ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯ: ಶಿವರಾಮ ಹೆಬ್ಬಾರ
ಯಲ್ಲಾಪುರದ ಹೆಮ್ಮಾಡಿ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಶಾಸಕ ಶಿವರಾಮ ಹೆಬ್ಬಾರ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದರೆ, ಪಾಲಕರು ಸಂಸ್ಕಾರ ನೀಡುವುದು ಅಗತ್ಯ ಎಂದರು. ಶಾಲೆಯ ಅಭಿವೃದ್ಧಿಗೆ ಶಾಸಕರು ಭರವಸೆ ನೀಡಿದರು.

ಯಲ್ಲಾಪುರ (ಏ.15): ಸಮಾಜದಲ್ಲಿ ಕೆಟ್ಟ ತಾಯಿ ಅಥವಾ ಕೆಟ್ಟ ಗುರು ಇರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಾರಾದರೆ ಸಂಸ್ಕಾರವನ್ನು ಪಾಲಕರು ನೀಡುವುದು ಅತ್ಯಗತ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಹೆಮ್ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಹಳೆಯ ವಿದ್ಯಾರ್ಥಿಗಳು, ಸ್ತ್ರೀ ಶಕ್ತಿ ಸಂಘ, ಪುರುಷ ಮತ್ತು ಮಹಿಳಾ ಸ್ವಸಹಾಯ ಸಂಘಗಳು ಮತ್ತು ಸಮಸ್ತ ನಾಗರಿಕರ ಸಹಕಾರದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಲೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಹೆಮ್ಮಾಡಿಯಲ್ಲಿ ಸುಮಾರು ೬೦ ವರ್ಷಗಳ ಹಿಂದೆಯೇ ಗಣಪ ಗೌಡ ಮತ್ತು ಬಲರಾಮ ಹೆಗಡೆ ಮುಂದಾಲೋಚನೆಯಿಂದ ಶಾಲೆ ಆರಂಭಿಸಿ, ಅದೀಗ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹೆಮ್ಮಾಡಿಯ ಪ್ರಮುಖ ರಸ್ತೆಯಿಂದ ಶಾಲೆ ವರೆಗಿನ ೫೦೦ ಮೀ. ಸಿಸಿ ರಸ್ತೆಯನ್ನು ಆದಷ್ಟು ಶೀಘ್ರವಾಗಿ ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಇದನ್ನೂ ಓದಿ: ಬೆಂಗಳೂರು: ದೇಶದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸಿಎಂ ಪಣ!
ಕ.ರಾ.ವಿ. ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಪ್ರತಿಯೊಬ್ಬರ ಹೃದಯದಲ್ಲಿಯೂ ದೇವರು ನೆಲೆಸಿರುತ್ತಾನೆ. ಇಂತಹ ಸಂಗತಿಯನ್ನು ನಂಬುವುದೇ ನಮ್ಮ ಸಮಾಜದ ಜೀವಂತಿಕೆ ಉಳಿಯಲು ಕಾರಣವಾಗಿದೆ. ವಿದ್ಯಾರ್ಥಿಗಳು ಇಂತಹ ಸಂಘಟನಾತ್ಮಕ ನೆಲದ ಶಾಲೆಯಲ್ಲಿ ಕಲಿಯುವಾಗ ಗುರು-ಹಿರಿಯರಿಗೆ ಎಲ್ಲ ರೀತಿಯ ಗೌರವಾದರಗಳನ್ನು ನೀಡಬೇಕು ಮತ್ತು ಎಲ್ಲ ಉತ್ತಮ ಸಂಗತಿಗಳ ಕುರಿತು ನಂಬಿಕೆ ಇಟ್ಟುಕೊಳ್ಳುವುದೇ ಸುಂದರ ಬದುಕಿಗೆ ಕಾರಣ ಎಂಬುದನ್ನು ಅರಿಯಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ, ಹೆಮ್ಮಾಡಿ ಶಾಲೆ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ, ಸಂಸ್ಕೃತಿಯ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಡಿಡಿಪಿಐ ಪಿ. ಬಸವರಾಜ ಮಾತನಾಡಿ, ಮಲೆನಾಡಿನ ಮೂಲೆಯಲ್ಲಿರುವ ಗ್ರಾಮಾಂತರ ಪ್ರದೇಶದ ಈ ಶಾಲೆಯಲ್ಲಿ ೬೨ ವಿದ್ಯಾರ್ಥಿಗಳು ಅತ್ಯಂತ ಭರವಸೆ ಪೂರ್ಣವಾಗಿ ಶಿಕ್ಷಣ ಪಡೆಯುತ್ತಿದ್ದಾರೆಂಬುದನ್ನು ಗಮನಿಸಿದ್ದೇನೆ ಎಂದರು.
