ವೋಟ್ ಚೋರಿ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಬಳಿಕ ಇದೀಗ, ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ವೋಟ್ ಚೋರಿ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದ ಬಳಿಕ ಇದೀಗ, ಬಿಜೆಪಿ ವಿರುದ್ಧ ‘ಚಿಲುಮೆ’ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.
2023ರಲ್ಲಿ ವಿಧಾನಸಭಾ ಚುನಾವಣೆ ಪೂರ್ವ ತಯಾರಿ ಹೊತ್ತಿನಲ್ಲಿ ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮಾಹಿತಿ ಕಾನೂನು ಬಾಹಿರವಾಗಿ ಸಂಗ್ರಹಿಸಿದ ಆರೋಪಕ್ಕೆ ಖಾಸಗಿ ಸಂಸ್ಥೆಯಾದ ಚಿಲುಮೆ ಗುರಿಯಾಗಿತ್ತು. ಸಂಸ್ಥೆಗೆ ಬೆಂಗಳೂರಿನ ‘ಪ್ರಭಾವಿ’ ಬಿಜೆಪಿ ನಾಯಕರ ಜತೆ ನಂಟಿದೆ ಎಂಬ ಆಪಾದನೆಯೂ ಆ ಸಂದರ್ಭದಲ್ಲಿ ಕೇಳಿ ಬಂದಿತ್ತು. ಆದರೆ ಈ ಸಂಸ್ಥೆ ವಿರುದ್ಧ ದಾಖಲಾದ ಎರಡು ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಈಗ ಆ ಕಾನೂನು ಹೋರಾಟಕ್ಕೆ ಹಿರಿಯ ವಕೀಲ ರವಿವರ್ಮ ಕುಮಾರ್ ಅವರನ್ನು ವಿಶೇಷ ಅಭಿಯೋಜಕ (ಎಸ್‌ಪಿಪಿ) ಹಾಗೂ ಅವರಿಗೆ ಸಹಾಯಕರಾಗಿ ವಕೀಲ ಸಿದ್ಧಾರ್ಥ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಚಿಲುಮೆ ಮತದಾರರ ಸಂಗ್ರಹ ಪ್ರಕರಣಕ್ಕೆ ಮತ್ತೆ ಮರು ಜೀವ ಬಂದಿದ್ದು, ಮತಕಳವು ಗದ್ದಲದ ನಡುವೆ ರಾಜಕೀಯವಾಗಿಯೂ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಚಿಲುಮೆ ವಿರುದ್ಧದ ಪ್ರಕರಣದ ತನಿಖೆಗೆ ತಡೆಯಾಜ್ಞೆ ತೆರವುಗೊಂಡರೆ, ಆ ಪ್ರಕರಣವನ್ನು ಮತಕಳವು ಸಂಬಂಧ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ವರ್ಗಾಯಿಸಲೂ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
2023ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಕಲುಬರಗಿ ಜಿಲ್ಲೆ ಆಳಂದ ಕ್ಷೇತ್ರದಲ್ಲಿ ನಡೆದಿದ್ದ 6 ಸಾವಿರ ಮತ ಕಳವು ಯತ್ನ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸಿತ್ತು. ಪ್ರಕರಣದಲ್ಲಿ ಆ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಗುತ್ತೇದಾರ್, ಮಾಜಿ ಶಾಸಕರ ಆಪ್ತ ಸಹಾಯಕ ತಿಪ್ಪೇರುದ್ರ ಸೇರಿ ಏಳು ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿದೆ. ಇದೀಗ ಎಸ್‌ಐಟಿಗೆ ಚಿಲುವೆ ಅಕ್ರಮ ಮತದಾರರ ಮಾಹಿತಿ ಸಂಗ್ರಹ ಪ್ರಕರಣವನ್ನೂ ವರ್ಗಾಯಿಸುವ ಕುರಿತು ಸರ್ಕಾರದಲ್ಲಿ ಚರ್ಚೆ ನಡೆದಿದೆ.
