ವಯೋಮಾನದ ಮಿತಿ ನಿಗದಿಪಡಿಸದೆ ಎಲ್ಲ ವಯಸ್ಸಿನ ದೇವದಾಸಿಯರನ್ನೂ ಒಳಗೊಂಡು ಸಮೀಕ್ಷೆ ನಡೆಸುವಂತೆ ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ.
ಬೆಂಗಳೂರು (ಜು.25): ಸರ್ಕಾರ ಕೈಗೊಳ್ಳಲಿರುವ ದೇವದಾಸಿಯರ ಮರುಸಮೀಕ್ಷೆಯಲ್ಲಿ 45 ವರ್ಷ ಪೂರೈಸಿದವರನ್ನು ಮಾತ್ರ ಪರಿಗಣಿಸುತ್ತೇವೆಂಬ ನಿರ್ಧಾರ ಕೈಬಿಟ್ಟು ವಯೋಮಾನದ ಮಿತಿ ನಿಗದಿಪಡಿಸದೆ ಎಲ್ಲ ವಯಸ್ಸಿನ ದೇವದಾಸಿಯರನ್ನೂ ಒಳಗೊಂಡು ಸಮೀಕ್ಷೆ ನಡೆಸುವಂತೆ ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದ್ದಾರೆ. ಗುರುವಾರ ವಿಮುಕ್ತ ದೇವದಾಸಿ ಮಹಿಳಾ ಮತ್ತು ಮಕ್ಕಳ ವೇದಿಕೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ನಡೆದ ಸಮೀಕ್ಷೆಯಲ್ಲಿ 46,600 ದೇವದಾಸಿಯರನ್ನು ಗುರುತಿಸಲಾಗಿತ್ತು.
ವಯೋಮಾನದ ಮಿತಿ ಸೇರಿ ಇತರೆ ಕೆಲ ನಿಬಂಧನೆ ಇದ್ದುದರಿಂದ ಹಲವು ದೇವದಾಸಿಯರು ಸಮೀಕ್ಷೆಯಿಂದ ಹೊರಗುಳಿಯುವಂತಾಗಿತ್ತು. ಇದರಿಂದ ಅವರು ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದರು ಎಂದರು. ಆದರೆ, ಈಗ ಮರುಸಮೀಕ್ಷೆ ನಡೆಸುತ್ತಿರುವ ಹೊತ್ತಿನಲ್ಲೂ 45 ವರ್ಷ ಪೂರೈಸಿದವರನ್ನು ಮಾತ್ರ ಪರಿಗಣಿಸುತ್ತೇವೆ ಎಂಬ ನಿರ್ಧಾರ ಕೈ ಬಿಡಬೇಕು. ಎಲ್ಲಾ ವಯೋಮಾನದ ದೇವದಾಸಿಯರನ್ನು ಸಮೀಕ್ಷೆಯೊಳಗೆ ತರಬೇಕು ಎಂದರು. ಮರು ಸಮೀಕ್ಷೆಯನ್ನು ಕಚೇರಿಯಲ್ಲಿ ಕೂತು ಮಾಡಲು ಮುಂದಾಗಿರುವುದು ತಿಳಿದುಬಂದಿದೆ. ಇದರಿಂದಲೂ ಹಲವರು ಗಣನೆಗೆ ಬಾರದಿರುವ ಸಾಧ್ಯತೆಯಿದೆ. ಹೀಗಾಗಿ ಸ್ಥಳೀಯ ಸರ್ಕಾರ, ಸಮುದಾಯ ಮತ್ತು ಸಂಘಟನೆಗಳ ನೆರವಿನಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು ಎಂದು ಹೇಳಿದರು.
ಸಂಘಟನೆಯ ರಾಜ್ಯ ಸಂಚಾಲಕ ಯಮನೂರಪ್ಪ ಮಾತನಾಡಿ, ರಾಜ್ಯದಲ್ಲಿ 1993-1994, 2006-2007ರಲ್ಲಿ ನಡೆದ ಸಮೀಕ್ಷೆ ಸೇರಿ ಒಟ್ಟು ದೇವದಾಸಿಯರನ್ನು ಲೆಕ್ಕ ಹಾಕಲಾಗಿದೆ. ಆದರೂ ಇನ್ನು ಸಾಕಷ್ಟು ದೇವದಾಸಿಯರು ಈ ಸಮೀಕ್ಷೆಗೆ ಒಳಪಟ್ಟಿಲ್ಲ. ಇದೀಗ ದೇವದಾಸಿಯರನ್ನು ಕಚೇರಿಗೆ ಕರೆಸಿ ಸಮೀಕ್ಷೆ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯುವುದು ಅಸಾಧ್ಯ. ಅಲ್ಲದೆ, ಅನಕ್ಷರಸ್ಥ ದೇವದಾಸಿಯರಿಗೆ ಮಾಹಿತಿ ನೀಡುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ತಳಮಟ್ಟದ ಸಮೀಕ್ಷೆ ಮಾಡಬೇಕು ಎಂದರು.
ಇನ್ನು, ಸಮೀಕ್ಷೆಯ ರಾಜ್ಯಮಟ್ಟದ ಸಮಿತಿ ಪುನರ್ ರಚಿಸಿ ದೇವದಾಸಿ ತಾಯಂದಿಯರು, ಅವರ ಮಕ್ಕಳ ಪ್ರತಿನಿಧಿಗಳನ್ನು ಹಾಗೂ ದೇವದಾಸಿ ಪರ ಹೋರಾಟದ ಸಂಘಟನೆಗಳ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಬೇಕು. ಜತೆಗೆ ಸಮೀಕ್ಷೆಯ ನಿರ್ದಿಷ್ಟ ಮಾನದಂಡ, ಕಾರ್ಯಸೂಚಿಯನ್ನೊಳಗೊಂಡ ಮಾರ್ಗಸೂಚಿ ರಚಿಸಿ ಸಮೀಕ್ಷೆ ನಡೆಸುವವರಿಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.
