ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಕಲಹ ನಡೆಯುವುದು ಗ್ಯಾರಂಟಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ದಾವಣಗೆರೆ (ಜೂ.15): ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಕಲಹ ನಡೆಯುವುದು ಗ್ಯಾರಂಟಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ಆಪ್ತರು ಸಿಎಂ ಕುರ್ಚಿ ಖಾಲಿ ಇಲ್ಲ ಎನ್ನುತ್ತಿದ್ದಾರೆ. ಆದರೆ, ಈಗಾಗಲೇ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ ಎಂದರು. ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೊಡುತ್ತಾರೋ, ಇಲ್ಲವೋ ಅದು ಕಾಂಗ್ರೆಸ್ ಆಂತರಿಕ ವಿಚಾರ. ಆದರೆ, ಬೀದಿಜಗಳ, ಸಂಘರ್ಷ ಆಗೋದು ಗ್ಯಾರಂಟಿ ಎಂದು ಹೇಳಿದರು.
ವಿಶ್ವಮಟ್ಟದಲ್ಲಿ ಭಾರತ ಗೌರವ ವೃದ್ಧಿಸಿದ ಮೋದಿ: ಅಜಾತಶತೃ ಅಟಲ್ ಬಿಹಾರಿ ವಾಜಪೇಯಿ ನಂತರ ದೇಶವನ್ನು ಸಮರ್ಥವಾಗಿ, ಸದೃಢವಾಗಿ ಮುನ್ನಡೆಸುತ್ತಾ, 11 ವರ್ಷಗಳಲ್ಲಿ ವಿಶ್ವ ಮೆಚ್ಚುವಂತಹ ಆಡಳಿತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಆಡಳಿತ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವ ಮೂಲಕ ವಿಶ್ವದಲ್ಲಿ ಭಾರತದ ಗೌರವವು ನೂರ್ಮಡಿ ಆಗುವಂತೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಆಳ್ವಿಕೆಯಲ್ಲಿ ಕಾಮನ್ ವೆಲ್ತ್, 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಸೇರಿದಂತೆ ಸಾಲು ಸಾಲು ಹಗರಣಗಳು ನಡೆದಿದ್ದವು. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ದೇಶದಲ್ಲಿ ಬದಲಾವಣೆಯ ಗಾಳಿ ಶುರುವಾಯಿತು. ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದರು. ವಿಶ್ವ ಬ್ಯಾಂಕ್ ವರದಿಯಂತೆ ದೇಶದಲ್ಲಿ ಬಡತನ ಪ್ರಮಾಣ 27.1ರಿಂದ 5.3ಕ್ಕೆ ಇಳಿದಿದೆ. ಕೋವಿಡ್ ಸಂದರ್ಭದಲ್ಲಿ ಸುಮಾರು 100 ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದ್ದಷ್ಟೇ ಅಲ್ಲ, ಬೇರೆ ದೇಶಗಳಿಗೂ ಲಸಿಕೆ ಪೂರೈಸುವ ಮೂಲಕ ಕೋಟ್ಯಾಂತರ ಜೀವ ಉಳಿಸಿದ ಶ್ರೇಯವೂ ಭಾರತಕ್ಕೆ ಸಲ್ಲುವಂತೆ ಮಾಡಿದ್ದು ಮೋದಿ ಎಂದು ಪ್ರಧಾನಿ ಸಾಧನೆಗಳನ್ನು ಸ್ಮರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಜನತೆ ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಎಂಬುದು ರಾಹುಲ್ ಗಾಂಧಿ ಕೃಪಾಪೋಷಿತ ಮಂಡಳಿಯಾಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವು ಭ್ರಷ್ಟ, ಕೊಲೆಗಡುಕ ಸರ್ಕಾರವಾಗಿದೆ ಎಂದು ಟೀಕಿಸಿದರು. ಬಿಜೆಪಿ ಮುಖಂಡರಾದ ಅರಕೆರೆ ನಾಗರಾಜ, ಬೀರಪ್ಪ, ರಂಗಪ್ಪ, ಮಾರುತಿ ನಾಯ್ಕ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು, ಎಂ.ಕೆ.ಶಿವಾಜಿ ಇತರರು ಇದ್ದರು.