Pancharatna Rathayatra: ನಿಮ್ಮ ಮಡಿಲಿಗೆ ನಿಖಿಲ್ ಹಾಕಿದ್ದೇನೆ, ಮನೆ ಮಗನಂತೆ ಬೆಳೆಸಿ: ಎಚ್.ಡಿ.ಕುಮಾರಸ್ವಾಮಿ
ನಾನು ರಾಜಕಾರಣದಲ್ಲಿ ಬೇರೆಯವರಂತೆ ಗಣಿಗಾರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಹಣ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾರೋಹಳ್ಳಿ/ರಾಮನಗರ (ಡಿ.19): ನಾನು ರಾಜಕಾರಣದಲ್ಲಿ ಬೇರೆಯವರಂತೆ ಗಣಿಗಾರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಹಣ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ರಾಮನಗರದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವೇಳೆ ಹಾರೋಹಳ್ಳಿ-ಮರಳವಾಡಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣಕ್ಕೆ ಬರುವುದಕ್ಕೂ ಮುಂಚೆ ಬಿಡದಿಯ ಕೇತಗಾನಹಳ್ಳಿಯಲ್ಲಿ ಕೃಷಿ ಮಾಡಿ ಸಂಪಾದನೆ ಮಾಡಿದಷ್ಟೇ ನನ್ನ ಆಸ್ತಿ.
ಶಾಪಿಂಗ್ ಮಾಲ್, ಕಟ್ಟಡ ಕಟ್ಟಲು ರಾಜಕಾರಣದಲ್ಲಿ ಹಣ ಮಾಡಿಲ್ಲ. ನಾನು ಯಾವ ರೀತಿ ಬದುಕಿದ್ದೇನೆ ಎಂಬುದನ್ನು ನೀವೇ ನೊಂಡಿದ್ದೀರಿ. ಇಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೂ ಅಡ್ಡಿ ಮಾಡುತ್ತಾರೆ. ಆದರೂ ನಿಮ್ಮ ಕಷ್ಟ ಮತ್ತು ಸಮಸ್ಯೆಗಳಿಗೆ ನಾವಿದ್ದೇವೆ. ನಿಮ್ಮ ಮಡಿಲಿಗೆ ನಿಖಿಲ್ ನನ್ನು ಹಾಕಿದ್ದೇನೆ. ಅವನನ್ನು ಯಾವ ರೀತಿಯಲ್ಲಿ ಬೆಳೆಸುತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು. ನನ್ನ ಹಾಗೂ ನಮ್ಮ ತಂದೆಯವರಂತೆ ಅವನನ್ನು ನಿಮ್ಮ ಮನೆ ಮಗನಾಗಿ ಬೆಳೆಸಿ ಎಂದು ಮನವಿ ಮಾಡಿದರು.
ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಶಕ್ತಿ ಪ್ರದರ್ಶನ
ತಾಲೂಕು ಘೋಷಣೆಯಲ್ಲಿ ಅನಿತಾ ಪಾತ್ರ: ಹಾರೋಹಳ್ಳಿಯ ಪೇಟೆ ಬೀದಿ ನೋಡಿ ನೋವಾಯಿತು. ಅಲ್ಲಿ ರಸ್ತೆ, ಚರಂಡಿ ವ್ಯವಸ್ಥೆಗಳು ಹಾಳಾಗಿವೆ. ಇದಕ್ಕೆ ಬಿಜೆಪಿ ಸರ್ಕಾರದ ಕುತಂತ್ರ ಕಾರಣವೇ ಹೊರತು ನಾನಾಗಲಿ ಅಥವಾ ಶಾಸಕಿ ಅನಿತಾ ಕುಮಾರಸ್ವಾಮಿ ಅಲ್ಲ. ನನ್ನ ಸರ್ಕಾರ ಬಂದ ಕೂಡಲೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆ ಎಂದರು. ಹಾರೋಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದೇವೆ. ಇದರಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪ್ರಯತ್ನವೂ ಇದೆ. ಈಗಾಗಲೇ 12ಕ್ಕೂ ಹೆಚ್ಚು ಅಧಿಕಾರಗಳನ್ನು ನೇಮಕ ಮಾಡಲಾಗಿದೆ. ಆದರೆ, ಪಕ್ಕದ ಕ್ಷೇತ್ರದ ಮಹಾನುಭಾವರು ಆಡಳಿತ ವ್ಯವಸ್ಥೆ ಹಾಳುಗೆಡುವಿದ್ದಾರೆ ಎಂದು ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಯಾರು ಎಷ್ಟೇ ಪಿತೂರಿ ಮಾಡಿದರು ಹಾರೋಹಳ್ಳಿಯನ್ನು ತಾಲೂಕು ಅನ್ನಾಗಿ ಮಾಡಿದ್ದೇವೆ. ನಾನು ಸಹ ಕುಮಾರಸ್ವಾಮಿ ಅವರಂತೆಯೇ ಶ್ರಮ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಸಾಗುವಳಿ ಚೀಟಿ ಸೇರಿದಂತೆ ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇನೆ. ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದೇನೆ. ನಾಳೆಯೇ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ನನಗೆ ಕೊಟ್ಟ ಪ್ರೀತಿ ವಿಶ್ವಾಸವನ್ನು ನನ್ನ ಮಗನಿಗೂ ನೀಡಿ ಎಂದು ಮನವಿ ಮಾಡಿದರು.
ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್ ಕುಮಾರಸ್ವಾಮಿ
ನನ್ನ ಅಧಿಕಾರ ದುರ್ಬಳಸಿಕೊಂಡಿಲ್ಲ: ಈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರ ಹಲವರ ಮಕ್ಕಳು ಅಧಿಕಾರವನ್ನು ಯಾವರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಿದ್ದೀರಿ. ಆದರೆ ನಿಖಿಲ ಕುಮಾರಸ್ವಾಮಿ ಯಾವತ್ತೂ ಸಹ ನಾನು ಮುಖ್ಯಮಂತ್ರಿ ಆಗಿದ್ದಾಗ ಬರಲಿಲ್ಲ. ಆ ರೀತಿಯಲ್ಲಿ ನನ್ನ ಮಗನನ್ನು ಬೆಳೆಸಿದ್ದೇನೆ. ಅವನನ್ನು ಬೆಳೆಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದರು. ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗುವುದಿಲ್ಲ. ಈಗಾಗಲೇ ಬಿಜೆಪಿಯವರು ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ. ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟಬಹುಮತ ನೀಡುವಂತೆ ಕುಮಾರಸ್ವಾಮಿ ಜನರಲ್ಲಿ ಕೋರಿದರು.