ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯ ಪ್ರಚಾರ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಸಹ ಪ್ರಧಾನಿ ಮೋದಿ ಸರ್ಕರದ ಸಾಧನೆಗಳ ಮೇಲೆ ಮತ ಕೇಳುತ್ತಿದ್ದಾರೆ. ಮತದಾರ ಯಾರ ಕೈ ಹಿಡಿಯುತ್ತಾನೆಂಬುದೇ ತೀವ್ರ ಕುತೂಹಲ ಮೂಡಿಸಿದೆ.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

 ರಾಯಚೂರು (ಏ.12) ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಜೋರಾಗಿ ನಡೆದಿದೆ. ಬಿರುಬಿಸಿಲು ಲೆಕ್ಕಿಸದೇ ರಾಜಕಾರಣಿಗಳು ಸುತ್ತಾಟ ನಡೆಸಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ‌ಈಗ ಮತ್ತೆ ಹರ್ ಗರ್ ಗ್ಯಾರಂಟಿ ಅಂತ ಲೋಕಸಭಾ ಚುನಾವಣೆ ಪ್ರಚಾರ ಶುರು ಮಾಡಿದೆ. ಅಲ್ಲದೇ ರಾಜ್ಯದ 28 ಲೋಕಸಭಾ ಕ್ಷೇತ್ರದ ಪೈಕಿ 20 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡು ಕಾಂಗ್ರೆಸ್ ಪ್ರಚಾರಕ್ಕೆ ಮುಂದಾಗಿದೆ. ಇತ್ತ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳು ಉಳಿಸಿಕೊಂಡು ಮತ್ತೆ ಮೋದಿಗೆ ಪ್ರಧಾನಿ ಮಾಡಬೇಕೆಂಬ ಆಸೆಯೊಂದಿಗೆ ಲೋಕಸಮರಕ್ಕೆ ಕಾಲಿಟ್ಟಿದೆ. ಇತ್ತ ಮತದಾರ ಪ್ರಭುಗಳು ಮಾತ್ರ ಎರಡು ಪಕ್ಷಗಳ ಅಭ್ಯರ್ಥಿಗಳು ಬಂದಾಗ ಸ್ವಾಗತ ಮಾಡಿ ಮತ ಹಾಕುವ ಭರವಸೆ ನೀಡುತ್ತಿದ್ದಾರೆ.

ರಾಯಚೂರಿನ ಬಿಜೆಪಿ ಅಭ್ಯರ್ಥಿಗೆ ಬಂಡಾಯದ ಬಿಸಿ

ರಾಯಚೂರು ಲೋಕಸಭಾ ಕ್ಷೇತ್ರ(Raichur Lok sabha constituency) ದ ಬಿಜೆಪಿ ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ(Raja amareshwar nayak) ಗೆ ಘೋಷಣೆ ಅಗಿದೆ. ರಾಜಾ ಅಮರೇಶ್ವರ ‌ನಾಯಕ ಎಲ್ಲಾ ಸಮುದಾಯದ ‌ಮಠಗಳಿಗೆ ಭೇಟಿ ‌ನೀಡಿ ಶ್ರೀಗಳ ಆರ್ಶೀವಾದ ಪಡೆದು ಮತಯಾಚನೆ ಮುಂದುವರೆಸಿದ್ದಾರೆ. ಅಲ್ಲದೇ ವಿವಿಧ ಜಾತಿ ಮುಖಂಡರ ಜೊತೆಗೆ ಸಭೆಗಳು ಸಹ ಮಾಡುತ್ತಿದ್ದಾರೆ. ಮೈತ್ರಿ ನಿಯಮದಂತೆ ‌ಜೆಡಿಎಸ್ ಮುಖಂಡರು ‌ಹಾಗೂ ಬಿಜೆಪಿ ಮುಖಂಡರ ಸಭೆಗಳು ‌ಸಹ ನಡೆದಿವೆ. ಇದರ ನಡುವೆ ವಿಧಾನಸಭಾ ಚುನಾವಣಾ ವೇಳೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಬಿಟ್ಟು ಬಿಜೆಪಿ ಸೇರಿದ ಬಿ.ವಿ.ನಾಯಕ, ಹಾಲಿ ಸಂಸದ ರಾಜಾ ಅಮರೇಶ್ವರ ‌ನಾಯಕಗೆ ಮುಳುವಾಗಿದ್ದಾರೆ. 

ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದಕ್ಕೆ ಬಿ.ವಿ.ನಾಯಕ ಬಂಡಾಯವೆಂದಿದ್ದಾರೆ. ಅಲ್ಲದೆ ಬಿ.ವಿ.ನಾಯಕ ಈಗ ಬಿಜೆಪಿಯಿಂದ ನಾಮಪತ್ರ ಕೂಡ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಿದ ಬಿ.ವಿ.ನಾಯಕ, ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿ ಟಿಕೆಟ್ ‌ನ ಪ್ರಬಲ ಆಕಾಂಕ್ಷಿ ಆಗಿದೆ.ರಾಜ್ಯ, ಹೈಕಮಾಂಡ್ ‌ನಾಯಕರು ನನಗೆ ಟಿಕೆಟ್ ‌ನೀಡುವ ಭರವಸೆ ನೀಡಿದ್ರು. ನಾನು ಚುನಾವಣೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕೊನೆಯ ‌ಗಳಿಗೆಯಲ್ಲಿ ದೆಹಲಿ ಹೈಕಮಾಂಡ್ ರಾಜಾ ಅಮರೇಶ್ವರ ನಾಯಕಗೆ ಬಿಜೆಪಿ ಟಿಕೆಟ್ ನೀಡಿದೆ. ಆದ್ರೂ ನನ್ನ ಕಾರ್ಯಕರ್ತರು ನನಗೆ ಬಿಜೆಪಿಯಿಂದ ಉಮೇದವಾರಿಕೆ ಸಲ್ಲಿಕೆಗೆ ತಿಳಿಸಿದ್ದಾರೆ. ನಾನು ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಕೆ ಮಾಡುವೆ, ಕೊನೆಯ ಕ್ಷಣದವರೆಗೂ ‌ಬಿ. ಫಾರ್ಮ್ ಗಾಗಿ ಎದುರು ನೋಡುವೆ. ಬಿಜೆಪಿ ಹೈಕಮಾಂಡ್ ಯಾರಿಗೆ ಬಿ.ಫಾರ್ಮ್ ನೀಡುತ್ತಾರೋ ಅವರೇ ಅಧಿಕೃತ ಅಭ್ಯರ್ಥಿ ಆಗುತ್ತಾರೆ. ಪಕ್ಷದ ‌ನಾಯಕರ ಮಾತು‌ ನಂಬಿ ನಾನು ಕೊನೆಯ ಕ್ಷಣದವರೆಗೂ ಎದುರು ನೋಡುವೆ, ಪಕ್ಷದ ಕಾರ್ಯಕರ್ತರ ಒತ್ತಡ ನನ್ನ ಮೇಲೆ ಇದೆ. ಅವರಿಗೆ ಸ್ಪಂದಿಸುವ ಸಲುವಾಗಿ ‌ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಬಿ.ವಿ.ನಾಯಕ ಹೇಳುತ್ತಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ರಂಗೇರಿದ ಚುನಾವಣಾ ಕಣ: ಗೆಲುವಿಗಾಗಿ ಅಭ್ಯರ್ಥಿಗಳ ರಣತಂತ್ರ..!

