ಹಾನಗಲ್ ಉಪಸಮರ : ಶಿವಕುಮಾರ್ ಉದಾಸಿ/ಪತ್ನಿಗೆ ಟಿಕೆಟ್ ಕೊಟ್ಟರೆ ಪರಿಣಾಮವೇನು?
ಅಕ್ಟೋಬರ್ 3ಕ್ಕೆ ಉಪ ಚುನಾವಣೆ ಟಿಕೆಟ್ ಫೈನಲ್ ಮಾಡಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಿಂದಗಿ ಕ್ಷೇತ್ರದ ಟಿಕೆಟ್ ರಮೇಶ್ ಭೂಸನೂರಗೆ ಎನ್ನುವುದು ಬಹುತೇಕ ಪಕ್ಕಾ ಆಗಿದೆ.
ತಾತ್ವಿಕ ವಿಚಾರಗಳನ್ನು ಬೋಧಿಸುವುದು ಬಹಳ ಸರಳ. ಆದರೆ ಗೆರೆ ಕೊರೆದಂತೆ ತತ್ವಗಳನ್ನು ಜಾರಿಗೆ ತರುವುದು ಕಷ್ಟ. ಅದರಲ್ಲೂ ಬರೀ ಗೆಲ್ಲುತ್ತಲೇ ಇರಬೇಕಾದ ರಾಜಕಾರಣದಲ್ಲಿ ತತ್ವಗಳನ್ನು ಜಾರಿಗೆ ತರುವುದು ಪ್ರಯಾಸದ ಕೆಲಸ. 2019ರಲ್ಲಿ ಕಾಂಗ್ರೆಸ್‌ನಂತೆ ಬಿಜೆಪಿಯೊಳಗೆ ಕುಟುಂಬಕ್ಕೆ ಮಣೆ ಹಾಕುವುದಿಲ್ಲ ಎಂದು ಸಂಘ ಪ್ರಚಾರಕ ಬಿ.ಎಲ್.ಸಂತೋಷ್ ಪ್ರಕಟಿಸಿದರು. ಆನಂತರ ರಾಜ್ಯ ಬಿಜೆಪಿಯಲ್ಲಿ ಕುಟುಂಬಕ್ಕೆ ಟಿಕೆಟ್ ನೀಡುವ ವಿಷಯ ಮರಳಿ ಮರಳಿ ಪ್ರಶ್ನೆಯ ರೂಪದಲ್ಲಿ ಬಂದು ನಿಲ್ಲುತ್ತಿದೆ.
ಬೆಂಗಳೂರು ದಕ್ಷಿಣದಿಂದ ಅನಂತ ಕುಮಾರ್ ಪತ್ನಿಗೆ ಟಿಕೆಟ್ ನಿರಾಕರಿಸಿ ಆರಂಭವಾಗಿದ್ದ ಕುಟುಂಬದ ಚರ್ಚೆ, ಬೆಳಗಾವಿಯಲ್ಲಿ ಅಂಗಡಿ ಕುಟುಂಬದ ಸುತ್ತ ಗಿರಕಿ ಹೊಡೆದು ಈಗ ಹಾನಗಲ್‌ಗೆ ಬಂದು ಪ್ರಶ್ನೆಯ ರೂಪ ತಾಳಿದೆ. ಹಾನಗಲ್‌ನಲ್ಲಿ ಬಿಜೆಪಿ ಚುನಾವಣೆ ಗೆಲ್ಲಬೇಕಾದರೆ ಏನಕೇನ ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡುವುದು ಅನಿವಾರ್ಯ ಎಂಬ ಸ್ಥಿತಿಯಿದೆ. ಆದರೆ ಸಂಸದರಾಗಿರುವ ಶಿವಕುಮಾರ್ ಉದಾಸಿಗೆ ಟಿಕೆಟ್ ಕೊಟ್ಟರೆ, ನಂತರ ಹಾನಗಲ್‌ನಲ್ಲಿ ಬಿಜೆಪಿ ಗೆದ್ದರೆ, ಮರಳಿ ಹಾವೇರಿ ಲೋಕಸಭಾ ಚುನಾವಣೆ ಎದುರಿಸಬೇಕು.
