ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಕುರಿತು ಚಿಂತೆ ಇಲ್ಲ, ಎನ್‌ಡಿಎ, ಮಹಾಘಟ್‌ಬಂಧನ್‌ನಿಂದ ಯಾವುದೇ ಆಹ್ವಾನ ಬಂದಿಲ್ಲ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 

ಚನ್ನಪಟ್ಟಣ(ಜು.18):  ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಮೇಲೆ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಕುರಿತು ಚಿಂತೆ ಇಲ್ಲ, ಮಹಾಘಟಬಂದನ್‌ ರಚನೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು.

ತಾಲೂಕಿನ ಹಾರೋಕೊಪ್ಪ ಗ್ರಾಮದ ಗ್ರಾಮ ಪಂಚಾಯಿತಿಯ ನೂತನ ಸಂಜೀವಿನಿ ಭವನ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಭಾರತ ಕೊಳ್ಳೆ ಹೊಡೆಯಲು ಅಂದು ಈಸ್ಟ್ ಇಂಡಿಯಾ, ಈಗ ಇಟಲಿ ಇಂಡಿಯಾ, ಬಿಜೆಪಿ ತಿರುಗೇಟು!

ದರಿದ್ರ ಸರ್ಕಾರ:

ಮಹಾಘಟಬಂಧನ್‌ ಮತ್ತೊಂದು ನನಗೆ ಪ್ರಮುಖವಲ್ಲ. ಆದರೆ, ಈ ಬಾರಿಯ ಬಜೆಟ್‌ನಲ್ಲೂ ಸಹ ಐದು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಈ ಸರ್ಕಾರ ಕೃಷಿ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿದೆ. ಈ ಸರ್ಕಾರ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಕಿಡಿಕಾರಿದರು.

ಇವರು ಹಿಂದಿನ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಪ್ರಾರಂಭಿಕ ಅಂತದಲ್ಲಿಯೇ ಈ ಸರ್ಕಾರದಕ್ಕೆ ಆರ್ಥಿಕ ಶಿಸ್ತು ಇಲ್ಲ. ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಐದು ಗ್ಯಾರೆಂಟಿಗಳ ಜತೆಗೆ ಇನ್ನೂ ಐದು ಗ್ಯಾರಂಟಿ ಯೋಜನೆಗಳನ್ನ ಕೊಡಲಿ. ಸರ್ಕಾರದಲ್ಲಿ ದುಡ್ಡಿಗೆ ಕೊರತೆ ಇಲ್ಲ, ರಾಜ್ಯದ ಜನರು ರಾಜ್ಯದ ಬೊಕ್ಕಸ ತುಂಬಿಸುತ್ತಿದ್ದಾರೆ. ಆದರೆ ಖಜಾನೆಯ ಹಣ ದರೋಡೆಯಾಗುತ್ತಿದೆ ಎಂದು ಆರೋಪಿಸಿದರು.

ರೈತರಿಗೆ ಧೈರ್ಯ ತುಂಬುತ್ತಿಲ್ಲ:

ಕಾಂಗ್ರೆಸ್‌ನವರು ಇವತ್ತು ಮಹಾಘಟಬಂಧನ್‌ ವಿಚಾರವಾಗಿ ಸಭೆ ಮಾಡುತ್ತಿದ್ದಾರೆ. ಇದಕ್ಕಾಗಿ ಏರ್‌ಪೋರ್ಚ್‌ನಿಂದ ತಾಜ್‌ ವೆಸ್ಟೆಂಡ್‌ ಹೋಟೆಲ್‌ವರೆಗೂ ದೊಡ್ಡ ದೊಡ್ಡ ಬ್ಯಾನರ್‌ ಕಟ್ಟಿದ್ದಾರೆ. ಇದನ್ನು ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ಆದರೆ ಅವರು ಇದನ್ನು ಮಾಡುತ್ತಿರುವುದು ರೈತರ ಸಮಾ​ಧಿ ಮೇಲೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡದ ಇವರು ರೈತರ ಸಮಾ​ಧಿ ಮೇಲೆ ಈ ಮಹಾಘಟಬಂಧನ್‌ ರಚನೆ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವರ್ಗಾವಣೆ ದಂಧೆ:

ದೇಶದ ಇತಿಹಾಸದಲ್ಲಿ ಕಂಡರಿಯದ ವರ್ಗಾವಣೆ ದಂಧೆ ನಡೆಯುತ್ತಿದೆ. ಸರ್ಕಾರದವರು ಕೋಟ್ಯಂತರ ರುಪಾಯಿ ಹಣವನ್ನು ವರ್ಗಾವಣೆ ರೂಪದಲ್ಲಿ ತೆಗೆದುಕೊಂಡಿದ್ದಾರೆ. ಲಂಚ ಕೊಟ್ಟಅ​ಧಿಕಾರಿ ಕಡೆಗೆ ಜನಸಾಮಾನ್ಯರ ಜೇಬಿಗೆ ಕೈ ಹಾಕುತ್ತಾನೆ ಹೊರತು ಇವರ ಜೇಬಿಗಲ್ಲ. ಇದರಿಂದ ಜನರಿಗೆ ಕಷ್ಟಹೆಚ್ಚಾಗುತ್ತದೆಯೇ ಹೊರತು ಇವರಿಗೆ ಏನು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಆಹ್ವಾನ ಬಂದಿಲ್ಲ:

