Asianet Suvarna News Asianet Suvarna News

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳಿಗೆ ಜನರ ಮನ್ನಣೆ ದೊರಕಿಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್‌ನ ಕೆಲ ನಾಯಕರು ಅನೌಪಚಾರಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ವೇಳೆ ಗ್ಯಾರಂಟಿ ಯೋಜನೆ ಬಗ್ಗೆ ಪುನರ್‌ ಪರಿಶೀಲನೆ ನಡೆಯಬೇಕು.

Guarantee schemes not stopped for any reason Says CM Siddaramaiah gvd
Author
First Published Jun 6, 2024, 4:53 AM IST

ಬೆಂಗಳೂರು (ಜೂ.06): ಗ್ಯಾರಂಟಿ ಯೋಜನೆಗಳಿಗೆ ಜನರ ಮನ್ನಣೆ ದೊರಕಿಲ್ಲ ಎಂಬ ಕಾರಣ ನೀಡಿ ಕಾಂಗ್ರೆಸ್‌ನ ಕೆಲ ನಾಯಕರು ಅನೌಪಚಾರಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ವೇಳೆ ಗ್ಯಾರಂಟಿ ಯೋಜನೆ ಬಗ್ಗೆ ಪುನರ್‌ ಪರಿಶೀಲನೆ ನಡೆಯಬೇಕು ಎಂಬ ಅಭಿಪ್ರಾಯವನ್ನು ಬಹುತೇಕ ಶಾಸಕರು ಹೊಂದಿದ್ದಾರೆ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪದೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲಾಗದು ಎಂದು ಈ ನಾಯಕರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಶಾಸಕರ ವಾದವೇನು?
- ಗ್ಯಾರಂಟಿಗಾಗಿ ಅಭಿವೃದ್ಧಿ ಹತೋಟಿಯಲ್ಲಿಡಲಾಗಿದೆ, ಶಾಸಕರ ಅನುದಾನಕ್ಕೆ ಕತ್ತರಿ ಹಾಕಲಾಗಿದೆ
- ರಾಜ್ಯದ ಎಲ್ಲ ಆರ್ಥಿಕ ಸಂಪನ್ಮಲಗಳನ್ನು ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ವ್ಯಯಿಸುತ್ತಿದೆ
- ಇಷ್ಟಾಗಿಯೂ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ. ಇದರರ್ಥ, ಸ್ಕೀಂಗಳು ಜನರ ಮನಸ್ಸು ಗೆದ್ದಿಲ್ಲ
- ಭಾಗ್ಯಲಕ್ಷ್ಮೀ, ಶಕ್ತಿ ಯೋಜನೆ ಕಾರಣಕ್ಕೆ ಮಹಿಳೆಯರು ನೆರವಿಗೆ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಅದಾಗಿಲ್ಲ
- ಹೀಗಾಗಿ ರಾಜ್ಯದಲ್ಲಿ ಜಾರಿ ಮಾಡಲಾಗಿರುವ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಯನ್ನು ನಡೆಸಬೇಕು

ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ: ಗ್ಯಾರಂಟಿ ಯೋಜನೆಗಳ ನಿಲ್ಲಿಸಲು ಕಾಂಗ್ರೆಸ್‌ ಶಾಸಕರ ಒತ್ತಡ?

ನಮಗೆ ನಿರೀಕ್ಷೆಯಷ್ಟು ಸ್ಥಾನ ಬಂದಿಲ್ಲ: ರಾಜ್ಯದಲ್ಲಿ 15ರಿಂದ 20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ, ಒಂದು ಸ್ಥಾನದಿಂದ 9 ಸ್ಥಾನ ಗೆಲ್ಲುವ ಮೂಲಕ ಪಕ್ಷ ಉತ್ತಮ ಸಾಧನೆಯನ್ನೇ ಮಾಡಿದೆ. ಅಲ್ಲದೆ, 2019ಕ್ಕಿಂತ ಈ ಬಾರಿ ಶೇ.14ರಷ್ಟು ಮತ ಗಳಿಕೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಚುನಾವಣಾ ಫಲಿತಾಂಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. 20 ಸ್ಥಾನಗಳವರೆಗೆ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ನಿರೀಕ್ಷೆ ಹೊಂದಿದ್ದೆವು. ಆದರೆ, 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಷ್ಟೇ ಸಾಧ್ಯವಾಗಿದೆ. 

