ಶಾಸಕರ ಅನುದಾನ ಕಡಿತ ಸರಿಯಲ್ಲ: ಮಾಜಿ ಸಚಿವ ಎಂಟಿಬಿ ನಾಗರಾಜ್
ಗ್ಯಾರಂಟಿ ಅನುಷ್ಠಾನದ ದೃಷ್ಠಿಯಿಂದ ಒಂದು ವರ್ಷ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ಕೊಡಲಿಕ್ಕೆ ಆಗಲ್ಲ ಎಂದು ಡಿಸಿಎಂ ಡಿಕೆ.ಶಿವಕುಮಾರ್ ಅವರು ಹೇಳಿರುವುದನ್ನು ಗಮನಿಸಿದ್ದೇವೆ. ಸರ್ಕಾರಗಳು ಯಾವುದೇ ಯೋಜನೆಗಳನ್ನು ಕೊಡುವ ಮೊದಲು ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕೊಡುವ ಕೆಲಸ ಆಗಬೇಕು. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಅನುಷ್ಠಾನಕ್ಕೆ ಈ ರೀತಿ ಅನುದಾನ ಕಡಿತಗೊಳಿಸುವುದು ಸರಿಯಲ್ಲ ಎಂದ ಎಂಟಿಬಿ ನಾಗರಾಜ್
ಹೊಸಕೋಟೆ(ಆ.02): ಚುನಾವಣೆ ಸಂಧರ್ಭದಲ್ಲಿ 5 ಗ್ಯಾರಂಟಿಗಳ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿಗಳ ಅನುಷ್ಠಾನಕ್ಕೆ ಶಾಸಕರ ಒಂದು ವರ್ಷದ ಅನುದಾನವನ್ನು ಕಡಿತಗೊಳಿಸುವಲ್ಲಿ ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ಅವರು, ಗ್ಯಾರಂಟಿ ಅನುಷ್ಠಾನದ ದೃಷ್ಠಿಯಿಂದ ಒಂದು ವರ್ಷ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ಕೊಡಲಿಕ್ಕೆ ಆಗಲ್ಲ ಎಂದು ಡಿಸಿಎಂ ಡಿಕೆ.ಶಿವಕುಮಾರ್ ಅವರು ಹೇಳಿರುವುದನ್ನು ಗಮನಿಸಿದ್ದೇವೆ. ಸರ್ಕಾರಗಳು ಯಾವುದೇ ಯೋಜನೆಗಳನ್ನು ಕೊಡುವ ಮೊದಲು ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕೊಡುವ ಕೆಲಸ ಆಗಬೇಕು. ಆದರೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಅನುಷ್ಠಾನಕ್ಕೆ ಈ ರೀತಿ ಅನುದಾನ ಕಡಿತಗೊಳಿಸುವುದು ಸರಿಯಲ್ಲ ಎಂದರು.
ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ: ಎಂಟಿಬಿ ನಾಗರಾಜ್ ಶ್ಲಾಘನೆ
ಪೋಡಿ ಮಾಡಿಸಲು ಒತ್ತಡ:
ಶಾಸಕ ಶರತ್ ಬಚ್ಚೇಗೌಡರ ಕುಟುಂಬದವರು ಶಾಂತನಪುರ ಸರ್ವೇ ನಂಬರ್ 9ರಲ್ಲಿ ಕಬಳಿಕೆ ಮಾಡಿರುವ ಜಮೀನಿನ ಬಗ್ಗೆ ಹೈ ಕೋರ್ಚ್‌ನಲ್ಲಿ ಕೇಸಿದೆ. ಲೋಕಾಯುಕ್ತದಲ್ಲಿ ವಿಚಾರಣೆ ಸಹ ಇದೆ. ಈ ಹಿಂದೆ ಜಿಲ್ಲಾಕಾರಿಗಳು ಹಾಗೂ ಉಪವಿಭಾಗಾಕಾರಿಗಳು ಪರಿಶೀಲನೆ ನಡೆಸಿ ನೂರು ಎಕರೆ ಜಾಗವನ್ನು ನಕಲಿ ದಾಖಲೆ ಸೃಷ್ಠಿ ಮಾಡಿ ಬೇಕಾದವರ ಹೆಸರಿಗೆ ಖಾತೆ ಮಾಡಿದ್ದಾರೆ ಎಂದು ವರದಿ ಸಹ ಇದೆ. ಆದ್ರೂ ಸಹ ಶಾಸಕ ಶರತ್ ಬಚ್ಚೇಗೌಡ ಅವರು ಬೆಂಬಲಿಗರು ಆ ಜಮೀನಿಗೆ ಪೋಡಿ ಮಾಡಿಸಲು ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ನನಗೆ ಮಾಹಿತಿ ಇದೆ. ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಇಂತಹ ಪ್ರಕರಣಗಳ ಬಗ್ಗೆ ಗಮನಹರಿಸಬೇಕು. ಜಿಲ್ಲೆಯಲ್ಲಿ ಇರುವಂತಹ ಗೋಮಾಳ ಜಾಗಗಳನ್ನು ಅಧಿಕಾರಿಗಳ ಜೊತೆಗೂಡಿ ನಕಲಿ ದಾಖಲೆ ಸೃಷ್ಠಿ ಮಾಡಿಸಿ ಕಬಳಿಕೆ ಮಾಡುವ ಸಮಾಜಘಾತುಕ ಕೆಲಸ ಮಾಡ್ತಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಮನವಿ ಮಾಡ್ತೇನೆ ಎಂದರು.
ಶಾಸಕರು ಈಗ ಎಲ್ಲಿ ಪ್ರತಿಭಟಿಸ್ತಾರೆ?
ಬಿಜೆಪಿ ಸರ್ಕಾರದ ಅವಧಿಯಲ್ಲಿ 10 ಕೋಟಿ ಅನುದಾನ ಕಡಿತಗೊಳಿಸಿದ್ದಕ್ಕಾಗಿ ಶಾಸಕ ಶರತ್ ಬಚ್ಚೇಗೌಡರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕುಳಿತು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ರು. ಅಲ್ಲದೆ ನಮ್ಮ ಸರ್ಕಾರ ಬಂದ್ರೆ 10 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡ್ತೇನೆ ಅಂದಿದ್ರು. ಆದರೆ ಈಗ ಅವರದೇ ಸರ್ಕಾರ ಇದ್ದು ಒಂದು ವರ್ಷ ಅನುದಾನ ಕೊಡೊಲ್ಲ ಎಂದು ಡಿಸಿಎಂ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಈಗ ಶರತ್ ಬಚ್ಚೇಗೌಡ್ರು ಎಲ್ಲಿ ಪ್ರತಿಭಟನೆ ಮಾಡಿ ಅನುದಾನ ತಂದು ಅಭಿವೃದ್ಧಿ ಮಾಡ್ತಾರೆ? ಮತ ಪಡೆಯಲು ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಏನೆಲ್ಲಾ ಬೇಕೋ ಅದನ್ನೆಲ್ಲಾ ಅವರು ಮಾಡಿದ್ರು ಎಂದು ಶಾಸಕ ಶರತ್ ವಿರುದ್ಧ ಎಂಟಿಬಿ ನಾಗರಾಜ್ ಕಿಡಿಕಾರಿದರು.