ಬೈಂದೂರು ಬಿಜೆಪಿ ಅಭ್ಯರ್ಥಿ: ಈಶಾನ್ಯ ರಾಜ್ಯಗಳ ಮಕ್ಕಳಿಗೆ ವಿದ್ಯೆ ಕೊಟ್ಟ ಬರಿಗಾಲ ಫಕೀರ..!

ಈ ಬಾರಿಯ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ, ಇವರು ಚಪ್ಪಲಿ ಹಾಕದ ಆರ್‌ಎಸ್‌ಎಸ್‌ ಪೂರ್ಣಾವಧಿ ಪ್ರಚಾರಕ. 

Gururaj Gantihole Dedicated His Earnings for the Education of North Eastern States Children grg

ಸುಭಾಶ್ಚಂದ್ರ ವಾಗ್ಳೆ

ಕುಂದಾಪುರ(ಏ.16):  ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಪಣತೊಟ್ಟಿರುವ ಬಿಜೆಪಿ, ಮುಂಬರುವ ವಿಧಾನಸಭಾ ಚುನಾವಣೆಗೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ವ್ಯಕ್ತಿಗಳಿಗೆ, ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರಕ್ಕೆ ಅತ್ಯಂತ ವಿಶಿಷ್ಟ ಅಭ್ಯರ್ಥಿಯನ್ನು ಆರಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಾಗಿರುವ ಗುರುರಾಜ್‌ ಗಂಟಿಹೊಳೆ ಅವರಿಗೆ ಈ ಬಾರಿ ಟಿಕೆಟ್‌ ನೀಡಲಾಗಿದೆ. ಇಲ್ಲಿನ ಉಪ್ಪುಂದ ಗ್ರಾಮದ ಗಂಟಿಹೊಳೆ ಎಂಬಲ್ಲಿ ತೀರಾ ಬಡತನದಲ್ಲಿ ಹುಟ್ಟಿದ ಗುರುರಾಜ್‌, ಒಂದಿಷ್ಟು ಭೂಮಿಯಲ್ಲಿ ಅನಾನಸ್‌ ಕೃಷಿ ಮಾಡುತ್ತಾರೆ, ಡೈರಿ ನಡೆಸುತ್ತಾರೆ, ನೂರಕ್ಕೂ ಹೆಚ್ಚು ಮಂದಿಗೆ ಕೆಲಸ ಕೊಟ್ಟಿದ್ದಾರೆ.

ಬರೇ ಇಷ್ಟೇ ಆಗಿದ್ದರೇ ವಿಶೇಷ ಏನಿರಲಿಲ್ಲ, ತಮ್ಮ ಸಂಪಾದನೆಯ ಅಷ್ಟನ್ನೂ ಬಡಮಕ್ಕಳ ಉಚಿತ ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ. ಅದೂ ದೇಶದ ಈಶಾನ್ಯ ರಾಜ್ಯಗಳ, ಉಗ್ರವಾದ, ಮತಾಂತರ, ಬಡತನ, ಅನಕ್ಷರತೆ ನಡುವೆ ನಲುಗಿರುವ ಮಕ್ಕಳನ್ನು ಕರೆತಂದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನೂರಿನ್ನೂರು ಮಕ್ಕಳು ಅವರಿಂದಾಗಿ ಓದು ಬರಹ ಕಲಿತು, ನಾಗರಿಕ ಜೀವನ ನಡೆಸುತ್ತಿದ್ದಾರೆ. ಈಗಲೂ ಅವರ ಮನೆಯಲ್ಲಿ ಇಪ್ಪತ್ತು ಮಕ್ಕಳು ಉಚಿತವಾಗಿ ಊಟ, ಬಟ್ಟೆ, ವಸತಿಯೊಂದಿಗೆ ಶಿಕ್ಷಣ ಪಡೆಯುತ್ತಿದ್ದಾರೆ.

ಬೈಂದೂರು: ಬರಿಗಾಲಲ್ಲಿ ಓಡಾಡುವ ಬೈಂದೂರು ಬಿಜೆಪಿ ಅಭ್ಯರ್ಥಿ..!

