ಒಳಮೀಸಲಾತಿಗಾಗಿ ಬಹಳ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಮಾಜಿ ಸಚಿವ ಎಚ್‌.ಆಂಜನೇಯ ಅವರು ಈ ವಾರ ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾಗಿದ್ದಾರೆ. 

ಚಂದ್ರಮೌಳಿ ಎಂ.ಆರ್‌.

ಪರಿಶಿಷ್ಟ ಜಾತಿಯಲ್ಲೇ ಅತಿ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿ ನೀಡುವ ಸಂಬಂಧ ರಾಜ್ಯಾದ್ಯಂತ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಸಂದರ್ಭದಲ್ಲಿ ಕೆಲವರು ತಮ್ಮ ಮೂಲ ಜಾತಿ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂದು ನಮೂದಿಸುತ್ತಿದ್ದು, ಇವರಿಗೆ ಮೀಸಲಾತಿ ಅಥವಾ ಒಳಮೀಸಲಾತಿ ಕೊಡಲೇ ಬಾರದು ಎಂಬ ವಾದ ಬಲವಾಗಿ ಕೇಳಿಬಂದಿದೆ. ಇದರ ಜತೆ ಸಮೀಕ್ಷಾ ವಿಧಾನ, ವರದಿ ಬಂದ ನಂತರದ ನಿರೀಕ್ಷೆಗಳು, ಎಷ್ಟು ಪ್ರಮಾಣದ ಮೀಸಲಾತಿ ಸಿಗಬೇಕು, ರಾಜಕೀಯ ಮೀಸಲಾತಿ ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳೂ ಪರಿಶಿಷ್ಟರನ್ನು ಕಾಡತೊಡಗಿವೆ. ಇನ್ನು ಜಾತಿ ಗಣತಿ ಹಾಗೂ ಒಳ ಮೀಸಲಾತಿ ಗಣತಿ ನಡುವೆ ಏನಾದರೂ ಸಂಬಂಧವಿದೆಯೇ? ಜಾತಿ ಗಣತಿ ವೈಜ್ಞಾನಿಕವಾಗಿ ನಡೆದು ಅಂಕಿ-ಅಂಶ ಸಂಗ್ರಹವಾಗಿದೆಯೇ ಎಂಬುದಕ್ಕೆ ಉತ್ತರ ಒಳ ಮೀಸಲಾತಿ ಗಣತಿ ಫಲಿತಾಂಶ ಸ್ಪಷ್ಟಪಡಿಸಲಿದೆ ಎನ್ನುವ ಮಾತುಗಳೂ ಕೇಳಿಬಂದಿವೆ. ಈ ಕುರಿತ ಗೊಂದಲಗಳಿಗೆ ಉತ್ತರಿಸಲು ಒಳಮೀಸಲಾತಿಗಾಗಿ ಬಹಳ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಮಾಜಿ ಸಚಿವ ಎಚ್‌.ಆಂಜನೇಯ ಅವರು ಈ ವಾರ ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾಗಿದ್ದಾರೆ.

