಿಎಸ್ ನಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವವರಿಗೆ ಮಣೆ ಹಾಕಲಾಗುತ್ತಿದ್ದು, ಇದಕ್ಕೆ ವರಿಷ್ಠರು ಬೆಂಬಲ ನೀಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. 

 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಹಾಗೂ ಹಾಲು ಒಕ್ಕೂಟದ ನಿರ್ದೇಶಕರೂ ಆಗಿರುವ ಹೊನ್ನವಳ್ಳಿ ಕೆ.ಸತೀಶ್ ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದನ್ನು ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಗಮನಕ್ಕೆ ತರಲಾಗಿತ್ತು. ಆದರೂ ನನ್ನ ಅಭಿಪ್ರಾಯ ಪಡೆಯದೆ ಮೇಲಿನ ಎರಡೂ ಸ್ಥಾನಗಳಿಗೆ ಮತ್ತೆ ಅವರನ್ನೇ ಪುನರಾಯ್ಕೆ ಮಾಡಲಾಗಿದೆ. ಇದು ಎಚ್.ಡಿ.ರೇವಣ್ಣ ಅವರ ಸರ್ವಾಧಿಕಾರಿ ಮನೋಭಾವ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಯಕತ್ವ ಬದಲಾವಣೆ: ‌ಇದುವರೆಗೆ ನಾನು ನುಡಿದ ಭವಿಷ್ಯ ಎಂದಿಗೂ ಸುಳ್ಳಾಗಿಲ್ಲ ಎಂದ ಬಿಜೆಪಿ ನಾಯಕ

ಮಾಜಿ ಸಚಿವ ಕೆ.ಬಿ.ಮಲ್ಲಪ್ಪ ಅವರ ಕಾಲದಿಂದಲೂ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಸತೀಶ್‌ ಕೆಲಸ ಮಾಡಿಲ್ಲ. ಇತ್ತೀಚೆಗೆ ನಡೆದ ನೌಕರರ ಚುನಾವಣೆ ಹಾಗೂ ಒಕ್ಕಲಿಗರ ಸಂಘದ ಚುನಾವಣೆಯಲ್ಲೂ ವಿರೋಧಿಗಳೊಂದಿಗೆ ಕೈಜೋಡಿಸಿದ್ದಾರೆ. ಗುಂಪುಗಾರಿಕೆ ತಡೆಗಟ್ಟುವುದನ್ನು ಬಿಟ್ಟು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ಬೆಂಬಲವಾಗಿ ನಿಂತರೆ ತಾಯಿಯೇ ಮಗುವಿಗೆ ವಿಷ ಉಣಿಸಿದಂತೆ. ವಿಷ ತಿಂದ ಮಗು ಬದುಕಲು ಸಾಧ್ಯವೆ ಎಂದು  ಎಚ್‌ಡಿ ರೇವಣ್ಣಗೆ ಪ್ರಶ್ನಿಸಿದರು.

ಪಕ್ಷದಲ್ಲಿನ ವಿದ್ಯಮಾನಗಳು ಮನಸ್ಸಿಗೆ ತೀವ್ರ ಬೇಸರ ತರಿಸಿದೆ. ಅಧಿವೇಶನದ ಸಮಯದಲ್ಲಿ ನಾಯಕರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.  ಈ ಹಿಂದೆ ಅಷ್ಟೇ ಶಾಸಕ ಎ.ಟಿ. ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದ್ರೆ, ಇದೀಗ ಮತ್ತೆ ಹಾಸನ ಜಿಲ್ಲಾ ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ರಾಮಸ್ವಾಮಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.