ಕಾಂಗ್ರೆಸ್‌ ನಾಯಕರ ಖಾಸಗಿ ಸಂಭಾಷಣೆ ವೈರಲ್‌ ಆಗಿ ಪಕ್ಷ ಹಾಗೂ ನಿರ್ದಿಷ್ಟವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ತೀವ್ರ ಮುಜಗರ  ಕಾಂಗ್ರೆಸ್‌ನ ಬಣ ರಾಜಕಾರಣ ಮತ್ತೆ ಬಹಿರಂಗಕ್ಕೆ ಬಂದಂತಾಗಿದೆ.

 ಬೆಂಗಳೂರು (ಅ.14): ಕಾಂಗ್ರೆಸ್‌ (Congress) ನಾಯಕರ ಖಾಸಗಿ ಸಂಭಾಷಣೆ ವೈರಲ್‌ ಆಗಿ ಪಕ್ಷ ಹಾಗೂ ನಿರ್ದಿಷ್ಟವಾಗಿ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK shivakumar) ಅವರಿಗೆ ತೀವ್ರ ಮುಜಗರ ತಂದ ಪ್ರಕರಣದ ಮೂಲಕ ಕಾಂಗ್ರೆಸ್‌ನ ಬಣ ರಾಜಕಾರಣ ಮತ್ತೆ ಬಹಿರಂಗಕ್ಕೆ ಬಂದಂತಾಗಿದೆ.

ಈ ಖಾಸಗಿ ಸಂಭಾಷಣೆಯು ಸ್ಪಷ್ಟವಾಗಿ ಡಿ.ಕೆ. ಶಿವಕುಮಾರ್‌ ಅವರನ್ನು ಹೀಗೆಳೆದಿದ್ದರೆ, ಸಿದ್ದರಾಮಯ್ಯ (siddaramaiah) ಅವರನ್ನು ಹೊಗಳಲಾಗಿದೆ. ಹೀಗಾಗಿ ಇದು ಬಣ ರಾಜಕಾರಣದ ಪರಿಣಾಮವಾಗಿ ನಡೆದಿರುವ ಸಂಭಾಷಣೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ವಾಸ್ತವವಾಗಿ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಎಂ.ಎ. ಅವರು ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ (Kagodu thimmappa) ಅವರ ಆಪ್ತ. ಪ್ರಸ್ತುತ ಶಿವಕುಮಾರ್‌ ಅವರೊಂದಿಗೆ ಹೆಚ್ಚು ಗುರುತಿಸಿಕೊಂಡಿರುವ ಸಲೀಂ ಅವರು ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ನಂತರವೇ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡವರು. ಇನ್ನು ಉಗ್ರಪ್ಪ (Ugrappa) ಮೂಲತಃ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಯಾಂಪ್‌ನಲ್ಲಿ ಗುರುತಿಸಿಕೊಂಡವರು. ಆದರೂ, ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ಅವರೊಂದಿಗೂ ಉತ್ತಮ ಸಂಬಂಧವನ್ನೇ ಕಾಯ್ದುಕೊಂಡಿದ್ದರು.

ಡಿಕೆಶಿ ಕುರಿತ ಮಾತು ವೈರಲ್: ಸ್ಪಷ್ಟನೆ ಕೊಟ್ಟ ವಿ.ಎಸ್. ಉಗ್ರಪ್ಪ

ಇಂತಹ ನಾಯಕರಿಬ್ಬರು ವೇದಿಕೆಯಲ್ಲಿ ಕುಳಿತು ನಡೆಸಿದ ಸಂಭಾಷಣೆಯಲ್ಲಿ ಶಿವಕುಮಾರ್‌ ವಿರುದ್ಧ ಚರ್ಚೆಯಿದೆ. ಸಲೀಂ ಶಿವಕುಮಾರ್‌ ವಿರುದ್ಧ ಮಾಡುವ ಆರೋಪಗಳಿಗೆ ಉಗ್ರಪ್ಪ ನಗುವಿನ ಪ್ರತ್ಯುತ್ತರ ನೀಡಿದ್ದಾರೆ. ಸಂಭಾಷಣೆಯಲ್ಲಿ ಸಲೀಂ ಅವರು ಸಿದ್ದರಾಮಯ್ಯ ಅವರ ಬಾಡಿ ಲ್ಯಾಂಗ್ವೇಜ್‌ ಖಡಕ್‌ ಆಗಿದೆ.

ಆದರೆ, ಡಿ.ಕೆ. ಶಿವಕುಮಾರ್‌ ಕುಡುಕರಂತೆ ತೊದಲುತಾರೆ ಎಂದೆಲ್ಲ ಹೀಗಳೆಯುತ್ತಾರೆ. ತನ್ಮೂಲಕ ಸಿದ್ದರಾಮಯ್ಯ ಅವರನ್ನು ಶಿವಕುಮಾರ್‌ ಅವರಿಗಿಂತ ಉತ್ತಮ ನಾಯಕ ಎಂದು ಬಿಂಬಿಸುವ ಪ್ರಯತ್ನ ಈ ಸಂಭಾಷಣೆಯಲ್ಲಿದೆ. ಈ ಸಂಭಾಷಣೆ ತುಣುಕು ಬಹಿರಂಗವಾದ ನಂತರ ಡಿ.ಕೆ. ಶಿವಕುಮಾರ್‌ ಬಣ ತೀವ್ರ ವ್ಯಗ್ರಗೊಂಡಿದ್ದು, ಉಗ್ರಪ್ಪ ಹಾಗೂ ಸಲೀಂ ಅವರನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಟ್ರೋಲ್‌ ಮಾಡಿದ್ದಾರೆ. 
ಸಸ್ಪೆಂಡ್

ಕೆಪಿಸಿಸಿ (KPCC) ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK shivakumar) ವಿರುದ್ಧ ಅವರೊಬ್ಬ ಕರಪ್ಟ್ ಎಂದಿದ್ದ ಮುಖಂಡ ಸಲೀಂ ತಲೆದಂಡವಾಗಿದೆ. 

ಕಾಂಗ್ರೆಸ್‌ನಲ್ಲಿ ಸುವರ್ಣನ್ಯೂಸ್ ವರದಿ ಸಂಚಲನ ಮೂಡಿಸಿದ್ದು, ವರದಿ ಬೆನ್ನಲ್ಲೇ ಎಚ್ಚೆತ್ತ ಕೆಪಿಸಿಸಿ ಕಾಂಗ್ರೆಸ್ ಪಕ್ಷದಿಂದಲೇ ಸಲೀಂ ಅವರನ್ನು ಅಮಾನತು ಮಾಡಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರಿಂದಲೇ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ : ಉಗ್ರಪ್ಪ ರಿಯಾಕ್ಷನ್

ಕೆಪಿಸಿಸಿ ಕಚೇರಿಯಲ್ಲೇ ಕುಳಿತು ಮುಖಂಡ ಸಲೀಂ ಹಾಗು ವಿ.ಎಸ್ ಉಗ್ರಪ್ಪ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿದ್ದು, ಅವರೊಬ್ಬ ಭ್ರಷ್ಟ ಎಂದಿದ್ದರು. ಇದರಿಂದ ಸದ್ಯ ಸಲೀಂ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.