ರಾಜ್ಯದ ಐಟಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಮುಖ ಸಂಸ್ಥೆಗಳೊಂದಿಗೆ ಸಭೆ ನಡೆಸಲು ಅಮೆರಿಕಕ್ಕೆ ತೆರಳಲು ಅನುಮತಿ ನಿರಾಕರಿಸಿದ್ದಕ್ಕೆ ಕಾರಣ ತಿಳಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು (ಜೂ.20): ರಾಜ್ಯದ ಐಟಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಮುಖ ಸಂಸ್ಥೆಗಳೊಂದಿಗೆ ಸಭೆ ನಡೆಸಲು ಅಮೆರಿಕಕ್ಕೆ ತೆರಳಲು ಅನುಮತಿ ನಿರಾಕರಿಸಿದ್ದಕ್ಕೆ ಕಾರಣ ತಿಳಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್‌, ಅಮೆರಿಕದಲ್ಲಿ ಬಯೋ ಕನ್ವೆನ್ಷನ್‌ ಸಮ್ಮೇಳನಕ್ಕೆ ರಾಜ್ಯದ ನಿಯೋಗ ಕೊಂಡೊಯ್ಯುವ ಕುರಿತು ಅನುಮತಿಸುವಂತೆ ಕಳೆದ ಮೇ 15ರಂದು ವಿದೇಶಾಂಗ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆದರೆ, ಜೂ.4ರಂದು ಯಾವುದೇ ಕಾರಣ ನೀಡದೆ ಪ್ರಸ್ತಾವನೆ ತಿರಸ್ಕರಿಸಲಾಯಿತು. ಅದಾದ ನಂತರ ನಿಯೋಗದಲ್ಲಿ ನನ್ನ ಹೆಸರು ತೆಗೆದು, ಕಿಯೋನಿಕ್ಸ್ ಅಧ್ಯಕ್ಷ ಶರತ್‌ ಬಚ್ಚೇಗೌಡ ಅವರ ಹೆಸರು ಸೇರಿಸಿ ಜೂ.6ರಂದು ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದಾಗ, ಜೂ.11ರಂದು ಅಮೆರಿಕಕ್ಕೆ ತೆರಳಲು ಅನುಮತಿಸಲಾಯಿತು. ಹೀಗೆ ನನ್ನ ಹೆಸರಿದ್ದ ಪ್ರಸ್ತಾವನೆ ತಿರಸ್ಕರಿಸಿದ್ದಕ್ಕೆ ವಿದೇಶಾಂಗ ಸಚಿವಾಲಯ ಈವರೆಗೆ ಕಾರಣ ತಿಳಿಸಿಲ್ಲ. ಈ ಕುರಿತು ಸ್ಪಷ್ಟೀಕರಣ ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯುತ್ತೇನೆ. ಜತೆಗೆ ಪ್ರಧಾನಿಗೆ ಪತ್ರ ಬರೆಯುವಂತೆ ಸಿಎಂಗೆ ಕೋರುತ್ತೇನೆ ಎಂದರು.

ರಾಜ್ಯ ಸರ್ಕಾರದ ಸಚಿವರೊಬ್ಬರು ರಾಜ್ಯದ ಅಭಿವೃದ್ಧಿ ವಿಚಾರವಾಗಿ ವಿದೇಶಕ್ಕೆ ತೆರಳಲು ಅನುಮತಿಸದಿರುವುದು ಆರೋಗ್ಯಕರ ನಡೆಯಲ್ಲ. ಇದು ನನಗೆ ಮಾತ್ರವಲ್ಲ ತೆಲಂಗಾಣ, ತಮಿಳುನಾಡಿನ ಸಚಿವರಿಗೂ ವಿದೇಶಗಳಿಗೆ ನಿಯೋಗ ಕೊಂಡೊಯ್ಯುವ ನೇತೃತ್ವ ವಹಿಸಲು ಅನುಮತಿಸಿರಲಿಲ್ಲ ಎಂಬ ಮಾಹಿತಿಯಿದೆ. ಇದನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ನಾವು ಎಲ್ಲದರಲ್ಲೂ ರಾಜಕೀಯ ಮಾಡಬಾರದು ಎಂದು ಸುಮ್ಮನಿದ್ದೆವು. ಆದರೆ, ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದಕ್ಕೂ ತಡೆಯೊಡ್ಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಟಿ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲಿ ಮಾತ್ರವಲ್ಲ ಏಷ್ಯಾದಲ್ಲಿಯೇ ಮುಂಚೂಣಿಯಲ್ಲಿದೆ. ನವೋದ್ಯಮದಲ್ಲಿ ಕರ್ನಾಟಕದ ವಿಶ್ವದಲ್ಲಿ 16ನೇ ಸ್ಥಾನದಲ್ಲಿದೆ. ಹೀಗೆ ಹಲವು ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ಹಿಂದೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರೊಂದಿಗೆ ಯೂರೋಪ್‌, ಅಮೆರಿಕ ಪ್ರವಾಸ ಕೈಗೊಂಡಾಗ 70ಕ್ಕೂ ಹೆಚ್ಚಿನ ಸಭೆಗಳನ್ನು ನಡೆಸಿ 30 ಸಾವಿರ ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ದೊರೆಯುವಂತೆ ಮಾಡಲಾಗಿತ್ತು. ಅದರಲ್ಲಿ 21,842 ಕೋಟಿ ರು. ಬಂಡವಾಳ ರಾಜ್ಯದಲ್ಲಿ ಹೂಡಿಕೆಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಕ್ರಮದಿಂದಾಗಿ 20 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಇದು ನಮ್ಮ ನಿಯೋಗ ತೆರಳಿದಾಗ ರಾಜ್ಯಕ್ಕೆ ಆಗುವ ಅನುಕೂಲ. ಅದನ್ನು ಸಹಿಸಲಾಗದೆ ಕೇಂದ್ರ ಸರ್ಕಾರ ಅಮೆರಿಕಕ್ಕೆ ತೆರಳುವುದಕ್ಕೆ ನಿರಾಕರಿಸಿರಬಹುದು ಎಂದು ಆರೋಪಿಸಿದರು.

ರಫೆಲ್‌ ಬಗ್ಗೆ ಮಾಹಿತಿ ಸಿಕ್ಕಿದೆ: ರಫೆಲ್‌ ಯುದ್ಧ ವಿಮಾನದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಾವು ಹಂಚಿಕೊಂಡ ಮಾಹಿತಿ ಕುರಿತು ಪ್ರತಿಕ್ರಿಸಿದ ಪ್ರಿಯಾಂಕ್ ಖರ್ಗೆ, ರಫೆಲ್‌ ಸಾಮರ್ಥ್ಯದ ಬಗ್ಗೆ ನಾವು ಪ್ರಶ್ನಿಸುತ್ತಿಲ್ಲ. ಆದರೆ, ಅದರ ವೆಚ್ಚದ ಬಗ್ಗೆ ಪ್ರಶ್ನಿಸುತ್ತಿದ್ದೇವೆ. ಪೇಪರ್‌ ಬೋಟ್‌ ಮಾಡುವ ಸಂಸ್ಥೆಗೆ ರಫೆಲ್‌ ಫೈಟರ್‌ ಜೆಟ್‌ ಉತ್ಪಾದನೆಗೆ ಅನುಮತಿಸಲಾಗಿದೆ. ಅದನ್ನು ಪ್ರಶ್ನಿಸುತ್ತಿದ್ದೇವೆ. ಆಪರೇಷನ್‌ ಸಿಂಧೂರದ ಸಮಯದಲ್ಲಿ ರಫೆಲ್‌ ಯುದ್ಧ ವಿಮಾನಗಳು ಪತನಗೊಂಡಿರುವ ಕುರಿತು ವದಂತಿಯಿದೆ. ಅದರ ಬಗ್ಗೆ ಫ್ರಾನ್ಸ್‌ಗೆ ಪ್ರವಾಸ ಕೈಗೊಂಡಾಗ ಮಾಹಿತಿ ದೊರೆಯಿತು ಎಂದರು.