ದೇವೇಗೌಡರು ಎಂದ ಕೂಡಲೇ ನೆನಪಾಗೋದು ಮಣ್ಣಿನ ಮಗನ ಹೋರಾಟದ ಬದುಕಿನ ವಿವಿಧ ಮಜಲುಗಳು. ಆದರೆ, ಇದೀಗ ಕುಟುಂಬದ ಸದಸ್ಯರು ಟಿಕಿಟ್‌ಗೆ ಆಡುತ್ತಿರುವ ಜಗಳದಿಂದ ಬೇಸತ್ತಿದ್ದಾರಾ? 

- ಸುರೇಶ್ ಎ.ಎಲ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್

ಇದು ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುವ ಸಮಯ. ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಅವರ ಮಕ್ಕಳನ್ನೂ ನೋಡಿಕೊಳ್ತಾ, ಅವರ ಆಟಪಾಟಗಳನ್ನೂ ನೋಡಿಕೊಳ್ತಾ ಖುಷಿಖುಷಿಯಾಗಿ ಕಾಲ ಕಳೆಯುವ ವಿಶ್ರಾಂತ ಸಮಯವದು. ಇಲ್ಲಿಯ ತನಕ ಹೋರಾಡಿದ್ದಾಯ್ತು. ಹಠಕ್ಕೆ ಬಿದ್ದಿದ್ದು ಆಯ್ತು. ಅಧಿಕಾರಕ್ಕೆ ಅಂತಾ ಗುದ್ದಾಡಿ ಆಯ್ತು. ಎಲ್ಲವನ್ನೂ ನೋಡಿದ ಹಿರಿಯ ಜೀವ ಇದೀಗ ನೆಮ್ಮದಿಯಾಗಿ ಮೊಮ್ಮಕ್ಕಳ, ಮರಿಮಕ್ಕಳ ಆಠ ಪಾಠ ನೋಡ್ತಾ ನೆಮ್ಮದಿಯಾಗಿ ಕಾಲ ಕಳೆಯುವ ಸಮಯವದು. ಆದರೆ ಆಗುತ್ತಿರೋದೇನು? 

ಸಹಜವಾಗಿಯೇ ಎಂಭತ್ತು ತೊಂಭತ್ತರ ಆಸುಪಾಸಿನಲ್ಲಿ ವಯೋಸಹಜ ಅನಾರೋಗ್ಯ, ವಿಶ್ರಾಂತಿ ಬಯಸುವ ದೇಹ, ಜೀವನದ ಸಂಧ್ಯಾ ಕಾಲದಲ್ಲಿ ಮಕ್ಕಳು, ಮೊಮ್ಮಕ್ಕಳಿಂದ ನೆಮ್ಮದಿ ಇವಿಷ್ಟೇ ಅಲ್ಲವೇ ಯರಾದ್ರೂ ಬಯಸೋದು? ಆದ್ರೆ ಜೀವಮಾನದ ಉದ್ದಕ್ಕೂ ಹೋರಾಟವನ್ನೇ ಬದುಕಾಗಿಸಿಕೊಂಡ, ರಾಜಕಾರಣವನ್ನೇ ಉಸಿರಾಗಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡರು ಮಾತ್ರಾ ಈಗಲೂ ರಾಜಕಾರಣ ಇಲ್ಲದೇ ಬದುಕಲಿಕ್ಕೆ ಪರಿಸ್ಥಿತಿ ಬಿಡ್ತಾನೇ ಇಲ್ಲ. 

ರಾಜಕಾರಣವೇ ಉಸಿರು:
ಎಸ್. ಮಾಜಿ ಪ್ರಧಾನಿ ದೇವೇಗೌಡರ ಜೀವನವೇ ಹೀಗೆ. ಬದುಕಿನ ಉದ್ದಕ್ಕೂ ರಾಜಕಾರಣವನ್ನೇ ಹಾಸಿಕೊಂಡು, ಅದನ್ನೇ ಹೊದ್ದುಕೊಂಡು ಮಲಗಿದ ದೇವೇಗೌಡರು ಇತ್ತಿಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದೇ ಕಡಿಮೆ. ಅವರ ವಯಸ್ಸು, ಆರೋಗ್ಯ ಅವರಿಗೆ ಸಪೋರ್ಟ್ ಮಾಡ್ತಾ ಇಲ್ಲ ನಿಜ. ಇಲ್ಲದಿದ್ದರೆ ಈ ಚುನಾವಣೆಯ ಕಾಲದಲ್ಲಿ ಅವರು ಈ ರೀತಿಯಾಗಿ ತೆರೆಮರೆಯಲ್ಲಿ ಉಳಿದು ಬಿಡೋದನ್ನು ಯಾರಾದ್ರೂ ಊಹೆಯಾದ್ರೂ ಮಾಡೋಕೆ ಸಾದ್ಯವಿತ್ತಾ? ಖಂಡಿತಾ ಇಲ್ಲ.

ರಾಜ್ಯದ ಕಬ್ಬಿಣ ಮತ್ತು ಉಕ್ಕು ಸ್ಥಾವರ ಉಳಿಸಲು ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

 ದೇವೇಗೌಡರ ರಾಜಕೀಯ ನಡೆಯನ್ನು ಯಾರೂ ಊಹೆ ಕೂಡಾ ಮಾಡೋಕೆ ಸಾದ್ಯವಿಲ್ಲ, ಅದೇ ರೀತಿ ಕರ್ನಾಟಕ ರಾಜ್ಯದ ರಾಜಕೀಯ ಕೂಡಾ ದೇವೇಗೌಡರ ಅಥವಾ ಆವರ ಕುಟುಂಬದ ಸುತ್ತಲೇ ಸುತ್ತುತ್ತದೆಯೇ ವಿನಹಾ ಬೇರೆ ಎಲ್ಲೂ ಹೋಗಲು ಸಾದ್ಯವೇ ಇಲ್ಲ. ಇಲ್ಲಿ ಗೌಡರ ಕುಟುಂಬವನ್ನು ಕಡೆಗಣಿಸಿ ರಾಜಕಾರಣ ಸಾದ್ಯವೇ ಇಲ್ಲ. ಅವರ ಅಪ್ಪನಾಣೆ ಅಧಿಕಾರಕ್ಕೆ ಬರೋಕೆ ಸಾದ್ಯವೇ ಇಲ್ಲ ಅಂದವರೂ ಇವರ ಮುಂದೆ ಬಂದು ಕೈ ಕಟ್ಟಿ ನಿಂತು ಕೊಂಡಿದ್ದಾರೆ. ಇವರನ್ನು ಲೆಕ್ಕಕ್ಕೇ ತೆಗೆದುಕೊಳ್ಳದವರೂ ರಾಜಕೀಯ ಲೆಕ್ಕಾಚಾರ ಹಾಕಿಕೊಂಡೇ ಇವರ ಮನೆ ಬಾಗಿಲಿಗೆ ಬಂದವರೂ ಇದ್ದಾರೆ. 

