ಆತಂಕದಿಂದ ಜೆಡಿಎಸ್‌ ವಿರುದ್ಧ ಒಳ ಒಪ್ಪಂದದ ಆರೋಪ, ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌-ಬಿಜೆಪಿ ಷಡ್ಯಂತ್ರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 

ಬೆಂಗಳೂರು(ಮಾ.31):  ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಮ್ಮ ವಿರುದ್ಧ ಒಳ ಒಪ್ಪಂದದ ಆರೋಪಗಳನ್ನು ಮಾಡುತ್ತಿದ್ದು, ಬಹುಮತ ಪಡೆಯುವ ಭರವಸೆ ಇಲ್ಲದ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕಾರಣ ಆತಂಕ ಶುರುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.

ಗುರುವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌-ಬಿಜೆಪಿ ಒಟ್ಟಾಗಿ ಜೆಡಿಎಸ್‌ ವಿರುದ್ಧ ಷಡ್ಯಂತ್ರ ರೂಪಿಸಿ ಎ ಟೀಮ್‌, ಬಿ ಟೀಮ್‌ನಂತೆ ಕೆಲಸ ಮಾಡುತ್ತಿವೆ. ಎರಡೂ ಪಕ್ಷಗಳಿಗೆ ನಾಚಿಕೆಯಾಗಬೇಕು. ಇನ್ನಾದರೂ ಎರಡು ಪಕ್ಷಗಳು ಒಳ ಒಪ್ಪಂದ ಆರೋಪವನ್ನು ನಿಲ್ಲಿಸಬೇಕು. ಜೆಡಿಎಸ್‌ ಪಕ್ಷವನ್ನು ಟೀಕೆ ಮಾಡುವುದೇ ನಿತ್ಯ ಕಾಯಕವಾಗಿದೆ. ಬಿಜೆಪಿ-ಕಾಂಗ್ರೆಸ್‌ಗೆ ಭೀತಿ ಎಷ್ಟಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರಲ್ಲ: ಡಿ.ಕೆ.ಶಿವಕುಮಾರ್‌

ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ ನಾಯಕರ ಜತೆ ಮಾತುಕತೆಯಾಗಿದೆ ಎನ್ನುತ್ತಾರೆ. ಮೈಸೂರಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಜತೆ ಜೆಡಿಎಸ್‌ ಒಳ ಒಪ್ಪಂದ ಆಗಿದೆ ಎಂದು ಹೇಳುತ್ತಾರೆ. ಇಬ್ಬರಿಗೆ ಇದು ಬಿಟ್ಟು ಬೇರೆ ವಿಚಾರವೇ ಇಲ್ಲ. ಜೆಡಿಎಸ್‌ನವರು ಎಲ್ಲಿ ಬಿಜೆಪಿ ಜತೆ ಹೋಗುತ್ತಾರೆ ಎಂದು ಕಾಂಗ್ರೆಸ್‌ನವರಿಗೆ ಮತ್ತು ಕಾಂಗ್ರೆಸ್‌ ಜತೆ ಎಲ್ಲಿ ಹೋಗುತ್ತಾರೆ ಎಂದು ಬಿಜೆಪಿಯವರಿಗೆ ಭಯವಿದೆ. ಹೀಗಾಗಿ ಪದೇ ಪದೇ ನಮ್ಮನ್ನು ಕೆಣಕುತ್ತಿದ್ದಾರೆ. ನಾನು ಈ ಬಾರಿ 123 ಕ್ಷೇತ್ರಗಳನ್ನು ಗುರಿ ಇಟ್ಟುಕೊಂಡು ಹೊರಟಿದ್ದೇನೆ. ಅದನ್ನು ಎರಡು ಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾಲ್ಕೈದು ಸಮೀಕ್ಷೆಯ ವರದಿಗಳು ಬಂದಿವೆ. ಸಮೀಕ್ಷೆಗಳ ಬಗ್ಗೆ ಆತಂಕವಿಲ್ಲ. ಸಿ ವೋಟರ್‌ ಹಿಂದೆ ಕಾಂಗ್ರೆಸ್‌ 120 ಎಂದು ಭವಿಷ್ಯ ಹೇಳಿತ್ತು. ