ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!
ಮಾಜಿ ಸಿಎಂ ಕುಮಾರಸ್ವಾಮಿಯವರ ಎರಡನೇ ದಿನದ ಪಂಚರತ್ನ ರಥಯಾತ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಯಾತ್ರೆಯುದ್ದಕ್ಕೂ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಎಚ್‌ಡಿಕೆ ರಾಜ್ಯ ರಾಜಕಾರಣದಲ್ಲಿ ಮತ್ತೆ ದೊಡ್ಡ ಹವಾ ಸೃಷ್ಠಿ ಮಾಡಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಫೆ.09): ಮಾಜಿ ಸಿಎಂ ಕುಮಾರಸ್ವಾಮಿಯವರ ಎರಡನೇ ದಿನದ ಪಂಚರತ್ನ ರಥಯಾತ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಯಾತ್ರೆಯುದ್ದಕ್ಕೂ ಬಿಜೆಪಿ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಎಚ್‌ಡಿಕೆ ರಾಜ್ಯ ರಾಜಕಾರಣದಲ್ಲಿ ಮತ್ತೆ ದೊಡ್ಡ ಹವಾ ಸೃಷ್ಠಿ ಮಾಡಿದ್ದಾರೆ. ಇದರ ಜತೆ ತನ್ನ ಅಭ್ಯರ್ಥಿಗಳ ಪರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸಿರುವ ಎಚ್‌ಡಿಕೆ ಮುಂದಿನ ಚುನಾವಣೆಯಲ್ಲಿ ತಾನು ಆಯ್ಕೆ ಮಾಡಿರುವ ಅಭ್ಯರ್ಥಿಗಳು ಗೆಲ್ಲಲೇಬೇಕೆಂದು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಹೌದು! ರಾಜ್ಯ ಹಲವೆಡೆ ಪ್ರವಾಸ ನಡೆಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಶಸ್ವಿ ಎರಡು ದಿನಗಳನ್ನು ಪೂರೈಸಿದೆ. ನಿನ್ನೆ ಹಾಗೂ ಇಂದು ಕುಮಟಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೂರಜ್ ನಾಯ್ಕ್ ಸೋನಿ ಹಾಗೂ ಭಟ್ಕಳ ಕ್ಷೇತ್ರದ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿ ಪರವಾಗಿ ಭರ್ಜರಿ ಪ್ರಚಾರ ನಡೆಸಿದ ಎಚ್‌ಡಿಕೆ, ಯಾತ್ರೆಯುದ್ದಕ್ಕೂ ಆಡಳಿತ ಪಕ್ಷದ ಪ್ರಮುಖ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಅವರ ಬೆವರಿಳಿಸಿದ್ದಾರೆ. ಕುಮಟಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ರಾತ್ರಿ ತಲಗೇರಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಎಚ್‌ಡಿಕೆ, ಇಂದು ಬೆಳಿಗ್ಗೆ ನಿತ್ಯ ಕೆಲಸ ಮುಗಿಸಿ ವನದುರ್ಗೆಯ ದರ್ಶನ ಪಡೆದು, ಬಳಿಕ ಅಕ್ಕಿ ರೊಟ್ಟಿ ಸವಿದರು.
