Asianet Suvarna News Asianet Suvarna News

ಬಿಜೆಪಿಗೆ ಕಾಂಗ್ರೆಸ್‌ ಕಂಡರೆ ಭಯ: ಸಿದ್ದರಾಮಯ್ಯ ತಿರುಗೇಟು

ಕಾಂಗ್ರೆಸ್‌ ಬಗ್ಗೆ ಭಯ ಕಾಡುತ್ತಿರುವ ಕಾರಣಕ್ಕಾಗಿ ರಾಜ್ಯ ಬಿಜೆಪಿ ಮುಖಂಡರು ಅಮಿತ್‌ ಶಾ ಮತ್ತು ನಡ್ಡಾ ಅವರನ್ನು ಪದೇಪದೆ ರಾಜ್ಯಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. 

Former CM Siddaramaiah Slams On BJP Govt At Kalaburagi gvd
Author
First Published Jan 28, 2023, 9:28 PM IST

ಕಲಬುರಗಿ (ಜ.28): ಕಾಂಗ್ರೆಸ್‌ ಬಗ್ಗೆ ಭಯ ಕಾಡುತ್ತಿರುವ ಕಾರಣಕ್ಕಾಗಿ ರಾಜ್ಯ ಬಿಜೆಪಿ ಮುಖಂಡರು ಅಮಿತ್‌ ಶಾ ಮತ್ತು ನಡ್ಡಾ ಅವರನ್ನು ಪದೇಪದೆ ರಾಜ್ಯಕ್ಕೆ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿರುವ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ತೆರಳಲು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭ್ರಷ್ಟಾಚಾರ ಮತ್ತು ಜನವಿರೋಧಿ ಕೆಲಸ ಮಾಡುತ್ತಿರುವ ಕಾರಣಕ್ಕಾಗಿ ಬಿಜೆಪಿಯವರಿಗೆ ಈಗಾಗಲೇ ಭಯ ಶುರುವಾಗಿದೆ. 

ಹಾಗಾಗಿ ಮೇಲಿಂದ ಮೇಲೆ ಮೋದಿ, ಶಾ ಮತ್ತು ನಡ್ಡಾ ರಾಜ್ಯಕ್ಕೆ ಬರುವಂತೆ ಮಾಡಿಕೊಂಡಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ನಮಗ್ಯಾಕೆ ಅವರ ಭಯ ಇರುತ್ತೆ ಹೇಳಿ? ಎಂದು ಮರುಪ್ರಶ್ನೆ ಹಾಕಿದರು. ಇವತ್ತಿನವರೆಗೂ ಜನರಿಗೆ ಒಂದು ಮನೆ ಕೊಡಲು ಬಿಜೆಪಿ ಅವರಿಗೆ ಆಗುತ್ತಿಲ್ಲ. ಹಾಗಾಗಿ ಅವರಿಗೆ ಈ ಬಾರಿ ಗೆಲ್ಲುತ್ತೇವೋ ಇಲ್ಲವೋ ಎನ್ನುವ ಭಯ ಶುರುವಾಗಿದೆ ಎಂದರು. ಒಂದು ಚೆಡ್ಡಿ ಕೊಂಡರೆ ಮತ್ತೊಂದು ಚೆಡ್ಡಿ ಫ್ರೀ ಎನ್ನುವಂತಹ ಭಾಗ್ಯಗಳನ್ನು ಕಾಂಗ್ರೆಸ್‌ ಘೋಷಿಸುತ್ತಾ ಹೊರಟಿದೆ ಎನ್ನುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ ನಾನು ಕುಮಾರಸ್ವಾಮಿ ಬಗ್ಗೆ ಮಾತಾಡಲ್ಲ. 

ಸಿದ್ದರಾಮಯ್ಯ ಯಾದಗಿರಿಯಿಂದ ಸ್ಪರ್ಧಿಸಿದರೆ 1 ಕೋಟಿ ರು. ದೇಣಿಗೆ: ಆಹ್ವಾನ ನೀಡಿದ​ ಬಿಜೆಪಿ ಮುಖಂಡ

ಅವರೇನಿದ್ದರೂ ಬರೀ ಸುಳ್ಳುಗಳನ್ನು ಹೇಳುತ್ತಾರೆ. ಇಷ್ಟಕ್ಕೂ ಗುಲ್ಬರ್ಗ, ಮುಂಬೈ-ಕರ್ನಾಟಕದಲ್ಲಿ ಜೆಡಿಎಸ್‌ ಎಲ್ಲಿದೆ? ಎಂದು ಪ್ರಶ್ನಿಸಿದರು. ಇನ್ನು ಮಾಜಿ ಸಿಎಂ ಎಚ್‌ಡಿಕೆ ವಿಷಯದಲ್ಲಿ ಸಿದ್ದರಾಮಯ್ಯ ಅವರು ಸಾಫ್ಟ್‌ ಕಾರ್ನರ್‌ ತೋರುತ್ತಾರಲ್ಲ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಗರಂ ಮುಖ ಪ್ರದರ್ಶನ ಮಾಡಿ ಮುಗುಮ್ಮಾದರು. ಪ್ರಜಾಧ್ವನಿ ಕುರಿತು ಪ್ರತಿಕ್ರಿಯಿಸುತ್ತಾ ಪ್ರಜಾಧ್ವನಿ ಚೆನ್ನಾಗಿ ನಡೆಯುತ್ತಿದೆ. ಜನ ಬೆಂಬಲ ಚೆನ್ನಾಗಿದೆ. ಪ್ರಜಾಧ್ವನಿಗೆ ಜನ ಉತ್ಸಾಹ ತೋರುತ್ತಿದ್ದಾರೆ. ಸಮಯದ ಅಭಾವದಿಂದಾಗಿ ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡು ಪ್ರಜಾಧ್ವನಿ ಯಾತ್ರೆಗೆ ಹೋಗುತ್ತೇವೆ ಎಂದರು.

ಈ ಬಾರಿ ನಮ್ಮ ಸರ್ಕಾರ ಬರೋದು ಖಚಿತ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರೋದ ಗ್ಯಾರೆಂಟಿ. ಆಗ ಜಾನಪದ ಕಲೆಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವದ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್‌ ಆಯೋಜಿಸಿದ್ದ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶಗಳು ಕಲೆಗಳ ನೆಲೆಬೀಡಾಗಿದೆ. ಪ್ರತಿಯೊಬ್ಬರ ಜೀವನದಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಗ್ರಾಮೀಣರ ಮನರಂಜನೆಯಾದ ಕಲೆಯನ್ನು ಗ್ರಾಮೀಣ ಜನರೇ ಶತ ಶತಮಾನಗಳಿಂದ ಉಳಿಸಿಕೊಂಡು ಬಂದಿದ್ದಾರೆ. 

ಯಾದಗಿರಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ಯಾತ್ರೆ: ಬಿಜೆಪಿ ವಿರುದ್ಧ ಸಿದ್ದು-ಡಿಕೆಶಿ ವಾಗ್ದಾಳಿ

ಆದರೆ ಈಗ ಜಾನಪದವನ್ನು ಕಲಿಯುವವರು ಮೊದಲಿನಂತೆ ಹಳ್ಳಿಗಳಲ್ಲಿ ಯಾರೂ ಇಲ್ಲ. ಕಲಿಸುವವರೂ ಸಿಗುತ್ತಿಲ್ಲ. ಹೀಗಾಗಿ, ಓದಿನ ಜೊತೆಗೆ ಇಷ್ಟದ ಕಲೆ ಕಲಿಯಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ವೈವಿಧ್ಯಮಯ ಜಾನಪದ ಕಲಾಪ್ರಕಾರಗಳು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಇದೆ. ಆ ಜಾನಪದ ಕಲೆಯನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಸಿದ್ದರಾಮಯ್ಯನ ಹುಂಡಿಯಲ್ಲಿ ನಂಜೇಗೌಡ ಎಂಬವರು 30 ಮಂದಿಗೆ ವೀರಮಕ್ಕಳ ಕುಣಿತ ಕಲಿಸಿದರು. ಅವರೇ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡಿಸಿದರು. ಅವರು ಇಲ್ಲದಿದ್ದರೆ ಸರ್ಕಾರಿ ಶಾಲೆಗೆ ನಾನು ಸೇರುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗುತ್ತಿರಲೂ ಇಲ್ಲ. ನನಗೆ ಗುರುಗಳಾಗಿದ್ದ ನಂಜೇಗೌಡ, ರಾಜಪ್ಪ ಮತ್ತು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರನ್ನು ಮರೆಯುವಂತಿಲ್ಲ. ಇದು ನನ್ನ ಗುರುಪರಂಪರೆ ಎಂದರು.

Follow Us:
Download App:
  • android
  • ios