Asianet Suvarna News Asianet Suvarna News

ಪೆಟ್ರೋಲ್ ಬೆಲೆ ಇಳಿಯುತ್ತಿಲ್ಲ, ಬಿಜೆಪಿಗೆ ತಲೆಬಿಸಿಯೇ ಇಲ್ಲ; ಏನಿವರ ಲೆಕ್ಕಾಚಾರ..?

ಒಂದು ಅಂದಾಜಿನ ಪ್ರಕಾರ ಇಂಧನದ ಮೇಲಿನ ತೆರಿಗೆ 6 ಪಟ್ಟು ಏರಿರುವುದರಿಂದ ಮೋದಿ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಒಂದರಿಂದಲೇ 3 ಲಕ್ಷ ಕೋಟಿ ರು. ಗಳಿಸುತ್ತಿದೆ.

India Gate Fuel price may not Reduce soon here is Why hls
Author
Bengaluru, First Published Sep 18, 2021, 9:48 AM IST
  • Facebook
  • Twitter
  • Whatsapp

ನವದೆಹಲಿ (ಸೆ. 18): 50 ವರ್ಷಗಳ ಹಿಂದೆ ಬೆಲೆ ಏರಿಕೆ ಯಾವುದೇ ಸರ್ಕಾರದ ಮೊದಲ ಶತ್ರು ಎಂದು ವಿಶ್ಲೇಷಿಸಲಾಗುತ್ತಿತ್ತು. ತುರ್ತು ಪರಿಸ್ಥಿತಿಯಲ್ಲಿ ಜೆಪಿಯವರು ಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದ್ದರೂ ಗುಜರಾತ್‌ ಮತ್ತು ಬಿಹಾರದ ವಿದ್ಯಾರ್ಥಿಗಳು ಬೀದಿಗೆ ಇಳಿದಿದ್ದು, ಕಾಲೇಜ್‌ ಮತ್ತು ಮೆಸ್‌ನ ಶುಲ್ಕ ಹೆಚ್ಚಳದ ವಿರುದ್ಧ. ನಂತರ ಜೆಪಿ ಅದನ್ನು ಇಂದಿರಾ ವಿರುದ್ಧ ತಿರುಗಿಸಿದರು. ಆದರೆ ಈಗ 2021ರಲ್ಲಿ, ಕಳೆದ ಒಂದು ವರ್ಷದಲ್ಲಿ, ಸುಮಾರು 60 ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಏರಿಕೆ ಆಗಿವೆ.

ಅಡುಗೆಗೆ ಉಪಯೋಗಿಸುವ ಎಣ್ಣೆ ಬೆಲೆ ದುಪ್ಪಟ್ಟಾಗಿದೆ. ಅಡುಗೆ ಅನಿಲದ ಬೆಲೆಯಿಂದ ಹಿಡಿದು ಮನೆ ಕಟ್ಟಲು ಬೇಕಾಗುವ ಸ್ಟೀಲ್‌, ಸಿಮೆಂಟ್‌, ಇಟ್ಟಿಗೆ ಎಲ್ಲವೂ ದುಬಾರಿಯಾಗಿವೆ. ಬೇಳೆಯಿಂದ ಹಿಡಿದು ತರಕಾರಿವರೆಗೆ ಎಲ್ಲದರ ಬೆಲೆಯೂ ಕಿಸೆ ಸುಡುತ್ತಿವೆ. ಆದರೆ ಚುನಾವಣೆಯಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯ ಒಂದೇ ಆಧಾರದ ಮೇಲೆ ಜನ ವೋಟು ಚಲಾಯಿಸುತ್ತಿಲ್ಲ. ಅಭ್ಯರ್ಥಿ ಕೈಗೆ ಸಿಗುತ್ತಿಲ್ಲ, ಕೆಲಸ ಮಾಡಿಲ್ಲ, ಜಾತಿಯವನು ಹೌದು ಅಥವಾ ಅಲ್ಲ, ಪಕ್ಷದ ನಾಯಕತ್ವ ಇಷ್ಟಇದೆ ಅಥವಾ ಇಲ್ಲ, ರಸ್ತೆ ಸರಿ ಇಲ್ಲ, ಹಿಂದುತ್ವ ಈ ಎಲ್ಲದರ ಪಾಸಿಟಿವ್‌ ಮತ್ತು ನೆಗೆಟಿವ್‌ ಅಭಿಪ್ರಾಯದ ಜೊತೆಗೆ ಬೆಲೆ ಏರಿಕೆ ವಿಷಯ ಜೋಡಣೆ ಆಗುತ್ತಿದೆಯೇ ಹೊರತು ಅದೊಂದೇ ವಿಷಯದ ಮೇಲೆ ಚುನಾವಣೆ ನಡೆಯುತ್ತಿಲ್ಲ. ಇದಕ್ಕೆ ನಾನಾ ಕಾರಣಗಳೂ ಇವೆ.

ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಯಾಕೆ..?

ಒಂದು- ಬಿಜೆಪಿ ಎದುರಿನ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಆಡಳಿತ ವಿರೋಧಿ ಅಲೆ ಎಬ್ಬಿಸುವ ವಿಶ್ವಾಸಾರ್ಹತೆ ಮತ್ತು ಸಂಘಟನಾ ಶಕ್ತಿ ಉಳಿಸಿಕೊಂಡಿಲ್ಲ. ಎರಡನೆಯದು- ಬೆಳೆಯುತ್ತಿರುವ ಮಧ್ಯಮ ವರ್ಗ ಮತ್ತು ಅದರ ಮಹತ್ವಾಕಾಂಕ್ಷೆಗಳು ಬೆಲೆ ಏರಿಕೆ ಒಂದನ್ನೇ ಪರಿಗಣಿಸುತ್ತಿಲ್ಲ. ಈಗ ಕರ್ನಾಟಕದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಓಡಾಡುವಾಗ ಒಬ್ಬ ಮತದಾರ ಹೇಳಿದ್ದು, ‘ಬೆಲೆ ಏರಿಕೆ ಹೊಡೆತ ಬೀಳುತ್ತಿದೆ. ರಸ್ತೆಗಳು ಆಗಿಲ್ಲ ಎಲ್ಲಾ ಹೌದು. ಆದರೆ ಆರ್ಟಿಕಲ್‌ 370, ಹಿಂದುತ್ವ, ಮೋದಿ ಪ್ರಾಮಾಣಿಕತೆ ನಮಗೆ ಮುಖ್ಯ’ ಎಂದು. ನಮ್ಮ ತರ್ಕ ಸಹಿತ ಟೀವಿ ಡಿಬೇಟ್‌ಗಳು ಏನೇ ಇರಲಿ ಅಂತಿಮವಾಗಿ ಮತದಾರ ಹೇಗೆ ಯೋಚನೆ ಮಾಡುತ್ತಿದ್ದಾನೆ ಎನ್ನುವುದು ಮುಖ್ಯ ಆಗುತ್ತದೆ.

ಪೆಟ್ರೋಲ್‌ ಬೆಲೆಯೇಕೆ ಇಳಿಯುತ್ತಿಲ್ಲ?

ಕೋವಿಡ್‌ ಸಮಯದಲ್ಲಿ ಮೋದಿ ಸರ್ಕಾರದಿಂದ ಜನರ ಕೈಗೆ ಹಣ ತಲುಪಿಸುವ 311 ಯೋಜನೆಗಳು ನಡೆಯುತ್ತಿವೆ. ಈಗಾಗಲೇ ಚುನಾವಣೆ ನಡೆದಿರುವ ಬಿಹಾರ ಮತ್ತು ಇನ್ಮುಂದೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಮೋದಿ ಮತ್ತು ಬಿಜೆಪಿಗೆ ದೊಡ್ಡ ಹೊಡೆತ ಬೀಳದೇ ಇರಲು ಈ ಹಣ ಪಾವತಿ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ವಾರ್ಷಿಕ 2.2 ಲಕ್ಷ ಕೋಟಿ ರು.ಗಳನ್ನು ಉಚಿತ ಧಾನ್ಯ ಒದಗಿಸಲು ಖರ್ಚು ಮಾಡುತ್ತಿದ್ದ ಕೇಂದ್ರ ಸರ್ಕಾರ ಯುಪಿ ಚುನಾವಣೆ ನಡೆಯುವವರೆಗೆ ಉಚಿತ ಧಾನ್ಯ ತಲುಪಿಸಲು 5.3 ಲಕ್ಷ ಕೋಟಿ ಖರ್ಚು ಮಾಡಲಿದೆ.

ಅಂದರೆ ಹೆಚ್ಚುವರಿ 3 ಲಕ್ಷ ಕೋಟಿ ಹಣ. ಜೊತೆಗೆ ಉಚಿತ ಲಸಿಕೆ ಪೂರೈಕೆಗೆ ಸರ್ಕಾರದ 50 ಸಾವಿರ ಕೋಟಿ ಖರ್ಚು ಆಗಲಿದೆ. ಇಷ್ಟುದೊಡ್ಡ ಪ್ರಮಾಣದ ಖರ್ಚು ನೀಗಿಸಲು ಸರ್ಕಾರದ ಬಳಿ ಇರುವ ಸಾಧನ ಎಂದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಒಂದೇ.

ಒಂದು ಅಂದಾಜಿನ ಪ್ರಕಾರ ಇಂಧನದ ಮೇಲಿನ ತೆರಿಗೆ 6 ಪಟ್ಟು ಏರಿರುವುದರಿಂದ ಮೋದಿ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಒಂದರಿಂದಲೇ 3 ಲಕ್ಷ ಕೋಟಿ ರು. ಗಳಿಸುತ್ತಿದೆ. ಬಿಜೆಪಿಯ ಲೆಕ್ಕಾಚಾರ ಎಂದರೆ ಹೇಗೂ ಮಧ್ಯಮ ವರ್ಗ ಬೆಲೆ ಏರಿಕೆ ಬಗ್ಗೆ ಒಂದೆರಡು ದಿನ ಬೈಯ್ದುಕೊಂಡರೂ ಬಿಜೆಪಿ ವಿರುದ್ಧ ಮತ ಹಾಕುವುದಿಲ್ಲ. ಏಕೆಂದರೆ ಮಧ್ಯಮ ವರ್ಗಕ್ಕೆ ಸದ್ಯಕ್ಕೆ ಕಾಂಗ್ರೆಸ್‌ ಇಷ್ಟಇಲ್ಲ, ಕೆಳ ಮಧ್ಯಮ ವರ್ಗಕ್ಕೆ ಹಣದುಬ್ಬರದ ಪರಿಣಾಮ ಕಡಿಮೆ ಮಾಡಲು ನೇರ ಹಣ ಪಾವತಿಸುವುದು ಜೊತೆಗೆ ಉಚಿತ ಧಾನ್ಯ ಪೂರೈಕೆ ಮಾಡಿ ಓಲೈಸುವುದು. ರಾಜಕೀಯ ಪಕ್ಷಗಳ ಆರ್ಥಿಕ ನೀತಿಗಳ ಗಮನ ಯಾವಾಗಲೂ ಓಲೈಕೆಯತ್ತ ಜಾಸ್ತಿ ಇರುತ್ತದೆ. ಇದಕ್ಕೆ ಮೋದಿ ಕೂಡ ಹೊರತಲ್ಲ ಬಿಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios