ಅಧಿಕಾರಕ್ಕೆ ಬಂದ 24 ತಾಸಲ್ಲಿ ಬಂದರವಾಡ ಏತ ನೀರಾವರಿಗೆ ಚಾಲನೆ: ಕುಮಾರಸ್ವಾಮಿ
ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಾರ್ಥ ಹಿತಾಸಕ್ತಿಯಿಂದ ರಾಜ್ಯದ ಜನರ ಭವಿಷ್ಯ ಹಾಳು ಮಾಡಿದ್ದಾರೆ. ಯುವಕರ ಕನಸುಗಳು ಕಮರುವಂತೆ ಮಾಡಿದ್ದಾರೆ. ನಿರೂದ್ಯೋಗ, ಬೆಲೆ ಏರಿಕೆ, ಖಾಸಗೀಕರಣ, ಧರ್ಮ, ಧರ್ಮಗಳ ನಡುವೆ ಅಶಾಂತಿ ಹುಟ್ಟಿಸಿ ಕೋಮು ದಳ್ಳುರಿಯಲ್ಲಿ ಬಡವರ ಮಕ್ಕಳನ್ನು ಬಲಿ ಕೊಡುವ ಕೆಲಸ ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ: ಕುಮಾರಸ್ವಾಮಿ
ಚವಡಾಪುರ(ಜ.13): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆ ಅಫಜಲ್ಪುರ ಮತಕ್ಷೇತ್ರ ತಲುಪಿದ್ದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಕರ್ಜಗಿ ಗ್ರಾಮದಲ್ಲಿ ಹತ್ತಿಯಿಂದ ಮಾಡಿದ್ದ ಬೃಹತ್ ಹಾರದಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸ್ವಾಗತಿಸಿಕೊಳ್ಳಲಾಯಿತು.
ಎಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಾರ್ಥ ಹಿತಾಸಕ್ತಿಯಿಂದ ರಾಜ್ಯದ ಜನರ ಭವಿಷ್ಯ ಹಾಳು ಮಾಡಿದ್ದಾರೆ. ಯುವಕರ ಕನಸುಗಳು ಕಮರುವಂತೆ ಮಾಡಿದ್ದಾರೆ. ನಿರೂದ್ಯೋಗ, ಬೆಲೆ ಏರಿಕೆ, ಖಾಸಗೀಕರಣ, ಧರ್ಮ, ಧರ್ಮಗಳ ನಡುವೆ ಅಶಾಂತಿ ಹುಟ್ಟಿಸಿ ಕೋಮು ದಳ್ಳುರಿಯಲ್ಲಿ ಬಡವರ ಮಕ್ಕಳನ್ನು ಬಲಿ ಕೊಡುವ ಕೆಲಸ ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿವೆ. ಜನ ನೆಮ್ಮದಿ ಕಳೆದುಕೊಂಡು ಭ್ರಮನಿರಸನಗೊಂಡಿದ್ದಾರೆ. ಹೀಗಾಗಿ ನೆಮ್ಮದಿಯ ದಿನಗಳು ಮತ್ತೆ ಬೇಕಾದರೆ ಜೆಡಿಎಸ್ ಪಕ್ಷವೊಂದೇ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಇದೊಂದು ಬಾರಿ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ನಿಮ್ಮ ಕನಸುಗಳನ್ನು ನನಸಾಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ತೋರಿಸುತ್ತೇನೆ ಎಂದರು.
ನಾಲ್ಕು ತಿಂಗಳ ತಡೀರಿ, ನಮ್ದೇ ಸರ್ಕಾರ ಬರ್ತದ ನಿಮಗೆಲ್ಲಾ ಸಹಾಯ ಮಾಡ್ತೀನಿ; ರೈತರಿಗೆ ಎಚ್‌ಡಿಕೆ ಅಭಯ
ಸಮೃದ್ಧ ರಾಜ್ಯ, ಸಮಗ್ರ ಅಭಿವೃದ್ಧಿಗಾಗಿ ನಮ್ಮ ಪಕ್ಷದಿಂದ ಪಂಚರತ್ನ ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಬಡವರ ಬದುಕು ಹಸನಾಗಿಸುವುದಾಗಿದೆ. ರೈತರು ಸ್ವಾವಲಂಬಿ ಬದುಕು ನಡೆಸಬೇಕು, ನಿರೂದ್ಯೋಗಿಗಳು ಉದ್ಯೋಗ ಕಲ್ಪಿಸುವುದು, ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಕಲ್ಪಿಸುವುದು ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಜನರ ಸರ್ಕಾರ, ಜನಪರ ಆಡಳಿತವನ್ನು ನೀಡುತ್ತೇವೆ ಎಂದರು.
ಇನ್ನೂ ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಅಫಜಲ್ಪುರ ತಾಲೂಕಿನ ಬಂದರವಾಡ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿ ರೈತರ ಬವಣೆ ದೂರವಾಗಿಸುವ ಕೆಲಸ ಮಾಡುತ್ತೇನೆ. ಅಫಜಲ್ಪುರ ತಾಲೂಕಿನಲ್ಲಿ ಈ ಹಿಂದೆ ನಮ್ಮ ತಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಸೊನ್ನ ಏತ ನೀರಾವರಿಗೆ ಅಡಿಗಲ್ಲು ನೇರವೇರಿಸಿದ್ದರ ಫಲವಾಗಿ ತಾಲೂಕಿನಲ್ಲಿ ಸ್ವಲ್ಪ ನೀರಾವರಿಯಾಗಿದೆ. ಈಗ ಇನ್ನೊಂದು ಅವಕಾಶ ನೀಡಿದರೆ ತಾಲೂಕಿನಲ್ಲಿ ಸಂಪೂರ್ಣವಾಗಿ ನೀರಾವರಿ ಮಾಡಿ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ಜೆಡಿಎಸ್ ಅಭ್ಯರ್ಥಿ ಶಿವಕುಮಾರ ನಾಟಿಕಾರ ಮಾತನಾಡಿ, ಹಾಲಿ ಮಾಜಿ ಶಾಸಕರು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ತಾಲೂಕಿನ ಜನರ ಹಿತ ಬಲಿ ಕೊಟ್ಟಿದ್ದಾರೆ. ಹೊಂದಾಣಿಕೆ ರಾಜಕಾರಣ ಮಾಡುತ್ತಾ ಅಭಿವೃದ್ಧಿಗಾಗಿ ಬರುವ ಅನುದಾನವನ್ನು 60-40 ಅನುಪಾತದಲ್ಲಿ ಹಂಚಿಕೊಂಡು ನುಂಗಿ ನೀರು ಕುಡಿಯುತ್ತಿದ್ದಾರೆ. ಇವರಿಂದ ತಾಲೂಕಿನ ಅಭಿವೃದ್ದಿಯಾಗುವುದಿಲ್ಲ. ನಾನು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊತ್ತು ಸಾಂಸಾರಿಕ ಜೀವನವನ್ನು ತ್ಯಾಗ ಮಾಡಿ ನಿಮ್ಮ ಸೇವೆಗೆ ಅಣಿಯಾಗಿದ್ದೇನೆ. ಹೀಗಾಗಿ ನನಗೊಂದು ಅವಕಾಶ ಕೊಟ್ಟರೆ ನಿಮ್ಮ ಮನೆ ಮಗನಾಗಿ ಪ್ರಾಮಾಣಿಕವಾಗಿ ನಿಮ್ಮ ಸೇವೆ ಸಲ್ಲಿಸುತ್ತೇನೆ ಎಂದರು.
ಉತ್ತರ ಕರ್ನಾಟಕದಲ್ಲಿ 35 ಕ್ಷೇತ್ರ ಗೆಲ್ಲುವ ಸಂಕಲ್ಪ: ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ
ಬಂಡೆಪ್ಪ ಖಾಶೆಂಪೂರ ಮಾತನಾಡಿ, ಧರ್ಮ ದಂಗಲ್ ಮಾಡಿಸುತ್ತಾ ಜನರ ನೆಮ್ಮದಿ ಹಾಳು ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿಗರನ್ನು ಕಿತ್ತೊಗೆದು ಸರ್ವ ಜನಾಂಗದ ಶಾಂತಿಯ ತೋಟ ಕಟ್ಟುವ ಕನಸು ಹೊತ್ತ ಕುಮಾರಣ್ಣನವರ ಕೈ ಬಲ ಪಡಿಸುವ ಕೆಲಸ ಮತದಾರರು ಮಾಡಿದರೆ ನಿಜಕ್ಕೂ ರಾಜ್ಯ ಅಭಿವೃದ್ದಿ ಪಥದತ್ತ ಸಾಗಲಿದೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ತಕ್ಷಣ 24 ತಾಸು ಉಚಿತ ವಿದ್ಯುತ್ ನೀಡಲಾಗುತ್ತದೆ. ರೈತರ ಸಾಲ ಮನ್ನಾ ಮಾಡಲಾಗುತ್ತದೆ. ಇನ್ನೂ ಸಾಕಷ್ಟುಜನಕಲ್ಯಾಣದ ಯೋಜನೆಗಳು ಕುಮಾರಸ್ವಾಮಿ ಅವರು ಜಾರಿಗೆ ತಲಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದ ಅವರು ಅಫಜಲ್ಪುರ ಮತದಾರರು ಶಿವಕುಮಾರ ನಾಟಿಕಾರ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ ತಾಲೂಕು ಅಧ್ಯಕ್ಷ ಜಮೀಲ್ ಗೌಂಡಿ, ಮುಖಂಡರಾದ ರಾಜಕುಮಾರ ಉಕ್ಕಲಿ, ಶರಣಗೌಡ ಪಾಟೀಲ್, ರಾಜೇಂದ್ರ ಸರ್ದಾರ, ಮಲ್ಲಿಕಾರ್ಜುನ ಸಿಂಗೆ, ವಿಠ್ಠಲ್ ನಾಟಿಕಾರ, ಅಮರಸಿಂಗ್ ರಜಪೂತ, ಶ್ರೀಕಾಂತ ನಿಂಬರ್ಗಿ, ಸಿದ್ದರಾಮ ನೇವನೂರ, ಅಮೂಲ ಮೋರೆ, ಮಂಜುನಾಥ ನಾಯ್ಕೋಡಿ, ಸಂತೋಷಿ ಕಾಳೆ ಸೇರಿದಂತೆ ಅನೇಕರು ಇದ್ದರು.