ಬರಿಗಾಲಲ್ಲೇ ಓಡಾಟ:

ಐವತ್ತಕ್ಕೂ ಹೆಚ್ಚು ಬಾರಿ ಶಬರಿಮಲೆಗೆ ವ್ರತಧಾರಿಯಾಗಿ ಬರಿಗಾಲಲ್ಲಿ ಹೋಗಿ ಬಂದಿರುವ ಗುರುರಾಜ್‌, ಕಳೆದ ಇಪ್ಪತ್ತು ವರ್ಷಗಳಿಂದ ಬರಿಗಾಲಲ್ಲಿ ನಡೆಯುವುದನ್ನೇ ಒಂದು ವ್ರತವನ್ನಾಗಿ ಮಾಡಿಕೊಂಡಿದ್ದಾರೆ. ಒಂದು ಜೊತೆ ಬಿಳಿ ಶರ್ಟು- ಪಂಚೆ ಧರಿಸಿ, ಬರಿಗಾಲಲ್ಲಿ ಓಡಾಡುತ್ತಾರೆ. ಅದ್ಯಾಕೆ ಎಂದು ಕೇಳಿದರೆ, ಬರಿಗಾಲಲ್ಲಿ ನಡೆಯುವಾಗ ಕಾದ ನೆಲದ ಬಿಸಿ, ಚುಚ್ಚುವ ಕಲ್ಲು-ಮುಳ್ಳುಗಳು ನಮ್ಮ ಸುತ್ತ ಸಂಕಷ್ಟದಲ್ಲಿರುವವರನ್ನು, ಅವರಿಗಾಗಿ ಏನಾದರೂ ಮಾಡಬೇಕು ಎಂಬುದನ್ನು ಸದಾ ನೆನಪಿಸುತ್ತದೆ, ಈ ಸಂಕಷ್ಟಗಳನ್ನೆಲ್ಲ ಮೆಟ್ಟಿನಿಲ್ಲಬೇಕು, ಅಲ್ಲಿಯವರೆಗೆ ಚಪ್ಪಲಿ ಧರಿಸುವುದಿಲ್ಲ ಎನ್ನುತ್ತಾರೆ.

ಮಂಗಳೂರಿನಲ್ಲಿ ಡಿಪ್ಲೊಮಾ ಓದುತ್ತಿದ್ದಾಗ ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ, ನಂತರ, ಕೊಡಗಿನ ಭಾಗಮಂಡಲದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಕೆಲಸ ನಿರ್ವಹಿಸಿದರು. ನಂತರ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲಿ ಕೆಲಸ ಮಾಡಿ, ಎಲ್ಲೋ ಮಲಗಿ, ಸಿಕ್ಕಿದಾಗ ಊಟ ಮಾಡಿ, ಸರಳಾತೀಸರಳ ಜೀವನಕ್ಕೆ ಒಗ್ಗಿಕೊಂಡು, ಅಲ್ಲೇ ಇದ್ದು ಬಿಡಬೇಕು ಎಂದುಕೊಂಡಿದ್ದರು. ಆಗಲೇ ಸಂಘದ ಹಿರಿಯರು ಉಡುಪಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ನಂತರ ಉಪಾಧ್ಯಕ್ಷನನ್ನಾಗಿ ಮಾಡಿ ರಾಜಕೀಯದ ಪರಿಚಯ ಮಾಡಿಸಿದರು.

ಪಕ್ಷದ ಸರ್ವೆಯಂತೆ ಶಾಸಕರಿಗೆ ಟಿಕೆಟ್‌ ತಪ್ಪಿದೆ: ಸಿಎಂ ಬೊಮ್ಮಾಯಿ

ಈವರೆಗೆ, ಹಿಂದೆ ನಿಂತು, ಕೆಲಸ ಮಾಡಿ, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಗುರುರಾಜರನ್ನು ಪಕ್ಷ ಈಗ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ನಾನು ನೆಲದ ಮೇಲೆ ಮಲಗುವವನು...

ಕಾರ್ಯಕರ್ತನಾಗಿದ್ದ ನನ್ನನ್ನು ಪಕ್ಷ ಈವತ್ತು ನಾಯಕ ಅಂತ ಮುಂದೆ ಮಾಡಿದೆ. ನಾಳೆ ಇನ್ನೊಬ್ಬ ಕಾರ್ಯಕರ್ತನನ್ನು ಮುಂದೆ ಮಾಡಿದರೆ ಅವನನ್ನು ನಾಯಕ ಅಂತ ಒಪ್ಪಿಕೊಂಡು ಹೊರಡುತ್ತೇನೆ. ನಾವು ನೆಲದ ಮೇಲೆ ಮಲಗುವವರು, ನಾಳೆ ಮತ್ತೆ ಅಲ್ಲಿಗೇ ಬಂದು ಮಲಗುವವರು ಅಂತ ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios