Asianet Suvarna News Asianet Suvarna News

ಅಂತೂ ಕಣ್ಣುಬಿಟ್ಟಿತು ಕೈ ಹೈಕಮಾಂಡ್‌: ವರ್ಷಗಳ ಬಳಿಕ ಪ್ರಿಯಾಂಕಾ, ರಾಹುಲ್ ರಣತಂತ್ರ!

* ಪಂಜಾಬ್‌ ರಾಜಕಾರಣದ ಕಂಪ್ಲೀಟ್‌ ಡೀಟೆಲ್ಸ್‌ 

* ಪಂಜಾಬ್‌ ಸಿಎಂ ಬದಲಾವಣೆ: ಬಹಳ ವರ್ಷಗಳ ನಂತರ ಗಟ್ಟಿರಣತಂತ್ರ ಪ್ರದರ್ಶಿಸಿದ ರಾಹುಲ್‌, ಪ್ರಿಯಾಂಕಾ

* ಅಂತೂ ಕಣ್ಣುಬಿಟ್ಟಿತು ಕಾಂಗ್ರೆಸ್‌ ಹೈಕಮಾಂಡ್‌!

 

India Gate Punjab Politics After Years Priyanka and Rahul Gandhi Took A Bold Decision pod
Author
Bangalore, First Published Sep 24, 2021, 5:40 PM IST
  • Facebook
  • Twitter
  • Whatsapp

ಪ್ರಶಾಂತ್‌ ನಾತು, ಇಂಡಿಯಾ ಗೇಟ್

ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ನ(Congress) ರಣತಂತ್ರ ಏನೆಂಬುದೇ ಗೊತ್ತಾಗುತ್ತಿರಲಿಲ್ಲ. 6 ದಶಕ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ಬಿಜೆಪಿ(BJP) ಮತ್ತು ಮೋದಿ ಹೆಣೆದ ರಣತಂತ್ರಕ್ಕೆ ಪ್ರತಿಯಾಗಿ ಹಿಂದೆ ಹೆಜ್ಜೆ ಇಡುತ್ತಿತ್ತೇ ಹೊರತು, ರಾಹುಲ್‌ ಗಾಂಧಿ ಹತ್ತು ಹೆಜ್ಜೆ ಮುಂದೆ ಇಟ್ಟು ತೋರಿಸುತ್ತಿರಲಿಲ್ಲ. ಅಥವಾ ಇಟ್ಟಹೆಜ್ಜೆಯನ್ನು ಮತದಾರರು ಬಿಡಿ ತನ್ನ ಕಾರ್ಯಕರ್ತರಿಗೂ ಮನವರಿಕೆ ಮಾಡಲು ಆಗುತ್ತಿರಲಿಲ್ಲ. ಆದರೆ ಮೊದಲ ಬಾರಿ ಕಾಂಗ್ರೆಸ್‌ ಹೈಕಮಾಂಡ್‌ ಬಿಜೆಪಿ ಮತ್ತು ಇತರ ಎದುರಾಳಿಗಳಿಗೆ ತನ್ನ ಧೈರ್ಯದ ನಿರ್ಣಯದ ಮೂಲಕ ಸವಾಲು ಹಾಕಿದೆ. ಹೈಕಮಾಂಡ್‌ ದುರ್ಬಲವಾಗಿದೆ ಎನ್ನುವ ಮಾತುಗಳ ನಡುವೆಯೇ ರಾಹುಲ್‌(Rahul gandhi) ಮತ್ತು ಪ್ರಿಯಾಂಕಾ ಗಾಂಧಿ(Priyanka Gandhi) ಸೇರಿಕೊಂಡು ತಮ್ಮ ತಂದೆಯ ಗೆಳೆಯ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ರನ್ನು ಕುರ್ಚಿಯಿಂದ ಸುಸೂತ್ರವಾಗಿ ಕೆಳಗಿಳಿಸಿ ಸುಲಭವಾಗಿ ತಮಗೆ ಬೇಕಾದ ರೀತಿಯಲ್ಲಿ ದಲಿತರೊಬ್ಬರನ್ನು ತಂದು ಕೂರಿಸಿರುವುದು ಕಾಂಗ್ರೆಸ್‌ ಇನ್ನೂ ಜೀವಂತವಾಗಿದೆ ಎನ್ನುವ ಸಂಕೇತಗಳನ್ನಂತೂ ಕೊಟ್ಟಿದೆ. ಮುಂದಿನ ವರ್ಷ ನಡೆಯಲಿರುವ ಗುಜರಾತ್‌(Gujarat), ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ದಲಿತರ ಮತಗಳು ನಿರ್ಣಾಯಕ. ಹೀಗಾಗಿ ಒಂದು ರಾಜ್ಯದಲ್ಲಿ ಮುಖ್ಯಮಂತ್ರಿ ನೇಮಿಸಿ ಉಳಿದ ಕಡೆ ಲಾಭ ತೆಗೆದುಕೊಳ್ಳುವ ಪ್ರಯತ್ನ ಕಾಂಗ್ರೆಸ್‌ ಮಾಡುತ್ತಿದೆ. ಪಂಜಾಬ್‌ನಲ್ಲಾದರೂ ಈ ದಲಿತ(Dalit) ಕಾರ್ಡ್‌ನಿಂದ ಲಾಭವಿದೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್‌ ಮತ್ತು ಗಾಂಧಿ​ ಪರಿವಾರಕ್ಕೆ ಇದೊಂದು ಒಳ್ಳೆಯ ಸುದ್ದಿ.

‘ದಲಿತ ಕಾರ್ಡ್‌’ ಈಗೇಕೆ ಅಂದರೆ

ಮುಂದಿನ ವರ್ಷ ನಡೆಯಲಿರುವ ಪಂಜಾಬ್‌ ಚುನಾವಣೆ ಸಮಯದಲ್ಲಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ಗೆ 80 ವರ್ಷ ವಯಸ್ಸಾಗುತ್ತಿತ್ತು. ಹೀಗಾಗಿ ಪಂಜಾಬ್‌ ಕಾಂಗ್ರೆಸ್‌ನ ಒಂದು ಕಾಲದ ನಾಯಕನಾಗಿರುವ ಅವರನ್ನು ಕೆಳಗೆ ಇಳಿಸುವುದು ಅನಿವಾರ್ಯ ಆಗಿತ್ತು. ಆದರೆ ಜನಮಾನಸವನ್ನು ಹಿಡಿದಿಡುವ ಒಂದೂ ಹೆಸರು ಕಾಂಗ್ರೆಸ್‌ ಬಳಿ ಇರಲಿಲ್ಲ. ಹೀಗಾಗಿ ಜನಪ್ರಿಯತೆ ಇರುವ ನವಜೋತ್‌ ಸಿಂಗ್‌ ಸಿಧುರನ್ನು(Navjot Singh Sidhu) ತಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಮಾಡಲಾಯಿತು. ಮೂಲ ಯೋಜನೆ ಪ್ರಕಾರ ಸಿಧು ಅವರು ಅಮರಿಂದರ್‌ ಸಿಂಗ್‌ರ ಆಗಬೇಕಿತ್ತು. ಆದರೆ ಸಿಧು ಮುಖ್ಯಮಂತ್ರಿ ಆದರೆ ಪಾರ್ಟಿ ಒಡೆಯುತ್ತೇನೆ, ಸರ್ಕಾರ ನಡೆಯಲು ಬಿಡುವುದಿಲ್ಲ ಎಂದು ಕ್ಯಾಪ್ಟನ್‌ ಎಚ್ಚರಿಕೆ ಕೊಟ್ಟನಂತರ ಬಂದಿದ್ದೇ ದಲಿತ ಕಾರ್ಡು. 33 ಪ್ರತಿಶತ ಇರುವ ದಲಿತ ಸಮುದಾಯದಿಂದ ಮುಖ್ಯಮಂತ್ರಿ ಆದರೆ ಅಮರಿಂದರ್‌ ಸಿಂಗ್‌ ಸರ್ಕಾರ ಬೀಳಿಸುವ ಸಾಹಸ ಮಾಡೋದಿಲ್ಲ ಎನ್ನುವುದು ನಿರ್ಣಯಕ್ಕೆ ಮುಖ್ಯ ಕಾರಣ.

