ರೈತರ ಹೊಸ ವಿದ್ಯುತ್ ಸಂಪರ್ಕಕ್ಕೆ ಸಬ್ಸಿಡಿ ಕಟ್: ಎಚ್‌ಡಿಕೆ ಆಕ್ರೋಶ
ಬರ, ವಿದ್ಯುತ್ ಕ್ಷಾಮದಿಂದ ಕಂಗೆಟ್ಟು ಹೋಗಿರುವ ಅನ್ನದಾತರಿಗೆ ಮತ್ತೊಂದು ಬರೆ ಎಳೆದು, ತಾನು ರೈತದ್ರೋಹಿ ಎಂದು ಸಾಬೀತು ಮಾಡಿಕೊಂಡಿದೆ ಎಂದು ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರು (ನ.11): ಪೊಳ್ಳು ಗ್ಯಾರಂಟಿಗಳ ಮೂಲಕ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿ ಅಂಚಿಗೆ ನೂಕಿರುವ ಸರ್ಕಾರ ರೈತರ ಮೇಲೆಯೂ ವಕ್ರದೃಷ್ಟಿ ಬೀರಿದೆ. ಬರ, ವಿದ್ಯುತ್ ಕ್ಷಾಮದಿಂದ ಕಂಗೆಟ್ಟು ಹೋಗಿರುವ ಅನ್ನದಾತರಿಗೆ ಮತ್ತೊಂದು ಬರೆ ಎಳೆದು, ತಾನು ರೈತದ್ರೋಹಿ ಎಂದು ಸಾಬೀತು ಮಾಡಿಕೊಂಡಿದೆ ಎಂದು ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡಲಾಗುತ್ತಿದ್ದ ಸಬ್ಸಿಡಿಗೆ ಕತ್ತರಿ ಹಾಕಿರುವ ಸರ್ಕಾರದ ವಿರುದ್ಧ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಗ್ಯಾರಂಟಿಗಳಿಗೆ ಪ್ರಚಾರ ಜಾಸ್ತಿ, ಅಭಿವೃದ್ಧಿಗೆ ಹಣ ನಾಸ್ತಿ ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದೆ. ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡುತ್ತಿದ್ದ ಸಬ್ಸಿಡಿಗೆ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕಿದೆ ಎನ್ನುವ ಆದೇಶ ನೋಡಿ ತೀವ್ರ ಆಘಾತ ಉಂಟಾಯಿತು ಎಂದು ತಿಳಿಸಿದ್ದಾರೆ. ಕೇಡುಗಾಲಕ್ಕೆ ಕೋಳಿಯು ಮೊಟ್ಟೆ ಬದಲು ಮರಿಯನ್ನೇ ಹಾಕಿತು ಎನ್ನುವ ಹಾಗೆ ಕಾಂಗ್ರೆಸ್ ಸರ್ಕಾರ ಎರಡು ಕೈಗಳಿಂದಲೂ ರೈತರ ಮೇಲೆ ಮಣ್ಣು ಹಾಕುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದೇ ಬಿಜೆಪಿ-ಜೆಡಿಎಸ್ ಮೈತ್ರಿ ಆದ್ಯತೆ: ಎಚ್‌ಡಿಕೆ
ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದ ಅನ್ನದಾತರಿಗೆ ಇದುವರೆಗೆ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬ, ಅಲ್ಯುಮಿನಿಯಂ ತಂತಿ ಇತ್ಯಾದಿಗಳಿಗೆ ಸರ್ಕಾರವೇ ಸಬ್ಸಿಡಿ ಕೊಡುತ್ತಿತ್ತು. ಚುನಾವಣೆಯಲ್ಲಿ ಮತಕ್ಕಾಗಿ ಯಾವ ಹಸ್ತ ರೈತರ ಪಾದ ಮುಟ್ಟಿ ಮತಯಾಚನೆ ಮಾಡಿತೋ, ಈಗ ಅದೇ ಹಸ್ತ ಅಧಿಕಾರ ಸಿಕ್ಕ ಮೇಲೆ ಅನ್ನದಾತನ ಕೊರಳಿಗೆ ಹಗ್ಗ ಬಿಗಿಯತೊಡಗಿದೆ..! ಇದಕ್ಕಿಂತ ಪೈಶಾಚಿಕ ಮನಸ್ಥಿತಿ ಮತ್ತೊಂದು ಇರಲು ಸಾಧ್ಯವೇ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಸರ್ಕಾರ ತಕ್ಷಣವೇ ಈ ಆದೇಶವನ್ನು ವಾಪಸ್ ಪಡೆಯಲೇಬೇಕು. ಮೊದಲಿನಂತೆ ರೈತರಿಗೆ ಸಬ್ಸಿಡಿ ಕೊಡಬೇಕು. ಒಂದು ವೇಳೆ ಆದೇಶ ವಾಪಸ್ ಪಡೆಯದಿದ್ದರೆ ಜೆಡಿಎಸ್ ಪಕ್ಷ ಸದನದ ಒಳಗೆ, ಹೊರಗೆ ಹೋರಾಟಕ್ಕೆ ಇಳಿಯುತ್ತದೆ ಎಚ್ಚರಿಕೆ ನೀಡಿದ್ದಾರೆ.