ವಿದೇಶಾಂಗ ಸಚಿವಾಲಯ ಯು-ಟರ್ನ್ ಹೊಡೆದಿದ್ದು ನನ್ನ ಅಮೆರಿಕ ಅಧಿಕೃತ ಭೇಟಿಗೆ ಇದೀಗ ಅನುಮತಿ ನೀಡಿದೆ. ಮೊದಲಿಗೆ ನನಗೆ ಏಕೆ ಅನುಮತಿ ನಿರಾಕರಣೆ ಮಾಡಲಾಗಿತ್ತು?
ಬೆಂಗಳೂರು (ಜೂ.22): ‘ವಿದೇಶಾಂಗ ಸಚಿವಾಲಯ ಯು-ಟರ್ನ್ ಹೊಡೆದಿದ್ದು ನನ್ನ ಅಮೆರಿಕ ಅಧಿಕೃತ ಭೇಟಿಗೆ ಇದೀಗ ಅನುಮತಿ ನೀಡಿದೆ. ಮೊದಲಿಗೆ ನನಗೆ ಏಕೆ ಅನುಮತಿ ನಿರಾಕರಣೆ ಮಾಡಲಾಗಿತ್ತು? ಅಮೆರಿಕದಲ್ಲಿ ನಡೆಯುತ್ತಿರುವ ಪ್ರಮುಖ ಕಾರ್ಯಕ್ರಮಗಳು ಮುಗಿಯುವ ಹಂತದಲ್ಲಿರುವಾಗ ಅನುಮತಿ ನೀಡುತ್ತಿರುವ ಉದ್ದೇಶವಾದರೂ ಏನು?’ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಈ ಕುರಿತು ಅಧಿಕೃತ ಎಕ್ಸ್ ಖಾತೆಯಲ್ಲಿ ಸರಣಿ ಪ್ರಶ್ನೆ ಕೇಳಿರುವ ಅವರು, ನಾನು ಮೇ 15 ರಂದು ಜೂ.14 ರಿಂದ 27ರ ನಡುವೆ ಹಲವು ಅಧಿಕೃತ ಸಭೆ, ಸಮಾವೇಶಗಳಲ್ಲಿ ಭಾಗಿಯಾಗಲು ಅಮೆರಿಕ ಭೇಟಿಗಾಗಿ ಅನುಮತಿ ಕೇಳಿದ್ದೆ. ಸಕಾರಣ ಇಲ್ಲದೆ ನನಗೆ ಅನುಮತಿ ನಿರಾಕರಿಸಿದ್ದ ವಿದೇಶಾಂಗ ಸಚಿವಾಲಯ ಇದೀಗ ಯು-ಟರ್ನ್ ಹೊಡೆದು ಅನುಮತಿ ನೀಡಿದೆ ಎಂದಿದ್ದಾರೆ.
ಜೂ.14ರಿಂದ 27ರವರೆಗಿನ ಅಮೆರಿಕ ಭೇಟಿಗೆ ಮೇ 15 ರಂದು ಅಧಿಕಾರಿಗಳು ಸೇರಿ ಸಚಿವರ ನಿಯೋಗದ ಅಮೆರಿಕ ಭೇಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಜೂ.11ಕ್ಕೆ ಅಧಿಕಾರಿಗಳ ನಿಯೋಗದ ಭೇಟಿಗೆ ಅನುಮತಿ ನೀಡಿದ್ದರೆ, ನನಗೆ (ಸಚಿವ ಪ್ರಿಯಾಂಕ ಖರ್ಗೆ) ಅನುಮತಿ ನಿರಾಕರಿಸಲಾಗಿತ್ತು. ಕಿಯಾನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡರ ಭೇಟಿಗಾಗಿ ಜೂ.12 ರಂದು ಅರ್ಜಿ ಹಾಕಲಾಗಿತ್ತು. ಅದಕ್ಕೆ ಜೂ.14 ಕ್ಕೆ ಮಂಜೂರಾತಿ ನೀಡಿತ್ತು. ಆದರೆ ನನ್ನ ಅರ್ಜಿಯನ್ನು ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲದೇ ನಿರಾಕರಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಜೂ.19 ರಂದು ಆಗಿರುವ ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದೆ. ತಾರತಮ್ಯ ಹಾಗೂ ರಾಜಕೀಯ ಕಾರಣದ ಸಾಧ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೆ. ಈ ಕುರಿತು ಸುದ್ದಿ ವ್ಯಾಪಕವಾಗಿ ಪ್ರಚಾರವಾದ ಬೆನ್ನಲ್ಲೇ ಅದೇ ಸಂಜೆ ವಿದೇಶಾಂಗ ಸಚಿವಾಲಯ ನನ್ನ ಅರ್ಜಿಗೆ ಅನುಮತಿ ನೀಡಿದೆ. ನಾನು ಅರ್ಜಿ ಹಾಕಿದ 36 ದಿನಗಳ ಬಳಿಕ, ಅಧಿಕೃತವಾಗಿ ಅನುಮತಿ ನಿರಾಕರಿಸಿದ 15 ದಿನಗಳ ಬಳಿಕ ಮತ್ತು ನನ್ನ ಉದ್ದೇಶಿತ ಪ್ರಯಾಣ ದಿನಾಂಕದ 5 ದಿನಗಳ ಬಳಿಕ ವಿದೇಶಾಂಗ ಸಚಿವಾಲಯ ತನ್ನ ಹಿಂದಿನ ಅನುಮತಿ ನಿರಾಕರಣೆಯ ತೀರ್ಮಾನ ರದ್ದುಗೊಳಿಸಿದೆ ಎಂದು ದೂರಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ಪ್ರಮುಖ ಕಾರ್ಯಕ್ರಮಗಳು ಮುಗಿಯುವ ಹಂತದಲ್ಲಿರುವಾಗ ಈಗ ಅನುಮತಿ ನೀಡುತ್ತಿರುವ ಉದ್ದೇಶವಾದರು ಏನು? ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ನ್ಯಾಷನಲ್ ಕ್ವಾಂಟಮ್ ಮಿಷನ್ ಮತ್ತು ಇಂಡಿಯಾ ಎಐ ಮಿಷನ್ ಎಂಬ ಘೋಷಣೆ ಮಾಡುತ್ತಿದೆ. ಹೀಗಿರುವಾಗ ಭಾರತದ ತಂತ್ರಜ್ಞಾನ, ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಬೆಂಬಲ ನಿರಾಕರಿಸಿದರೆ ಹೇಗೆ? ಈ ಪ್ರಶ್ನೆಗಳಿಗೆ ಕರ್ನಾಟಕ ಉತ್ತರ ಬಯಸುತ್ತಿದೆ ಎಂದು ಉತ್ತರಕ್ಕಾಗಿ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
