ನಮ್ಮದು ನಿನ್ನೆ ಮೊನ್ನೆ ಬಂದ ಮನೆತನ ಅಲ್ಲ; ಸುಳ್ಳು ಜಾತಿ ಪ್ರಮಾಣಪತ್ರ ಆರೋಪಕ್ಕೆ ರಾಜಾ ಅಮರೇಶ್ವರ ನಾಯಕ ತಿರುಗೇಟು!
ನಮ್ಮದು ನಾಯಕ ಮನೆತನದಲ್ಲಿ ಗುರುತಿಸಿಕೊಂಡ ಸಂಸ್ಥಾನ. ನಮ್ಮ ಸಂಸ್ಥಾನದ ಬಗ್ಗೆ ಇತಿಹಾಸದಲ್ಲೇ ಉಲ್ಲೇಖವಿದೆ. ನಮ್ಮ ತಾಯಿ ಚಿತ್ರದುರ್ಗದ ಮದಕರಿ ನಾಯಕರ ವಂಶಸ್ಥರು. ನಮ್ಮ ಅಜ್ಜಿ ಸುರಪುರದ ರಾಜಾ ಮನೆತನದವರು. ಎಂದು ರಾಯಚೂರು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ವಿರೋಧಿಗಳ ಆರೋಪಕ್ಕೆ ತಿರುಗೇಟು ನೀಡಿದರು.
ಯಾದಗಿರಿ (ಏ.6): ಪ್ರತಿಸಲ ಚುನಾವಣೆ ಬಂದಾಗ ಕೆಲ ಅಸಮಧಾನಿತ ಕಿಡಿಗೇಡಿಗಳು, ಬುದ್ಧಿಗೇಡಿಗಳು ಈ ರೀತಿ ಸುಳ್ಳು ಜಾತಿ ಅಸ್ತ್ರ ಪ್ರಯೋಗ ಮಾಡ್ತಾನೆ ಬಂದಿದ್ದಾರೆ. ಆದರೆ ನಾನು 1989 ರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಎರಡು ಬಾರಿ ರಾಜ್ಯ ಸರ್ಕಾರದಲ್ಲಿ ಮಂತ್ರಿ ಆಗಿದ್ದೇನೆ, ಒಂದು ಬಾರಿ ಸಂಸದನಾಗಿದ್ದೇನೆ ಎಂದು ವಿರೋಧಿಗಳ ಷಡ್ಯಂತ್ರಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಹರಿಹಾಯ್ದರು.
ಸುಳ್ಳು ಜಾತಿ ಪ್ರಮಾಣಪತ್ರ ವಿಚಾರ ಸಂಬಂಧ ಇಂದು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದರು, ನಮ್ಮದು ನಾಯಕ ಮನೆತನದಲ್ಲಿ ಗುರುತಿಸಿಕೊಂಡ ಸಂಸ್ಥಾನ. ನಮ್ಮ ಸಂಸ್ಥಾನದ ಬಗ್ಗೆ ಇತಿಹಾಸದಲ್ಲೇ ಉಲ್ಲೇಖವಿದೆ. ನಮ್ಮ ತಾಯಿ ಚಿತ್ರದುರ್ಗದ ಮದಕರಿ ನಾಯಕರ ವಂಶಸ್ಥರು. ನಮ್ಮ ಅಜ್ಜಿ ಸುರಪುರದ ರಾಜಾ ಮನೆತನದವರು. ನಮ್ಮದು ನಿನ್ನೆ ಮೊನ್ನೆ ಬಂದ ಮನೆತನ ಅಲ್ಲ, ಇತಿಹಾಸ ಇರೋ ಮನೆತನ. ನನ್ನ ಮೇಲೆ ಯಾವುದೇ ಆರೋಪ ಇಲ್ಲದ್ದಕ್ಕೆ ಈ ರೀತಿ ಹೊಟ್ಟೆ ಕಿಚ್ಚಿಗೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆ 2024: ಪಕ್ಷಗಳಿಗೆ ಅಸಮಾಧಾನದ ಭಾರ..!
ಲಿಂಗಸಗೂರು ತಾಲೂಕಿನ ಗುಂತಗೋಳದಲ್ಲಿ ನಾಯಕ ಜನಾಂಗದ ಗುರುವಿನ ಮನೆತನ ಅಂತಾ ಗುರುತಿಸಿಕೊಂಡಿದೆ. ಶಾಲಾ ದಾಖಲಾತಿ ಅಂತಾ ಜನರಿಗೆ ತಪ್ಪು ದಾರಿಗೆ ತರೋ ಪ್ರಯತ್ನ ಮಾಡ್ತಿದ್ದಾರೆ. ಶಾಲಾ ದಾಖಲಾತಿಯನ್ನು ನಾನು ಬರೆಸಿಲ್ಲ. ನಮ್ಮ ಸಹೋದರಿಯದ್ದು ಒಂದರಿಂದ ಏಳನೇ ತರಗತಿವರೆಗೆ ವಾಲ್ಮೀಕಿ ಅಂತಲೇ ಇದೆ. ಲೋಕಸಭಾ ಚುನಾವಣೇಗೆ ಟಿಕೆಟ್ ಸಿಗದ ಅಸಮಾಧಾನಿತರೇ ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ ಅಂತ ಪರೋಕ್ಷವಾಗಿ ಬಿವಿ ನಾಯಕ ವಿರುದ್ಧ ಕಿಡಿಕಾರಿದರು.