ಒಂದು ಮೆಚ್ಚುವ ಅಂಶ ಎಂದರೆ ಕೊನೆ ಕ್ಷಣದವರೆಗೂ ಕಾಂಗ್ರೆಸ್‌ ಹೆಸರಿನ ಬಗ್ಗೆ ಕಾಯ್ದುಕೊಂಡ ರಹಸ್ಯ. ಸಿಧು, ಅಂಬಿಕಾ ಸೋನಿ(Ambika Soni), ಜಾಖಡ್‌, ಸುಖವಿಂದರ್‌ ರಾಂಧವಾ ಹೆಸರುಗಳನ್ನು ಹೊರಬಿಡುತ್ತಿದ್ದ ದಿಲ್ಲಿ ನಾಯಕರು ಕೊನೆಯದಾಗಿ ಚರಣಜೀತ್‌ ಸಿಂಗ್‌ ಚನ್ನಿ ಎಂಬ ದಲಿತ ಮುಖ್ಯಮಂತ್ರಿ ಹೆಸರು ಕೊಟ್ಟಾಗ ಒಂದು ಕ್ಷಣ ಬಿಜೆಪಿ, ಅಕಾಲಿದಳ, ಆಮ್‌ ಆದ್ಮಿ ಪಾರ್ಟಿ, ಅದೆಲ್ಲಕ್ಕಿಂತ ಹೆಚ್ಚಾಗಿ ಉತ್ತರ ಪ್ರದೇಶದಲ್ಲಿ ದಲಿತರ ವೋಟುಗಳನ್ನೇ ನೆಚ್ಚಿಕೊಂಡು ಪಾಲಿಟಿಕ್ಸ್‌ ಮಾಡುವ ಮಾಯಾವತಿ ಸ್ವಲ್ಪಮಟ್ಟಿಗೆ ಚಕಿತರಾಗಿದ್ದಾರೆ. 90ರ ದಶಕದಲ್ಲಿ ದೇಶದಲ್ಲಿ ಮಂದಿರ ಮತ್ತು ಮಂಡಲ ಚಳವಳಿಗಳು ಶುರು ಆದಾಗ ಜನತಾದಳದಿಂದ ಬೇರ್ಪಡೆ ಹೊಂದಿದ ಪ್ರಾದೇಶಿಕ ಪಕ್ಷಗಳು ಕೂಡಲೇ ಹಿಂದುಳಿದ ನಾಯಕರನ್ನು ಗುರುತಿಸಿ ರಾಜಕಾರಣ ಮಾಡಿದರೆ, ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಮೇಲ್ಜಾತಿಗಳನ್ನು ಜೊತೆಗಿಟ್ಟುಕೊಂಡೇ ನೇತೃತ್ವವನ್ನು ಹಿಂದುಳಿದ ನಾಯಕರ ಕೈಗೆ ನೀಡಿದ್ದರಿಂದ ರಾಜಕೀಯವಾಗಿ ಚಿಗಿತುಕೊಳ್ಳಲು ಸಾಧ್ಯ ಆಯಿತು. ಆದರೆ ಕಾಂಗ್ರೆಸ್‌ ಹಿಂದಿ ಪ್ರದೇಶಗಳಲ್ಲಿ ಅದನ್ನು ಮಾಡದೇ ನಷ್ಟಅನುಭವಿಸಿತು. ಆದರೆ ಈಗ ಬಹಳ ವರ್ಷಗಳ ನಂತರ ಕಾಂಗ್ರೆಸ್‌ ಒಂದು ರಾಜಕೀಯ ದಾಳ ಎಸೆದಿದೆ. ಅದರ ಚುನಾವಣಾ ಲಾಭ-ನಷ್ಟದ ಪ್ರತಿಧ್ವನಿ ಬಹಳಷ್ಟುರಾಜ್ಯಗಳಲ್ಲಿ ಆಗಲಿದೆ.