Uttara Kannada: ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ
ನಂತರ ಚಂದಾವರ ಸೀಮೆ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ಹಝರತ್ ಮದನ್ ಹಝರತ್ ಉಸ್ಮಾನ ದರ್ಗಾದಲ್ಲಿ ಚಾದರ್ ಸಲ್ಲಿಸಿದ್ದಲ್ಲದೇ, ಚಂದಾವರದ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ಗೆ ಭೇಟಿ ನೀಡಿ ಯೇಸುವಿನ ಮುಂದೆ ಕ್ಯಾಂಡಲ್ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಎಚ್‌ಡಿಕೆ, ವಿಜಯೇಂದ್ರ ಹೇಳಿಕೆಗೆ ಹರಿಹಾಯ್ದಿದ್ದಾರೆ. ನಾನು ಅವತ್ತು ಯಡಿಯೂರಪ್ಪನವರ ಜತೆಗೆ ಕೈ ಜೋಡಿಸದಿದ್ದರೆ, ಅವರ ರಾಜಕೀಯ ಭವಿಷ್ಯ ಅಂದೇ ನಿರ್ನಾಮ ಆಗುತ್ತಿತ್ತು. ವಿಜಯೇಂದ್ರ ಆಗ ಎಲ್ಲಿ ಬರುತ್ತಿದ್ದರು..? ಸಿದ್ದಲಿಂಗಯ್ಯ ಎಂಬವರು ನನಗೆ ಚೀಟಿ ನೀಡಿ, ಯಡಿಯೂರಪ್ಪ ಅವರನ್ನ ಮಂತ್ರಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರ ಮಾಡಿ ಸಿಎಂ ಮಾಡಿದ್ದೆ. ಸಿದ್ದಲಿಂಗಯ್ಯ ಇನ್ನು ಜೀವಂತ ಇದ್ದಾರೆ ಹೋಗಿ ಕೇಳಿ. ವೀರಶೈವರಿಗೆ ಏನು ಮಾಡಿದೆ ಎಂದು ವಿಜಯೇಂದ್ರನವರಿಗೆ ಗೊತ್ತಿಲ್ಲ, ನಮ್ಮ ತಂದೆ ವಿಧಾನಸಭೆ ವಿಸರ್ಜನೆ ಮಾಡಲು ಹೋಗಿದ್ದರು. ಆಗ ಯಡಿಯೂರಪ್ಪ ಜತೆ ಸೇರಿ ಸರ್ಕಾರ ಮಾಡಿದ್ದೆವು. ಅಧಿಕಾರ ಇದ್ದ ವೇಳೆ ಬಿಜೆಪಿಗರನ್ನು ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿ ಆಗಿತ್ತು ಎಂದರು. ಇನ್ನು ಪೇಶ್ವೆ ವಂಶಸ್ಥರು ಅಧಿಕಾರ ನಡೆಸಲು ಬಿಡಲಿಲ್ಲ. ಅವರೇ ಯಡಿಯೂರಪ್ಪ ಸರ್ಕಾರವನ್ನ ತೆಗೆದರು. ಹೇಗೂ ಎರಡನೇ ಬಾರಿ ಕಷ್ಟ ಪಟ್ಟು ಯಡಿಯೂರಪ್ಪ ಸಿಎಂ ಆದ್ರು.
ಆಗಲೂ ಪೇಶ್ವೆ ವಂಶಸ್ಥರು ಅವರನ್ನು ಆಡಳಿತ ಮಾಡಲು ಬಿಡಲಿಲ್ಲ. ಇಂತವರಿಗೆ ಬಿಜೆಪಿ ನಾಯಕರೇ ಬೆಂಬಲ ನೀಡುತ್ತಿದ್ದಾರೆ. ನಾನು ನೀಡಿದ ಬ್ರಾಹ್ಮಣ ಹೇಳಿಕೆಯನ್ನು ಅವರು ಅರ್ಥ ಮಾಡಿಕೊಂಡಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಈ ಹಿನ್ನೆಲೆ ಟ್ವೀಟ್ ಮಾಡಿ ನಾನು ಗೊಂದಲಕ್ಕೆ ತೆರೆ ಎಳೆಯುತ್ತಿದ್ದೇನೆ ಎಂದು ಹೇಳಿದರು. ಇನ್ನು ಸಿ.ಟಿ.ರವಿ ಕೋಲಾರದಲ್ಲಿ ಜೆಡಿಎಸ್ ಪಕ್ಷ ಕೇವಲ ಜಾತಿಪಕ್ಷ ಅಂತ ಹೆಸರು ಇಟ್ರೆ ಒಳ್ಳೆಯದು ನೀಡಿದ ನೀಡಿದ ಹೇಳಿಕೆಗೆ ನೀಡಿದ್ದ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸಿ.ಟಿ. ರವಿಗೆ ಜಾತ್ಯಾತೀತತೆಯ ಅರ್ಥ ಗೊತ್ತಿದ್ಯಾ?.
