ಹಾಸನದಲ್ಲಿ ಮೊಮ್ಮಗನ ಸಾಧನೆ ಪುಸ್ತಕ ಅನಾವರಣ, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ದೇವೇಗೌಡ ಗುಡುಗು
ನಮ್ಮ ಕುಟುಂಬದ ಮೇಲೆ ಕೇವಲ ಕುಟುಂಬ ರಾಜಕೀಯ ಎಂಬ ಒಂದೇ ಅಸ್ತ್ರ ಹೊರತು ಪಡಿಸಿದರೆ ವಿರೋಧಿಗೆ ಬೇರೆ ಅಸ್ತ್ರ ಇಲ್ಲ ಎಂದು ಹಾಸನದಲ್ಲಿ ಮೊಮ್ಮಗನ ಸಾಧನೆ ಪುಸ್ತಕ ಅನಾವರಣ ಮಾಡಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಸಮಾಧಾನ ಹೊರ ಹಾಕಿದ್ದಾರೆ.
ವರದಿ: ಕೆ.ಎಂ.ಹರೀಶ್, ಏಷ್ಯಾ ನೆಟ್ ಸುವರ್ಣ ನ್ಯೂಸ್
ಹಾಸನ (ಮಾ.6): ನಮ್ಮ ಕುಟುಂಬದ ಮೇಲೆ ಕೇವಲ ಕುಟುಂಬ ರಾಜಕೀಯ ಎಂಬ ಒಂದೇ ಅಸ್ತ್ರ ಹೊರತು ಪಡಿಸಿದರೆ ವಿರೋಧಿಗೆ ಬೇರೆ ಅಸ್ತ್ರ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಸಮಾಧಾನ ಹೊರ ಹಾಕಿದರು. ಹಾಸನ ನಗರದಲ್ಲಿ ಬುಧವಾರ ಸಂಜೆ ಮೊಮ್ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ಐದು ವರ್ಷಗಳ ಸಾಧನಾ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾತೆತಿದ್ದರೆ ನಾನು ಪ್ರಧಾನಿಯಾಗಿದ್ದೆ, ಮಗ ಮುಖ್ಯಮಂತ್ರಿಯಾಗಿದ್ದ, ಇನ್ನೊಬ್ಬ ಮಗ ಮಂತ್ರಿ, ಮೊಮ್ಮಗ ಎಂಪಿ, ಮಗದೊಬ್ಬ ಎಂಎಲ್‌ಸಿ ಅನ್ನೋದು ಬಿಟ್ಟರೆ ವಿರೋಧಿಗಳಿಗೆ ಬೇರೇನೂ ಇಲ್ಲ ಎಂದರು. ಚುನಾವಣೆಗೆ ಶತದಿನವೂ ಇಲ್ಲ. ಆಗಲೇ ನಮ್ಮ ಮೇಲೆ ಗದಾ ಪ್ರಹಾರ ಶುರು ಮಾಡಿದ್ದಾರೆ. ಅರಸೀಕೆರೆ, ಹಾಸನದಲ್ಲಿ ಸಿಎಂ-ಡಿಸಿಎಂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ ಮಾಡಿದ್ದಾರೆ.
ಸಂಸದರ ವಿರುದ್ದ ಆಕ್ರೋಶ, ಚಿತ್ರದುರ್ಗ ಜಿ.ಪಂ ಕಚೇರಿಗೆ ಟ್ಯಾಕ್ಟರ್ ನಿಲ್ಲಿಸಿ ರೈತರ ಪ್ರತಿಭಟನೆ
ಹಾಸನ ಸರ್ಕಾರಿ ಆಸ್ಪತ್ರೆ ಉದ್ಘಾಟನೆ ಸಂಬಂಧ ಸಿಎಂ-ಡಿಸಿಎಂ ವಿರುದ್ಧ ಕಿಡಿಕಾರಿದ ಗೌಡರು, ಆಸ್ಪತ್ರೆ ಆಗಿದ್ದು ಯಾವಾಗ ಸತ್ಯ ಹೇಳಿ, ಶಂಕುಸ್ಥಾಪನೆ ಆಗಿದ್ದು ಯಾವಾಗ, ಮೆಡಿಕಲ್ ಕಾಲೇಜು ಉಳಿಸಿದ್ದ ಸನ್ನಿವೇಶ ನನಗೆ ಗೊತ್ತಿದೆ. ಧರ್ಮಸಿಂಗ್ ಸಿಎಂ ಆಗಿದ್ದಾಗ ಅಡಿಗಲ್ಲು ಹಾಕಿದ್ದು. ಅಂದು ಪ್ರಧಾನಿ ಆಗಿದ್ದ ನರಸಿಂಹರಾವ್, ವಿಶ್ವಬ್ಯಾಂಕ್‌ನಿಂದ ಬಂದಿದ್ದ 880 ಕೋಟಿ ಹಣವನ್ನ ದೇವೇಗೌಡರಿಗೆ ಗೌರವ ಕೊಡಬೇಕು ನರಸಿಂಹರಾವ್ ನೀಡಿದ್ರು ಎಂದು ನೆನೆಪಿಸಿಕೊಂಡರು.
ಪ್ರಜ್ವಲ್ ಕೆಲಸ ಮಾಡಿರೋ ವಿಚಾರಗಳನ್ನ ಜನರಿಗೆ ಮುಟ್ಟಿಸಬೇಕು. ಇಲ್ಲವಾದರೆ ನಮ್ಮ ಎದುರಾಳಿಗಳು ನಮ್ಮನ್ನ ಬಿಡುವುದಿಲ್ಲ ಎಂದ ಗೌಡರು, ರಾಜ್ಯ ಸಭೆಯಲ್ಲಿ ನನಗಿನ್ನೂ ಎರಡೂವರೆ ವರ್ಷ ಇದೆ. ನಾನು ಪ್ರಜ್ವಲ್ ಹಿಂದೆ ನಿಲ್ಲುತ್ತೇನೆ, ಸಲಹೆ ಸಹಕಾರ ನೀಡುತ್ತೇನೆ, ಈ ಜಿಲ್ಲೆಯ ಜನರ ಋಣ ತೀರಿಸಬೇಕಿದೆ ಎಂದು ನುಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿದ ಗೋ ಬ್ಯಾಕ್ ಅಭಿಯಾನ, ಶೋಭಾ ಬಳಿಕ ಹೆಗ್ಡೆ ಟಾರ್ಗೆಟ್
ಕುಮಾರಸ್ವಾಮಿ 24 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ರಲ್ಲಾ, ಅದಕ್ಕೆ ಅಸೂಯೆ ಪಡುತ್ತೀರಾ ಸಿದ್ದರಾಮಯ್ಯ ನವರೇ ಎಂದು ಪ್ರಶ್ನಿಸಿದ ಗೌಡರು, ನಿಮ್ಮ ಎಲ್ಲಾ ಭಾಗ್ಯಗಳಿಗೂ ಕುಮಾರಸ್ವಾಮಿ ಹಣ ಒದಗಿಸಿ ಎಂದು ಇದೇ ಸಿದ್ರಾಮಯ್ಯ ಅಸೆಂಬ್ಲಿಯಲ್ಲಿ ಹೇಳಿದ್ರು, ನನ್ನ ಭಾಗ್ಯಗಳಿಗೆ ಹಣ ಇಟ್ಟು ಆಮೇಲೆ ಸಾಲ ಮನ್ನಾ ಮಾಡಿ ಅಂದ್ರು ಎನ್ನುವ ಮೂಲಕ ಮಾಜಿ ಶಿಷ್ಯನ ವಿರುದ್ಧ ಗರಂ ಆದರು. ಇದೇ ವೇಳೆ ನಾನು ಜ್ವರ ಬಂದು ಮನೆಯಲ್ಲಿ ಮಲಗಿದ್ದಾಗ, ರಾಜಣ್ಣ ಬಂದು ಸೋಲುತ್ತೇನೆ ಪ್ರಚಾರಕ್ಕೆ ಬನ್ನಿ ಅಂದ್ರು, ಜ್ವರ ಇದ್ದರೂ ಪ್ರಚಾರಕ್ಕೆ ಹೋಗಿ ರಾಜಣ್ಣನ ಗೆಲ್ಲಿಸಿದೆ ಎಂದರು.
ತಪ್ಪಾಗಿದ್ದರೆ ಕ್ಷಮಿಸಿಬಿಡಿ ಎಂದ ಪ್ರಜ್ವಲ್ ರೇವಣ್ಣ:
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ನಾನು ಸಂಸದನಾದಾಗಿನಿಂದ ಸುಮ್ಮನೆ ಕೂತಿಲ್ಲ. ಪ್ರತಿದಿನ ಒಂದಲ್ಲ ಒಂದು ಕಡೆ ಓಡಾಡಿದ್ದೀನಿ. ಐದು ವರ್ಷದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಿದ್ದೀನಿ ಎಂದರು. ಮುಂದೆ ಇನ್ನೂ ಹೆಚ್ಚಿನ ಕೆಲಸ ಮಾಡ್ತೀನಿ, ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ನಿಮ್ಮ ಜೊತೆ ಇರ್ತೀನಿ, ನಿಮಗೆ, ಪಕ್ಷಕ್ಕೆ ಶಕ್ತಿ ತುಂಬವ ಕೆಲಸ ಮಾಡ್ತೀನಿ, 27ನೇ ವರ್ಷಕ್ಕೇ ಸಂಸದನಾದೆ, ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಕ್ಷಮೆ ಇರಲಿ ಎಂದು ಕೇಳಿದರು. 5 ವರ್ಷ ಜನಪರ ಕೆಲಸ ಮಾಡಿದ್ದೀನಿ. ನಮ್ಮ ಶಾಸಕರ ಸಹಕಾರದಿಂದ ಇಷ್ಟು ಕೆಲಸ ಮಾಡಲು ಸಾಧ್ಯವಾಯಿತು. 7 ಫ್ಯಾಕ್ಟರಿಗಳನ್ನು ಹಾಸನಕ್ಕೆ ತರುವ ಕೆಲಸ ಮಾಡಿದ್ದೇನೆ. ಸ್ಥಳೀಯರಿಗೆ ಕೆಲಸ ಸಿಗಬೇಕು. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ. ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿ ಮತ್ತಷ್ಟು ಕೆಲಸ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲೆಗೆ ನೀರಾವರಿ, ರಸ್ತೆ, ರೈಲ್ವೆ ಹೀಗೆ ಸಾವಿರಾರು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನಾವು ಮಾಡಿದ್ದನ್ನು ಕಾಂಗ್ರೆಸ್‌ನವರು ಉದ್ಘಾಟನೆ ಮಾಡಿದ್ದಾರೆ. ಆ ಕೆಲಸ ಯಾರ ಕಾಲದಲ್ಲಿ ಆಗಿತ್ತು ಎಂದು ಹೇಳಲಿ ಎಂದು ಕೇಳಿದರು. 8 ವಿಧಾನಸಭಾ ಕ್ಷೇತ್ರಗಳಿಗೂ ಎಲ್ಲಾ ರೀತಿಯ ಕೆಲಸ ಮಾಡಿದ್ದೇವೆ. ಪ್ರಜ್ವಲ್ ತಪ್ಪು ಮಾಡಿರಬಹುದು, ನಾನು, ನಮ್ಮ ಶಾಸಕರು, ನಮ್ಮ ಮಕ್ಕಳು ತಪ್ಪು ಮಾಡಿರಬಹುದು. ಇದನ್ನು ಜಿಲ್ಲೆಯ ಜನ ಮನಸ್ಸಿನಲ್ಲಿಟ್ಟುಕೊಳ್ಳಬಾರದು. ಕಳೆದ ಬಾರಿಗಿಂತ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸಬೇಕು. ಯಾರೇ ಅಭ್ಯರ್ಥಿ ಆಗಲಿ, ಅದು ದೇವೇಗೌಡರು, ಕುಮಾರಣ್ಣ ಗೆ ಬಿಟ್ಟದ್ದು, ಯಾರೇ ಆದರೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ವಿನಂತಿಸಿದರು.