ಸಿಧು, ಚನ್ನಿ ಇಬ್ಬರ ನೇತೃತ್ವ ಏಕೆ?

ಪಂಜಾಬ್‌ನಲ್ಲಿ ಸಿಖ್‌ ಮತ್ತು ಹಿಂದೂಗಳಲ್ಲಿ ಒಟ್ಟಾರೆ ದಲಿತರು 33 ಪ್ರತಿಶತ ಇದ್ದಾರೆ. ಅದರಲ್ಲಿ ಮಜಬಿಗಳು ಅಂದರೆ ಸಿಖ್‌ ಧರ್ಮಕ್ಕೆ ಮತಾಂತರಗೊಂಡ ವಾಲ್ಮೀಕಿಗಳು, ರವಿದಾಸರು ಮತ್ತು ರಾಮದಾಸಿಗಳು ಬಹುಸಂಖ್ಯಾತರು. ಆದರೆ ಇಲ್ಲಿಯವರೆಗೆ ಜಾಟ್‌, ಸಿಖ್‌ ಹೊರತುಪಡಿಸಿ ಉಳಿದವರು ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಾಗಿಲ್ಲ. ಹಾಗೆ ನೋಡಿದರೆ ಜಾಟ್‌ ಸಿಖ್‌ರ ಸಂಖ್ಯೆ ದಲಿತರಿಗಿಂತ ಕಡಿಮೆ ಅಂದರೆ ಶೇ.20ರಷ್ಟು. ಆದರೆ ಪಂಜಾಬ್‌ನ ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಪಾರುಪತ್ಯ ಜಾಟ್‌ ಸಿಖ್‌ರ ಕೈಯಲ್ಲಿ ಇರುವುದರಿಂದ ರಾಜಕೀಯ ಪಾರಮ್ಯ ಜಾಸ್ತಿ. ಜಾಟ್‌ ಸಿಖ್ಖರ ಅರ್ಧಕ್ಕೂ ಹೆಚ್ಚು ಮತ ಪರಂಪರಾಗತವಾಗಿ ಹೋಗುವುದು ಅಕಾಲಿದಳಕ್ಕೆ.