ಅಂತೂ ಕಣ್ಣು ಬಿಟ್ಟಿತು ಕೈ ಹೈಕಮಾಂಡ್: ವರ್ಷಗಳ ಬಳಿಕ ಪ್ರಿಯಾಂಕಾ, ರಾಹುಲ್ ರಣತಂತ್ರ!
ಒಂದು ವೇಳೆ ಅವರ ಕುಟುಂಬಕ್ಕೆ ಟಿಕೆಟ್ ಕೊಡಲಿಲ್ಲ ಎಂದರೆ ಬಿಜೆಪಿ ಗೆಲ್ಲಲು ತುಂಬಾ ಶ್ರಮ ಪಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಆರ್‌ಎಸ್‌ಎಸ್ ಮತ್ತು ಹೈಕಮಾಂಡ್ ಇಬ್ಬರಿಗೂ ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಶಿವಕುಮಾರ್ ಉದಾಸಿ ನಿಲ್ಲುವುದು ಬೇಡ, ಲೋಕಸಭಾ ಉಪ ಚುನಾವಣೆ ತಲೆನೋವು ಎಂದಾದಲ್ಲಿ ಶಿವಕುಮಾರ್ ಪತ್ನಿ ರೇವತಿ ಉದಾಸಿ ಅವರಿಗೆ ಈಗ ಟಿಕೆಟ್ ಕೊಡಿ, 2023ಕ್ಕೆ ನೋಡೋಣ ಎಂದು ಬೊಮ್ಮಾಯಿ ವರಿಷ್ಠರ ಮನವೊಲಿಸುವ ಪ್ರಯತ್ನ ಮಾಡಿದ್ದಾರಂತೆ. ಆದರೆ ಒಂದು ವೇಳೆ ಪತ್ನಿಗೆ ಟಿಕೆಟ್ ನೀಡಿದಲ್ಲಿ ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಅವರಿಗೆ ಕೊಟ್ಟನಂತರ ಆರಂಭವಾದ ಹಾಗೆ ಮರಳಿ ಮತ್ತೊಮ್ಮೆ ಕುಟುಂಬ ರಾಜಕಾರಣದ ಚರ್ಚೆ ಶುರು ಆಗುತ್ತದೆ. ಬೊಮ್ಮಾಯಿಯಂಥ ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಸಹಜವಾಗಿ ಏನಕೇನ ಪ್ರಕಾರೇಣ ಗೆಲ್ಲುವುದು ಮುಖ್ಯ. ಆದರೆ ಕುಟುಂಬಕ್ಕೆ ಟಿಕೆಟ್ ಕೊಟ್ಟಾಗಲೊಮ್ಮೆ ಮುಜುಗರ ಆಗುವುದು, ಕಾರ್ಯಕರ್ತರು ಪ್ರಶ್ನೆ ಕೇಳುವುದು ಆರ್‌ಎಸ್‌ಎಸ್‌ಗೆ. ಸಂಘಕ್ಕೆ ಇದೊಂದು ಧರ್ಮ ಸಂಕಟ.
ಭೂಸನೂರಗೆ ಬಹುತೇಕ ಟಿಕೆಟ್ ಪಕ್ಕಾ
ಅಕ್ಟೋಬರ್ 3ಕ್ಕೆ ಉಪ ಚುನಾವಣೆ ಟಿಕೆಟ್ ಫೈನಲ್ ಮಾಡಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಿಂದಗಿ ಕ್ಷೇತ್ರದ ಟಿಕೆಟ್ ರಮೇಶ್ ಭೂಸನೂರಗೆ ಎನ್ನುವುದು ಬಹುತೇಕ ಪಕ್ಕಾ ಆಗಿದೆ. ಇನ್ನು, ಹಾನಗಲ್ ಬಿಜೆಪಿ ಕಾರ್ಯಕರ್ತರ ಮೊದಲ ಆಯ್ಕೆ ಶಿವಕುಮಾರ್ ಉದಾಸಿ. ಅವರಿಗೆ ಟಿಕೆಟ್ ನೀಡಲು ಸಾಧ್ಯ ಆಗದಿದ್ದರೆ ವೈನಿ ಅವರಿಗೆ ಅಂದರೆ ರೇವತಿ ಉದಾಸಿಗೆ ಕೊಡಿ ಎಂದು ಅಭಿಪ್ರಾಯ ಹೇಳಿದ್ದಾರಂತೆ. ಬಹಳ ಮುಖ್ಯ ಎಂದರೆ ಕೋರ್ ಕಮಿಟಿಯಲ್ಲಿರುವ ಯಡಿಯೂರಪ್ಪ, ಬೊಮ್ಮಾಯಿ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್ ಎಲ್ಲರೂ ಶಿವಕುಮಾರ್ ಉದಾಸಿ ಪರ ಒಲವು ಹೊಂದಿರುವವರು.
ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಯಾಕೆ..?
ಜೊತೆಗೆ ಉಪಚುನಾವಣೆಯಲ್ಲಿ ಬೇಕಾಗುವ ಸಂಪನ್ಮೂಲ ಖರ್ಚು ಮಾಡುವ ಶಕ್ತಿ ಇರುವುದು ಉದಾಸಿ ಕುಟುಂಬಕ್ಕೆ ಮಾತ್ರ. ಆದರೆ ಸಮಸ್ಯೆ ಇರುವುದು ದಿಲ್ಲಿ ನಾಯಕರದು. ಹಾಲಿ ಸಂಸದರಿಗೆ ವಿಧಾನಸಭೆ ಟಿಕೆಟ್ ನೀಡುವ ಪರಿಪಾಠ ಮೋದಿ ಕಾಲದಲ್ಲಿ ಇಟ್ಟುಕೊಂಡಿಲ್ಲ. ಜೊತೆಗೆ ಪತ್ನಿಗೆ ಟಿಕೆಟ್ ಕೊಟ್ಟರೆ ಕುಟುಂಬ ರಾಜಕಾರಣದ ಆರೋಪಗಳು ಬೇರೆ. ಆದರೆ ಈಗಿನ ಬಿಜೆಪಿಯ ಒಂದು ಗುಣಲಕ್ಷಣ ಎಂದರೆ ಎಲ್ಲ ನಿರ್ಣಯಕ್ಕೆ ಒಂದು ಅಪವಾದ ಇದ್ದೇ ಇರುತ್ತದೆ; ಎಲ್ಲಕ್ಕಿಂತ ಚುನಾವಣೆಯ ಗೆಲುವು ಮುಖ್ಯ.
ಮಕ್ಕಳು ಸಾರ್ ಮಕ್ಕಳು
ಆತ ಎಷ್ಟೇ ದೊಡ್ಡ ರಾಜಕಾರಣಿ ಇರಲಿ, ಮನೆಯಲ್ಲಿ ಮಕ್ಕಳಿಗೆ ಮಾತ್ರ ತಂದೆಯೇ. ಒಬ್ಬ ತಂದೆಗೆ ಮಕ್ಕಳು ತನ್ನ ಕಣ್ಣ ಮುಂದೆಯೇ ಬೆಳೆಯಲಿ ಎಂದು ಆಸೆ ಇರುವುದು ಸಹಜ. ಅದು ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಇರಲಿ ಅಥವಾ ಕಾರಜೋಳ, ಶೆಟ್ಟರ್, ಸೋಮಣ್ಣ ಇರಲಿ ಅದರಲ್ಲಿ ಪಕ್ಷಭೇದ ಇರುವುದಿಲ್ಲ. ಈಗ ಉದಾಸಿ ಪತ್ನಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡಿಸಿದರೆ, ನಾಳೆ ವಿಜಯೇಂದ್ರರಿಗೆ ಮಂತ್ರಿ ಮಾಡಬೇಕು ಎಂಬ ಬೇಡಿಕೆಗೆ ವೇಗ ದೊರೆಯಬಹುದು.
