ಪತಿ-ಪತ್ನಿ ನಡುವಿನ ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಸೋತ ಪೋಷಕರಿಗೆ ಮಗುವಿನ ಭೇಟಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. 

ಬೆಂಗಳೂರು (ಮೇ.25): ಪತಿ-ಪತ್ನಿ ನಡುವಿನ ಮಕ್ಕಳ ಸುಪರ್ದಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಸೋತ ಪೋಷಕರಿಗೆ ಮಗುವಿನ ಭೇಟಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ತನ್ನ ಅಪ್ತಾಪ್ತ ಮಗನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪತ್ನಿಗೆ ನಿರ್ದೇಶಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಗುವಿನ ಪೋಷಕತ್ವಕ್ಕೂ ಮಗುವಿನ ಸುಪರ್ದಿಗೂ ವ್ಯತ್ಯಾಸವಿದೆ. ಮಕ್ಕಳ ಸುಪರ್ದಿ ಪ್ರಕರಣಗಳಲ್ಲಿ ಸೋಲು ಕಾಣುವ ಪೋಷಕರಿಗೆ ಸಾಕಷ್ಟುಭೇಟಿಯ ಹಕ್ಕು ನೀಡಬೇಕಾಗುತ್ತದೆ. ಆ ಮೂಲಕ ಮಗು ತಂದೆಯ ಜತೆ ಸಾಮಾಜಿಕ, ಭೌತಿಕ ಸಂಪರ್ಕ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಇಂದು ಪ್ರಧಾನಿ ಮೋದಿ ಚಾಲ​ನೆ

ಅಲ್ಲದೆ, ಪ್ರಕರಣದಲ್ಲಿ ಅಪ್ರಾಪ್ತ ಮಗನ ಭೇಟಿ ಹಕ್ಕು, ಸುಪರ್ದಿ ಮತ್ತು ಪೋಷಕತ್ವಕ್ಕೆ ಸಂಬಂಧಿಸಿದಂತೆ ಪತಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಪತ್ನಿ ಪಾಲಿಸಬೇಕು. ಕೂಡಲೇ ಪತ್ನಿ ಮಗನನ್ನು ಪತಿಯ ಸುಪರ್ದಿಗೆ ಕೂಡಲೇ ಒಪ್ಪಿಸಬೇಕು. 2023ರ ಜೂ.4ರವರೆಗೆ ಮಗನನ್ನು ತಂದೆ ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳಬಹುದು. ಜೂ.4ರವರೆಗೆ ತಂದೆ ಸಹ ರಜೆ ಪಡೆದು ಸಂಪೂರ್ಣ ಸಮಯವನ್ನು ಮಗನೊಂದಿಗೆ ಕಳೆಯಬೇಕು. ಈ ಅವಧಿಯಲ್ಲಿ ಅರ್ಜಿದಾರ ತಂದೆಯ ತಾಯಿ ಮತ್ತು ಸಹೋದರಿ ಮಗುವಿನೊಂದಿಗೆ ನೆಲೆಸಿರಬೇಕು ಎಂದು ನಿರ್ದೇಶಿಸಿದೆ.

ಅರ್ಜಿದಾರರು ಮಗನ ಆರೈಕೆ ಮಾಡಬೇಕು. ಯಾವುದೇ ವೈದ್ಯಕೀಯ ನೆರವು ಅಗತ್ಯವಾದಾಗ ಕೂಡಲೇ ಮಗನನ್ನು ತಂದೆ ತಜ್ಞ ವೈದ್ಯರ ಬಳಿಗೆ ಕರೆದುಕೊಂಡು ಹೋಗಬೇಕು. ಮಗನಿಗೆ ತಾಯಿ ನಿತ್ಯ ಸಂಜೆ 6ರಿಂದ 7 ಗಂಟೆಯವರೆಗೆ ವಿಡಿಯೋ ಕಾಲ್‌ ಮಾಡಿ ಯೋಗಕ್ಷೇಮ ವಿಚಾರಿಸಬಹುದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

ಪ್ರಕರಣ ಹಿನ್ನೆಲೆ: ಪ್ರಕರಣದ ದಂಪತಿ 2011ರಲ್ಲಿ ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಕೌಟುಂಬಿಕ ವ್ಯಾಜ್ಯದ ಹಿನ್ನೆಲೆಯಲ್ಲಿ 2014ರ ನಂತರ ಪತಿ-ಪತ್ನಿ ದೂರವಾಗಿ ಪ್ರತ್ಯೇಕವಾಗಿ ನೆಲೆಸಿದ್ದಾರೆ. ನಂತರ ತನಗೆ ಮತ್ತು ಮಗನಿಗೆ ಜೀವನಾಂಶ ನೀಡಲು ಪತಿಗೆ ನಿರ್ದೇಶಿಸುವಂತೆ ಕೋರಿ ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಪತ್ನಿಗೆ ಜೀವನಾಂಶ ನೀಡುವಂತೆ ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಪೊಲೀಸರಿಂದ ಕಿರುಕುಳ: ಡಿಕೆಶಿ ಮುಂದೆ ಶಾಸಕಿ ರೂಪಕಲಾ ಕಣ್ಣೀರು!

ಅದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪತಿ-ಪತ್ನಿ ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿತ್ತು. ಅದರಂತೆ ಮಗನನ್ನು ಪತ್ನಿಯ ಸುಪರ್ದಿಗೆ ನೀಡಲು ಒಪ್ಪಂದವಾಯಿತು. ಜೊತಗೆ, ಪ್ರತಿ ವಾರಾಂತ್ಯ, ಬೇಸಿಗೆ/ಮಳೆಗಾಲದ ರಜಾ ದಿನದಲ್ಲಿ ಮಗನ ಭೇಟಿ ಮತ್ತು ಸುಪರ್ದಿ ಹಕ್ಕನ್ನು ಪತಿಗೆ ಕೊಡಲು ಒಪ್ಪಂದವಾಗಿತ್ತು. ಈ ಒಪ್ಪಂದವನ್ನು 2022ರ ಡಿಸೆಂಬರ್‌ನಲ್ಲಿ ಪಾಲಿಸಿದ್ದ ಪತ್ನಿ, 2023ರ ಜನವರಿಯಿಂದ ಪಾಲಿಸಿರಲಿಲ್ಲ. ಇದರಿಂದ ಪತಿಯು ಪತ್ನಿ ವಿರುದ್ಧ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.