ಹೀಗಾಗಿ ಅಕಾಲಿದಳದ ಜಾಟ್‌ ಸಿಖ್ಖರು ಮತ್ತು ಬಿಜೆಪಿ ಕಾರಣದಿಂದ ಹಿಂದೂ ಮೇಲ್ಜಾತಿಗಳು ಒಟ್ಟಾಗಿ ಬಂದು ಅಧಿ​ಕಾರ ಹಿಡಿದರೆ, ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಇರುವುದು ದಲಿತ ಸಿಖ್‌ ಮತ್ತು ಹಿಂದೂಗಳಲ್ಲಿ ಜಾಸ್ತಿ. ಕಾನ್ಷಿರಾಮ್‌ ಪಂಜಾಬ್‌ನವರೇ ಆದರೂ ಹಿಂದೂ ಮತ್ತು ಸಿಖ್‌ ದಲಿತರು ಕಾಂಗ್ರೆಸ್ಸನ್ನು ಅಪ್ಪಿಕೊಂಡಿದ್ದರು. ಆದರೆ ಕಾಂಗ್ರೆಸ್‌ನ ನಾಯಕತ್ವ ಇದ್ದದ್ದು ಮಾತ್ರ ಆದೇ ಜಾಟ್‌ ಸಿಖ್‌ರ ಬಳಿ. ಸರ್ದಾರ್‌ ದರ್ಬಾರ್‌ ಸಿಂಗ್‌, ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌, ಈಗಿನ ನವಜೋತ್‌ ಸಿಧು ಎಲ್ಲರೂ ಜಾಟ್‌ ಸಿಖ್ಖರೇ. 6 ತಿಂಗಳ ಹಿಂದೆ ಅಕಾಲಿದಳ ಮಾಯಾವತಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್‌ ದಲಿತ ಮುಖ್ಯಮಂತ್ರಿ ಕಾರ್ಡ್‌ ಆಡಲು ಇನ್ನೊಂದು ಕಾರಣ. ಒಂದು ವೇಳೆ ಸಿಖ್‌ ಮತ್ತು ಹಿಂದೂ ದಲಿತರು ದಲಿತ ಮುಖ್ಯಮಂತ್ರಿ ಕಾರಣದಿಂದ ಕಾಂಗ್ರೆಸ್‌ ಜೊತೆ ಇನ್ನಷ್ಟುಗಟ್ಟಿಯಾಗಿ ನಿಂತುಕೊಂಡರೆ ಕಾಂಗ್ರೆಸ್‌ಗೆ ದೊಡ್ಡ ಲಾಭ ಆಗಬಹುದು. ಆದರೆ ಇನ್ನೊಂದು ಬದಿಯಲ್ಲಿ ಅಮರಿಂದರ್‌ರನ್ನು ತೆಗೆದು ದಲಿತ ಮುಖ್ಯಮಂತ್ರಿಯನ್ನು ತಂದಿದ್ದಕ್ಕಾಗಿ ಜಾಟ್‌ ಸಿಖ್ಖರು ಮುನಿಸಿಕೊಂಡು ಅಕಾಲಿದಳಕ್ಕೆ ದಂಡಿಯಾಗಿ ಹೋದರೆ ನಷ್ಟವೂ ಆಗಬಹುದು. ಹೀಗಾಗಿಯೇ ಕಾಂಗ್ರೆಸ್‌ ಸಿಧು ಮತ್ತು ಚನ್ನಿ ಇಬ್ಬರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದು ಹೇಳುತ್ತಿದೆ.

ಕ್ಷಮಿಸಿ ಅಮರಿಂದರ್‌ ಅಂದ್ರು ಮೇಡಂ

ಅದು ಬಿಜೆಪಿ ಇರಲಿ, ಕಾಂಗ್ರೆಸ್‌ ಇರಲಿ ರಾಜಕೀಯ ಲಾಭ ತಂದುಕೊಡುವ ಸಾಮರ್ಥ್ಯ ಕಡಿಮೆಯಾದರೆ ಸಾಕು ರಾಷ್ಟ್ರೀಯ ಪಕ್ಷಗಳಲ್ಲಿ ದಾದ್‌ ನಹೀ ಫರ್ಯಾದ್‌ ನಹೀ (ಯಾರೂ ಕೇರ್‌ ಮಾಡುವುದಿಲ್ಲ). ಚುನಾವಣೆಗೆ ಬರುವಾಗ 5 ವರ್ಷ ಇವರೇ ಮುಖ್ಯಮಂತ್ರಿ ಎಂದು ತೋರಿಸಿ ಮತದಾರರನ್ನು ಸೆಳೆಯುವ ರಾಷ್ಟ್ರೀಯ ಪಕ್ಷಗಳು ಕೆಲಸ ಮುಗಿದ ಮೇಲೆ ಕ್ಯಾರೇ ಎನ್ನುವುದಿಲ್ಲ. ಅಮರಿಂದರ್‌ ಸಿಂಗ್‌ ಭೇಟಿಗೆ ರಾಹುಲ್‌ ಮತ್ತು ಪ್ರಿಯಾಂಕಾ ಸಮಯವನ್ನೇ ನೀಡುತ್ತಿರಲಿಲ್ಲ. 6 ತಿಂಗಳ ಹಿಂದೆ ತಮ್ಮನ್ನು ಕೇಳದೆ ಸಿಧುರನ್ನು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಮಾಡಿದಾಗ ವ್ಯಗ್ರರಾಗಿದ್ದ ಅಮರಿಂದರ್‌ ಸೋನಿಯಾರನ್ನು ಭೇಟಿಯಾದಾಗ ‘ನಿಮ್ಮ ಅವಧಿ​ ಅಬಾಧಿ​ತ’ ಎಂದು ಕಳುಹಿಸಿದ್ದರು. ಆದರೆ ರಾಹುಲ್‌ ಮತ್ತು ಪ್ರಿಯಾಂಕಾ ಗಾಂಧಿಗೆ ತಂದೆಯ ಸ್ನೇಹಿತನನ್ನು ಮುಂದುವರಿಸುವುದು ಇಷ್ಟಇರಲಿಲ್ಲ. ಯಾವಾಗ ಚುನಾವಣಾ ಪೂರ್ವ ಸಮೀಕ್ಷೆಗಳು ಅಮರಿಂದರ್‌ ನೇತೃತ್ವದಲ್ಲಿ ಹೋದರೆ 10 ಪ್ರತಿಶತ ಮತ ಕಡಿಮೆ ಆಗಬಹುದು ಎಂದು ಹೇಳಿದವೋ ಅಮರಿಂದರ್‌ ಬೆಂಬಲಿಗ ಶಾಸಕರೇ ಮುಖ್ಯಮಂತ್ರಿ ವಿರುದ್ಧ ತಿರುಗಿ ಬೀಳತೊಡಗಿದರು.

ಇದೇ ಸಮಯಕ್ಕೆ ಕಾಯುತ್ತಿದ್ದ ರಾಹುಲ್‌ ಮತ್ತು ಪ್ರಿಯಾಂಕಾ ತಾಯಿಯನ್ನು ಒಪ್ಪಿಸಿದರು ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು. ಯಾವಾಗ ಹರೀಶ್‌ ರಾವತ್‌ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದರೋ ಸಿಟ್ಟಾದ ಅಮರಿಂದರ್‌ ಶಾಸಕರನ್ನು ಮನೆಗೆ ಕರೆದರು. ಆದರೆ ಬಂದಿದ್ದು ಬೆರಳೆಣಿಕೆಯ ಶಾಸಕರು ಅಷ್ಟೆ. ಗಾಳಿ ವಿರುದ್ಧ ದಿಕ್ಕಿಗೆ ಹರಿಯುತ್ತಿದೆ ಎಂದು ಅರಿತುಕೊಂಡ ಅಮರಿಂದರ್‌ ಮ್ಯಾಡಮ್‌ ಸೋನಿಯಾಗೆ ಫೋನ್‌ ಹಚ್ಚಿದ್ದಾರೆ. 3 ಬಾರಿ ಸತಾಯಿಸಿದ ನಂತರ ಸೋನಿಯಾ ಫೋನ್‌ ಸಂಪರ್ಕಕ್ಕೆ ಬಂದಿದ್ದಾರೆ. ‘ಏನು ನಡೆಯುತ್ತಿದೆ; ನನಗೆ ಯಾಕೆ ಇಷ್ಟುಮುಜುಗರ ಮಾಡುತ್ತಿದ್ದೀರಿ’ ಎಂದು ಕೇಳಿದಾಗ ಸೋನಿಯಾ, ‘ಸಾರಿ ಅಮರಿಂದರ್‌’ ಎಂದಿದ್ದಾರೆ. ಹಾಗಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಕ್ಯಾಪ್ಟನ್‌ ಹೇಳಿದಾಗ, ‘ಸರಿ ಕೊಟ್ಟುಬಿಡಿ’ಎಂದು ಹೇಳಿ ಸೋನಿಯಾ ಫೋನ್‌ ಇಟ್ಟರಂತೆ. ದೇವರಾಜ್‌ ಅರಸ್‌ ಇರಲಿ, ವೀರೇಂದ್ರ ಪಾಟೀಲ್‌ ಇರಲಿ, ಬಂಗಾರಪ್ಪ ಇರಲಿ, ಈಗ ಅಮರಿಂದರ್‌ ಸಿಂಗ್‌ ಇರಲಿ ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಾದೇಶಿಕ ಜನಪ್ರಿಯ ನಾಯಕರ ಅಂತ್ಯದ ಕಥೆ ಒಂದೇ ತೆರನಾಗಿರುತ್ತದೆ ನೋಡಿ.

