ನನ್ನ ಸ್ಪರ್ಧೆ ತೀರ್ಮಾನಿಸಲು ಬಿಎಸ್‌ವೈ ಯಾರು?: ಸಿದ್ದರಾಮಯ್ಯ
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ನಾನು ತೀರ್ಮಾನಿಸುತ್ತೇನೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಹೇಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರು? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಜಯಪುರ (ಫೆ.24): ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಬೇಕು ಎಂಬುದರ ಬಗ್ಗೆ ನಾನು ತೀರ್ಮಾನಿಸುತ್ತೇನೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಹೇಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರು? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರ ಬದಲಿಸುವುದರಿಂದ ಅಲ್ಲಿನ ಮತದಾರರಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂದು ನಾನು ತೀರ್ಮಾನ ಮಾಡುತ್ತೇನೆ. ಯಡಿಯೂರಪ್ಪ ತೀರ್ಮಾನ ಮಾಡುವುದಲ್ಲ’ ಎಂದರು.
ನಾನು ಬಾದಾಮಿ ಕ್ಷೇತ್ರದಲ್ಲಿ ನಿಂತರೆ ಗೆಲ್ಲುವುದಿಲ್ಲ ಎನ್ನುವಂತಿಲ್ಲ. ಶೇ.100ರಷ್ಟುಗೆದ್ದೇ ಗೆಲ್ಲುತ್ತೇನೆ. ಬಾದಾಮಿ ಜನರಿಂದಾಗಿಯೇ ನಾನು ಐದು ವರ್ಷ ಶಾಸಕನಾಗಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಕೆಲಸ ಮಾಡಿದ್ದೇನೆ. ಹೀಗಾಗಿ, ಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಬದಲಿಸಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದರಿಂದ ಬಾದಾಮಿ ಜನತೆಗೆ ನಾನು ದ್ರೋಹ ಮಾಡಿದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ. ಪಾಪ, ನನ್ನ ಮೇಲೆ ಬಹಳ ಪ್ರೀತಿಯಿಂದ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಹೇಳಿರಬಹುದು. ಯಡಿಯೂರಪ್ಪನವರಿಗೆ ಆ ದೇವರು ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಜನಾರ್ದನ ರೆಡ್ಡಿ ಪಕ್ಷವನ್ನು ನಾನು ನೋಡಿಕೊಳ್ಳುತ್ತೇನೆ: ಕೇಂದ್ರ ಸಚಿವ ಅಮಿತ್ ಶಾ
ಬೊಮ್ಮಾಯಿ ಆರೆಸ್ಸೆಸ್ ಕೈಗೊಂಬೆ: ಬಳಿಕ, ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಹರಿಹಾಯ್ದರು. ಬೊಮ್ಮಾಯಿಯವರು ಆರೆಸ್ಸೆಸ್ ಕೈಗೊಂಬೆ. ಪಾಪ, ಯಡಿಯೂರಪ್ಪ ಅವರನ್ನು ಕಿತ್ತೊಗೆದು, ಬೊಮ್ಮಾಯಿಯವರನ್ನು ಸಿಎಂ ಮಾಡಿದರು. ಆದರೆ, ಬೊಮ್ಮಾಯಿ ಏನೂ ಕೆಲಸ ಮಾಡಿಲ್ಲ ಎಂದು ದೂರಿದರು. ಇದಕ್ಕೂ ಮೊದಲು, ಸಮಾವೇಶಕ್ಕೆ ಆಗಮಿಸಿದ ಸಿದ್ದುಗೆ ಅದ್ದೂರಿ ಸ್ವಾಗತ ಕೋರಲಾಯಿತು. ರೈತರು ಒಣದ್ರಾಕ್ಷಿಯಿಂದ ಮಾಡಿದ ಮಾಲೆ ಹಾಕಿ, ಕಂಬಳಿ ನೀಡಿ ಸನ್ಮಾನಿಸಿದರು. ಬಳಿಕ, ಸಾವಯವ ಕೃಷಿ ಮೂಲಕ ಬೆಳೆದ ಬೆಲ್ಲ ಹಾಗೂ ಕಬ್ಬು ಮಾರಾಟ ಮಾಡಿ ಬಂದ ನಾಣ್ಯಗಳಿಂದ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲರಿಗೆ ತುಲಾಭಾರ ಮಾಡಲಾಯಿತು.
ಬಿಜೆಪಿಗೆ ಯಾವ ಸಿದ್ಧಾಂತವಿದೆ?: ಈ ಚುನಾವಣೆಯಲ್ಲಿ ಅಬ್ಬಕ್ಕ ವರ್ಸಸ್ ಟಿಪ್ಪು ಚರ್ಚೆ ಆಗಲಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಸಿದ್ದಾಂತವೇ?. ಗಾಂಧಿ ವರ್ಸಸ್ ಸಾವರ್ಕರ್ ಎನ್ನುವ ಬಿಜೆಪಿಯವರ ಹೇಳಿಕೆ ಸಿದ್ಧಾಂತವೇ?. ಸಿದ್ದರಾಮಯ್ಯನವರನ್ನು ಮುಗಿಸಿ ಎಂಬ ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆ ಸಿದ್ಧಾಂತವೇ?. ಬಿಜೆಪಿಯವರಿಗೆ ಯಾವ ಸಿದ್ಧಾಂತವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಗೂ ಮುನ್ನ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಂಸ ತಿಂದಿದ್ದು ನಿಜ, ಆದರೆ ದೇಗುಲದೊಳಕ್ಕೆ ಹೋಗಿಲ್ಲ: ಸಿ.ಟಿ.ರವಿ
ಕಾಂಗ್ರೆಸ್‌ಗೆ ಸಿದ್ಧಾಂತ ಇಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆಗೆ ಟಾಂಗ್ ನೀಡಿದರು. ಮೋದಿ, ನಡ್ಡಾ ಕರ್ನಾಟಕಕ್ಕೆ ನೂರು ಸಾರಿ ಬಂದ್ರೂ ಯಾವುದೇ ಪ್ರಯೋಜನ ಆಗಲ್ಲ. ರಾಜ್ಯದ ಜನ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ನಿಂದ ಮುಸ್ಲಿಂ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ಪ್ರತಿಕ್ರಿಯಿಸಿ, ನಾವು ಯಾರ ಓಲೈಕೆ ಮಾಡಲ್ಲ. ಕಾಂಗ್ರೆಸ್ ಮನುಷ್ಯತ್ವದ ರಾಜಕಾರಣ ಮಾಡುತ್ತಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ದಲಿತರೆಲ್ಲಾ ಮನುಷ್ಯರು ಎಂದರು.