Asianet Suvarna News Asianet Suvarna News

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿದೇಶಾಂಗ ಮಂತ್ರಿ ಉಸ್ತುವಾರಿ: ಏನಿದು ಬಿಜೆಪಿ ಪ್ಲಾನ್?

* ಮುಂದಿನ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ

* ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿದೇಶಾಂಗ ಮಂತ್ರಿ ಉಸ್ತುವಾರಿ

* 2019ರ ಸೋತ ಲೋಕಸಭಾ ಕ್ಷೇತ್ರದ ಮೇಲೆ ದೃಷ್ಟಿ

Foreign Minister S Jaishankar Is The Incharge Of Bengaluru Rural District BJP Hidden Agenda Behind This Move pod
Author
Bangalore, First Published Jul 12, 2022, 9:42 AM IST

-ರವಿ ಶಿವರಾಮ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು(ಜು.12): ಬಿಜೆಪಿ ಚುನಾವಣೆ ತಯಾರಿಯೆ ಹಾಗಿರುತ್ತದೆ. ಕೇಡರ್ ಬೇಸ್ ಪಾರ್ಟಿ ಆಗಿರುವ ಬಿಜೆಪಿ ತನ್ನ ಸಂಘಟನೆ ಬಲದಿಂದ ದೇಶದ ಪ್ರತಿ ರಾಜ್ಯದಲ್ಲೂ ತನ್ನ ಜಾಲ ವಿಸ್ತರಣೆ ಮಾಡಿಕೊಂಡಿದೆ.‌ ಅತಿ ಹೆಚ್ಚು ಕಾರ್ಯಕರ್ತ ಪಡೆ ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆ ಹೊಂದಿರುವ ಬಿಜೆಪಿ ಈಗಾಗಲೇ 2024 ಲೋಕಸಭಾ ಚುನಾವಣೆಗೆ ದೇಶವ್ಯಾಪಿ ತಯಾರಿ ಆರಂಭಿಸಿದೆ ಅಂದ್ರೆ ಅಚ್ಚರಿ ಆಗಬಹುದು. ವಿಶೇಷ ಅಂದ್ರೆ ಈ ಬಾರಿ ಲೋಕಸಭಾ ಚುನಾವಣೆ ತಯಾರಿಗೆ ಸ್ವತಃ ಕೇಂದ್ರ ಸಚಿವರಗಳೆ ಇಳಿದಿದ್ದಾರೆ. 

2019ರ ಸೋತ ಲೋಕಸಭಾ ಕ್ಷೇತ್ರದ ಮೇಲೆ ದೃಷ್ಟಿ

ಹೌದು... 2019 ರ ಲೋಕಸಭಾ ಚುನಾವಣೆಯಲ್ಲಿ ದೇಶದ ಯಾವ ರಾಜ್ಯಗಳಲ್ಲಿ, ಯಾವ ಕ್ಷೇತ್ರಗಳಲ್ಲಿ ಸೋಲಾಗಿದೆ ಅಂತಹ ಕ್ಷೇತ್ರದಲ್ಲಿ ಸಂಘಟನೆ ಆರಂಭ‌ ಮಾಡಿರುವ ಬಿಜೆಪಿ ಹೈಕಮಾಂಡ್ ಅದಕ್ಕಾಗಿ ಕೇಂದ್ರ ಸಚಿವರಿಗೆ ಟಾಸ್ಕ್ ನೀಡಿದೆ.‌ ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಟಾಸ್ಕ್ ಅಲ್ಲ ಇಡಿ ದೇಶವ್ಯಾಪಿ ಸಂಘಟನೆಗೆ ಇಳಿದಿರುವ ಕೇಂದ್ರ ಬಿಜೆಪಿ, ರಾಜ್ಯದ ಸೋತ ಮೂರು ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವರ ನೇಮಕ ಮಾಡಿದ್ದಲ್ಲದೆ, ಆ ಸಚಿವರು ಈಗಾಗಲೇ ಕ್ಷೇತ್ರಕ್ಕೆ ಬಂದು ಒಂದು ಸಂಘಟನಾ ಸಭೆ ಮಾಡಿ ದೆಹಲಿಗೆ ವಾಪಸ್ ಆಗಿದ್ದಾರೆ.