ಎನ್‌ಡಿಎ ಜೊತೆ ಮೈತ್ರಿ ಮಾತುಕತೆಗೆ ದೆಹಲಿಗೆ ಪ್ರಯಾಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ವಿಚಾರದ ನನಗೆ ಗೊತ್ತಿಲ್ಲ ಮಾಧ್ಯಗಳಲ್ಲಿ ಇದನ್ನು ನೋಡುತ್ತಿದ್ದೇನೆ. ನಾನು ದೆಹಲಿಗೆ ಹೋಗುವ ಬಗ್ಗೆ ಯಾಕೆ ಈ ರೀತಿ ಸುದ್ದಿ ಮಾಡ್ತಿದ್ದಾರೆ ಗೊತ್ತಿಲ್ಲ. ಮಹಾಘಟಬಂಧನ್‌ ಆಗಲಿ ಅಥವಾ ಎನ್‌ಡಿಎನಿಂದ ಆಗಲಿ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಒಂದು ವೇಳೆ ಆಹ್ವಾನ ಬಂದರೆ ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ಜೆಡಿಎಸ್‌ಗೆ ವಿಪಕ್ಷ ಸ್ಥಾನ ನೀಡುತ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಡಿನ ಜನರು ನನ್ನನ್ನು ಸ್ಥಾನಮಾನಗಳಿಂದ ಗುರುತಿಸಿಲ್ಲ. ಎಲ್ಲಿಗೆ ಹೋದರೂ ಕುಮಾರಸ್ವಾಮಿ ಅನ್ನೋ ಹೆಸರಿನಿಂದ ಗುರುತಿಸುತ್ತಾರೆ. ನಾನು ಒಂದು ಗುಡ್‌ ವಿಲ್‌ ಇಟ್ಟುಕೊಂಡಿದ್ದೇನೆ. ನಾನು ಯಾವುದೋ ಸ್ಥಾನಮಾನಗಳನ್ನ ಪಡೆದು ಗುಡ್‌ ವಿಲ್‌ ಅನ್ನು ಮುಂದುವರಿಸಬೇಕಿಲ್ಲ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಸಮರ್ಥರಿದ್ದಾರೆ:

ಬಿಜೆಪಿಯಲ್ಲಿಯೇ ವಿರೋಧ ಪಕ್ಷದ ಸ್ಥಾನಕ್ಕೆ ಸಮರ್ಥವಾದ ನಾಯಕರು ಇದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು 65 ಜನರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಬಿಜೆಪಿ ನಾಯಕರು ಕಾಲಾಹರಣ ಮಾಡದೆ ಯಾರಾದರೂ ಸಮರ್ಥವಾದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಘೋಷಣೆ ಮಾಡಲಿ ಎಂದು ಬಿಜೆಪಿ ಕೇಂದ್ರ ವರಿಷ್ಠರಿಗೆ ಮುಖಂಡರಿಗೆ ಕುಮಾರಸ್ವಾಮಿ ಸಲಹೆ ನೀಡಿದರು.

ನಮ ಪಕ್ಷದ ಜತೆ ಯಾವುದೇ ರೀತಿಯ ಮಾತುಕತೆ ಆಗಿಲ್ಲ. ಮಾತುಕತೆಯಾಗದ ಮೇಲೆ ನಾವು ಡಿಮ್ಯಾಂಡ್‌ ಮಾಡುವ ವಿಚಾರ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ನಾವು 19 ಮಂದಿ ಗೆದ್ದಿದ್ದೇವೆ, ಅದರೆ ಬಿಜೆಪಿಯಲ್ಲಿ 65 ಮಂದಿ ಗೆದ್ದಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾಗಿದ್ದವರು, ಸಚಿವರಾಗಿದ್ದವರು ಗೆದ್ದಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುವಂತ ಶಕ್ತಿ ಇರುವರು ಇದ್ದಾರೆ. ಅವರಲ್ಲೇ ಒಬ್ಬರು ಸಮರ್ಥರನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದರು.