ಏನಿದು ಚಿಲುಮೆ ಪ್ರಕರಣ?:
2008ರಿಂದ ಬಿಬಿಎಂಪಿ ಅಧಿಕಾರಿಗಳ ಜತೆ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಸಂಪರ್ಕ ಇತ್ತು. ಈ ಹಿನ್ನೆಲೆಯಲ್ಲಿ
ಚುನಾವಣಾ ಕೆಲಸಗಳಿಗೆ ಹೊರಗುತ್ತಿಗೆ ಆಧಾರದಡಿ ಆತ ಕಾರ್ಯನಿರ್ವಹಿಸಿದ್ದ. ಇದರಿಂದ ಚುನಾವಣೆ ವೇಳೆ ಬಿಬಿಎಂಪಿ ಕಾರ್ಯವೈಖರಿ ಹಾಗೂ ಪಕ್ಷಗಳ ಕಾರ್ಯಾಚರಣೆ ಬಗ್ಗೆ ಆತನಿಗೆ ತಿಳಿದಿತ್ತು. 2011ರಲ್ಲಿ ‘ಹೊಂಬಾಳೆ’ ಸಂಸ್ಥೆ ಸ್ಥಾಪಿಸಿದ ರವಿಕುಮಾರ್, ಆರಂಭದಲ್ಲಿ ವಿಧಾನಸಭಾ, ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆಗಳಲ್ಲಿ ಚುನಾವಣಾ ಸಿಬ್ಬಂದಿಗೆ ಆಹಾರ ಪೂರೈಕೆ, ಮತ ಕೇಂದ್ರಗಳ ನಿರ್ಮಾಣ ಹಾಗೂ ಮತಗಟ್ಟೆ ವ್ಯವಸ್ಥೆ ಸಂಬಂಧ ಹೊರಗುತ್ತಿಗೆ ಪಡೆದು ‘ಸೇವೆ’ ಸಲ್ಲಿಸಿದ್ದ.
ಇದಾದ ನಂತರ 2013ರಲ್ಲಿ ಚಿಲುಮೆ ಸಂಸ್ಥೆ ಆರಂಭಿಸಿ ಚುನಾವಣಾ ಕಾರ್ಯಗಳಲ್ಲಿ ಆತ ತೊಡಗಿಸಿಕೊಂಡಿದ್ದ. ಬಿಬಿಎಂಪಿ ಅಧಿಕಾರಿಗಳ ಸ್ನೇಹ ಬಳಸಿಕೊಂಡ ಆತ, 2023ರ ವಿಧಾನಸಭಾ ಚುನಾವಣೆಗೆ ಮತದಾರರ ಮಾಹಿತಿ ಸಂಗ್ರಹಿಸಿ ಸುಲಭವಾಗಿ ಬೃಹತ್ ಮೊತ್ತದ ಹಣ ಸಂಪಾದನೆಗೆ ಸಂಚು ರೂಪಿಸಿದ್ದ ಎನ್ನಲಾಗಿತ್ತು. ಅಂತೆಯೇ 2022ರಲ್ಲಿ ಚುನಾವಣಾ ಸಿಬ್ಬಂದಿ ಸೋಗಿನಲ್ಲಿ ಮತದಾರರ ಮಾಹಿತಿ ಸಂಗ್ರಹಕ್ಕಿಳಿದು ಚಿಲುಮೆ ವಿವಾದಕ್ಕೆ ಸಿಲುಕಿತ್ತು.
ಮೊದಲ ಹಂತದಲ್ಲಿ ಮಹದೇವಪುರ, ಶಿವಾಜಿನಗರ, ಚಿಕ್ಕಪೇಟೆ ಹಾಗೂ ರಾಜರಾಜೇಶ್ವರಿ ನಗರ ಸೇರಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಕುರಿತು ಜಾಗೃತಿ ಸೋಗಿನಲ್ಲಿ ಸಮೀಕ್ಷೆ ನಡೆಸಿ ಸುಮಾರು 90 ಸಾವಿರಕ್ಕೂ ಮತದಾರರ ದತ್ತಾಂಶವನ್ನು ಚಿಲುಮೆ ಕಲೆ ಹಾಕಿತ್ತು ಎಂಬ ಆರೋಪ ಬಂದಿತ್ತು.
ಈ ಸಂಬಂಧ ಹಲಸೂರು ಗೇಟ್ ಹಾಗೂ ಕಾಡುಗೋಡಿ ಪೊಲೀಸ್ ಠಾಣೆಗಳಲ್ಲಿ ಬಿಬಿಎಂಪಿ ಚುನಾವಣಾಧಿಕಾರಿಗಳ ದೂರಿನ ಮೇರೆಗೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದಲ್ಲಿ ಆ ನಾಲ್ಕು ಕ್ಷೇತ್ರಗಳ ಚುನಾವಣಾ ಸಹಾಯಕ ಅಧಿಕಾರಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದರು. ಬಳಿಕ ಹೈಕೋರ್ಟ್‌ನಲ್ಲಿ ಪ್ರಕರಣಕ್ಕೆ ತಡೆಯಾಜ್ಞೆ ಸಿಕ್ಕ ಬಳಿಕ ಆರೋಪಿಗಳು ನಿರಾಳರಾಗಿದ್ದರು. ಕಳೆದ ಲೋಕಸಭಾ ಚುನಾವಣೆ ಬಳಿಕ ದೇಶವ್ಯಾಪಿ ಮತಕಳವು ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದನಿ ಎತ್ತಿದ್ದರು. ರಾಜ್ಯದಲ್ಲಿ ಮಹದೇವಪುರ ಹಾಗೂ ಆಳಂದ ಕ್ಷೇತ್ರಗಳಲ್ಲಿ ಸಹ ಮತಕಳವು ಬಗ್ಗೆ ಅವರು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಮತಕಳವು ಕುರಿತ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಅಲ್ಲದೆ, ಅಂದು ಚಿಲುಮೆ ಪ್ರಕರಣದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆಯನ್ನೂ ನಡೆಸಿದ್ದರು.
ಚಿಲುಮೆ ಹಿಂದಿನ ರಾಜಕೀಯ ‘ಸಂಚು’ ಪತ್ತೆಗೆ ಯತ್ನ?
2023ರ ವಿಧಾನಸಭಾ ಚುನಾವಣೆಗೂ ಮುನ್ನ ಬೆಂಗಳೂರಿನ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಅಕ್ರಮವಾಗಿ ಮತದಾರರ ಸ್ವ ವಿವರವನ್ನು ಚಿಲುಮೆ ಸಂಗ್ರಹಿಸಿತ್ತು. ಮತದಾರರ ದತ್ತಾಂಶ ಕಲೆ ಹಾಕಿ ರಾಜಕೀಯ ಪಕ್ಷಗಳಿಗೆ ಹಣಕ್ಕೆ ಚಿಲುಮೆ ಮಾರಾಟ ಮಾಡುತ್ತಿತ್ತು ಎಂಬ ಸಂಗತಿ ಅಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಹೀಗಾಗಿ ಚಿಲುಮೆ ವಿರುದ್ಧ ಮತ್ತೆ ತನಿಖೆ ಆರಂಭಿಸಿ, ಅಕ್ರಮವಾಗಿ ಮತದಾರರ ದತ್ತಾಂಶ ಸಂಗ್ರಹ ಹಿಂದಿರುವ ರಾಜಕೀಯ ಪಿತೂರಿ ಬಯಲುಗೊಳಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ಮತದಾರರ ರಾಜಕೀಯ ಒಲವು ಗುರುತು?
ಸಮೀಕ್ಷೆಯಲ್ಲಿ ಆ ಮತದಾರರ ಒಲವು ಯಾರ ಕಡೆ ಇದೆ ಎಂಬುದು ಸಹ ಚಿಲುಮೆ ಸಂಗ್ರಹಿಸಿತ್ತು ಎನ್ನಲಾಗಿದೆ. ಹೀಗಾಗಿ ಮತದಾರರ ಬೆಂಬಲಗಳಿಸಲು ರಾಜಕೀಯ ಪಕ್ಷಗಳಿಗೆ ನೆರವಾಗಿದೆ. ಮತದಾರರ ಮಾಹಿತಿಯನ್ನು ಚುನಾವಣಾ ಸಿಬ್ಬಂದಿ ಹೊರತುಪಡಿಸಿ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು ಸಂಗ್ರಹಿಸುವುದು ಕಾನೂನು ಬಾಹಿರ. ಹೀಗಿದ್ದರೂ ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಸಂಗ್ರಹಿಸಿದ್ದ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು.
ಏನಿದು ಪ್ರಕರಣ?
2024ರ ವಿಧಾನಸಭಾ ಚುನಾವಣೆಗೂ ಮುನ್ನ ಚಿಲುಮೆ ಸಂಸ್ಥೆಯಿಂದ ಬೆಂಗಳೂರಲ್ಲಿ ಮತದಾರರ ಮಾಹಿತಿ ಸಂಗ್ರಹ ಆರೋಪ
ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದರೂ ಅದಕ್ಕೆ ತಡೆ. ತಡೆ ತೆರವಿಗೆ ಇದೀಗ ಎಸ್‌ಪಿಪಿ ನೇಮಕ. ತೆರವು ಸಿಕ್ಕರೆ ಸಿಐಡಿ ತನಿಖೆ?
ಈ ಸಂಸ್ಥೆಗೆ ಬಿಜೆಪಿ ಪ್ರಭಾವಿ ನಾಯಕರ ನಂಟಿನ ಆರೋಪ. ಹೀಗಾಗಿ ತನಿಖೆ ಮೂಲಕ ಬಿಜೆಪಿಗರ ಕಟ್ಟಿಹಾಕಲು ಸರ್ಕಾರ ಯತ್ನ


