Loksabha Elections 2024: ಬಿಜೆಪಿ ವರಿಷ್ಠರಿಂದ ದೆಹಲಿಗೆ ಬುಲಾವ್: ನಿಖಿಲ್ ಕುಮಾರಸ್ವಾಮಿ
ಲೋಕಸಭಾ ಚುನಾವಣೆಯ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ, ಬಿಜೆಪಿ ವರಿಷ್ಠರು ದೆಹಲಿಗೆ ಕರೆದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರ (ಫೆ.19): ಲೋಕಸಭಾ ಚುನಾವಣೆಯ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ, ಬಿಜೆಪಿ ವರಿಷ್ಠರು ದೆಹಲಿಗೆ ಕರೆದಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಕೂಡಾ ದೆಹಲಿಗೆ ಹೋಗುತ್ತಿದ್ದೇನೆ.
ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿ, 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಚುನಾವಣೆ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದ ಪಕ್ಷದ ಎಲ್ಲಾ ಮುಖಂಡರನ್ನು ಕರೆದು ಸಭೆ ಮಾಡಿದ್ದೇನೆ. ಶೀಘ್ರದಲ್ಲೇ ಆ ಭಾಗದ ಎಲ್ಲಾ ತಾಲೂಕುಗಳಿಗೂ ಪ್ರವಾಸ ಮಾಡುತ್ತೇನೆ. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ತಂತ್ರಗಾರಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸ್ಪರ್ಧೆ ಕುರಿತು ಮುಂದೆ ಚರ್ಚಿಸೋಣ: ನಾನು ಮಂಡ್ಯದಿಂದ ಸ್ಪರ್ಧೆ ಮಾಡಬೇಕು ಎಂದು ಅಲ್ಲಿನ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು 5 ಲಕ್ಷಕ್ಕಿಂತ ಅಧಿಕ ಮತಗಳನ್ನು ಕೊಟ್ಟಿದ್ದಾರೆ. ಅಲ್ಲಿನ ಜನತೆಗೆ ನಾನು ಚಿರಋಣಿಯಾಗಿರುವೆ. ಮತ್ತೆ ಸ್ಪರ್ಧಿಸುವ ಕುರಿತು ಮುಂದೆ ಚರ್ಚಿಸೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹೋರಾಟ ಮಾಡಬೇಕಿದೆ. ರಾಜ್ಯದ 28 ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮೋದಿ ಅವರಿಗೆ ಉಡುಗೊರೆ ನೀಡಲಿದ್ದೇವೆ ಎಂದು ಹೇಳಿದರು.
ಮಂಗನಕಾಯಿಲೆ ಉಲ್ಬಣಿಸುವ ಮುನ್ನ ಎಚ್ಚರ ವಹಿಸಬೇಕು: ಶಾಸಕ ಆರಗ ಜ್ಞಾನೇಂದ್ರ
ರಂಗನಾಥ್ ಗೆಲ್ಲುತ್ತಾರೆಂಬ ವಿಶ್ವಾಸವಿದೆ: ಮೋದಿ ಅವರನ್ನು ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ಮಾಡಲು ನಾವೆಲ್ಲ ಎನ್‌ಡಿಎಗೆ ಬೆಂಬಲವನ್ನು ಸೂಚಿಸಿದ್ದೇವೆ. ಹಾಗಾಗಿ ಬಿಜೆಪಿ - ಜೆಡಿಎಸ್ ಮುಖಂಡರು ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿ ರಂಗನಾಥ್ ಅವರ ಗೆಲುವಿಗೆ ಶ್ರಮವಹಿಸುತ್ತಿದ್ದಾರೆ. ರಂಗಾನಾಥ್ ಅವರಿಗೆ ಎಲ್ಲಾ ಶಿಕ್ಷಕರ ಆಶೀರ್ವಾದ ಇದೆ ಎಂಬ ಆತ್ಮ ವಿಶ್ವಾಸವಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.