ಅವರಿಗೆ ಗೊತ್ತಿರುವುದು ನಾವೆಲ್ಲ ಮುಂದು, ನೀವೆಲ್ಲ ಹಿಂದು ಅಷ್ಟೇ. ತಮ್ಮ ಅವಧಿಯಲ್ಲಿ ಪ್ರತಿಯೊಂದು ಸಮಾಜದವರೊಂದಿಗೆ ಚೆಲ್ಲಾಟ ಆಡಿದ್ದಾರೆ. ಅದನ್ನು ರಾಜ್ಯದ ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ನಮ್ಮ ಅವಧಿಯಲ್ಲಿ ಜಿಲ್ಲಾ ಪಂಚಾಯತ್‌ನಲ್ಲಿ ಹಿಂದುಳಿದವರಿಗೆ ಅವಕಾಶ ಸಿಕ್ಕಿದೆ. ನಿಮ್ಮಿಂದ ನಾವು ಜಾತ್ಯಾತೀತ ಬಗ್ಗೆ ಕಲಿಯುವುದು ಬೇಕಾಗಿಲ್ಲ ಎಂದು ತಿರುಗೇಟು ನೀಡಿದರು. ಇನ್ನು ಲಾಟರಿ ಸಿಎಂ ವಿಚಾರವಾಗಿ ಮಾತನಾಡಿದ ಅವರು, ಹೌದು ನಾನು ಎರಡು ಬಾರಿ ಲಾಟರಿ ಹೊಡೆದೇ ಮುಖ್ಯಮಂತ್ರಿಯಾದೆ. ಆಗ ಜನ ಪರವಾಗಿ ಆಡಳಿದ ನೀಡಿದ್ದೇನೆ. ಈ ಬಾರಿ ಮತ್ತೆ ಬಂಪರ್ ಲಾಟರಿ ಹೊಡೆಯುತ್ತೆ ಎಂದರು. ಈ ನಡುವೆ ಬಿಜೆಪಿ ಸಿಎಂ ಬಗ್ಗೆ ಮಾತನಾಡಲು ಎಚ್‌ಡಿಕೆಗೆ ಅರ್ಹತೆಯಿಲ್ಲ.
ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ: ರೋಹಿತ್ ಚಕ್ರತೀರ್ಥರಿಗೆ ಆಹ್ವಾನ ನೀಡಿರುವುದಕ್ಕೆ ವಿರೋಧ
ಅವರು ತಮ್ಮ ಚಟ ಮೊದಲು ಬಿಡಲಿ ಎಂದು ಸಚಿವ ಬಿ.ಸಿ.ಪಾಟೀಲ್ ನೀಡಿದ ಹೇಳಿಕೆಗೆ ಎಚ್‌ಡಿಕೆ ಗರಂ ಆದರು. ನನ್ನ ಬಗ್ಗೆ ಮಾತಾಡೋದಿಕ್ಕೆ ಬಿ.ಸಿ.ಪಾಟೀಲ್‌ಗೆ ಏನು ಅರ್ಹತೆ ಇದೆ ? ನನ್ನ ಬಗ್ಗೆ, ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದಿದ್ರೆ ಹುಷಾರ್. ಆತ್ಮಸಾಕ್ಷಿ ಮೇಲೆ ರಾಜಕೀಯ ಮಾಡುವವನು ನಾನು. ನನ್ನ ಜೀವನ ತೆರೆದ ಪುಸ್ತಕ. ಇವರಿಂದ ನಾನು ಕಲಿಯಬೇಕಾಗಿರೋದು ಏನು ಇಲ್ಲ ಎಂದು ಹರಿಹಾಯ್ದರು. ಒಟ್ಟಿನಲ್ಲಿ ಕರಾವಳಿ ಭಾಗಕ್ಕೆ ಎಂಟ್ರಿಕೊಟ್ಟ ದಳಪತಿಯ ಪಂಚರತ್ನ ರಥಯಾತ್ರೆ, ಪ್ರಚಾರದ ಜತೆ ವಿವಾದಾತ್ಮಕ ಹೇಳಿಕೆ ಮೂಲಕ ಸದ್ದು ಮಾಡಿದ್ದಂತೂ ಸತ್ಯ. ಎರಡು ದಿನಗಳ ರಥಯಾತ್ರೆಯಲ್ಲಿ ಎಚ್‌ಡಿಕೆ ಜನರನ್ನು ಭೇಟಿ ಮಾಡುವ ಬದಲು ಧಾರ್ಮಿಕ ಕ್ಷೇತ್ರಗಳಿಗೆ ತಿರುಗಾಡಿದ್ದೇ ಹೆಚ್ಚು ಅನ್ನೋ ಅರೋಪವೂ ಜನರಿಂದ ಕೇಳಿಬಂದಿದೆ.