ಸಿಖ್ಖರಲ್ಲೂ ಜಾತೀಯತೆ ಇದೆಯೇ?

ಹಾಗೆ ನೋಡಿದರೆ ಬುದ್ಧ, ಬಸವ ಮತ್ತು ಗುರುನಾನಕ್‌ ಹಿಂದೂ ಧರ್ಮದ ವರ್ಣಾಶ್ರಮ ಪದ್ಧತಿ ಮತ್ತು ಒಂದು ಸಮುದಾಯದ ಧಾರ್ಮಿಕ ಯಜಮಾನಿಕೆಯ ಜೊತೆಗಿನ ಅಸ್ಪೃಶ್ಯತೆ ವಿರುದ್ಧವೇ ಸಿಡಿದೆದ್ದವರು. ಈಗ ಅವು ಪ್ರತ್ಯೇಕ ಧರ್ಮಗಳು ಹೌದು, ಅಲ್ಲ ಎನ್ನುವ ಬಗ್ಗೆ ಚರ್ಚೆ ಇದೆ. ಆದರೂ ಪ್ರತ್ಯೇಕ ಪೂಜಾಪದ್ಧತಿಯನ್ನು ಬೋಧಿಸಿದ್ದರು ಎನ್ನುವುದು ನಿಜ. ಆದರೆ ಜಾತಿಗಳು ನಮ್ಮ ಸಮಾಜದಲ್ಲಿ ಎಷ್ಟುಬೇರು ಬಿಟ್ಟಿವೆ ಎಂದರೆ ಜಾತಿ ವಿನಾಶ ಎಂದು ಬಂದವರು ಇವತ್ತು ಅದನ್ನೇ ಪುನರಾವರ್ತನೆ ಮಾಡುತ್ತಿದ್ದಾರೆ. ಗುರು ಗ್ರಂಥ ಸಾಹೇಬ್‌ ಅನ್ನು ಓದಿದರೆ ಸಿಖ್ಖರಲ್ಲಿ ಮೇಲು ಕೀಳು ಇಲ್ಲ. ಆದರೆ ಪಂಜಾಬಿನ ಹಳ್ಳಿಗಳಲ್ಲಿ ಜಾಟ್‌ರ ಗುರುದ್ವಾರಗಳು, ದಲಿತರ ಗುರುದ್ವಾರಗಳು ಬೇರೆ ಇವೆ. ದೇರಾ ಸಚ್ಚಾ ಸೌಧಾದ ಬಾಬಾ ರಾಮ್‌ ರಹೀಮ್‌ ಅಷ್ಟೊಂದು ಬೆಳೆದಿದ್ದು ದಲಿತ ಸಿಖ್‌ರ ನಡುವಿನ ಜನಪ್ರಿಯತೆಯಿಂದಾಗಿ. 33 ಪ್ರತಿಶತ ಇದ್ದರೂ ದಲಿತ ಸಿಖ್ಖರ ಒಂದು ಸಮಸ್ಯೆ ಎಂದರೆ ಜಾಟ್‌ ಸಿಖ್ಖರ ರೀತಿಯಲ್ಲಿ ಇವರಲ್ಲಿ ರಾಜಕೀಯ ಏಕತೆ ಇಲ್ಲ. ಆದರೆ ಕಾಂಗ್ರೆಸ್‌ ಮೊದಲ ಬಾರಿ ದಲಿತ ಸಿಖ್‌ರನ್ನು ಮುಖ್ಯಮಂತ್ರಿ ಮಾಡಿ ಒಂದು ಹೊಸ ಪ್ರಯೋಗ ಮಾಡಿದೆ. ಇದರ ಯಶಸ್ಸು ಮತ್ತು ವಿಫಲತೆ ಮುಂದಿನ ದಲಿತ ರಾಜಕಾರಣದ ಹಾದಿಯನ್ನು ನಿರ್ಧರಿಸಬಲ್ಲದು.

Follow Us:
Download App:
  • android
  • ios