ಯಾವುದೇ ವಿವರಣೆಯಿಲ್ಲದೆ ಒಬ್ಬ ಸಚಿವರಿಗೆ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ನಿರಾಕರಿಸುವುದು ಗಂಭೀರ ಕಳವಳ ಹುಟ್ಟುಹಾಕುತ್ತದೆ. ಇದು ರಾಜ್ಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.

ಬೆಂಗಳೂರು (ಜೂ.21): ಐಟಿ-ಬಿಟಿ ಸಚಿವನಾಗಿ ನಾನು ಕೈಗೊಂಡಿದ್ದ ಅಧಿಕೃತ ಅಮೆರಿಕ ಭೇಟಿಗೆ ರಾಜಕೀಯ ಅನುಮತಿ ನಿರಾಕರಿಸಿರುವುದಕ್ಕೆ ಸ್ಪಷ್ಟನೆ ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಲಿಖಿತ ಸ್ಪಷ್ಟೀಕರಣ ನೀಡುತ್ತಾರೆಂದು ಆಶಿಸಿದ್ದೇನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾವುದೇ ವಿವರಣೆಯಿಲ್ಲದೆ ಒಬ್ಬ ಸಚಿವರಿಗೆ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ನಿರಾಕರಿಸುವುದು ಗಂಭೀರ ಕಳವಳ ಹುಟ್ಟುಹಾಕುತ್ತದೆ. ಇದು ರಾಜ್ಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಸಂಪುಟ ಸಚಿವ ಹಾಗೂ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಶಕ್ತಿಯಾಗಿರುವ ಕರ್ನಾಟಕದ ಐಟಿ-ಬಿಟಿ ಸಚಿವರಿಗೆ ಅನುಮತಿ ನಿರಾಕರಿಸಿದೆ. ಮಾತ್ರವಲ್ಲದೆ, ಸಹಕಾರಿ ಒಕ್ಕೂಟ ವ್ಯವಸ್ಥೆಯ ಚೈತನ್ಯವನ್ನೂ ಕಡೆಗಣಿಸುತ್ತದೆ. ಹೀಗಾಗಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಪತ್ರದಲ್ಲೇನಿದೆ?: ಜೂ.14 ರಿಂದ 27ರವರೆಗೆ ಯುಎಸ್‌ ಭೇಟಿಗೆ ಅಧಿಕೃತ ಕಾರ್ಯಕ್ರಮ ನಿಗದಿಯಾಗಿತ್ತು. ಬೋಸ್ಟನ್‌ಲ್ಲಿ ಬಯೋ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಹಾಗೂ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಸಮಾವೇಶವೊಂದರಲ್ಲಿ ಭಾಗವಹಿಸಬೇಕಾಗಿತ್ತು. ಜತೆಗೆ ಪ್ರಮುಖ ಕಂಪೆನಿಗಳು, ವಿಶ್ವವಿದ್ಯಾಲಯ, ಸಂಸ್ಥೆಗಳೊಂದಿಗೆ ಸಭೆ ನಡೆಸುವ ಉದ್ದೇಶವಿತ್ತು. ಸಹಯೋಗ ಬಲಪಡಿಸುವ ಜತೆಗೆ ಬಂಡವಾಳ ಹೂಡಿಕೆ, ಉದ್ಯೋಗವಕಾಶ ಸೃಷ್ಟಿ ಒಡಂಬಡಿಕೆಗಳ ಬಗ್ಗೆ ಚರ್ಚಿಸಬೇಕಾಗಿತ್ತು. ಕರ್ನಾಟಕವು ತಂತ್ರಜ್ಞಾನದ ರಾಜಧಾನಿ.

ದೇಶಕ್ಕೆ ಮಾತ್ರವಲ್ಲ ಏಷ್ಯಾ ಪೆಸಿಫಿಕ್ ಪ್ರಾಂತ್ಯದ ಅಭಿವೃದ್ಧಿ ಎಂಜಿನ್. ಸ್ಟಾರ್ಟಪ್ ಹಾಗೂ ಆವಿಷ್ಕಾರಗಳಲ್ಲಿ ಜಾಗತಿಕ ನಾಯಕನ ಸಾಲಿನಲ್ಲಿ ನಿಂತಿರುವ ರಾಜ್ಯ ನಮ್ಮದು. ಇಂತಹ ರಾಜ್ಯದ ಐಟಿ-ಬಿಟಿ ಸಚಿವರಿಗೆ ರಾಜಕೀಯ ಅನುಮತಿ ನಿರಾಕರಿಸಿದ್ದು ಯಾಕೆ ಎಂಬ ಬಗ್ಗೆ ಕಾರಣ ತಿಳಿಸದಿರುವುದು ಸರಿಯಲ್ಲ. ವಿನಾಕಾರಣ ಅನುಮತಿ ನಿರಾಕರಣೆ ನಮ್ಮ ಮುಂದಿನ ಕಾರ್ಯಕ್ರಮಗಳ ಯೋಜನೆಗಳಿಗೂ ತೊಂದರೆ ಉಂಟು ಮಾಡುತ್ತದೆ ಎಂದು ಪ್ರಿಯಾಂಕ್‌ ಖರ್ಗೆ ಪತ್ರದಲ್ಲಿ ವಿವರಿಸಿದ್ದಾರೆ.