ರಾಜ್ಯದಲ್ಲಿ ಇರೋದೇ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳು. ಜೆಡಿಎಸ್ ಲೆಕ್ಕಕ್ಕೇ ಇಲ್ಲ ಅಂದವರೂ ಇವರ ಮನೆ ಬಾಗಿಲಿಗೆ ಬಂದು ಕಾದು ನಿಂತಿದ್ದಾರೆ. ಅದು ಕಾಂಗ್ರೆಸ್ ಆಗಿರಲಿ, ಅಥವಾ ಬಿಜೆಪಿ ಆಗಿರಲಿ ರಾಜ್ಯದಲ್ಲಿ ಶರಂಪರ ಜಗಳ ಆಡಿಕೊಂಡಿದ್ದರೂ ಸರಿಯೇ, ರಾಷ್ಟಮಟ್ಟದಲ್ಲಿ ಇದೇ ಪಕ್ಷಗಳ ನಾಯಕರು ಇವರನ್ನು ಕರೆದು ಕೂರಿಸಿ ಕೈ ಹಿಡಿದು, ಕೈಮುಗಿದು ಹೆಗಲು ಕೊಟ್ಟು ನಡೆಸಿಕೊಂಡು ರಾಜ್ಯದಲ್ಲಿ ಇವರ ಬಗ್ಗೆ ಹುಷಾರಾಗಿರಿ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ. ದೇವೇಗೌಡರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಎಲ್ಲಿ ಸ್ವಿಚ್ ಹಾಕಿದ್ರೆ , ಎಲ್ಲಿ ದೀಪ ಬೆಳಗುತ್ತೆ ಅಂತಾ.. ಆ ವಿಚಾರದಲ್ಲಿ ಅವರೊಬ್ಬ ನುರಿತ ನಿಪುಣ ರಾಜಕಾರಣಿ ಅಂದ್ರೆ ತಪ್ಪಾಗಲಾರದು.

ಕುಟುಂಬ ರಾಜಕಾರಣ ಶಾಪ:
ರಾಷ್ಟ್ರೀಯ ಪಕ್ಷಗಳನ್ನೇ ತಮ್ಮ ಬೆರಳ ತುದಿಯಲ್ಲಿ ಇಟ್ಟುಕೊಂಡು ಕುಣಿಸಬಲ್ಲ ತಾಖತ್ತು ಇರೋ ದೇವೇಗೌಡರಿಗೆ ಕುಟುಂಬ ರಾಜಕಾರಣ ಅನ್ನೋ ಶಾಪವೊಂದು ಅಂಟಿಕೊಂಡು ಅವರ ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡುತ್ತಿರೋದಂತೂ ಸುಳ್ಳಲ್ಲ. ಎಣಿಸಿ ಲೆಕ್ಕ ಹಾಕಿದರೂ ಅವರದ್ದೇ ಕುಟುಂಬದ ಹತ್ತು ಜನರಾದರೂ ರಾಜಕಾರಣದಲ್ಲಿ ಸಿಗ್ತಾರೆ. ಒಂದು ಕಡೆ ರಾಷ್ಟ್ರೀಯ ಪಕ್ಷಗಳ ವಿರುದ್ದದ ಸೆಣಸಾಟ, ಮತ್ತೊಂದು ಕಡೆ ಕಾರ್ಯಕರ್ತರನ್ನು ಸಂಬಾಳಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ. ಇವೆರಡರ ನಡುವೆ ದೇವೇಗೌಡರನ್ನು ಕಾಡಿದ್ದು ತಮ್ಮದೇ ಮಕ್ಕಳ ನಡುವಿನ ಮುಸುಕಿನ ಗುದ್ದಾಟ ಎಂದರೆ ತಪ್ಪಾಗಲಾರದು.

ಇಡೀ ದೇಶವನ್ನು ಬೇಕಾದ್ರೂ ಸಂಬಾಳಿಸಬಲ್ಲ ಸಾಮರ್ಥ್ಯವಿರುವ ವ್ಯಕ್ತಿಯೊಬ್ಬರಿಗೆ ತಮ್ಮ ಕುಟುಂಬದ ವಿಚಾರದಲ್ಲಿ ಮಾತ್ರಾ ಅಂತಹಾ ರಿಸ್ಕ್ ತಗೊಳೋಕೆ ಆಗ್ತಿಲ್ಲ. ಇತ್ತ ರಾಜಕೀಯವಾಗಿ ಸಾಕಷ್ಟು ವರ್ಚಸ್ಸು ಹೊಂದಿರುವ ಕುಮಾರಸ್ವಾಮಿ ಮತ್ತು ಅವರ ಕುಟುಂಬ, ಅತ್ತ ಹಾಸನದಲ್ಲಿ ತಮ್ಮ ಕುಟುಂಬದ ಛಾಪನ್ನು ಬಹಳಷ್ಟು ಭದ್ರವಾಗಿ ಮೂಡಿಸಿರುವ ರೇವಣ್ಣ ಮತ್ತವರ ಕುಟುಂಬ,. ಹೇಳಿ ಕೇಳಿ ಇಬ್ಬರೂ ಮುದ್ದಿನ ಮಕ್ಕಳು,. ಯಾರನ್ನೂ ಬಿಟ್ಟುಕೊಡುವ ಹಾಗಿಲ್ಲ. 

ಕರ್ನಾಟಕ ಕುರುಕ್ಷೇತ್ರದ ಹೊಸ್ತಿಲಲ್ಲಿ “ಕುಮಾರ ಯಜ್ಞ”: ಎಚ್‌ಡಿಕೆ ಮಹಾಯಾಗದ ಹಿಂದಿರುವ 2 ಮಹಾಸಂಕಲ್ಪಗಳು ಹೀಗಿದೆ..

ಎಲ್ಲರಿಗೂ ರಾಜಕೀಯ ಮಹತ್ವಾಕಾಂಕ್ಷೆ. ಇಲ್ಲಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಇಬ್ಬರೂ ರಾಜಕೀಯವಾಗಿ ಮಿಂಚ್ತಾ ಇದ್ರೆ, ಪುತ್ರ ನಿಖಿಲ್ ಕೂಡಾ ತಾನೇನೂ ಕಡಿಮೆಯಲ್ಲ ಅನ್ನೋ ಹಾಗೆ ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಂದು ಕೈ ನೋಡಿದವರೇ.. ಆದ್ರೆ ತಾನೊಂದು ಬಗೆದರೆ, ದೈವ ಮತ್ತೊಂದು ಬಗೆಯಿತು ಅನ್ನೋ ಹಾಗೆ ನಿಖಿಲ್ ದಯನೀಯವಾಗಿ ಸೋತಿದ್ದೇ ಕುಮಾರಸ್ವಾಮಿ ಕುಟುಂಬಕ್ಕೆ ಎಲ್ಲಿಲ್ಲದ ಮರ್ಮಾಘಾತ ಆದಂತಾಯಿತು. 

ಮೊಮ್ಮಗಿನಿಗೆ ಹಾಸನ ಬಿಟ್ಟು ಕೊಟ್ಟ ಅಜ್ಜ:
ಅಷ್ಟು ಹೊತ್ತಿಗಾಗಲೇ ರೇವಣ್ಣ ಪುತ್ರ ಪ್ರಜ್ವಲ್ ಕೂಡಾ ರಾಜಕೀಯ ಮಹತ್ವಾಕಾಂಕ್ಷೆ ಇಟ್ಟುಕೊಂಡು ವಿಧಾನಸಭೆ ಪ್ರವೇಶ ಮಾಡುವ ಕನಸು ಕಂಡಿದ್ದಾಗಿತ್ತು. ಯಾವುದೂ ಕೈಗೂಡದೇ ಇದ್ದಾಗ ಕಡೆಗೆ ದೇವೇಗೌಡರೇ ಮದ್ಯ ಪ್ರವೇಶ ಮಾಡಿ, ತಾವು ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರವನ್ನೇ ಮೊಮ್ಮಗನಿಗಾಗಿ ತ್ಯಾಗ ಮಾಡಿದ್ದಾಯ್ತು. ತ್ಯಾಗ ಮಾಡಿದ ಫಲವಾಗಿ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಿ, ತಾವೇ ಖುದ್ದು ಸೋಲಿನ ರುಚಿಯನ್ನೂ ನೋಡಿದ್ದಾಯ್ತು. ಅದೇ ಮೊದಲ ಪೆಟ್ಟು.. ಅಲ್ಲಿಂದ ದೇವೇಗೌಡರು ಚೇತರಿಸಿಕೊಳ್ಳಲು ಆಗಲೇ ಇಲ್ಲ.

