Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಮತದಾರರಿಗೆ ಸಿಎಂ, ಡಿಸಿಎಂ ಭಾವಚಿತ್ರವುಳ್ಳ ಗಿಫ್ಟ್ ಬಾಕ್ಸ್ ವಿತರಣೆ..!

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ , ಶಾಸಕ ಬಾಲಕೃಷ್ಣರವರ ಭಾವಚಿತ್ರವುಳ್ಳ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಯಗಳು ಎಂದು ಬರೆದಿರುವ ಗಿಫ್ಟ್ ಬಾಕ್ಸ್ ಗಳನ್ನು ಕಾಂಗ್ರೆಸ್ ಕಾರ್ಯಕರ್ತರೇ ಮತದಾರನ ಮನೆ ಬಾಗಿಲಿಗೆ ತೆರಳಿ ತಲುಪಿಸುತ್ತಿದ್ದಾರೆ. ಕುಕ್ಕರ್, ಪ್ಯಾನ್ ಸೇರಿದಂತೆ 5 ವಸ್ತುಗಳು ಗಿಫ್ಟ್ ಬಾಕ್ಸ್ ನಲ್ಲಿವೆ.

Gift Box Distribution to Voters in Ramanagara grg
Author
First Published Feb 25, 2024, 12:00 AM IST

ಎಂ.ಅಫ್ರೋಜ್ /ಗಂ.ದಯಾನಂದ

ಕುದೂರು / ರಾಮನಗರ(ಫೆ.25):  ವಿಧಾನಸಭಾ ಚುನಾವಣೆಯ ಮತದಾನದ ದಿನ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರು ನೀಡಿದ್ದ ಗಿಫ್ಟ್ ಕಾರ್ಡ್ ಗೆ ಪ್ರತಿಯಾಗಿ ಗಿಫ್ಟ್ ಬಾಕ್ಸ್ ಗಳು ಮತದಾರರ ಕೈ ಸೇರಿದೆ. ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದೂರು ಗ್ರಾಮದ ಮತದಾರರಿಂದ ಗಿಫ್ಟ್ ಕಾರ್ಡ್ ಗಳನ್ನು ಪಡೆದು ಗಿಫ್ಟ್ ಗಳನ್ನು ಹಂಚಿಕೆ ಮಾಡಲಾ ಗುತ್ತಿದ್ದು, ರಾಮನಗರ ಕ್ಷೇತ್ರದಲ್ಲಿಯೂ ಮತದಾರರಿಗೆ ಉಡುಗೊರೆ ವಿತರಣೆಗೆ ಸಿದ್ಧತೆಗಳು ನಡೆದಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ , ಶಾಸಕ ಬಾಲಕೃಷ್ಣರವರ ಭಾವಚಿತ್ರವುಳ್ಳ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಯಗಳು ಎಂದು ಬರೆದಿರುವ ಗಿಫ್ಟ್ ಬಾಕ್ಸ್ ಗಳನ್ನು ಕಾಂಗ್ರೆಸ್ ಕಾರ್ಯಕರ್ತರೇ ಮತದಾರನ ಮನೆ ಬಾಗಿಲಿಗೆ ತೆರಳಿ ತಲುಪಿಸುತ್ತಿದ್ದಾರೆ. ಕುಕ್ಕರ್, ಪ್ಯಾನ್ ಸೇರಿದಂತೆ 5 ವಸ್ತುಗಳು ಗಿಫ್ಟ್ ಬಾಕ್ಸ್ ನಲ್ಲಿವೆ.

ರಾಮನಗರದಲ್ಲಿನ ಗಲಾಟೆಗೆ ಜೆಡಿಎಸ್-ಬಿಜೆಪಿ ಕಾರಣ: ಡಿ.ಕೆ.ಶಿವಕುಮಾರ್

ಏನಿದು ಗಿಫ್ಟ್ ಕಾರ್ಡ್?

ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾಗಡಿ ಕ್ಷೇತ್ರದಲ್ಲಿ ಬಾಲಕೃಷ್ಣ ಮತ್ತು ರಾಮನಗರ ಕ್ಷೇತ್ರದಲ್ಲಿ ಇಕ್ಬಾಲ್ ಹುಸೇನ್ ಅವರ ಭಾವಚಿತ್ರವಿರುವ ಗಿಫ್ಟ್ ಕಾರ್ಡ್‌ಗಳನ್ನು ಮತದಾರರಿಗೆ ಹಂಚಿದ್ದರು. ಈ ಗಿಫ್ಟ್ ಕಾರ್ಡ್‌ಗಳು ಅಭ್ಯರ್ಥಿ ಭಾವಚಿತ್ರ ಮಾತ್ರವಲ್ಲದೆ ಕ್ರಮ ಸಂಖ್ಯೆ, ಬಾರ್‌ಕೋಡ್ ಗಳು ಇದ್ದವು. ಅಭ್ಯರ್ಥಿ ಗೆದ್ದ ಬಳಿಕ 3ರಿಂದ 5ಸಾವಿರ ರುಪಾಯಿ ಮೌಲ್ಯದ ಗಿಫ್ಟ್‌ಗಳನ್ನು ನೀಡಲಾಗುವುದು ಎಂದು ಭರವಸೆ ಕೂಡ ನೀಡಿದ್ದರು ಎನ್ನಲಾಗಿದೆ.

ಚುನಾವಣೆ ಫಲಿತಾಂಶ ಬಂದ ತರುವಾಯ ಈ ಗಿಫ್ಟ್ ಕಾರ್ಡ್ ವಿಚಾರವಾಗಿ ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆಗಳನ್ನು ನೀಡಿದ್ದರು. ಶಾಸಕ ಇಕ್ಬಾಲ್ ಹುಸೇನ್ ಅವರು ಗಿಫ್ಟ್ ಹಂಚುತ್ತೇವೆ ಎಂದು ಹೇಳಿದ ಮೇಲೆ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು. ಇದರಿಂದ ಎಚ್ಚೆತ್ತ ಮತ್ತೋರ್ವ ಶಾಸಕ ಬಾಲಕೃಷ್ಣ, ಮತದಾರರಿಗೆ ಪರಿಚಯವಾಗಲಿ ಎಂಬ ಕಾರಣಕ್ಕೆ ನಮ್ಮ ಭಾವಚಿತ್ರ ಮತ್ತು ಪಕ್ಷದ ಚಿಹ್ನೆಯಿರುವ ಕಾರ್ಡ್ ನೀಡಿದ್ದೇವೆ. ಅದು ಗಿಫ್ಟ್ ಕಾರ್ಡ್ ಅಲ್ಲ ಎಂದು ವಾದಿಸಿದ್ದರು.

ಉಭಯ ಕ್ಷೇತ್ರಗಳಲ್ಲಿ ಮತದಾರರು ಶಾಸಕರಿಗೆ ಗಿಫ್ಟ್ ಗಳು ಎಲ್ಲೆಂದು ಪ್ರಶ್ನಿಸಿದ ಘಟನೆಗಳು ವರದಿಯಾಗಿತ್ತು. ಅಲ್ಲದೆ, ಶಾಸಕ ಬಾಲಕೃಷ್ಣ ಮತ್ತು ಮಾಜಿ ಶಾಸಕ ಎ.ಮಂಜುನಾಥ್ ನಡುವೆ ಇದೇ ಗಿಫ್ಟ್ ಕಾರ್ಡ್ ಗಳು ವಾಕ್ಸಮರಕ್ಕೂ ಕಾರಣವಾಗಿತ್ತು. ನೀವು ಗಿಫ್ಟ್ ಕೊಡದೇ ಹೋದರೆ ನಮಗೆ ಗಿಫ್ಟ್ ಕೂಪನ್ ತಂದು ಕೊಟ್ಟರೆ ಅದಕ್ಕೆ ಉಡುಗೊರೆಗಳನ್ನು ನಾವೇ ಕೊಡುತ್ತೇವೆ ಎಂದು ಎ.ಮಂಜುನಾಥ್ ಹೇಳಿದ್ದರು.

ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಿಫ್ಟ್ ಕಾರ್ಡ್ ವಿಚಾರ ಎಲ್ಲಿ ತಮ್ಮ ಹಿನ್ನಡೆಗೆ ಕಾರಣವಾಗುತ್ತದೆಯೋ ಎಂಬ ಆತಂಕ ಕಾಂಗ್ರೆಸ್ಸಿಗರಿಗೆ ಕಾಡಲು ಶುರುವಾಗಿದೆ. ಹೀಗಾಗಿ ಕೈ ನಾಯಕರು ಪಕ್ಷದ ಕಾರ್ಯಕರ್ತರ ಮೂಲಕ ಮತದಾರರಿಂದ ಗಿಫ್ಟ್ ಕಾರ್ಡ್ ಗಳನ್ನು ಪಡೆದು ಉಡುಗೊರೆ ಹಂಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಗಿಫ್ಟ್ ಕೊಟ್ಟು ಆಣೆ ಪ್ರಮಾಣ :