* ಜಾತಿ ಗಣತಿ ಬಗ್ಗೆ ಆಕ್ಷೇಪಗಳಿವೆ. ಈ ಹಿನ್ನೆಲೆಯಲ್ಲಿ ಹಾಲಿ ನಡೆದಿರುವ ಒಳಮೀಸಲಾತಿ ಸಮೀಕ್ಷೆ ವಿಧಾನ ಸಮರ್ಪಕವಾಗಿದೆಯೇ?
ನಮಗೂ ಅಲ್ಪಸ್ವಲ್ಪ ಗೊಂದಲವಿದೆ, ಹಾಗಾಗಿ ಸಮೀಕ್ಷೆ ಪೂರ್ಣ ಆದ ಮೇಲೆ ತಿಳಿದುಕೊಂಡು ಆಯೋಗದ ಜತೆ ಚರ್ಚೆ ಮಾಡುತ್ತೇವೆ. ಸಮೀಕ್ಷೆ ಆರಂಭಕ್ಕೂ ಮುನ್ನ ಆಯೋಗ, ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಲಾಗಿತ್ತು. ಸಮೀಕ್ಷೆ ಹೇಗೆ ಮಾಡುತ್ತೀರಿ, ಫಾರ್ಮ್ಯಾಟ್‌ ಕೊಡಿ, ಕೇಳುವಂಥ 42 ಪ್ರಶ್ನೆಗಳ ವಿವರ ಕೊಡಿ, ಯಾರನ್ನು ನೇಮಕ ಮಾಡುತ್ತೀರಿ ಎಂಬ ಮಾಹಿತಿ ನೀಡಿ ಎಂದು ಕೇಳಿದ್ದೆವು. ಜತೆಗೆ ಈ ಬಗ್ಗೆ ಎಲ್ಲ ಸಮುದಾಯದ ಮುಖಂಡರನ್ನು ಕರೆದು ದೊಡ್ಡ ಸಭಾಂಗಣದಲ್ಲಿ ಎಲ್‌ಇಡಿ ಮೂಲಕ ಡೆಮೋ ಕೊಡಬೇಕು. ಇದಾದ ನಂತರ ಒಂದು ದಿನ ಸ್ಯಾಂಪಲ್‌ ಸರ್ವೆ ಮಾಡಬೇಕು, ಸ್ಯಾಂಪಲ್‌ ಸರ್ವೆಯಲ್ಲಿ ಕಂಡು ಬರುವ ಸಾಧಕ-ಬಾಧಕ ಪರಿಹರಿಸಿ ನಂತರ ಸರ್ವೆ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಅವರು ಯಾವುದೇ ರೀತಿಯ ತಪ್ಪಾಗದಂತೆ ಮಾಡಿದ್ದೇವೆ ಎಂದು ಹೇಳಿ ಸರ್ವೇ ಶುರು ಮಾಡಿದ್ದಾರೆ.

ರಾಜ್ಯದಲ್ಲಿ 16 ಸಕ್ರಿಯ ಕೊರೋನಾ ಕೇಸ್‌, ಯಾರಿಗೂ ಅಪಾಯವಿಲ್ಲ: ಸಚಿವ ದಿನೇಶ್ ಗುಂಡೂರಾವ್

* ಯಾವ ವಿಷಯದ ಬಗ್ಗೆ ನಿಮ್ಮ ಆತಂಕ?
ಮೊದಲು ಡೆಮೋ, ಸ್ಯಾಂಪಲ್‌ ಸರ್ವೇ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಅವರು ಮೊಬೈಲ್‌ ಆ್ಯಪ್‌ ರೆಡಿ ಮಾಡಿದ್ದೇವೆ. ಪಾರದರ್ಶಕವಾಗಿ ಸಮೀಕ್ಷೆ ಆಗುತ್ತದೆ ಎಂದು ಹೇಳಿದರು. ಸಮೀಕ್ಷೆ ಆರಂಭವಾದ ಮೂರ್ನಾಲ್ಕು ದಿನದ ನಂತರ ಹುಟ್ಟಿದ ಮಕ್ಕಳನ್ನು ಸೇರಿಸಬಾರದು ಎಂದು ಹೇಳಿದರು. ನಂತರ ನಾವು ಹೋಗಿ ಚರ್ಚಿಸಿದ ಬಳಿಕ ಹುಟ್ಟಿದ ಮಕ್ಕಳನ್ನು ಸೇರಿಸಬಹುದು ಎಂದು ತಿದ್ದುಪಡಿ ಮಾಡಿಕೊಂಡರು. ಇನ್ನು ಕೆಲವನ್ನು ಈಗ ಹೇಳಲು ಆಗುವುದಿಲ್ಲ.

* ಸಮುದಾಯದ ಜನರಿಗೆ ಸಮೀಕ್ಷೆಯಲ್ಲಿ ಭಾಗಿಯಾ‍ಗು‍‍‍ವ ಕುರಿತು ಜಾಗೃತಿ ಮೂಡಿಸಲಾಗಿದೆಯೇ?
ಸಮೀಕ್ಷೆ ಆರಂಭಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಎರಡ್ಮೂರು ಸಭೆ ಮಾಡಿದ್ದೇವೆ. ನಮ್ಮ ಸಮುದಾಯದಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ. ಜತೆಗೆ ಮಾದಿಗರ ಮನೆ ಎಂದು ಹೇಳಿ ಸ್ಟಿಕ್ಕರ್‌, ಕರಪತ್ರ ಹಂಚಿದ್ದೇವೆ. ಪತ್ರಿಕೆಗಳಲ್ಲಿ ಜಾಹೀರಾತೂ ನೀಡಿದ್ದೇವೆ. ವ್ಯಾಟ್ಸ್‌ ಆ್ಯಪ್‌ನಲ್ಲಿ ಮನವಿ ಮಾಡಿದ್ದೇವೆ. ಅಲ್ಲಲ್ಲಿ ಸಭೆಗಳನ್ನೂ ನಡೆಸಿದ್ದೇವೆ. ಈಗಾಗಲೇ ನಾನೂ ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ,ಕೊಪ್ಪಳ, ಹೊಸಪೇಟೆ ಹುಬ್ಬಳ್ಳಿ-ಧಾರವಾಡದಲ್ಲಿ ಪ್ರವಾಸ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಸಮುದಾಯದ ಮುಖಂಡರಿಂದ ಮಾಹಿತಿ ಪಡೆಯುತ್ತಿದ್ದೇನೆ, ಅಲ್ಲಲ್ಲಿ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ಇದಾದ ನಂತರ ವಿಜಯಪುರ, ಕಲಬುರಗಿ, ರಾಯಚೂರು, ಬಳ್ಳಾರಿ, ದಾವಣಗೆರೆ ನಂತರ ಬೆಂಗಳೂರಿಗೆ ಪ್ರವಾಸ ಮಾಡುತ್ತೇನೆ.

* ಪ್ರವಾಸದ ವೇಳೆ ಸಮೀಕ್ಷೆ ಕುರಿತು ದೂರುಗಳು ಕೇಳಿ ಬಂದಿವೆಯೇ?
ಮೊಬೈಲ್‌ ಆ್ಯಪ್‌ನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ, ಸಮೀಕ್ಷೆಗೆ ಒಳಗಾದವರು ಅದರ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಎಷ್ಟು ಜನರ ಬಳಿ ಒಳ್ಳೆಯ ಮೊಬೈಲ್‌ ಇರುತ್ತದೆ, ಬೇಸಿಕ್‌ ಪೋನ್‌ನಲ್ಲಿ ಚೆಕ್‌ ಮಾಡಲು ಸಾಧ್ಯವೇ ಎಂದೂ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ಎಲ್ಲಾ ಹೇಳುವುದು ಕಷ್ಟ, ಸಮೀಕ್ಷೆ ಮುಗಿದ ಮೇಲೆ ಆ ಕುರಿತು ಮಾತನಾಡುತ್ತೇನೆ.

* ಅನೇಕರು ತಮ್ಮ ಮೂಲ ಜಾತಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ದಾಖಲು ಮಾಡುತ್ತಿದ್ದಾರೆ. ಹೀಗಾದರೆ ಸಮೀಕ್ಷೆ ಉದ್ದೇಶವೇ ವಿಫಲ ಆಗುವುದಿಲ್ಲವೇ?
ನಿಜ. ಹಿಂದೆ ಮೈಸೂರು ಮಹಾರಾಜರು ಪರಿಶಿಷ್ಟ ಜಾತಿಗೆ ಗೌರವ ನೀಡಬೇಕೆಂಬ ಉದ್ದೇಶದಿಂದ ನಮ್ಮ ರಾಜ್ಯದವರಿಗೆ ಆದಿ ಕರ್ನಾಟಕ, ಆಂಧ್ರಪ್ರದೇಶದಿಂದ ಬಂದವರಿಗೆ ಆದಿ ಆಂಧ್ರ, ತಮಿಳುನಾಡಿನಿಂದ ಬಂದವರಿಗೆ ಆದಿ ದ್ರಾವಿಡ ಎಂದು ಕರೆದರು. ಈಗ ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ದಾಖಲು ಮಾಡಲೇಬಾರದಿತ್ತು. ಒಳಮೀಸಲಾತಿ ಸಿಗದಿರಲು ಈ ಮೂರು ಜಾತಿಗಳ ಉಲ್ಲೇಖವೇ ಪ್ರಮುಖ ಅಡ್ಡಿಯಾಗಿತ್ತು. ಇದೇ ಕಾರಣಕ್ಕೆ ಹೊಸದಾಗಿ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆ ವೇಳೆ ಯಾರಾದರೂ ತಮ್ಮ ಮೂಲ ಜಾತಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದಲ್ಲಿ ಅವರು ‘ಮಾದಿಗ’ ಜಾತಿಯ ಭಾಗ ಆಗಲ್ಲ, ಅವರಿಗೆ ಒಳಮೀಸಲಾತಿಯಡಿ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯ ಕೊಡಬಾರದು ಎಂದು ನಾವು ಒತ್ತಾಯ ಮಾಡುತ್ತೇವೆ. ಸಮೀಕ್ಷೆ ಪೂರ್ಣವಾದ ನಂತರ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬುದನ್ನು ಜಾತಿ ಪಟ್ಟಿಯಿಂದ ತೆಗೆಯಬೇಕು ಎಂದು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಆಗ್ರಹಿಸುತ್ತೇವೆ.

* ಈ ಆದಿ ಜಾತಿಗಳ ಸಮಸ್ಯೆ ಎಲ್ಲ ಕಡೆ ಇದೆಯೇ?
ಇಲ್ಲ, ರಾಜ್ಯದ 16 ಜಿಲ್ಲೆಗಳಲ್ಲಿ ಮಾತ್ರ ಈ ಸಮಸ್ಯೆ ಇದೆ. ಮುಖ್ಯವಾಗಿ ಮೈಸೂರು ಹಾಗೂ ಬೆಂಗಳೂರು ವಿಭಾಗದಲ್ಲಿ ಮಾತ್ರ ಈ ಸಮಸ್ಯೆ ಇದೆ, ಕಲ್ಯಾಣ ಕರ್ನಾಟಕದಲ್ಲಿ ಹೊಲೆಯರು ತಾವು ಮಾದಿಗರು ಎಂದು ಹೇಳುತ್ತಾರೆ, ಬೆಳಗಾವಿ ವಿಭಾಗದಲ್ಲಿ ಮಾದಿಗ ಹಾಗೂ ಮಾದರ್‌ ಎಂದು ಕರೆಯಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳು ಎಂಬುದು ಮುಂದುವರಿಯಲ್ಲ. ನಮ್ಮಲ್ಲಿ ಏನಾದರೂ ಮಾದಿಗ ಸಮುದಾಯಕ್ಕೆ ನಿಗದಿಪಡಿಸುವ ಮೀಸಲಾತಿ ದೊರೆಯುವ ಸಂದರ್ಭದಲ್ಲಿ ಯಾರೇ ಆಗಲಿ ಮಾದಿಗ ಎಂದು ಬರೆಸದೆ ಆದಿ ಕರ್ನಾಟಕ, ಆದಿ ದ್ರಾವಿಡ ಅಥವಾ ಆದಿ ಆಂಧ್ರ ಎಂದು ಹೇಳಿಕೊಂಡರೆ ಅವರಿಗೆ ಮೀಸಲಾತಿಯೂ ಇರಲ್ಲ, ಒಳಮೀಸಲಾತಿಯೂ ಸಿಗಲ್ಲ. ಅವರಿಗೆ ಮೀಸಲಾತಿ ಕೊಡಬಾರದೆಂದು ನಾವೇ ಆಕ್ಷೇಪ ಸಲ್ಲಿಸುತ್ತೇವೆ. ಎಷ್ಟೋ ಜನ ತಮಿಳುನಾಡು, ಆಂಧ್ರದಿಂದ ಬಂದು ಮೀಸಲಾತಿ ತೆಗೆದುಕೊಂಡಿದ್ದಾರೆ. ಹಾಗಾಗಿ ಈ ರೀತಿ ಬರೆಸಿದ ಮಾಹಿತಿ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳನ್ನು ಪ್ರತ್ಯೇಕ ಗುಂಪಾಗಿ ವಿಂಗಡಿಸಬಾರದು ಎಂಬುದು ನಮ್ಮ ಬಲವಾದ ಒತ್ತಾಯ.

* ಈ ನಡುವೆ ಬೇಡ ಜಂಗಮ, ಬುಡಗ ಜಂಗಮ ಎಂದು ಸೇರ್ಪಡೆ ಮಾಡುತ್ತಿದ್ದಾರಂತಲ್ಲ?
ಬುಡಗ ಜಂಗಮ ಓಕೆ, ಬೇಡ ಜಂಗಮ ಯಾಕೆ? ಪರಿಶಿಷ್ಟ ಜಾತಿಯಲ್ಲಿ 101 ಜಾತಿ ಬರುತ್ತವೆ, ಇದರಲ್ಲಿ ಮತ್ತೆ ಉಪಜಾತಿಗಳೂ ಬರುತ್ತವೆ. ಈ ಎಲ್ಲವನ್ನೂ ಸೇರಿಸಿದರೆ ಒಟ್ಟು 182 ಜಾತಿಗಳು ಆಗುತ್ತವೆ. ಅದರಲ್ಲಿ ಎಷ್ಟೋ ಜಾತಿಗಳು ನಶಿಸಿ ಹೋಗಿವೆ, ಬ್ರಿಟಿಷರ ಕಾಲದಲ್ಲಿ ಏನೇನೋ ಜಾತಿ ಬರೆದುಬಿಟ್ಟಿದ್ದಾರೆ. ‘ಹಲಾಲಕೋರ’ ‘ಚಾಂಡಾಳ’ ಎಂಬ ಜಾತಿಯೂ ಇದೆ. ಈಗ ಯಾರಾದರೂ ಈ ಜಾತಿ ಹೆಸರಲ್ಲಿ ಪ್ರಮಾಣಪತ್ರ ಪಡೆಯಲು ಆಗುತ್ತಾ? ಅದೇ ರೀತಿ ‘ಬೇಡ ಜಂಗಮ’ ಎನ್ನುವುದು ಬೇಟೆ ಆಡುವವರು, ಪ್ರಾಣಿ ತಿನ್ನುವವರು, ತೆಲುಗು ಮಾತನಾಡುವವರು, ಮಾದಿಗರ ಮನೆಯಲ್ಲಿ ಗೋಮಾಂಸ ಸೇವಿಸುವವರಾಗಿದ್ದಾರೆ. ಇನ್ನು ವೀರಶೈವ ಜಂಗಮರು ನಮಗೆಲ್ಲರೂ ಗುರುಗಳು, ಅವರು ಜಂಗಮ ಹೆಸರಿನ ಹಿಂದೆ ಬೇಡ ಜಂಗಮ ಎಂದು ಸೇರಿಸಿಕೊಂಡು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಬೇಡ ಜಂಗಮ ಸಮುದಾಯ ವಾಪಸ್‌ ಆಂಧ್ರಕ್ಕೆ ಹೋಗಿದೆ, ಇಲ್ಲವೇ ಆ ಜಾತಿ ನಶಿಸಿಹೋಗಿದೆ.

* ಆದರೆ ಸಮೀಕ್ಷೆಯಲ್ಲಿ ಅವರನ್ನು ಪರಿಗಣಿಸಲಾಗುತ್ತಿದೆಯಲ್ವಾ?
ಸಮೀಕ್ಷೆ ಆರಂಭದಲ್ಲಿ ಬೇಡ ಜಂಗಮ ಎಂದು ನಮೂದಿಸುವವರಿಗೆ ಜಾತಿ ಪ್ರಮಾಣ ಪತ್ರ ಕೇಳುವಂತೆ ಸೂಚಿಸಲಾಗಿತ್ತು. ಆಗ ಬೇರೆ ಯಾವ ಜಾತಿಯವರಿಗೂ ಜಾತಿ ಪ್ರಮಾಣ ಪತ್ರ ಕೇಳುವುದಿಲ್ಲ. ನಮಗೆ ಮಾತ್ರ ಯಾಕೆ ಕೇಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಅವರು ರಿಟ್‌ ಅರ್ಜಿ ಹಾಕಿದರು, ಹಾಗಾಗಿ ಅವರನ್ನೂ ಗಣತಿಯಲ್ಲಿ ಪರಿಗಣಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲೂ ಬೇಡ ಜಂಗಮ ಜಾತಿ ತೆಗೆಯುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ಕುರಿತು ಹೋರಾಟ ಸಹ ಮಾಡುತ್ತೇವೆ.

* ಸಮೀಕ್ಷೆ ಪೂರ್ಣಗೊಂಡ ನಂತರ ನಿಮ್ಮ ನಿರೀಕ್ಷೆಗಳೇನು?
ಹಿಂದೆ ಪರಿಶಿಷ್ಟ ಜಾತಿಯವರಿಗೆ ಶೇ.15ರಷ್ಟು ಮೀಸಲಾತಿ ಇದ್ದಾಗ, ಸದಾಶಿವ ಆಯೋಗ ನಮಗೆ ಶೇ.6ರಷ್ಟು ಮೀಸಲಾತಿ ನಿಗದಿಗೊಳಿಸಿದರು. ಶೇ.17ರಷ್ಟು ಮೀಸಲಾತಿ ಆದಾಗಲೂ ಬಿಜೆಪಿ ಸರ್ಕಾರ ಶೇ.6 ನಿಗದಿಮಾಡಿತ್ತು. ನಾವು ಎಲ್ಲದರಲ್ಲೂ ‘ಜೀರೋ’ ಇದ್ದೇವೆ. ಈ ಅಲ್ಲ ಅಂಶ ಆಧರಿಸಿ ನಮಗೆ ಕನಿಷ್ಠ ಶೇ.7ರಷ್ಟು ಒಳಮೀಸಲಾತಿ ಬೇಕು.

* ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಸಿಗುತ್ತದೆಯೇ?
ಆರ್ಥಿಕ, ನಿವೇಶನ, ಉದ್ಯೋಗ, ಶಿಕ್ಷಣದಲ್ಲಿ ಮಾತ್ರ ಮೀಸಲಾತಿ ಸಿಗುತ್ತದೆ, ರಾಜಕೀಯ ಮೀಸಲಾತಿ ದೊರೆಯಲು ಸಂವಿಧಾನ ತಿದ್ದುಪಡಿ ಆಗಬೇಕು, ಕೆಲ ರಾಜ್ಯಗಳಲ್ಲಿ ಒಳಮೀಸಲಾತಿ ಇಲ್ಲ. ಹೀಗಾಗಿ ರಾಜಕೀಯದಲ್ಲಿ ಒಳಮೀಸಲಾತಿ ಸಿಗುವುದು ಕಷ್ಟ.

* ಜಾತಿ ಗಣತಿ ಸಮೀಕ್ಷೆ ದತ್ತಾಂಶ ಸಮರ್ಪಕ ಎಂದು ಬಿಂಬಿಸಲು ಒಳಮೀಸಲಾತಿ ಸಮೀಕ್ಷೆ ಆರಂಭಿಸಲಾಗಿದೆ ಎಂಬ ಆರೋಪಗಳಿವೆ?
ಸದಾಶಿವ ಆಯೋಗದ ವರದಿ ಅಥವಾ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಸಮುದಾಯ ಎಷ್ಟಿದೆ ಎಂಬ ಅಂಕಿ-ಅಂಶಗಳು ಲಭ್ಯವಿಲ್ಲದ ಕಾರಣ ಒಳಮೀಸಲಾತಿ ಸಮೀಕ್ಷೆ ಮಾಡಲಾಗುತ್ತಿದೆ. ಸಮೀಕ್ಷೆ ವರದಿ ಬರಲಿ, ಮುಂದೇನು ಎಂಬುದನ್ನು ಆಮೇಲೆ ನೋಡೊಣ.

ರಾಯಚೂರಲ್ಲಿ ವಕ್ಫ್ ಜಾಗದ ಅನಧಿಕೃತ ಮನೆ, ಅಂಗಡಿ ತೆರವು: ಬಿಗಿ ಪೊಲೀಸ್‌ ಬಂದೋಬಸ್ತ್

* ನಮ್ಮ ಸಮುದಾಯಕ್ಕೆ ಒಳಮೀಸಲಾತಿ ಸಿಕ್ಕರೆ ಸಾಕು, ಬೇರಿನ್ಯಾವ ಸ್ಥಾನಮಾನವೂ ಬೇಡ ಎಂದು ಹೇಳಿದ್ದೀರಿ?
ಹಾಗಲ್ಲ. ಪತ್ರಿಕೆಯವರು ಸರ್ಕಾರ ಬಂದು ಎರಡು ವರ್ಷವಾಯಿತು, ನಿಮಗೆ ಎಂಎಲ್ಸಿ ಸ್ಥಾನಮಾನ ಸೇರಿ ಏನೂ ಸಿಗಲಿಲ್ಲವಲ್ಲ ಎಂದು ಕೇಳಿದರು. ಹೈಕಮಾಂಡ್‌ನವರು ನನಗೆ ಚುನಾವಣೆಗೆ ಸ್ಪರ್ಧಿಸಬೇಡ ವಿರೋಧಿಗಳು ಜಾಸ್ತಿ ಇದ್ದಾರೆ, ನಿನ್ನನ್ನು ಸೋಲಿಸುತ್ತಾರೆ. ಪಕ್ಷದ ಕಾರ್ಯಾಧ್ಯಕ್ಷನಾಗಿ ಮಾಡುತ್ತೇವೆ, ಪ್ರಚಾರ ಮಾಡು ಎಂದು ಹೇಳಿದ್ದರು. ಸರ್ಕಾರ ಬಂದ ಮೇಲೆ ನೇರವಾಗಿ ಮಂತ್ರಿ ಮಾಡುತ್ತೇವೆ ಅಂದಿದ್ದರು. ನನಗೆ ಅಹಂಕಾರ ಜಾಸ್ತಿ. ಅದೆಲ್ಲ ಆಗಲ್ಲ, ಜನರಿಂದ ಆಯ್ಕೆಯಾಗುತ್ತೇನೆ ಅಂದೆ, ಅವರು ಹೇಳಿದ ಹಾಗೆ ಕೇಳಿದ್ದರೆ, ಇಷ್ಟೊತ್ತಿಗೆ ಮಂತ್ರಿಯಾಗಿರುತ್ತಿದ್ದೆ. ಈ ವಿಷಯದಲ್ಲಿ ವೈರಾಗ್ಯ ಅಷ್ಟೆ, ಬೇರೇನೂ ಇಲ್ಲ. ಪಕ್ಷ ನನಗೆ ಕಾಲ ಕಾಲಕ್ಕೆ ಎಲ್ಲವನ್ನೂ ಕರೆದು ಕೊಟ್ಟಿದೆ. ಈಗ ನನ್ನ ಹೋರಾಟ, ಶ್ರಮ ನಮ್ಮ ನೊಂದ ಸಮಾಜಕ್ಕೆ ನ್ಯಾಯ ಕೊಡಿಸುವ ವಿಚಾರಕ್ಕೆ ಹಾಕುತ್ತಿದ್ದೇನೆ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕರೆ ನನಗೆ ಎಲ್ಲ ಸ್ಥಾನಮಾನ ಸಿಕ್ಕ ತೃಪ್ತಿ. ಅದನ್ನು ಬಿಟ್ಟು ಬೇರೆನೂ ಬೇಕಿಲ್ಲ. ನಮ್ಮ ಸಮಾಜವಷ್ಟೇ ಅಲ್ಲ, ಅವಕಾಶ ವಂಚಿತ ಎಲ್ಲರಿಗೂ ನ್ಯಾಯ ದೊರೆಕಿಸುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ ಮುಂದುವರೆಸುತ್ತೇನೆ.