ಅದಾದ ಮೇಲೆ ರಾಜ್ಯಸಭೆಗೆ ಆಯ್ಕೆಯಾಗಿ ಹೋದರಾದ್ರೂ, ತುಮಕೂರಿನ ಸೋಲು ದೇವೇಗೌಡರನ್ನು ಮತ್ತೆ ಮೊದಲಿನ ಹೋರಾಟದ ಸೇನಾನಿಯನ್ನಾಗಿ ರಾಜ್ಯದ ಜನರಿಗೆ ತೋರಿಸಲೇ ಇಲ್ಲ. ಹಾಗೋ ಹೀಗೋ ಇದ್ದ ದೇವೇಗೌಡರಿಗೆ ಮತ್ತೆ ಯಾವಾಗ ಹಾಸನದ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ, ರೇವಣ್ಣ ಕುಟುಂಬದ ನಡುವೆ ದಾಯಾದಿ ಕಲಹ ಶುರುವಾಯ್ತೋ ಆಗಿನಿಂದಲೇ ಆರಂಭವಾಗಿದ್ದು ನಿಜವಾದ ಪೀಕಲಾಟ.

ಮೊದಲಿನಿಂದಲೂ ರೇವಣ್ಣ ಮತ್ತು ಅವರ ಕುಟುಂಬ ಅಂದ್ರೆ ದೇವೇಗೌಡರಿಗೆ ಅದೇನೋ ಪ್ರೀತಿ, ಅಕ್ಕರೆ,. ಆದ್ರೆ ಹಾಗಂತ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳುವಂತೆಯೂ ಇಲ್ಲ. ರಾಜಕೀಯವಾಗಿ ಬೆಳೆಯುತ್ತಿದ್ದ ಪ್ರಜ್ವಲ್‌ಗಾಗಿ ತಾವು ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದೇ ಇದಕ್ಕೆ ಸಾಕ್ಷಿ. ಇದೀಗ ಮತ್ತೆ ಭವಾನಿ ರೇವಣ್ಣ ಎದ್ದು ಕುಳಿತಿರುವುದು ಕುಮಾರಸ್ವಾಮಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ತಮ್ಮ ರಾಜಕೀಯ ಹಾದಿಗೆ ಕುಮಾರಸ್ವಾಮಿ ಅಡ್ಡವಾಗಬಹುದೆಂಬ ಕಾರಣಕ್ಕೇ ದೇವೇಗೌಡರ ಅಂಗಳಕ್ಕೇ ಬಂದು ಕುಳಿತಿರುವ ರೇವಣ್ಣ ಕುಟುಂಬ ಶತಾಯಗತಾಯ ಹಾಸನ ವಿಧಾನಸಬಾ ಕ್ಷೇತ್ರದಿಂದ ಸ್ಪರ್ಧೆ ಮಾಡಲೇಬೇಕು ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ. ಆದ್ರೆ ಮಾಜಿ ಶಾಸಕ ಎಚ್ ಎಸ್ ಪ್ರಕಾಶ್ ಅವರ ಪುತ್ರ ಸ್ವರೂಪ್ ಗೆ ಮಾತು ಕೊಟ್ಟಿರುವ ಕುಮರಸ್ವಾಮಿ ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಪರಿಸ್ಥಿತಿಯಲ್ಲಿ ಇದ್ದಾರೆ. 

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ದೇವೇಗೌಡರ ಅಂಗಳದಲ್ಲಿ ಚೆಂಡು:
ನೇರವಾಗಿ ದೇವೇಗೌಡರ ಅಂಗಳಕ್ಕೆ ಚೆಂಡನ್ನು ದಾಟಿಸಿರುವ ರೇವಣ್ಣ ಕುಟುಂಬ ಯಾವುದೇ ಕಾರಣಕ್ಕೂ ಹಿಡಿದ ಪಟ್ಟನ್ನು ಸದ್ಯಕ್ಕಂತೂ ಸಡಿಲಿಸುವ ಹಾಗಂತೂ ಇಲ್ಲ. ಹಾಗೆ ನೋಡಿದ್ರೆ, ಭವಾನಿ ರೇವಣ್ಣ ಕಳೆದ ವಿಧಾನಸಭಾ ಚುನಾವಣೆ ಅವಧಿಯಲ್ಲೇ ಸ್ಪರ್ಧೆ ಮಾಡಬೇಕಿತ್ತು. ಆದ್ರೆ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿಗೆ ಹೆದರಿದ ಕುಮಾರಸ್ವಾಮಿ ಭವಾನಿ ರೇವಣ್ಣಗೆ ಟಿಕೆಟ್ ನಿರಾಕರಿಸಿದ್ರು. ಈ ಸಲವಂತೂ ಯಾವುದೇ ಕಾರಣಕ್ಕೂ ಭವಾನಿ ರೇವಣ್ಣ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಇದರ ನಡುವೆ ಅಮ್ಮ ಭವಾನಿ ಪರ ಪ್ರಬಲವಾಗಿ ನಿಂತಿರುವ ಪ್ರಜ್ವಲ್ ಹಾಗೂ ಸೂರಜ್.. ಹಾಸನದ ಮಟ್ಟಿಗೆ ಇಬ್ಬರೂ ಪ್ರಬಲವಾಗಿ ಬೆಳೆದಿರುವ ಮತ್ತು ಬೆಳೆಯುತ್ತಿರುವ ಯುವ ರಾಜಕಾರಣಿಗಳು. 

ಇತ್ತ ದೇವೇಗೌಡರಿಗೆ ವಯೋಸಹಜ ಅನಾರೋಗ್ಯ, ಮೊದಲಿನ ಹಾಗೆ ಲವಲವಿಕೆಯಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೂ ಆಗ್ತಿಲ್ಲ. ಈ ಸಲದ ವಿಧಾನಸಭಾ ಚುನಾವಣೆಯಲ್ಲಂತೂ ಮಾಡು, ಇಲ್ಲವೇ ಮಡಿ ಎಂಬಂಥ ಪರಿಸ್ಥಿತಿ. ಕುಮಾರಸ್ವಾಮಿ ಏಕಾಂಗಿಯಾಗಿ ಪಂಚರತ್ನ ಯಾತ್ರೆಯಲ್ಲಿ ತೊಡಗಿಸಿಕೊಂಡಿರುವುದು. ಅಷ್ಟೋ ಇಷ್ಟೋ ಪಕ್ಷದ ಪರಿಸ್ಥಿತಿ ಒಂದಷ್ಟು ಸುಧಾರಿಸುತ್ತಿದೆ ಅನ್ನುವಂತಾಗುವಷ್ಟರಲ್ಲಿ ದಿಢೀರನೆ ಮೇಲೆದ್ದು ಕುಳಿತ ಹಾಸನ ಕಗ್ಗಂಟು. ದೇವೇಗೌಡರೇ ಅಂತಿಮ ತೀರ್ಮಾನ ಮಾಡ್ತಾರೆ ಎನ್ನುತ್ತಿರುವ ರೇವಣ್ಣ ಕುಟುಂಬ ಒಂದು ಕಡೆಯಾದ್ರೆ, ಪದೇ ಪದೇ ದೇವೇಗೌಡರನ್ನು ಈ ವಿಚಾರಕ್ಕೆ ಎಳೆದು ತರಬೇಡಿ ಅನ್ನುತ್ತಿರುವ ಕುಮಾರಸ್ವಾಮಿ ಒಂದು ಕಡೆ. 

ಇದೆಲ್ಲವನ್ನೂ ಗಮನಿಸುತ್ತಿದ್ದರೆ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ ಒಂದೇ. ಈ ವಯಸ್ಸಲ್ಲೂ ದೇವೇಗೌಡರಿಗೆ ಈ ನೋವು ಬೇಕಾ?