ಬಿಜೆಪಿ ಬಗ್ಗೆ ಸಾಫ್ಟ್‌ ಕಾರ್ನ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಯಾರ ಬಗ್ಗೆಯೂ ಸಾಫ್ಟ್‌ ಕಾರ್ನ್‌ರ್‌ ಇಲ್ಲ. ನಾಡಿನ ಜನತಯ ಕಷ್ಟದ ಬಗ್ಗೆ ಸಾಫ್ಟ್‌ ಕಾರ್ನ್‌ ಇದೆ. ಪಕ್ಷಗಳ ಬಗ್ಗೆ ಸಾಫ್ಟ್‌ ಕಾರ್ನ್‌ ಇಟ್ಕೊಂಡು ಏನು ಮಾಡಲಿ ಎಂದರು.

ಕಾಂಗ್ರೆಸ್‌ ಸರ್ಕಾರ ಬಂದರೆ ದರಿದ್ರ!

ಕಾಂಗ್ರೆಸ್‌ ಸರ್ಕಾರ ಬಂದ್ರೆ ನಾಡಿಗೆ ದರಿದ್ರ, ಬರ ಬರುತ್ತೆ ಅಂತ ಪ್ರತೀತಿ ಇದೆ. ಯಾಕೂ ಈಗಲೂ ಅದೇ ವಾತಾವರಣ ಇದೆ ಏನಾಗೋತ್ತೋ ನೋಡೋಣ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಮುಂಗಾರು ಕೊರತೆ, ತಮಿಳುನಾಡಿನಿಂದ ನೀರಿನ ವಿಚಾರಕ್ಕೆ ಖ್ಯಾತೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಟ್ರಿಬುನಲ್‌ನಲ್ಲಿ ನೀರು ಹಂಚಿಕೆ ಬಗ್ಗೆ ತೀರ್ಪು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಅವರು ನೀರು ಕೇಳ್ತಾರೆ. ಈಗ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಬೇಕು ಎಂದರು. 

ಐಎನ್‌ಡಿಐಎ ಮಹಾಘಟಬಂಧನ್ ಸಭೆ ಮುಗಿಯುತ್ತಿದ್ದಂತೆ ಟ್ವೀಟ್ ಮೂಲಕ ಕುಟುಕಿದ ಪ್ರಧಾನಿ ಮೋದಿ

ದಿನೇಶ್‌ ಗುಂಡೂರಾವ್‌ ಬಳಿ ರಾಜಕಾರಣ ಕಲಿಯಬೇಕಾ?

ಜೆಡಿಎಸ್‌ನದು ಅವಕಾಶವಾದಿ ರಾಜಕಾರಣ ಎಂಬ ದಿನೇಶ್‌ ಗುಂಡೂರಾವ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೆಲ್ಲ ಯಾವ ರಾಜಕಾರಣ ಮಾಡುತ್ತಿದ್ದಾರಂತೆ ಎಂದು ಕಿಡಿಕಾರಿದರು. ಡಿಎಂಕೆ ಜೊತೆ ಸೇರಿ 10 ವರ್ಷ ಸರ್ಕಾರ ಮಾಡಿದರಲ್ಲ, ಅದು ಯಾವ ರಾಜಕಾರಣ.ಯಾವ ರೀತಿಯ ರಾಜಕೀಯ ಮಾಡಬೇಕು ಅಂತ ದಿನೇಶ್‌ ಗುಂಡೂರಾವ್‌ ಹತ್ತಿರ ಕಲಿಬೇಕಾ, ಅಂತಹ ದರ್ದು ನನಗೆ ಬಂದಿಲ್ಲ ಎಂದು ತಿರುಗೇಟು ನೀಡಿದರು.

ರಾಷ್ಟ್ರ ರಾಜಕಾರಣದ ಬಗ್ಗೆ ಒಲವಿಲ್ಲ

ರಾಷ್ಟ್ರ ರಾಜಕಾರಣಕ್ಕೆ ಹೋಗುವ ಕುರಿತು ಪ್ರತಿಕ್ರಿಯಿಸಿದ ಅವರು, ನನಗೆ ಯಾವ ರಾಷ್ಟ್ರ ರಾಜಕಾರಣದ ಬಗ್ಗೆಯೂ ಒಲವಿಲ್ಲ. ಕೇಂದ್ರದಲ್ಲಿ ಮಂತ್ರಿ ಆಗೋ ಬಗ್ಗೆಯೂ ಒಲವಿಲ್ಲ. ಕೆಲವು ಮಾಧ್ಯಮಗಳಲ್ಲಿ ಎಚ್‌ಡಿಕೆ ಮಂತ್ರಿಯಾಗಲು ಹೊರಟಿದ್ದಾರೆ ಎಂದು ಬರುತ್ತಿದೆ. ಆದರೆ, ಯಾವ ಮಂತ್ರಿ ಸ್ಥಾನವಾಗಲಿ ವಿರೋಧ ಪಕ್ಷದ ಸ್ಥಾನವಾಗಲಿ ಇಲ್ಲ. ನಾನು ನಾಡಿನ ಜನರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.