ಆದರೂ 2019ರಲ್ಲಿ ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 8 ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಉತ್ತಮ ಸಾಧನೆ ಮಾಡಿದ್ದೇವೆ. ಅಲ್ಲದೆ, ಮತ ಗಳಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ಬಾರಿ ಕಾಂಗ್ರೆಸ್‌ ಶೇ.31.88ರಷ್ಟು ಮತಗಳಿಸಿತ್ತು. ಈ ಬಾರಿ ಶೇ. 45.34ರಷ್ಟು ಮತಗಳಿಕೆಯಾಗಿದೆ. ಅದೇ ಬಿಜೆಪಿ ಕಳೆದ ಬಾರಿ ಶೇ.51.38ರಷ್ಟು ಮತ ಗಳಿಸಿತ್ತು, ಈ ಬಾರಿ ಶೇ.46.04ಕ್ಕೆ ಕುಸಿದಿದೆ. ಜೆಡಿಎಸ್‌ ಜತೆಗಿನ ಹೊಂದಾಣಿಕೆ ನಡುವೆಯೂ ಬಿಜೆಪಿ ಮತಗಳಿಕೆ ಶೇ.5ರಷ್ಟು ಕುಸಿತ ಕಂಡಿದೆ ಎಂದರು.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ದೇಶದಲ್ಲಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಶೇ.3ರಷ್ಟು ಹೆಚ್ಚಾಗಿದೆ. ಕೇಂದ್ರದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರದಲ್ಲಿದ್ದರೂ ಬಹುಮತ ಪಡೆಯಲು ಸಾಧ್ಯವಾಗಿಲ್ಲ. 2014 ಮತ್ತು 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದು ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಇಲ್ಲ ಎಂಬುದನ್ನು ಸಾಬೀತು ಮಾಡಿದೆ. ಕೇಂದ್ರದಲ್ಲಿ ಇನ್ನೂ ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ, ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್

ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಧರ್ಮ, ದೇವರ ಹೆಸರಿನಲ್ಲಿ ಮತ ಕೇಳಿದರು. ನೇರವಾಗಿ ಇತರ ಧರ್ಮೀಯರ ವಿರುದ್ಧ ಭಾಷಣ ಮಾಡಿದರು. ಮೀಸಲಾತಿ ವಿಚಾರವಾಗಿ ಸುಳ್ಳು ಹೇಳಿದರು. ರಾಮ, ರಾಮ ಮಂದಿರದ ಹೆಸರಿನಲ್ಲಿ ಚುನಾವಣೆ ನಡೆಸಿದ ಬಿಜೆಪಿ ಅಯೋಧ್ಯೆಯಲ್ಲೇ ಸೋತಿದೆ. ಈ ಎಲ್ಲ ಕಾರಣದಿಂದಾಗಿ ಎನ್‌ಡಿಎ ಮೈತ್ರಿಕೂಟ ಕಳೆದ ಬಾರಿಗಿಂತ 64 ಸ್ಥಾನ ಕಳೆದುಕೊಂಡಿದೆ. ಇದು ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಸೋಲು. ಈ ಸೋಲಿನಿಂದಾಗಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕಿಲ್ಲ. ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು. ಇಡಿ, ಐಟಿ, ಸಿಬಿಐ ಹೆಸರಿನಲ್ಲಿ ಹೆದರಿಸಿದರು. ಆದರೂ, ದೇಶದ ಜನ ಬಿಜೆಪಿಯನ್ನು ಒಪ್ಪಲಿಲ್ಲ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios