ಡಾ.ರಾಜಕುಮಾರ್‌ಗೆ ರಾಜಕೀಯದ ಮೇಲೆ ಆಸೆ ಎಂದ ಶಿವಣ್ಣ: ಕುಮಾರ ಬಂಗಾರಪ್ಪ ಕಿಡಿ
ರಾಜಕೀಯದಲ್ಲಿದ್ದ ಬಂಗಾರಪ್ಪ ಅವರ ಪುತ್ರಿ ಜೊತೆ ವಿವಾಹ ಮಾಡಿಸಿದರು ಎಂದು ಸುಳ್ಳು ಹೇಳಿದ್ದಾರೆ. ಈ ಮೂಲಕ ನಟ ಶಿವರಾಜ್ ಕುಮಾರ್ ಸುಳ್ಳಿನ ಕಂತೆ ಕಟ್ಟಿದ್ದಾರೆ. ಅದಕ್ಕೆ ಅವರ ಸೊಸೆಯನ್ನು ನಾವು ರಾಜಕೀಯಕ್ಕೆ ತಂದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಡಾ.ರಾಜ್ ಅವರಿಗೆ ಈ ರೀತಿಯ ಆಸೆ ಇರಲಿಲ್ಲ ಎಂದು ಭಾವ ಶಿವರಾಜ್ ಕುಮಾರ್ ವಿರುದ್ಧ ಕಿಡಿಕಾರಿದ ಕುಮಾರ ಬಂಗಾರಪ್ಪ
ಶಿವಮೊಗ್ಗ(ಮೇ.01): ವರನಟ ಡಾ.ರಾಜಕುಮಾರ್ ರವರಿಗೆ ರಾಜಕೀಯದ ಮೇಲೆ ಆಸೆ ಇತ್ತು ಎಂದು ನಟ ಶಿವರಾಜ್ ಕುಮಾರ್ ನೀಡಿರುವ ಹೇಳಿಕೆ ಸುಳ್ಳು ಎಂದ ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಬಂಗಾರಪ್ಪ ಅವರು, ರಾಜಕೀಯದಲ್ಲಿದ್ದ ಬಂಗಾರಪ್ಪ ಅವರ ಪುತ್ರಿ ಜೊತೆ ವಿವಾಹ ಮಾಡಿಸಿದರು ಎಂದು ಸುಳ್ಳು ಹೇಳಿದ್ದಾರೆ. ಈ ಮೂಲಕ ನಟ ಶಿವರಾಜ್ ಕುಮಾರ್ ಸುಳ್ಳಿನ ಕಂತೆ ಕಟ್ಟಿದ್ದಾರೆ. ಅದಕ್ಕೆ ಅವರ ಸೊಸೆಯನ್ನು ನಾವು ರಾಜಕೀಯಕ್ಕೆ ತಂದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಡಾ.ರಾಜ್ ಅವರಿಗೆ ಈ ರೀತಿಯ ಆಸೆ ಇರಲಿಲ್ಲ ಎಂದು ಭಾವ ಶಿವರಾಜ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ದುರಹಂಕಾರಿ ಮಧುಗೆ ಪಾಠ ಕಲಿಸಿ: ಕುಮಾರ ಬಂಗಾರಪ್ಪ
ರಾಜಕೀಯದಲ್ಲಿ ಡ್ಯಾನ್ಸ್, ಹಾಡಿನ ಅವಶ್ಯಕತೆ ಇಲ್ಲ
ನನ್ನ ಪತ್ನಿಗೆ ಗೆಲ್ಲಿಸಿದರೆ ನಾನು ಇಲ್ಲಿಯೇ ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡಿಕೊಂಡು ಇರ್ತೆನೆ ಎಂದಿದ್ದಾರೆ. ಇವರಿಗೆ ಆ ಕೆಲಸ ಮಾಡಲು ಚಲನಚಿತ್ರ ರಂಗವಿದೆ. ರಾಜಕೀಯದಲ್ಲಿ ಡ್ಯಾನ್ಸ್, ಹಾಡಿನ ಅವಶ್ಯಕತೆ ಇಲ್ಲ. ನಾನು ಕೇವಲ ನನ್ನ ಪತ್ನಿ ಜೊತೆ ಬಂದಿದ್ದೇನೆ. ರಾಜಕಾರಣ ಗೊತ್ತಿಲ್ಲ ಅಂತಾ ಶಿವರಾಜ್ ಕುಮಾರ್ ಹೇಳ್ತಾರೆ. ಈ ಬಗ್ಗೆ ಗೀತಾ ಮಾತಾಡ್ತಾರೆ ಅಂತಾರೆ. ಆಗ ಕ್ಯಾಂಡಿಡೇಟ್ ಗೀತಾ ಕೂಡ ಇದರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ ಅಂತಾರೆ. ಆಗ ನನ್ನ ತಮ್ಮ ಮಾತಾಡ್ತಾರೆ ಅಂತಾ ಗೀತಾ ಹೇಳ್ತಾರೆ. ಆಗ ಮಾತನಾಡುವ ಮಧು ಬಂಗಾರಪ್ಪ ಏನೂ ಬೇಕಾದರೂ ಮಾತಾಡ್ತಾರೆ ಎಂದು ಮಧು ಬಂಗಾರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಒಂದಕ್ಕೊಂದು ಸಂಬಂಧವಿಲ್ಲವೆಂಬಂತೆ ಮಾತಾಡ್ತಾರೆ. ಮತ್ತೆ ಪ್ರಶ್ನೆ ಮಾಡಿದ್ರೆ ನಾನು ಎಷ್ಟು ಹೇಳ್ತಿನಿ ಅಷ್ಟು ಬರ್ಕೊಳ್ರೀ ಅಂತಾರೆ. ಇದು ಇವರ ಬೌದ್ಧಿಕಮಟ್ಟ ತೋರಿಸುತ್ತದೆ ಎಂದು ಸಹೋದರ ಮಧು ಬಂಗಾರಪ್ಪ ವಿರುದ್ಧ ಕುಮಾರ ಬಂಗಾರಪ್ಪ ಕಿಡಿ ಕಾರಿದ್ದಾರೆ.
ಕ್ಷೇತ್ರದಲ್ಲಿ ನನ್ನ ತಂಗಿಯೇ ಅಭ್ಯರ್ಥಿಯಾಗಿದ್ದಾರೆ. ನನ್ನ ತಮ್ಮನೇ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾರೆ. ನನ್ನ ಭಾವ ಪ್ರಚಾರ ನಡೆಸುತ್ತಿದ್ದಾರೆ. ಕುಟುಂಬ ಯೋಜನೆಯಲ್ಲೇ ರಾಜಕಾರಣ ಮಾಡುತ್ತಿರುವವರು ಜನರಿಗೆ ನ್ಯಾಯ ಒದಗಿಸುತ್ತಾರಾ?. ಗೀತಾ ಶಿವರಾಜ್ ಕುಮಾರ್ ಅವರು ಸ್ಪರ್ಧೆ ಮಾಡುವುದೇ ಆಗಿದ್ದರೆ, ಶಿವಮೊಗ್ಗಕ್ಕೆ ತಮ್ಮ ಮತದಾನ ಗುರುತಿನ ಚೀಟಿ ಬದಲಾಯಿಸಿಕೊಳ್ಳುತ್ತಿದ್ದರು. ಆದರೆ ಅವರು ಆ ಕೆಲಸ ಮಾಡಿಲ್ಲ. ಅವರು ಮೇ.7 ಕ್ಕೆ ಶಿವಮೊಗ್ಗ ಮನೆ ಖಾಲಿ ಮಾಡುತ್ತಾರೋ? ಜೂನ್ 4 ಕ್ಕೆ ಖಾಲಿ ಮಾಡುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಇಡೀ ಚಲನಚಿತ್ರ ರಂಗ ಬೆಂಬಲಿಸಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಚಿತ್ರರಂಗ ಇವರಿಗೆ ಬೆಂಬಲಿಸಿದೆ ಎಂದಾದರೆ ನಾನು ಒಬ್ಬ ನಿರ್ಮಾಪಕ, ಕೆಲವು ಜನರು ಬಿಟ್ಟರೆ ಬೇರೆ ಯಾರೂ ಬಂದಿಲ್ಲ. ಚಲನಚಿತ್ರ ರಂಗದಲ್ಲಿ ತಮಗೆ ಹತ್ತಿರ ಇರುವವರ ಪರವಾಗಿ ಪ್ರಚಾರ ಮಾಡುವುದು ಸಹಜ. ಸುಮಲತಾ ಪರವಾಗಿ ಹಿಂದೆ ದರ್ಶನ್ ಪ್ರಚಾರ ಮಾಡಿದ್ದರು. ಈಗ ಮತ್ತೊಬ್ಬರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವರಿಗೆ ಪ್ರಾಥಮಿಕ ಶಿಕ್ಷಣದ ಅಗತ್ಯವಿದೆ ಎಂದು ಮಧು ಬಂಗಾರಪ್ಪ ವಿರುದ್ಧ ಕುಮಾರ ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಈಗ ವಾರಂಟಿ ಕಳೆದುಕೊಂಡಿದೆ: ಬಿ.ವೈ.ರಾಘವೇಂದ್ರ ಲೇವಡಿ
ನಮ್ಮ ಸರ್ಕಾರ ಇದ್ದಾಗ ದ್ವೇಷದ ರಾಜಕಾರಣ ಮಾಡಿರಲಿಲ್ಲ. ಕೇವಲ ಅಭಿವೃದ್ಧಿ ಬಗ್ಗೆಯೇ ಗಮನ ಕೇಂದ್ರಿಕರಿಸಿದ್ದೆವು. ಆದರೆ ಈಗ ದ್ವೇಷದ ರಾಜಕಾರಣವೇ ನೋಡುತ್ತಿದ್ದೇವೆ. ಕೇವಲ ದ್ವೇಷದ ರಾಜಕಾರಣದಿಂದಲೇ ಅಧಿಕಾರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರು ಅಂಕಿ ಅಂಶವನ್ನಿಟ್ಟುಕೊಂಡು ಮಾತನಾಡುತ್ತಿಲ್ಲ. ಅಭಿವೃದ್ಧಿ ಎಂಬುದು ರಾಜ್ಯದಲ್ಲೇ ಕಳೆದ ಒಂದು ವರ್ಷದಿಂದ ಮರೆಯಾಗಿ ಹೋಗಿದೆ. ನಿರ್ದಿಷ್ಟವಾಗಿ ಇಂತಹದ್ದೇ ಕೆಲಸ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರದವರು ಹೇಳುತ್ತಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕುಮಾರ ಬಂಗಾರಪ್ಪ ಕಿಡಿ ಕಾರಿದ್ದಾರೆ.
ಲೋಕಸಭಾ ಚುನಾವಣೆ ರಾಷ್ಟ್ರದ ದಿಕ್ಸೂಚಿಯಾಗಿದೆ. ಕೇವಲ ದಿಕ್ಸೂಚಿಯಲ್ಲದೇ ಪ್ರಪಂಚದ ಕಣ್ಣು ಭಾರತದ ಮೇಲಿದೆ. ರಾಜ್ಯದಲ್ಲಿ ನಾವು 14 ಸ್ಥಾನಗಳಲ್ಲಿ ಮುಂದೆ ಇದ್ದೇವೆ. ಮೊದಲ ಹಂತದ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಶಿವಮೊಗ್ಗದ ರಾಜಕಾರಣದಲ್ಲಿ ನಾವು ಕೆಲವು ಪಾಠ ಕಲಿತಿದ್ದೇವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ.