ರಾಮನಗರ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಶಕ್ತಿ ಪ್ರದರ್ಶನ
ನವ ಕರ್ನಾಟಕ ನಿರ್ಮಾಣಕ್ಕಾಗಿ ಪಂಚರತ್ನ ಯೋಜನೆಯನ್ನು ಮುಂದಿಟ್ಟುಕೊಂಡ ಮಹಾಯಾತ್ರೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು ಶನಿವಾರ ತಮ್ಮ ಕರ್ಮಭೂಮಿ ರಾಮನಗರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.18): ನವ ಕರ್ನಾಟಕ ನಿರ್ಮಾಣಕ್ಕಾಗಿ ಪಂಚರತ್ನ ಯೋಜನೆಯನ್ನು ಮುಂದಿಟ್ಟುಕೊಂಡ ಮಹಾಯಾತ್ರೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು ಶನಿವಾರ ತಮ್ಮ ಕರ್ಮಭೂಮಿ ರಾಮನಗರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಕೆಂಪೇಗೌಡರ ನಾಡು ಮಾಗಡಿಯಿಂದ ಪುನರಾರಂಭಗೊಂಡ ರಥಯಾತ್ರೆ ಶ್ರೀನಿವಾಸ ಕಲ್ಯಾಣೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಮೊಟಕುಗೊಂಡಿತ್ತು. ಕಲ್ಯಾಣೋತ್ಸವ ತರುವಾಯ ಮತ್ತೆ ಚಾಲನೆ ಪಡೆದ ರಥಯಾತ್ರೆಯಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಾದ್ಯಂತ ಭರ್ಜರಿ ರೋಡ್ ಶೋ ನಡೆಸಿದರು.
ಹಾಗಲಹಳ್ಳಿಯಲ್ಲಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಗುಡ್ಡದಹಳ್ಳಿ ಗ್ರಾಮದಿಂದ ಮಧ್ಯಾಹ್ನ 12.15ರ ಸುಮಾರಿಗೆ ಆರಂಭಗೊಂಡ ರಥಯಾತ್ರೆಯೂ ಹಾರೋಹಳ್ಳಿ ತಲುಪುವರೆಗೆ ತಡರಾತ್ರಿ ಆಯಿತು. ಪ್ರತಿ ಗ್ರಾಮಗಳ ದ್ವಾರದಲ್ಲಿ ರಥಯಾತ್ರೆ ಸ್ವಾಗತಕ್ಕಾಗಿಯೇ ತಳಿರು ತೋರಣ, ಬಾಳೆ ಕಂದು ಕಟ್ಟಲಾಗಿತ್ತು. ರಥಯಾತ್ರೆಗೆ ದಾರಿ ಉದ್ದಕ್ಕೂ ಪ್ರತಿ ಗ್ರಾಮಗಳಲ್ಲಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರಿಂದ ಭವ್ಯ ಸ್ವಾಗತ ದೊರಕಿತು. ಕುಮಾರಸ್ವಾಮಿ ಅವರಿಗೆ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.
ಜೆಡಿಎಸ್ ಗ್ರಾಫ್ ಏರ್ತಿದೆ, 123 ಸೀಟು ಗೆಲ್ತೀವಿ: ಎಚ್.ಡಿ.ಕುಮಾರಸ್ವಾಮಿ
ಪಂಚರತ್ನ ರಥಯಾತ್ರೆಯ ವಾಹನ ಏರಲು ಕೇತಗಾನಹಳ್ಳಿ ತೋಟದ ಮನೆಯಿಂದ ಗುಡ್ಡದಹಳ್ಳಿಗೆ ಆಗಮಿಸಿದ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ ಮೊಸಂಬಿ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಕಾರ್ಯಕರ್ತರು ಅಭಿಮಾನ ಮೆರೆದೆರು. ಗುಡ್ಡದಹಳ್ಳಿಗೆ ಎಲ್ಲ ಸೌಕರ್ಯ ಒದಗಿಸಿ ನವ ಗ್ರಾಮ ನಿರ್ಮಿಸಿ ಕೊಡುವ ಜೊತೆಗೆ ಸಂಪರ್ಕ ಸೇತುವೆಗಳನ್ನು ನಿರ್ಮಿಸಿ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಕುಮಾರಸ್ವಾಮಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕೇನ್‌ನಲ್ಲಿ ಹಾರ ಹಾಕಿ ಅಭಿಮಾನ: ಹಾಗಲಹಳ್ಳಿಯಲ್ಲಿ ಸಾಗಿದ ರಥಯಾತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಶಾಸಕ ಅನಿತಾ, ಎ.ಮಂಜುನಾಥ್ ಜೊತೆಯಾದರು. ತೆನೆ ಹೊತ್ತು ಹಾಗೂ ಕಳಶ ಹೊತ್ತು ಮಹಿಳೆಯರು ಸ್ವಾಗತಿಸಿದರೆ,ಕಾರ್ಯಕರ್ತರು ಹೂ ಮಳೆ ಸುರಿಸಿದರು. ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ತರುವಾಯ ಕುಮಾರಸ್ವಾಮಿ ಅವರಿಂದ ಕೇಕ್ ಕಟ್ ಮಾಡಿಸಿದರು. ಆನಂತರ ನಾಯಕರಿಗೆ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಸಂಭ್ರಮಿಸಿದರು.
ರಾಂಪುರದಲ್ಲಿ ಗ್ರಾಮಸ್ಥರು ಜೆಸಿಬಿ ಮೂಲಕ ಹೂಮಳೆ ಸುರಿಸಿ ಪ್ರೀತಿ ತೋರಿದರೆ, ಮಹಿಳೆಯರು ಆರತಿ ಬೆಳಗಿ ಖುಷಿ ಪಟ್ಟರು. ಹಿರಿಯ ಮಹಿಳೆಯರನ್ನು ಕುಮಾರಸ್ವಾಮಿ ಆತ್ಮೀಯವಾಗಿ ಮಾತನಾಡಿದರು. ಕಗ್ಗಲಹಳ್ಳಿಗೆ ಆಗಮಿಸಿದ ರಥಯಾತ್ರೆಗೆ ನೂರಾರು ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಕಟ್ಟಮಾರನದೊಡ್ಡಿಯಲ್ಲಿ ಕುಮಾರಣ್ಣ ಎಂದು ಜಯಘೋಷ ಕೂಗಿ ಯುವಕರು ಜೆಸಿಬಿ ಮೂಲಕ ಪುಷ್ಪ ವೃಷ್ಠಿ ಮಾಡಿದರು. ಸುಗ್ಗನಹಳ್ಳಿ ಗ್ರಾಮಕ್ಕೆ ತಲುಪಿದ ರಥಯಾತ್ರೆಯನ್ನು ಜಾನಪದ ಕಲಾತಂಡಗಳೊಂದಿಗೆ ಜೆಸಿಬಿ ಮೂಲಕ ಹೂ ಮಳೆಸುರಿಸಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಅಲ್ಲದೆ, 200 ಕೆಜಿಯ ಬೃಹತ್ ಸೇಬಿನ ಹಾರ ತೊಡಿಸಿ ಅಭಿಮಾನ ಮೆರೆದರು. ಇಲ್ಲಿ ಕುಮಾರಸ್ವಾಮಿ ಬಹಿರಂಗ ನಡೆಸಿದರು.
ಹಸ್ತಲಾಘವ ಮಾಡಿ ಖುಷಿಪಟ್ಟ ಜನ: ಕಂಪಕ್ಕಿ ಮಾರೇಗೌಡನದೊಡ್ಡಿಯಲ್ಲಿ ಗ್ರಾಮಸ್ಥರು ಕುಮಾರಸ್ವಾಮಿ ಅವರ ಕೈಯಿಂದ ಕೇಕ್ ಕತ್ತರಿಸಿ ಶುಭಾಶಯ ಕೋರಿದರು. ಹನುಮಂತೇಗೌಡನದೊಡ್ಡಿ ಜನರು ಎಳನೀರು ವಿತರಿಸಿದರು. ಹರೀಸಂದ್ರ ಗ್ರಾಮದ ವೃತ್ತದಲ್ಲಿ ತಮ್ಮ ನೆಚ್ಚಿನ ನಾಯಕನನ್ನು ಕಾಣಲು ಮುಗಿಬಿದ್ದ ಜನರು ಹಸ್ತಲಾಘವ ಮಾಡಿ ಖುಷಿಪಟ್ಟರು. ಮದರಸಾಬರದೊಡ್ಡಿ ಮಾರ್ಗವಾಗಿ ರಾಯರದೊಡ್ಡಿಯಲ್ಲಿ ಹೂವಿನ ಹಾರ ಹಾಗೂ ಕೆಂಪೇಗೌಡನದೊಡ್ಡಿಯಲ್ಲಿ ಸೇಬಿನ ಹಾರ ಹಾಕಿ ಸ್ವಾಗತ ಕೋರಲಾಯಿತು. ಕೆಂಪೇಗೌಡನದೊಡ್ಡಿಯಿಂದ ಹಳೇ ಬಸ್ ನಿಲ್ದಾಣದ ಬಳಿಗೆ ರಥಯಾತ್ರೆ ಬೃಹತ್ ಬೈಕ್ ರ್ಯಾಲಿ ಮೂಲಕ ಸಂಚರಿಸಿತು.
ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್ ಕುಮಾರಸ್ವಾಮಿ
ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಕುಮಾರಸ್ವಾಮಿ ಕೈ ಬೀಸಿ ಸಾಗಿದರು. ಅಲ್ಲಿ ಗುಲಾಬಿ, ತುಳಸಿ ಹಾಗೂ ರೇಷ್ಮೆಯ ಹಾರ ಹಾಕಿದ ಜನರು ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಘೋಷಣೆ ಕೂಗಿದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಪಂಚರತ್ನ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಲಾಯಿತು. ಕೈಲಾಂಚದಲ್ಲಿ ಬಹಿರಂಗ ಸಭೆ ನಡೆಸಿದ ತರುವಾಯ ಕೆ.ಪಿ.ದೊಡ್ಡಿ, ಅಚ್ಚಲು, ಅವ್ವೇರಹಳ್ಳಿ ಗೇಟ್, ಚಿಕ್ಕಮುದವಾಡಿ, ಕೊಟ್ಟಗಾಳು, ಕೊಳ್ಳಗನಹಳ್ಳಿ, ಚೀಲೂರು , ಟಿ.ಹೊಸಳ್ಳಿ, ತೋಪಸಂದ್ರ ಮಾರ್ಗವಾಗಿ ರಥಯಾತ್ರೆಯಲ್ಲಿ ಸಂಚರಿಸಿದ ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಮರಳವಾಡಿಯಲ್ಲಿ ಕುಮಾರಸ್ವಾಮಿರವರು ಬಹಿರಂಗ ಸಭೆ ನಡೆಸಿದ ತರುವಾಯ ರಥಯಾತ್ರೆ ಹಾರೋಹಳ್ಳಿ ತಲುಪಿತು.