ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ನೀಡಿದ ಕಾರ್ಯಕ್ರಮಗಳನ್ನು ಜನರು ಮರೆತಿಲ್ಲ. ಅವರ ಮೇಲೆ ನಾಡಿನ ಜನರು ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಪಂಚರತ್ನ ರಥಯಾತ್ರೆಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವೇ ಸಾಕ್ಷಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ರಾಮನಗರ (ಡಿ.12): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ನೀಡಿದ ಕಾರ್ಯಕ್ರಮಗಳನ್ನು ಜನರು ಮರೆತಿಲ್ಲ. ಅವರ ಮೇಲೆ ನಾಡಿನ ಜನರು ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಪಂಚರತ್ನ ರಥಯಾತ್ರೆಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವೇ ಸಾಕ್ಷಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸುತ್ತಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ವೇದಿಕೆ ನಿರ್ಮಾಣ ಕಾರ್ಯ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಮೇಲಿನ ನಂಬಿಕೆ ಮತ್ತು ವಿಶ್ವಾಸ ಮತ್ತಷ್ಟುಹೆಚ್ಚಾದಂತೆ ಪಂಚರತ್ನ ರಥಯಾತ್ರೆಯಿಂದ ವ್ಯಕ್ತವಾಗುತ್ತಿದೆ ಎಂದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಆಡಳಿತ ವೈಖರಿಯನ್ನು ನೋಡಿ ಜನರು ರೋಸಿ ಹೋಗಿದ್ದಾರೆ. ಕುಮಾರಸ್ವಾಮಿ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತರಾಗದೆ ಆಡಳಿತ ನಡೆಸಿ ತೋರಿಸಿದ್ದಾರೆ. ಹೀಗಾಗಿಯೇ ಕುಮಾರಸ್ವಾಮಿ ಮೇಲೆ ಜನರು ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ಎಚ್ಡಿಕೆ ಸಿಎಂ ಆಗುವುದು ಸೂರ‍್ಯ ಚಂದ್ರರಿರುವಷ್ಟೇ ಸತ್ಯ: ನಿಖಿಲ್ ಕುಮಾರಸ್ವಾಮಿ
ಪ್ರತಿ ಚುನಾವಣೆಯಲ್ಲಿ ಜೆಡಿಎಸ್ 30ರಿಂದ 40 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಮೈತ್ರಿ ಸರ್ಕಾರ ರಚನೆ ಮಾಡಿ ಆಡಳಿತ ನಡೆಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಈ ಬಾರಿ ಅದಕ್ಕೆ ಅವಕಾಶ ನೀಡಬಾರದೆಂಬ ಕಾರಣದಿಂದ ಪಂಚರತ್ನ ಯೋಜನೆಗಳನ್ನು ಮುಂದಿಟ್ಟುಕೊಂಡು ಜನರ ಎದುರು ಹೋಗುತ್ತಿದ್ದೇವೆ. ಮೈತ್ರಿ ಸರ್ಕಾರದ ಒತ್ತಡದಲ್ಲಿ ಕುಮಾರಸ್ವಾಮಿರವರ ಆಡಳಿತ ವೈಖರಿ ಕಣ್ಣ ಮುಂದಿದೆ. ಸ್ವತಂತ್ರವಾಗಿ ಸರ್ಕಾರ ರಚನೆಯಾದರೆ ಎಲ್ಲವನ್ನೂ ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ಕುಮಾರಸ್ವಾಮಿ ಹೋರಾಟಕ್ಕೆ ಜನರು ಕೈಜೋಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ವರಿಷ್ಠರ ತೀರ್ಮಾನಕ್ಕೆ ಬದ್ಧ: ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸ್ಪರ್ಧಿಸುತ್ತಿನೊ, ಸ್ಪರ್ಧಿಸುವುದಿಲ್ಲವೊ ಎಂಬುದನ್ನು ಹೇಳಲ್ಲ. ನಾನು ಸ್ವಾರ್ಥಿಯಾಗಲು ಇಷ್ಟಪಡುವುದಿಲ್ಲ. ಪಕ್ಷದ ವರಿಷ್ಠರು ಏನು ತೀರ್ಮಾನ ಮಾಡುತ್ತಾರೊ ಅದಕ್ಕೆ ಬದ್ಧನಾಗಿರುತ್ತೇನೆ. ನಾನು ಪಕ್ಷ ಸಂಘಟನೆಗೆ ಮೊದಲು ಆದ್ಯತೆ ನೀಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಶಿಕ್ಷಣ, ಆರೋಗ್ಯ, ವಸತಿ, ಕೃಷಿ ಹಾಗೂ ಉದ್ಯೋಗದಂತಹ ಪ್ರಮುಖ ಕಾರ್ಯಕ್ರಮಗಳು ಪಂಚರತ್ನ ಯೋಜನೆಯಲ್ಲಿವೆ. ಈ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕಾದರೆ ಜೆಡಿಎಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಈ ಯೋಜನೆಗಳ ಅನುಷ್ಠಾನಕ್ಕೆ ನಾಡಿನ ಜನರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ. ರಥಯಾತ್ರೆ ಆರಂಭಗೊಂಡ ದಿನದಿಂದ ಇಲ್ಲಿವರೆಗೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ತಡರಾತ್ರಿ 3 ಗಂಟೆಯಾದರೂ ಜನರು ನಿರೀಕ್ಷೆ ಮೀರಿ ಸ್ವಾಗತಿಸುತ್ತಿದ್ದಾರೆ. ಅದೇ ರೀತಿ ರಥಯಾತ್ರೆ ರಾಮನಗರಕ್ಕೆ ಆಗಮಿಸಿದಾಗ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂಬುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದರು.
ಮಳೆಯ ಕಾರಣ ಕೆಲವೆಡೆ ರಥಯಾತ್ರೆ ರದ್ದು ಪಡಿಸಲಾಗಿದೆ. ಡಿ.15ರಂದು ಮಾಗಡಿ ಕ್ಷೇತ್ರ ಪ್ರವೇಶಿಸಲಿರುವ ಯಾತ್ರೆ ಡಿ.16ರಂದು ರಾಮನಗರ ಕ್ಷೇತ್ರದಲ್ಲಿ ಸಂಚರಿಸಲಿದೆ. ಆನಂತ ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಸಂಚರಿಸಿದ ನಂತರ ಮಂಡ್ಯ ಪ್ರವೇಶೀಸಲಿದೆ. ಡಿ.16ರಂದು ಕುಮಾರಸ್ವಾಮಿರವರು ಜನ್ಮದಿನ ಪ್ರಯುಕ್ತ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ ಮಾಡಿದ್ದೇವೆ. ನಮ್ಮ ಕುಟುಂಬದವರು ದೇವರನ್ನು ತುಂಬಾ ನಂಬುತ್ತೇವೆ. ತಿರುಪತಿ ತಿಮ್ಮಪ್ಪ ನಮಗೆ ಶಕ್ತಿ ನೀಡಿದ್ದು ಐತಿಹಾಸಿಕ ಕಾರ್ಯಕ್ರಮದ ಮೂಲಕ ಮುನ್ನಡೆಯುತ್ತೇವೆ. ನಮಗೆ ಎಲ್ಲ ಧರ್ಮದ ಮೇಲೆ ಪ್ರೀತಿ ಗೌರವ ಇದೆ. ವಿಶೇಷವಾಗಿ ರಾಜ್ಯದ ಅಭಿವೃದ್ಧಿಗೆ ಹಾಗೂ ಜನತೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಪೂಜೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಶ್ರೀನಿವಾಸ ಕಲ್ಯಾಣೋತ್ಸವವನ್ನು ಪಕ್ಷಾತೀತವಾಗಿ ನಡೆಸುತ್ತಿದ್ದೇವೆ. ಮೂಲದೇವರ ವಿಗ್ರಹವನ್ನು 11 ಕಲಾತಂಡಗಳೊಂದಿಗೆ ರಾಮನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಚೆನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಇರುವುದಿಲ್ಲ. ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಕ್ರೀಡಾಂಗಣದಲ್ಲಿ 30 ಸಾವಿರ ಜನರು ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಆಸನ ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಾವು ಜಾತಿ, ಧರ್ಮಕ್ಕೆ ಸೀಮಿತವಲ್ಲ: ನಿಖಿಲ್ ಕುಮಾರಸ್ವಾಮಿ
ನಗರಸಭಾ ಸದಸ್ಯರಾದ ಮುನಜಿಲ್ ಆಗಾ, ಗ್ಯಾಬ್ರಿಯಲ್, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಮುಖಂಡರಾದ ಬಿ.ಉಮೇಶ್, ಅಶ್ವತ್‌್ಥ, ರಾಜಶೇಖರ್, ಜಯಕುಮಾರ್, ಅತಾವುಲ್ಲಾ , ಗೂಳಿಗೌಡ, ಹನುಮಂತ, ಪ್ರಕಾಶ್, ಗ್ರಾಪಂ ಸದಸ್ಯ ಬೋರೇಗೌಡ ಇತರರಿದ್ದರು.