ಮಾಜಿ ಶಾಸಕ ವಿ.ಎಸ್. ಪಾಟೀಲ ವಿದ್ಯಾರ್ಥಿಗಳ ಹಸ್ತಪತ್ರಿಕೆಯನ್ನು ಬಿಡುಗಡೆ ಮಾಡಿದರು. ಗ್ರಾಪಂ ಸದಸ್ಯ ಗಣೇಶ ಹೆಗಡೆ ಮಾತನಾಡಿದರು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ೨೪ ಶಿಕ್ಷಕರು ಮತ್ತು ೯ ಎಸ್‌ಡಿಎಂಸಿ ಅಧ್ಯಕ್ಷರನ್ನು "ಗುರುವಂದನಾ " ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಶಿಕ್ಷಕ ಆರ್.ಟಿ. ಭಟ್ಟ ಹಾಗೂ ಅತಿಥಿಯಾಗಿದ್ದ ರಾಜೇಶ್ವರಿ ಹೆಗಡೆ ಮಾತನಾಡಿದರು.
ಇದನ್ನೂ ಓದಿ: ಅಂಬೇಡ್ಕರ್ ಕನಸನ್ನು ರಾಜ್ಯದಲ್ಲಿ ನಾವು ನನಸು ಮಾಡುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ
ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಹಳೆಯ ವಿದ್ಯಾರ್ಥಿಗಳು ಆಂಡ್ರಾಯ್ಡ್ ಟಿವಿ, ಭೂತೇಶ್ವರ ಸ್ವಸಹಾಯ ಸಂಘದವರು ಝೆರಾಕ್ಸ್ ಮತ್ತು ಪ್ರಿಂಟರ್ ಯಂತ್ರವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎನ್.ಆರ್. ಹೆಗಡೆ, ಬಿಆರ್‌ಸಿ ಸಮನ್ವಯಾಧಿಕಾರಿ ಸಂತೋಷ ಜಿಗಳೂರು, ಗ್ರಾಪಂ ಸದಸ್ಯೆ ತುಂಗಾ ಚಲವಾದಿ, ವಿಎಫ್‌ಸಿ ಅಧ್ಯಕ್ಷ ರಾಮಾ ಗೌಡ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಚಂದ್ರಶೇಖರ ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ ಗೌಡ, ಕಾರ್ಯದರ್ಶಿ ನಾಗೇಶ ಮಡಿವಾಳ, ಮುಖ್ಯಾಧ್ಯಾಪಕ ವಿ.ಎನ್. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಸ್ವಾಗತ ಗೀತೆ ಮತ್ತು ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಿಆರ್‌ಪಿ ವಿಷ್ಣು ಭಟ್ಟ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಆದಿತ್ಯಶಂಕರ ಜಿ.ಎ. ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಪಾರ್ವತಿ ಭಟ್ಟ ವರದಿ ವಾಚಿಸಿದರು. ಸೀಮಾ ನಾಯ್ಕ ವಂದಿಸಿದರು.
ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು