ದೇವೇಗೌಡರ ರೀತಿ ನನ್ನ ಬ್ಲಾಕ್ಮೇಲ್ ಅಸಾಧ್ಯ: ಭವಾನಿಗೆ ಪರೋಕ್ಷ ಟಾಂಗ್ ಕೊಟ್ಟ ಎಚ್‌ಡಿಕೆ
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಕಾರ್ಯಕರ್ತರಿಗೆ ನೀಡುವುದಾಗಿ ಈಗಾಗಲೇ ಹೇಳಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಏ.09): ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಕಾರ್ಯಕರ್ತರಿಗೆ ನೀಡುವುದಾಗಿ ಈಗಾಗಲೇ ಹೇಳಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಹಾಸನ ಕ್ಷೇತ್ರದ ಆಕಾಂಕ್ಷಿ ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ನೀಡಲಾಗುವುದು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ತನ್ಮೂಲಕ ಪ್ರಬಲ ಆಕಾಂಕ್ಷಿಯಾಗಿರುವ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.
‘ಈ ಹಿಂದೆ ಹೇಳಿದಂತೆ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವ ಕಾರ್ಯಕರ್ತ ಸಮರ್ಥವಾಗಿದ್ದಾರೆ ಎಂಬುದು ನನಗೂ ಗೊತ್ತು, ನಿಮಗೂ ಗೊತ್ತು. ಸದ್ಯದಲ್ಲಿಯೇ ಘೋಷಣೆ ಸಹ ಆಗಲಿದ್ದು, ಕಾರ್ಯಕರ್ತರು ಆತಂಕ ಪಡುವುದು ಬೇಡ. ಎಲ್ಲರನ್ನು ಇಲ್ಲಿಯವರೆಗೆ ಒಗ್ಗೂಡಿಸಿಕೊಂಡು ಬಂದಿದ್ದು, ಅತ್ಯಂತ ತಾಳ್ಮೆಯಿಂದ ನಡೆದುಕೊಂಡಿದ್ದೇನೆ. ನನ್ನ ಹತ್ತಿರ ಯಾವ ಬ್ಲಾಕ್‌ಮೇಲ್ ನಡೆಯುವುದಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಳಿ ಹೋಗಿ ಬ್ಲಾಕ್‌ಮೇಲ್ ಮಾಡಬಹುದು.
ಬಿಬಿಎಂಪಿಗೆ ಹಲವು ಹಳ್ಳಿ ಸೇರಿಸಿದ್ದಕ್ಕೆ ಈಗ ಡಾಂಬರೀಕರಣ: ಎಚ್.ಡಿ.ಕುಮಾರಸ್ವಾಮಿ
ನಾನು ಪಕ್ಷದ ಜವಾಬ್ದಾರಿ ತೆಗೆದುಕೊಂಡ ಮೇಲೆ ಕಾರ್ಯಕರ್ತರನ್ನು ಉಳಿಸಿಕೊಂಡಿದ್ದೇನೆ. ಕುಟುಂಬದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈವರೆಗೆ ಕಾಪಾಡಿಕೊಂಡಿದ್ದೇನೆ’ ಎಂದು ಖಡಕ್ ಆಗಿ ನುಡಿದರು. ‘ಜೆಡಿಎಸ್‌ನಲ್ಲಿ ಟಿಕೆಟ್ ಪಡೆಯುವುದು ಸುಲಭವಲ್ಲ. ಹಾಸನ ಕ್ಷೇತ್ರದಲ್ಲಿಯೂ ಸಹ ಟಿಕೆಟ್ ಪಡೆಯುವುದು ಕಷ್ಟ. ಚಾಮುಂಡೇಶ್ವರಿ ತಾಯಿ ಆರ್ಶೀವಾದದಿಂದ 120 ಸ್ಥಾನ ಮುಟ್ಟಬೇಕು ಎಂದು ಹೊರಟಿದ್ದೇನೆ. ಆ ಗುರಿಯನ್ನು ತಲುಪುವ ವಿಶ್ವಾಸ ಇದೆ. ಅದಕ್ಕೆ ಪೂರಕವಾಗಿ ಕಠಿಣ ತೀರ್ಮಾನಗಳನ್ನು ಮಾಡುತ್ತಿದ್ದೇನೆ. ಇಷ್ಟುದಿನ ಜೆಡಿಎಸ್‌ಗೆ ಶಾಕ್ ಎಂದು ಏನು ಬರುತ್ತಿತ್ತೋ, ಅದು ಇನ್ಮೇಲೆ ‘ಅವರಿಗೆ’ ಪ್ರಾರಂಭವಾಗಲಿದೆ’ ಎಂದು ಕಾಂಗ್ರೆಸ್-ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಮೊಪೆಡ್: ಎಚ್‌ಡಿಕೆ ಭರವಸೆ
ಇನ್ನು, ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವರಣಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಎದುರಿಸಿದ್ದಾರೆ. ಅಲ್ಲಿ ಸಮರ್ಥ ಅಭ್ಯರ್ಥಿ ಹಾಕುತ್ತೇವೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.