ಯಡಿಯೂರಪ್ಪನವರಿಗೆ ವಿಜಯೇಂದ್ರರನ್ನು ಈಗ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಮಂತ್ರಿ ಮಾಡಿದರೆ ಭವಿಷ್ಯದ ನಾಯಕತ್ವ ಸಿಗಬಹುದು ಎಂಬ ದೂರದ ನಿರೀಕ್ಷೆ. ಜೊತೆಗೆ 2023ಕ್ಕೆ ಹೈಕಮಾಂಡ್ ಟಿಕೆಟ್ ಕೊಡುತ್ತೋ, ಇಲ್ಲವೋ ಎಂಬ ಒಂದು ಸಣ್ಣ ಸಂದೇಹ ಇರುವ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಈಶ್ವರಪ್ಪ ಮತ್ತು ಸೋಮಣ್ಣರಿಗೂ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವ ಆಸೆ ಇದೆ. ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಕೊಟ್ಟಂತೆ ಉದಾಸಿ ಅಥವಾ ಅವರ ಪತ್ನಿಗೂ ಟಿಕೆಟ್ ಕೊಡಲು ಹೈಕಮಾಂಡ್ ಯೆಸ್ ಅಂದಲ್ಲಿ ಮುಂದೆ ಇತರ ಮಕ್ಕಳಿಗೂ ಟಿಕೆಟ್ ಕೊಡಿಸುವುದು ಸುಲಭ ಆಗಬಹುದು. ಏನೇ ಇರಲಿ ರಾಜಕಾರಣ ಮಜಾ ಇರುತ್ತದೆ ನೋಡಿ. ಯಾರದೋ ಹೆಗಲು, ಯಾರದೋ ಬಂದೂಕು, ಯಾರಿಗೋ ಗುರಿ.
ಮೈಸೂರು ಶ್ರೀಗಳು ಕೊಟ್ಟ ಸಲಹೆ
2018ರಲ್ಲಿ ವಿಜಯೇಂದ್ರರ ಟಿಕೆಟ್ ಕೊನೇ ಗಳಿಗೆಯಲ್ಲಿ ವರುಣಾದಿಂದ ತಪ್ಪಿದ ನಂತರ ದೇಶದ ಹಿರಿಯ ಸಂಘ ಪ್ರಚಾರಕ ಒಬ್ಬರು ಮೈಸೂರಿನಲ್ಲಿ ಸ್ವಾಮೀಜಿ ಒಬ್ಬರ ಭೇಟಿಗೆ ಹೋಗಿದ್ದರಂತೆ. ಅಲ್ಲಿ ವಿಜಯೇಂದ್ರ ವಿಷಯ ಪ್ರಸ್ತಾಪ ಆದಾಗ ಸ್ವಾಮೀಜಿ, ‘ಈ ವಂಶವಾದ ಎಲ್ಲಾ ತುಂಬಾ ತಲೆಗೆ ಹಚ್ಚಿಕೋಬೇಡಿ. ಅವೆಲ್ಲ ಡ್ರಾಯಿಂಗ್ ರೂಮ್ ಚರ್ಚೆಗಳು ಅಷ್ಟೆ. ನಿಮ್ಮ ಕಟ್ಟಾಕಾರ್ಯಕರ್ತರು ಮೂರು ನಾಲ್ಕು ನೂರು ಮಂದಿ ಹಾಗೆ ಅಭಿಪ್ರಾಯ ಹೇಳಬಹುದು ಅಷ್ಟೆ. ಆದರೆ ಜನಮಾನಸದಲ್ಲಿ ವಂಶಕ್ಕೆ ಟಿಕೆಟ್ ಎಂಬುದೊಂದು ವಿಷಯವೇ ಅಲ್ಲ. ಅವರಿಗೇನು, ಗೆದ್ದವರು ಕೆಲಸ ಮಾಡಿ ಕೊಡಬೇಕು ಅಷ್ಟೆ. ನೀವು ಅದನ್ನು ತುಂಬಾ ಎಳೆಯಬೇಡಿ’ ಎಂದು ಹೇಳಿದ್ದರಂತೆ.
ಪೆಟ್ರೋಲ್ ಬೆಲೆ ಇಳಿಯುತ್ತಿಲ್ಲ, ಬಿಜೆಪಿಗೆ ತಲೆಬಿಸಿಯೇ ಇಲ್ಲ, ಏನಿವರ ಲೆಕ್ಕಾಚಾರ..?
