ಭಾರತೀಯ ಜನತಾ ಪಕ್ಷ ಕೈಗೊಂಡ ನಿರ್ಣಯವನ್ನು ಸ್ವಾಗತಿಸುತ್ತೇನೆ. ಬಿಜೆಪಿ ನಿರ್ಧಾರದಿಂದ ಸಂತಸವಾಗಿದ್ದು, ಮುಂದೇನು ಮಾಡಬೇಕು ಎಂಬ ಬಗ್ಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಯಲ್ಲಾಪುರ/ಕಾರವಾರ (ಮೇ.28): ಭಾರತೀಯ ಜನತಾ ಪಕ್ಷ ಕೈಗೊಂಡ ನಿರ್ಣಯವನ್ನು ಸ್ವಾಗತಿಸುತ್ತೇನೆ. ಬಿಜೆಪಿ ನಿರ್ಧಾರದಿಂದ ಸಂತಸವಾಗಿದ್ದು, ಮುಂದೇನು ಮಾಡಬೇಕು ಎಂಬ ಬಗ್ಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಬಿಜೆಪಿಯಿಂದ ತಮ್ಮನ್ನು ಉಚ್ಚಾಟಿಸಿರುವ ಕುರಿತು ಮಂಗಳವಾರ ಪ್ರತಿಕ್ರಿಯಿಸಿ, ನ್ಯಾಯ-ಅನ್ಯಾಯದ ಕುರಿತು ವಿಮರ್ಶೆ ಮಾಡಲು ಹೋಗಲ್ಲ.
ಪಕ್ಷ ಯಾವುದೇ ನಿರ್ಣಯ ಕೈಗೊಂಡರೂ ಸ್ವಾಗತ ಮಾಡುತ್ತೇನೆ. ಬಿಜೆಪಿ ಉಚ್ಚಾಟನೆ ನಿರ್ಣಯ ಯಾವ ಯಾವ ಕಾಲಕ್ಕೆ ಯಾರ ಯಾರ ಮೇಲೆ ತೆಗೆದುಕೊಂಡಿದೆ ಅನ್ನೋದು ಯಕ್ಷ ಪ್ರಶ್ನೆ. ಇದಕ್ಕೆಲ್ಲಾ ಕಾಲ ಉತ್ತರಿಸಲಿದೆ. ಉಚ್ಚಾಟನೆ ಅವರ ವಿವೇಚನೆಗೆ ಬಿಟ್ಟದ್ದು, ನನಗೇನೂ ಆಘಾತವಿಲ್ಲ. ನಾನು ಕ್ಷೇತ್ರದ ಜನರ ಸ್ಥಿತಿಗತಿ ಗಮನಿಸಿ ನಿರ್ಣಯ ಮಾಡುತ್ತೇನೆ. ಪಕ್ಷ ನೋಟೀಸ್ ನೀಡಿದಾಗ 16 ಪುಟದ ನನ್ನ ಉತ್ತರ ನೀಡಿದ್ದೇನೆ. ಪಕ್ಷದ ನಿರ್ಣಯದಿಂದ ಆಶ್ಚರ್ಯವೂ ಆಗಿದೆ, ಸಂತೋಷವೂ ಆಗಿದೆ ಎಂದರು.
ಎಂಎಲ್‌ಸಿ ಸಿ.ಟಿ.ರವಿ ತಾನೊಬ್ಬನೇ ನಾಯಕ ಅಂತಾ ಅನ್ಕೊಳ್ಳೋದು ತಪ್ಪು ಕಲ್ಪನೆ. ಪಕ್ಷದ ವಿರೋಧಿ ಚಟುವಟಿಕೆ ಕುರಿತು ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಹಿರಿಯ ನಾಯಕರ ಗಮನಕ್ಕೆ ತರಲಾಗಿತ್ತು. ಆದರೆ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ ನಾಯಕರಿಗೆ ಪಕ್ಷದ ಪ್ರಮುಖ ಸ್ಥಾನ ನೀಡಿದ್ದರು. ಹೀಗಾಗಿ ಪಕ್ಷದದಲ್ಲಿ ತಟಸ್ಥವಾವಿರಬೇಕಾಯಿತು. ಬಿಜೆಪಿಯಲ್ಲಿ ಎಷ್ಟು ಜನರನ್ನು ಉಚ್ಚಾಟನೆ ಮಾಡುತ್ತಾರೋ ಗೊತ್ತಿಲ್ಲ. ನಾನು, ಶಾಸಕ ಎಸ್.ಟಿ.ಸೋಮಶೇಖರ್ ಬೆಂಗಳೂರಿನಲ್ಲಿ ಅವರ ಹಣೆಬರಹ ಬಿಚ್ಚಿಡುತ್ತೇವೆ ಎಂದರು.
ಬನವಾಸಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೂಡಿ ಬನವಾಸಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಮಧುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ₹೧.೭೪ ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಯೋಜನೆ ಹಾಕಲಾಗಿದೆ. ಕಂದಬೋತ್ಸವ ಸಂದರ್ಭದಲ್ಲಿ ನುಡಿದಂತೆ ಪಂಪವನ ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು, ಈಗಾಗಲೇ ಪಂಪವನದ ಸುತ್ತ ತಂತಿ ಬೇಲಿ ಹಾಕಲು ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾರ್ಯಗಳು ತಾತ್ಕಾಲಿಕವಾಗದೇ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ತಂತಿ ಬೇಲಿಯ ಬದಲು ಕಂಪೌಂಡ್ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ಬಾರಿಯ ಕದಂಬೋತ್ಸವ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತರಾದ ಡಾ.ಬಿ.ಎ. ವಿವೇಕ ರೈ ಸಲಹೆ ಸ್ವೀಕರಿಸಿ, ಆದಿಕವಿ ಪಂಪನ ವರ್ಣನೆಯಂತೆ ಪಂಪವನವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಅರಣ್ಯ ಇಲಾಖೆಯ ಸಹಕಾರದಲ್ಲಿ ಬಗೆ ಬಗೆಯ ಮರಗಳನ್ನು ನೀಡಲಾಗುವುದು. ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿಯ ಯಾತ್ರಿ ನಿವಾಸವನ್ನು ದುರಸ್ತಿ ಮಾಡಿ, ಕಡಿಮೆ ದರದಲ್ಲಿ ಪ್ರವಾಸಿಗರಿಗೆ ಯಾತ್ರಿ ನಿವಾಸ ದೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