ಸಿದ್ದರಾಮೋತ್ಸವದಿಂದ ಬಿಜೆಪಿಗೆ ನಡುಕ, ಅದಕ್ಕೇ ಟೀಕೆ: ಎಂಬಿಪಾ

ಕಳೆದ ಬಾರಿ ಮೂರು ಲೋಕಸಭಾ ಕ್ಷೇತ್ರ ಸೋತಿದ್ದ ಬಿಜೆಪಿ

ಐತಿಹಾಸಿಕ ವಿಜಯ ಎನ್ನುವಂತೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಬರೋಬ್ಬರಿ 25 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಪಡೆದಿದ್ದರೆ, ಹಾಸನದಲ್ಲಿ ದೇವೆಗೌಡರ ಮೊಮ್ಮಗ ಪ್ರಜ್ವಲ ಗೆಲುವಿನ ಮೂಲಕ ತನ್ನ ರಾಜಕೀಯ ಜೀವನ ಆರಂಭಿಸಿದ್ದರು. ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಗೆಲ್ಲುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಗುದ್ದಾಟದ ನಡುವೆಯೂ ಕಾಂಗ್ರೆಸ್ ನಿಂದ ಡಿಕೆ ಸುರೇಶ್ ಒಬ್ಬರೆ ಗೆಲುವು ಕಂಡಿದ್ದರು. ಬಿಜೆಪಿ ಸೋತಿರುವ ಈ ಮೂರು ಕ್ಷೇತ್ರದ ಮೇಲೆ ಬಿಜೆಪಿ ದೃಷ್ಟಿ ನೆಟ್ಟಿದ್ದು ಈ ಮೂರು ಕ್ಷೇತ್ರಗಳಿಗೆ ಕೇಂದ್ರ ಸಚಿವರನ್ನು ನೇಮಕ ಮಾಡಿದೆ. 

Foreign Minister S Jaishankar Is The Incharge Of Bengaluru Rural District BJP Hidden Agenda Behind This Move pod

ವಿದೇಶಾಂಗ ಮಂತ್ರಿಗೂ ಜವಬ್ದಾರಿ - ಪವರ್ ಮಿನಿಸ್ಟರ್ ಗೂ ಉಸ್ತುವಾರಿ!

ಬೆಂಗಳೂರು ಗ್ರಾಮಾಂತರ ಕ್ಷೇತ್ರ, ಹಾಸನ,‌ಮಂಡ್ಯಕ್ಕೆ ಕೇಂದ್ರ ಸಚಿವರನ್ನು ಹೆಡ್ ಮಾಸ್ಟರ್ ಮಾಡಿ ಕಳಿಸಿರುವ ಹೈಕಮಾಂಡ್ ಅಲ್ಲಿನ ಕ್ಷೇತ್ರದ ವರದಿ ತರುವಂತೆ ಕಟ್ಟಪ್ಟಣೆ ಮಾಡಿದೆ. ಮಂಡ್ಯ ಮತ್ತು ಹಾಸನ ಕ್ಷೇತ್ರಕ್ಕೆ ಕೇಂದ್ರದ ಮಿನಿಸ್ಟರ್ ಕ್ರಿಶನ್ ಪಾಲ್ ಗುರ್ಜರ್ ರನ್ನು ಈ ಎರಡು ಕ್ಷೇತ್ರಗಳಿಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಅಂತೇಯೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ರನ್ನು ಉಸ್ತುವಾರಿ ಮಾಡಿದೆ ಹೈಕಮಾಂಡ್.