ಬೊಮ್ಮಾಯಿಗೆ ಪರೀಕ್ಷಾ ಕಾಲ
1994ರಿಂದ ಲಿಂಗಾಯತರು ಬಿಜೆಪಿ ಕಡೆ ವಾಲುವುದು ಶುರುವಾಯಿತು. ಅದು ಪೂರ್ಣಗೊಂಡಿದ್ದು 2008ರಲ್ಲಿ. ತದನಂತರ ಯಡಿಯೂರಪ್ಪ ನಾಯಕತ್ವದಲ್ಲಿ ಪಂಚಮಸಾಲಿಗಳು, ಬಣಜಿಗರು, ಸಾದರು, ಗಾಣಿಗರು, ಜಂಗಮರು ಒಟ್ಟಿಗೆ ಬಂದಿದ್ದರು. 2023ರಲ್ಲಿ ಬೊಮ್ಮಾಯಿಗೆ ಇರುವ ಪರೀಕ್ಷೆ ಆ ಎಲ್ಲಾ ಲಿಂಗಾಯತ ಒಳಪಂಗಡಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು. ಅದರ ಮೊದಲ ಝಲಕ್ ನೋಡಲು ಸಿಗುವುದು ಈಗಿನ ಉಪ ಚುನಾವಣೆಯಲ್ಲಿ. ಮೇಲಾಗಿ ಸಿಂದಗಿ ಮತ್ತು ಹಾನಗಲ್ ಇರುವುದು ಲಿಂಗಾಯತ ಬಾಹುಳ್ಯ ಮುಂಬೈ ಕರ್ನಾಟಕದಲ್ಲಿ. ಸುಲಭವಾಗಿ ಹೇಳಬೇಕಾದರೆ ಪಕ್ಷದ ಸಿದ್ಧಾಂತ, ಮೋದಿ ಮತ್ತು ಅಭ್ಯರ್ಥಿಯ ಜೊತೆಜೊತೆಗೆ ಬೊಮ್ಮಾಯಿ ಹೆಸರಿಗೂ ಸ್ವಲ್ಪ ವೋಟು ಹಾಕಿಸುವ ಶಕ್ತಿ ಬರಬೇಕು. ಅಂದರೆ ಮಾತ್ರ ಬೊಮ್ಮಾಯಿ ಅವರಿಗೆ ರಾಜಕಾರಣದಲ್ಲಿ ಬಾಳಿಕೆ ಉಂಟು. ಆ ದೃಷ್ಟಿಯಿಂದ ಬೊಮ್ಮಾಯಿಗಿದು ಮೊದಲ ಯೂನಿಟ್ ಟೆಸ್ಟ್ ಅನ್ನಬಹುದೇನೋ.
ನಿಗಮ ಮಂಡಳಿ ಗೊಂದಲಗಳು
ಬಸವರಾಜ್ ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ದಿಲ್ಲಿಯಿಂದ ಕೊಟ್ಟಮೊದಲ ಸೂಚನೆ ಹಿಂದಿನ ಎಲ್ಲಾ ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ರಾಜೀನಾಮೆ ತೆಗೆದುಕೊಳ್ಳಿ ಎಂದು. ಬೊಮ್ಮಾಯಿ ಏನೋ ಅದಕ್ಕೆ ತಯಾರಿದ್ದಾರೆ. ಆದರೆ ಯಡಿಯೂರಪ್ಪ ಒಪ್ಪಬೇಕಲ್ಲವೇ. ಅಷ್ಟೇ ಅಲ್ಲ, ಯಡಿಯೂರಪ್ಪನವರು ಒತ್ತಡ ಹಾಕಿ ತಮ್ಮ ಪರಮಾಪ್ತರಾದ ರೇಣುಕಾಚಾರ್ಯ ಮತ್ತು ಜೀವರಾಜ್‌ರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿ ನೇಮಿಸಿಕೊಂಡಿದ್ದಾರೆ.
ಕೋರ್ ಕಮಿಟಿ ಸಭೆಗಿಂತ 4 ದಿನ ಮುಂಚೆ ಯಾವುದೇ ಚರ್ಚೆ ಆಗದೇ ಆಗಿರುವ ಹೊಸ ನೇಮಕಗಳಿಂದ ಸ್ವಲ್ಪ ಒಳ ಬೇಗುದಿ ಶುರುವಾಗಿದೆ. ಹೈಕಮಾಂಡ್ ಸ್ಪಷ್ಟನಿರ್ದೇಶನ ಕೊಡದೆ ತಾವೇ ಸ್ವತಃ ನಿಗಮ ಮಂಡಳಿ ನೇಮಕಗಳನ್ನು ರದ್ದು ಮಾಡಿ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿ ಆಗಲು ಬೊಮ್ಮಾಯಿ ತಯಾರಿಲ್ಲ. ಈಗ ಉಪ ಚುನಾವಣೆ ಮುಗಿಯುವವರೆಗೆ ನಿಗಮ ಮಂಡಳಿಗಳಿಗೆ ಕೈಹಚ್ಚಲು ಹೈಕಮಾಂಡ್ ಕೂಡ ಹೇಳಲಿಕ್ಕಿಲ್ಲ ಬಿಡಿ. ಬೀಸುವ ದೊಣ್ಣೆಯಿಂದ ಪಾರಾದರೆ ಸಾವಿರ ವರ್ಷ ಆಯುಷ್ಯವಂತೆ.
ಅರುಣ ಕುಮಾರ್ ಕೋಪ
2006ರಿಂದ ಕರ್ನಾಟಕ ಬಿಜೆಪಿ ಜವಾಬ್ದಾರಿ ಹೊತ್ತಿದ್ದ ಬಿ.ಎಲ್.ಸಂತೋಷ ದಿಲ್ಲಿಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆದ ಮೇಲೆ, ಕರ್ನಾಟಕದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಆಗಿ ಬಂದವರು ಅರುಣ ಕುಮಾರ್. ಬಿಜೆಪಿಯಲ್ಲಿ ಆರ್‌ಎಸ್‌ಎಸ್‌ನ ಪ್ರಚಾರಕರೇ ಸಂಘಟನಾ ಕಾರ್ಯದರ್ಶಿ ಆಗುವುದು ರೂಢಿ. ಅರುಣ ಕುಮಾರ್ ಶಿಸ್ತಿನ, ಒಳ್ಳೆಯ ಮನುಷ್ಯ. ಆದರೆ ರಾಜಕಾರಣಿ ಅಲ್ಲ. ಮೂಗಿನ ಮೇಲೆ ಕೋಪ ಜಾಸ್ತಿ. ಏನಿದ್ದರೂ ನೇರಾನೇರ ಮಾತು.
ಆದರೆ ಅದು ಬಿಜೆಪಿಯ ಚುನಾಯಿತ ಶಾಸಕರು, ಸಂಸದರು, ಕೇಂದ್ರ ಸಚಿವರಿಗೆ ಸರಿಬರುತ್ತಿಲ್ಲ. ಅರುಣ ಕುಮಾರರಿಗೆ ಕೋಪ ಬಹಳ ಬೇಗ ಬರುತ್ತದೆ. ಇದು ರಾಜಕಾರಣದಲ್ಲಿ ನಡೆಯೋದಿಲ್ಲ. ಸ್ವಲ್ಪ ಸಿಟ್ಟು ಕಡಿಮೆ ಮಾಡಿಕೊಳ್ಳಲು ಹೇಳಿ ಎಂದು ರಾಜ್ಯ ಬಿಜೆಪಿಯ ಅನೇಕ ಹಿರಿಯ ನಾಯಕರು ದಿಲ್ಲಿಗೆ ಮನವಿ ಒಯ್ದಿದ್ದಾರೆ. ರಾಜಕಾರಣಕ್ಕೆ ದೂರ್ವಾಸ ಮುನಿಗಳು ಒಗ್ಗುವುದಿಲ್ಲ, ಅಲ್ಲಿ ಏನಿದ್ದರೂ ಸದಾ ಶಾಂತ ವಸಿಷ್ಟರು ಬೇಕು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