ಬಿಎಸ್‌ವೈ ಜೈಲಿಗೆ ಕಳುಹಿಸಲು ನೀವು ಷಡ್ಯಂತ್ರ ಮಾಡಲಿಲ್ಲವೇ?: ಸಿದ್ದರಾಮಯ್ಯ

‘ನಾಲ್ಕು ದಶಕಗಳ ಕಾಲ ರಕ್ತ-ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿ, ಪಕ್ಷ ಅಧಿಕಾರದಲ್ಲಿದ್ದಾಗಲೇ ಅವರನ್ನು ಜೈಲಿಗೆ ಕಳುಹಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾರ ಷಡ್ಯಂತ್ರ? ನೀವೂ ಅದರಲ್ಲಿ ಶಾಮೀಲಾಗಿಲ್ಲವೇ?’ ಹೀಗೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Siddaramaiah Outraged Pralhad Joshi Over His Remarks On Siddaramotsava gvd

ಬೆಂಗಳೂರು (ಜು.12): ‘ನಾಲ್ಕು ದಶಕಗಳ ಕಾಲ ರಕ್ತ-ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿ, ಪಕ್ಷ ಅಧಿಕಾರದಲ್ಲಿದ್ದಾಗಲೇ ಅವರನ್ನು ಜೈಲಿಗೆ ಕಳುಹಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾರ ಷಡ್ಯಂತ್ರ? ನೀವೂ ಅದರಲ್ಲಿ ಶಾಮೀಲಾಗಿಲ್ಲವೇ?’ ಹೀಗೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಡಾ.ಜಿ. ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಳುಗಿಸಿದ ಸಿದ್ದರಾಮಯ್ಯ ಅವರ ಮುಂದಿನ ಗುರಿ ಡಿ.ಕೆ. ಶಿವಕುಮಾರ್‌’ ಎಂದು ಹೇಳಿಕೆ ನೀಡಿದ್ದ ಪ್ರಹ್ಲಾದ್‌ ಜೋಶಿ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ‘ಬಿ.ಎಸ್‌.ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನದ ಆಸೆ ತೋರಿಸಿ, ಅವರಿಂದಲೇ ಆಪರೇಷನ್‌ ಕಮಲ ಮಾಡಿಸಿದ್ದು ಯಾರು? ಕೊನೆಗೆ ಅವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾರು? ಕೈಗೆ ಬಂದದ್ದು ನಿಮ್ಮ ಬಾಯಿಗೆ ಬಾರದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ?’ ಎಂದು ಜೋಶಿ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ, ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ರಚನೆ

‘ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಪ್ರತಿದಿನ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವುದು ಯಾರ ಕುಮ್ಮಕ್ಕಿನಿಂದ? ಪಕ್ಷದ ಹಿರಿಯ ನಾಯಕನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಶಾಸಕರ ವಿರುದ್ಧ ಕ್ರಮಕೈಗೊಳ್ಳದಂತೆ ತಡೆಯುತ್ತಿರುವ ಕೈಗಳು ಯಾರದ್ದು? ಯಡಿಯೂರಪ್ಪನವರ ಮಗ ವಿಜಯೇಂದ್ರನವರಿಗೆ ಸಚಿವ ಸ್ಥಾನ ಸಿಗದಂತೆ ಮಾಡಲು ಪಂಚೆ ಎತ್ತಿಕಟ್ಟಿನಿಂತು ಸಂತೋಷ ಪಡುತ್ತಿರುವವರು ಯಾರು? ಆ ಸಂತೋಷದಲ್ಲಿ ಭಾಗಿಯಾಗಿರುವವರು ಯಾರು? ಹಗರಣಗಳಲ್ಲಿ ಅವರ ಹೆಸರನ್ನು ಸೋರಿಬಿಡುತ್ತಿರುವ ಸಂಚು ಯಾರದ್ದು?’ ಎಂದು ಸರಣಿ ಪ್ರಶ್ನೆಗಳ ಮೂಲಕ ಹರಿಹಾಯ್ದಿದ್ದಾರೆ.

‘ಲಿಂಗಾಯತರನ್ನು, ಲಿಂಗಾಯತ ಮಠದ ಸ್ವಾಮಿಗಳನ್ನು ಓಲೈಸುತ್ತಾ ಪಕ್ಷ ಕಟ್ಟಿಈಗ ಪಕ್ಷದಲ್ಲಿರುವ ಒಬ್ಬೊಬ್ಬ ಲಿಂಗಾಯತರನ್ನು ಮೂಲೆ ಗುಂಪು ಮಾಡುತ್ತಿರುವುದು ಯಾರ ಕಾರಸ್ಥಾನ (ಕುತಂತ್ರ)? ಮುಖ್ಯಮಂತ್ರಿ ಸ್ಥಾನದ ಕನಸಿನಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಶಾಸಕ ಅರವಿಂದ ಬೆಲ್ಲದ್‌ ಅವರ ಆಸೆಗೆ ತಣ್ಣೀರೆರಚಿದ್ದು ಯಾರು?’

‘ಮೊದಲ ಅಧಿಕಾರದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಮಾಡಿದ್ದ ಬಿಜೆಪಿ, ಎರಡನೇ ಅವಧಿಯ ವರ್ಷ ಮುಗಿಯುವಷ್ಟರಲ್ಲಿ ಮೊದಲನೆಯವರನ್ನು ಪದಚ್ಯುತಿಗೊಳಿಸಿ ಎರಡನೇ ಮುಖ್ಯಮಂತ್ರಿಯನ್ನು ಮಾಡಿತ್ತು. ಈಗ ಎರಡನೆಯವರನ್ನೂ ಇಳಿಸಿ ಮೂರನೆಯವರನ್ನು ಕೂರಿಸಲು ಹೊರಟಿರುವ ನೀವು ಕಾಂಗ್ರೆಸ್‌ ಭಿನ್ನಮತದ ಬಗ್ಗೆ ಮಾತನಾಡುವುದು ತಮಾಷೆಯಾಗಿದೆ.’

ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವ ನಾಗೇಶ್‌ ಎಡವಟ್ಟುಗಳು ಒಂದೋ, ಎರಡೋ?: ಸಿದ್ದು

‘ಸಾಧನೆಯ ಬಲದಿಂದ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ನಿಮ್ಮದೇನಿದ್ದರೂ ಆಪರೇಷನ್‌ ಕಮಲದ ಹೊಲಸು ದಂಧೆ. ಎದುರಿಗಿದ್ದವರ ಊಟದೆಲೆಯ ಮೇಲಿನ ಸತ್ತ ನೊಣವನ್ನು ಹುಡುಕುವ ಚಾಳಿ ಬಿಡಿ, ನಿಮ್ಮ ಊಟದ ಎಲೆಯಲ್ಲಿ ಸತ್ತು ಬಿದ್ದಿರುವ ಆನೆಯನ್ನು ನೋಡಿ ಪ್ರಹ್ಲಾದ್‌ ಜೋಶಿಯವರೇ’ ಎಂದು ಕಟುವಾಗಿ ಟೀಕಿಸಿದ್ದಾರೆ.

Latest Videos
Follow Us:
Download App:
  • android
  • ios