ಬಿಎಸ್‌ವೈ ಜೈಲಿಗೆ ಕಳುಹಿಸಲು ನೀವು ಷಡ್ಯಂತ್ರ ಮಾಡಲಿಲ್ಲವೇ?: ಸಿದ್ದರಾಮಯ್ಯ

ತಿಂಗಳಲ್ಲಿ ಮೂರು ದಿನ ಕ್ಷೇತ್ರದಲ್ಲಿ ಸಭೆ

ಉಸ್ತುವಾರಿ ವಹಿಸಿಕೊಂಡ‌ ಕೇಂದ್ರ ಸಚಿವರು, ಕ್ಷೇತ್ರಕ್ಕೆ ಬಂದು ತಿಂಗಳಲ್ಲಿ ಮೂರು ದಿನ ವಾಸ್ತವ್ಯ ಹೂಡಿ, ವರದಿ ಸಿದ್ಧಮಾಡಬೇಕು. ಕ್ಷೇತ್ರದ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಬೇಕು. ಕಳೆದ ಬಾರಿ ಸೋಲಿಗೆ ಕಾರಣ ಏನು, ಗೆಲುವಿಗೆ ಯಾವ ಮಾನದಂಡ, ಸಂಘಟನೆಯಲ್ಲಿ ಇರುವ ಲೋಪ ಏನು, ಈಗ ಹೇಗೆ ಸಂಘಟನೆ ಮಾಡಿ ಪಕ್ಷ ಗೆಲ್ಲಲು ಕೆಲಸ ಮಾಡಬೇಕು ಎಂಬ ಬಗ್ಗೆ ವರದಿ ಸಿದ್ಧಪಡಿಸಬೇಕು. 50 ಪ್ರಮುಖ ಕಾರ್ಯಕರ್ತರ ಪಡೆ ಕಟ್ಟಿ, ಒಬ್ಬೊಬ್ಬರಿಗೆ ಸಂಘಟನೆ ಜವಬ್ದಾರಿ ನೀಡಬೇಕು. ಕ್ಷೇತ್ರದಲ್ಲಿ ಸೋಶಿಯಲ್ ಮೀಡಿಯಾ ಟೀಮ್ ಆಕ್ಟಿವ್ ಮಾಡಿ, ಕೇಂದ್ರದ ಯೋಜನೆಗೆಳು , ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡಬೇಕು. ಜೊತೆಗೆ ಕಳೆದ ಬಾರಿ ಸ್ಪರ್ಧೆ ಮಾಡಿದ ಅಭ್ಯರ್ಥಿ ಬಗ್ಗೆ ಮಾಹಿತಿ, ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆ ಇತ್ಯಾದಿ.‌ ಹೀಗೆ ಕುಲಂಕುಶ ಚರ್ಚೆ ಮಾಡಿ ಕ್ಷೇತ್ರದಲ್ಲಿ ಕಳೆದ ಬಾರಿ ಸೋಲಿಗೆ ಕಾರಣ ಏನು‌.‌ಈಗ ಗೆಲುವಿಗೆ ಅನುಸರಿಸಬೇಕಾದ ಮಾರ್ಗ ಯಾವುದು ಎನ್ನುವ ವರದಿಯನ್ನು ಆಗಸ್ಟ್ ಮೊದಲ ವಾರದಲ್ಲಿ ಹೈಕಮಾಂಡ್ ಗೆ ನೀಡಬೇಕಿದೆ. ಕ್ರಿಶನ್ ಪಾಲ್ ಗುರ್ಜರ್ ತಮಗೆ ನೀಡಿದ ಜವಬ್ದಾರಿಯನ್ನು ಈಗಾಗಲೇ ಆರಂಭ ಮಾಡಿದ್ದು ಕಳೆದ ಎರಡು ದಿನಗಳ ಹಿಂದೆ ಹಾಸನಕ್ಕೆ ಬಂದು ಅಲ್ಲಿ ಕಾರ್ಯಕರ್ತರ ಜೊತೆ ಸಭೆ ಮಾಡಿ ತೆರಳಿದ್ದಾರೆ.

ವಿಧಾನಸಭೆ ಚುನಾವಣೆಗೆ ಈ ಪ್ಲಾನ್ ಅನುಕೂಲ

ಹಳೆ ಮೈಸೂರು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಹಾಸನ ,ಮಂಡ್ಯ ಈ ಮೂರು ಜಿಲ್ಲೆಗಳಲ್ಲಿ ಬಿಜೆಪಿಗೆ ಬಲವಿಲ್ಲ. ಅದು ವಿಧಾನಸಭೆ ಚುನಾವಣೆ ಗೆಲುವಿಗೆ ಕಠಿಣವಾಗಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸದೆ ಬಿಜೆಪಿ ಬಹುಮತದ ಕನಸು ಕಾಣೋದು ಕೇವಲ ಕನಸಷ್ಟೇ. ಈ ಮೂರು ಜಿಲ್ಲೆಗಳಿಂದ ಬಿಜೆಪಿ ಶಾಸಕರು ಕೇವಲ ಎರಡು.! ಕೆ ಆರ್ ಪೇಟೆಯಿಂದ ಮೊದಲ‌ ಬಾರಿ ಬಿಜೆಪಿಗೆ ಬಂದು ಗೆದ್ದಿರುವ ಸಚಿವ ನಾರಾಯಣ್ ಗೌಡ. ಹಾಸನದಲ್ಲಿ ಪ್ರೀತಮ್ ಗೌಡ ಬಿಟ್ಟರೆ, ಬಿಜೆಪಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಸೋಲು. ಹೀಗಾಗಿ ಈಗ ಲೋಕಸಭಾ ಚುನಾವಣೆ ತಯಾರಿಗೆ ಉಸ್ತುವಾರಿ ನೇಮಕ ಮಾಡಿರುವ ಹೈಕಮಾಂಡ್, ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಈ ಸಂಘಟನೆ ಅನುಕೂಲ ಮಾಡಿಕೊಡಲಿದೆ. 

ಇದೇ ತಿಂಗಳ 20ಕ್ಕೆ ಎಲ್ಲಾ ಮೋರ್ಚಾ ಪ್ರಕೋಷ್ಠಗಳ ಸಭೆ

ಲೋಕಸಭಾ ಚುನಾವಣೆಗೆ ಮುಂಚೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇದೆ. ಈಗಾಗಲೇ ಚುನಾವಣೆ ತಯಾರಿ ಆರಂಭ ಮಾಡಿರೊ ರಾಜ್ಯ ಬಿಜೆಪಿ ಮೊನ್ನೆ ಹಾಸನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದೆ. ಆ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಆಗಿದ್ದು, ಇದೇ ತಿಂಗಳ 20 ರಂದು ಬೆಂಗಳೂರಿನಲ್ಲಿ ಎಲ್ಲಾ ಮೋರ್ಚಾಗಳು ಮತ್ತು ಪ್ರಕೋಷ್ಠಗಳ ಸಭೆ ಕರೆಯಲಾಗಿದೆ. ಯುವ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಎಸ್ ಟಿ ಮೋರ್ಚಾ, ಒಬಿಸಿ ಮೋರ್ಚಾ ಹೀಗೆ ಹತ್ತಕ್ಕು ಹೆಚ್ಚು ಮೋರ್ಚಾಗಳನ್ನು ಹೊಂದಿರುವ ಬಿಜೆಪಿ, ಕಾನೂನು ಪ್ರಕೋಷ್ಠ, ಹಾಲು ಪ್ರಕೋಷ್ಠ, ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಹೀಗೆ ಒಂಬತ್ತು ಹತ್ತು ಪ್ರಕೋಷ್ಠಗಳ ಜೊತೆಗೂಡಿ ಸಭೆ ಮಾಡಲಿದೆ. ಸಭೆಯಲ್ಲಿ ಚುನಾವಣೆಗೆ ಎಲ್ಲಾ ಮೋರ್ಚಾ ಮತ್ತು ಪ್ರಕೋಷ್ಠಗಳಿಗೆ ಜವಬ್ದಾರಿ ಹಂಚಿಕೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಧಾನಸಭೆ ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇದೆ. ಈ ಮಧ್ಯೆ ಲೋಕಸಭಾ ಚುನಾವಣೆಗೆ ತಯಾರಿ ಆರಂಭ ಮಾಡಿರುವ ಹೈಕಮಾಂಡ್, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಗೆಲುವಿನ ಮೇಲೂ ಕಣ್ಣಿಟ್ಟಿದೆ.

Follow Us:
Download App:
  • android
  • ios