ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಹಾಗೂ ಬಿಜೆಪಿ ಇವತ್ತು ಪಾದಯಾತ್ರೆ ಮಾಡ್ತಿವೆ. ಅದರ ರೂವಾರಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರ ಆರ್ಶೀವಾದವನ್ನೂ ಪಡೆದಿದ್ದಾರೆ. ಬೆನ್ನಲ್ಲೇ ಬಿಜೆಪಿ, ಜೆಡಿಎಸ್ ತಂತ್ರದ ಪ್ರತಿಯಾಗಿ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ.

ಬೆಂಗಳೂರು/ರಾಮನಗರ: ರಾಜಕೀಯದಲ್ಲಿ ಸಮಯಪ್ರಜ್ಞೆ ಮತ್ತು ತಂತ್ರಗಾರಿಕೆ ಬಹಳ ಮುಖ್ಯ ಎಂಬ ಮಾತೊಂದು ಇದೆ. ಈ ಹಿಂದೆ ದೆಹಲಿಯಲ್ಲಿ 'ನೀಟ್' ಅಕ್ರಮದ ವಿರುದ್ಧ ಜೆನ್‌ಜಿ (Gen-Z) ಯುವಜನತೆ ಹೋರಾಟಕ್ಕಿಳಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಸಂಚಲನ ಮೂಡಿಸಿದ್ದರು. ಈಗ ಅದೇ ಮಾದರಿಯ ತಂತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನುಸರಿಸಿದ್ದಾರೆ ಎಂಬ ಅನುಮಾನ ಮೂಡಿದೆ.

ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಇಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಪಡೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಎಚ್ಚೆತ್ತ ಡಿ.ಕೆ. ಶಿವಕುಮಾರ್, ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ ಸಂದೇಶವೊಂದನ್ನು ಹರಿಬಿಡುವ ಮೂಲಕ ಪ್ರತಿಪಕ್ಷಗಳ ಅಸ್ತ್ರವನ್ನ ಕುಗ್ಗಿಸಲು ಪ್ರಯತ್ನಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ? ಸರ್ಕಾರದ ಸ್ಪಷ್ಟನೆ ಇಲ್ಲಿದೆ

ಬಿಡದಿ ಟೌನ್‌ಶಿಪ್ ಎಂದರೆ ಕೇವಲ ಬಡಾವಣೆಯಲ್ಲ, ಅದು 'ಎಐ ಸಿಟಿ'

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಮರುಜೀವ ನೀಡಲಾಗುತ್ತಿದೆ. ಇದು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಅತ್ಯಾಧುನಿಕ ಕ್ರೀಡಾಂಗಣ, ಉದ್ಯಾನವನ ಹಾಗೂ ಸುಸಜ್ಜಿತ ವಸತಿ ಒಳಗೊಂಡ 'ಅತ್ಯಾಧುನಿಕ ಎಐ ಸಿಟಿ' (AI City) ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದ್ದಾರೆ.

₹25 ಲಕ್ಷದ ಬದಲಿಗೆ ₹3 ಕೋಟಿ ಪರಿಹಾರ!

ರೈತರ ಹಿತರಕ್ಷಣೆಯೇ ನಮ್ಮ ಆದ್ಯತೆ ಎಂದಿರುವ ಡಿ.ಕೆ.ಎಸ್, ಪರಿಹಾರದ ಮೊತ್ತದ ಮೂಲಕ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿತ್ತು. ಆದರೆ ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಹೇಳುವ ಮೂಲಕ ರೈತರ ಗಮನ ಸೆಳೆದಿದ್ದಾರೆ.

ಹಣ ಬೇಡ ಎನ್ನುವವರಿಗೆ 50:50 ಅವಕಾಶ

ಹಣದ ಬದಲಾಗಿ ಭೂಮಿ ಬಯಸುವ ರೈತರಿಗೆ ಶೇ. 50ರಷ್ಟು ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲಾಗುವುದು. ಈ ಮೂಲಕ ರೈತರು ಯೋಜನೆಯ ಪಾಲುದಾರರಾಗಬಹುದು ಎಂಬ ಆಫರ್ ನೀಡಿದ್ದಾರೆ.

ಯಾರ ಮೇಲೂ ಒತ್ತಾಯವಿಲ್ಲ, ಇದು ಐಚ್ಛಿಕ

ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿರುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವಿರೋಧ ಪಕ್ಷಗಳ 'ಬಲವಂತದ ಭೂಸ್ವಾಧೀನ' ಎಂಬ ಆರೋಪಕ್ಕೆ ಆರಂಭದಲ್ಲೇ ತಣ್ಣೀರೆರಚಿದ್ದಾರೆ.

ದಕ್ಷಿಣ ಬೆಂಗಳೂರಿನ ಚಿತ್ರಣ ಬದಲಿಸುವ ಗ್ರೇಟರ್ ಬೆಂಗಳೂರು ಪ್ಲಾನ್

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆಯು ಬೆಂಗಳೂರು ದಕ್ಷಿಣ ಜಿಲ್ಲೆಯ ಆರ್ಥಿಕ ಚಿತ್ರಣವನ್ನೇ ಬದಲಿಸಲಿದೆ. ಯುವಜನತೆಗೆ ಸಾವಿರಾರು ಉದ್ಯೋಗಾವಕಾಶ ಸೃಷ್ಟಿಸುವುದು ಮತ್ತು ಅನ್ನದಾತರಿಗೆ ಗೌರವಯುತ ಜೀವನ ಒದಗಿಸುವುದು ನಮ್ಮ ಗುರಿ ಎಂದು ಹೇಳಿರುವ ಡಿ.ಕೆ. ಶಿವಕುಮಾರ್, ಈ ಅಭಿವೃದ್ಧಿ ಕಾರ್ಯಕ್ಕೆ ಜನರ ಸಹಕಾರ ಕೋರಿದ್ದಾರೆ. ಒಟ್ಟಿನಲ್ಲಿ, ಪ್ರತಿಪಕ್ಷಗಳ ಪಾದಯಾತ್ರೆಗೆ ಕೌಂಟರ್ ನೀಡಲು ಡಿ.ಕೆ.ಶಿವಕುಮಾರ್ ಅವರು ಮೋದಿ ಮಾದರಿಯಲ್ಲೇ ಡಿಜಿಟಲ್ ಅಸ್ತ್ರ ಪ್ರಯೋಗಿಸಿದ್ದು ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.