 ಇತ್ತ ರಾಜಾ ಅಮರೇಶ್ವರ ‌ನಾಯಕ ಇದು ಯಾವುದಕ್ಕೂ ಕೇರ್ ಮಾಡದೇ ಪ್ರಚಾರ ಶುರು ‌ಮಾಡಿದ್ದಾರೆ. 10 ವರ್ಷಗಳ ಕಾಲ ದೇಶದ ಪ್ರಧಾನಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷವಾಗಿವೆ. ಈ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ‌ಮೈತ್ರಿಯಾಗಿದೆ. ಕಳೆದ ಚುನಾವಣೆಯಲ್ಲಿ ‌ನಾನು ಮೈತ್ರಿ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 1,17,716 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಈ ಬಾರಿ ಜೆಡಿಎಸ್- ಬಿಜೆಪಿ ಮೈತ್ರಿಯಾಗಿದೆ. ದುಪ್ಪಟ್ಟು ‌ಮತಗಳ ಅಂತರದಿಂದ ಗೆಲುವು ‌ಸಾಧಿಸುತ್ತೇನೆ.ಕೆಲವರಿಗೆ ನನ್ನ ಬಗ್ಗೆ ಹೇಳಲು ಏನು ಇಲ್ಲ. ಹೀಗಾಗಿ ತಕರಾರು ಮಾಡುವುದು ಒಂದು ರಾಗ ಆಗಿದೆ. 30 ವರ್ಷದ ರಾಜಕೀಯ ಅನುಭವ ನನಗೆ ಇದೆ. ನಾನು 1989ರಲ್ಲಿಯೇ ಶಾಸಕನಾಗಿ, ಸಚಿವನಾಗಿ ಈಗ ಸಂಸದನಾಗಿದ್ದೇನೆ. ಯಾವುದೂ ಇಲ್ಲದೆ ಇರುವುದರಿಂದ ಜಾತಿ ವಿಚಾರ ಪ್ರಸ್ತಾಪ ‌ಮಾಡುತ್ತಾರೆ. ನಾವು ನಾಯಕ ಸಮುದಾಯದ ಗುರುಗಳ ಮನೆತನದವರು. ನಮಗೆ ಒಂದು ಟೈಟಲ್ ಇದೆ. ಅದುವೇ ನಾಯಕ ಆಚಾರ್ಯ..ನಾವು ನಾಯಕರಿಗೆ ನಾಯಕರು.. ಯಾರೋ ಅವಿವೇಕಿಗಳು, ಬುದ್ದಿಗೇಡಿಗಳು ಹೇಳಿದ್ರೆ ಏನು ಆಗಲ್ಲ ಎಂದು ರಾಜಾ ಅಮರೇಶ್ವರ ನಾಯಕ ಹೇಳುತ್ತಾ ಪ್ರಚಾರ ಶುರು ಮಾಡಿದ್ದಾರೆ.

ಐಎಎಸ್‌ ಅಧಿಕಾರಿ ಗುಂಗಿನಿಂದ ಹೊರಬಾರದ ಕಾಂಗ್ರೆಸ್ ಅಭ್ಯರ್ಥಿ

ರಾಯಚೂರು ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ.‌ ಬಿಜೆಪಿ ಅಭ್ಯರ್ಥಿ ‌ರಾಜಾ ಅಮರೇಶ್ವರ ‌ನಾಯಕ ಮತ್ತೊಮ್ಮೆ ಸಂಸದರಾಗಲು‌ ನಾನಾ ಕಸರತ್ತು ಶುರು ಮಾಡಿದ್ದಾರೆ. ಇತ್ತ ‌ನಿವೃತ್ತ ಐಎಎಸ್‌ ಅಧಿಕಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ‌ಇಳಿದಿದ್ದು, ಇಬ್ಬರ ನಡುವೆ ಭಾರೀ ಪೈಪೋಟಿ ‌ಆಗುವ ಸಾಧ್ಯತೆ ‌ಕ್ಷೇತ್ರದಲ್ಲಿ ಇದೆ. ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ‌ನಾಯಕ ಮಾತ್ರ ಇನ್ನೂ ಐಎಎಸ್‌ ಅಧಿಕಾರಿ ಗುಂಗಿನಿಂದ ಹೊರಬಂದು, ಚುನಾವಣೆ ಪ್ರಚಾರಕ್ಕೆ ‌ಇಳಿಯುತ್ತಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದರೂ ಅಬ್ಬರ ಪ್ರಚಾರಕ್ಕೆ ಕೈ ಅಭ್ಯರ್ಥಿ ‌ಮುಂದಾಗುತ್ತಿಲ್ಲ. ಕಾಂಗ್ರೆಸ್ ನ ಕೆಲ ಮುಖಂಡರ ಸೂಚನೆಯಂತೆ ‌8 ವಿಧಾನಸಭಾ ‌ಕ್ಷೇತ್ರದಲ್ಲಿ ಜಿ.‌ಕುಮಾರನಾಯಕ ಹಾಲಿ ಮತ್ತು ಮಾಜಿ ಶಾಸಕರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಮಾಡಿದ್ದು ಬಿಟ್ಟರೇ ಬೇರೆ ಯಾವುದೇ ರೀತಿಯ ಪ್ರಚಾರಕ್ಕೆ ಜಿ.ಕುಮಾರ ನಾಯಕ ಇಳಿಯುತ್ತಿಲ್ಲ.‌ 