ಮತದಾರರಿಗೆ ಗಿಫ್ಟ್ ಕೊಟ್ಟು ನಮಗೇ ಮತ ಹಾಕಬೇಕು ಎಂಬ ಆಣೆ ಪ್ರಮಾಣದ ಕೆಲಸವೂ ಆರಂಭವಾಗಿದೆ. ಕುದೂರು ಗ್ರಾಮದಲ್ಲಿ ಪ್ರತಿ ಬೀದಿಯಲ್ಲೂ ಮಹಿಳೆಯರ ಗುಂಪು. ಕಾಂಗ್ರೆಸ್ ಕಾರ್ಯಕರ್ತರು ಮಹಿಳೆಯರಿಂದ ಗಿಪ್ಟ್ ಕೂಪನ್ ಪಡೆದು ಅಡುಗೆ ವಸ್ತುಗಳನ್ನು ಒಳಗೊಂಡ ಬಾಕ್ಸ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ.

Loksabha Elections 2024: ಬಿಜೆಪಿ ವರಿಷ್ಠರಿಂದ ದೆಹಲಿಗೆ ಬುಲಾವ್: ನಿಖಿಲ್ ಕುಮಾರಸ್ವಾಮಿ

ಒಂದೊಂದು ವಾರ್ಡ್‌ನ ಪಕ್ಷದ ಮುಖಂಡರ ಮನೆಗಳಲ್ಲಿ ಬಾಕ್ಸ್ ಗಳನ್ನು ಇರಿಸಲಾಗುತ್ತಿದೆ. ಅಲ್ಲಿಗೆ ಮಹಿಳೆಯರು ತಮ್ಮ ಗಿಫ್ಟ್ ಕೂಪನ್ ತಂದರೆ ಅವರಿಗೆ ಅಡುಗೆ ವಸ್ತುಗಳಿರುವ ಗಿಫ್ಟ್ ಬಾಕ್ಸ್ ಕೊಡಲಾಗುತ್ತಿದೆ. ಕುದೂರಿನಲ್ಲಿ ಹೆಂಗಸರು ಸಾಲು ಸಾಲಾಗಿ ಬಂದು ಗಿಫ್ಟ್ ಕಾರ್ಡ್‌ಗಳನ್ನು ಕೊಟ್ಟು ಉಡುಗೊರೆ ಪಡೆದು ಹೋಗುತ್ತಿರುವ ದೃಶ್ಯ ಸಾಮಾನ್ಯ ಎನ್ನುವಂತಾಗಿದೆ.

ಇನ್ನು ಗಿಫ್ಟ್ ಕೊಡುತ್ತಿರುವ ಕಾರ್ಯಕರ್ತರು, ನಿಮಗೆ ನಿಯತ್ತಿರಬೇಕು. ಗಿಫ್ಟ್ ಪಡೆದು ಬೇರೆ ಪಕ್ಷಕ್ಕೆ ಮತ ಹಾಕಿ ನಮಗೆ ದೋಖಾ ಮಾಡಬೇಡಿ. ಎಂಪಿ ಚುನಾವಣೆಗೆ ಈಗಲೇ ಇದನ್ನು ನೀಡುತ್ತಿದ್ದೇವೆ. ಮತ್ತೆ ನಿಮ್ಮ ಮನೆಗಳಿಗೆ ಬಂದು ಮತ ಕೇಳುವುದಿಲ್ಲ. ನೀವು ಬೇರೆ ಪಕ್ಷಕ್ಕೆ ಮತ ಹಾಕುತ್ತೀರಿ ಎಂದರೆ ಗಿಪ್ಟ್ ಬಾಕ್ಸ್ ಪಡೆಯಬೇಡಿ ಎಂದು ಹೇಳುತ್ತಿದ್ದರು. ಇವರ ಮಾತನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ ಇಲ್ಲದಂತಿದ್ದ ಮಹಿಳೆಯರು ನಗುಮೊಗದೊಂದಿಗೆ ಗಿಫ್ಟ್ ಬಾಕ್ಸ್ ಪಡೆದು ಮನೆಗಳತ್ತ ಹೆಜ್ಜೆ ಹಾಕುತ್ತಿದ್ದರು.

Follow Us:
Download App:
  • android
  • ios