ನಮ್ಮದು ನಿನ್ನೆ ಮೊನ್ನೆ ಬಂದ ಮನೆತನ ಅಲ್ಲ; ಸುಳ್ಳು ಜಾತಿ ಪ್ರಮಾಣಪತ್ರ ಆರೋಪಕ್ಕೆ ರಾಜಾ ಅಮರೇಶ್ವರ ನಾಯಕ ತಿರುಗೇಟು!

ಇಷ್ಟು ವರ್ಷಗಳ ಕಾಲ ಐಎಎಸ್‌ ಅಧಿಕಾರಿಯಾಗಿ ಆರ್ಡರ್ ಮಾಡಿ ಬಂದ ಜಿ.ಕುಮಾರ ನಾಯಕ ಅವರಿಗೆ ರಾಜಕೀಯ ಹೊಸದ್ದು, ಆದ್ರೂ ರಾಜಕೀಯಕ್ಕೆ ಬಂದ ಮೇಲೆ ರಾಜಕೀಯ ತಂತ್ರಗಾರಿಕೆ ಮೈಗೂಡಿಸಿಕೊಂಡು ಪ್ರಚಾರಕ್ಕೆ ಇಳಿಬೇಕು. ಸಾವಿರಾರು ಕಾಂಗ್ರೆಸ್ ‌ಕಾರ್ಯಕರ್ತರು ಜಿ.ಕುಮಾರ ‌ನಾಯಕ ಜೊತೆಗೆ ‌ಪ್ರಚಾರಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ ಜಿ. ಕುಮಾರ ‌ನಾಯಕ ಮಾತ್ರ ಪ್ರಚಾರಕ್ಕೆ ‌ಇಳಿಯದೇ ಇರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಭಾರೀ ನಿರಾಸೆ ‌ಉಂಟು‌ ಮಾಡಿದೆ. ಇತ್ತ ಬಿಜೆಪಿ ‌ನಾಯಕರು ಯಾವುದೇ ಸಭೆ - ಸಮಾರಂಭ ಇದ್ರೂ ಕಾಂಗ್ರೆಸ್ ಅಭ್ಯರ್ಥಿ ‌ಸ್ಥಳೀಯರು ಅಲ್ಲ..ನಮ್ಮ ಕ್ಷೇತ್ರಕ್ಕೆ ‌ಕಾಂಗ್ರೆಸ್ ಅಭ್ಯರ್ಥಿ ಕೊಡುಗೆ ಶೂನ್ಯ.. ದೇಶದ ಉಳಿವಿಗಾಗಿ ‌ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಪ್ರಚಾರ ಶುರು ಮಾಡಿದ್ದಾರೆ. ಇದಕ್ಕೆ ಟಕ್ಕರ್ ಕೊಟ್ಟು ವಾಗ್ದಾಳಿ ‌ಮಾಡಬೇಕಾದ ಕಾಂಗ್ರೆಸ್ ಅಭ್ಯರ್ಥಿ ಜಿ.‌ಕುಮಾರ ನಾಯಕ ಮೌನವಹಿಸಿದ್ದು ಹಲವು ಅನುಮಾನಕ್ಕೆ ಎಡೆಮಾಡಿದೆ.

ಒಟ್ಟಾರೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಏಪ್ರಿಲ್ ‌12ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಿ ಲೋಕಸಮರಕ್ಕೆ ಮುಂದಾಗಲಿದ್ದಾರೆ.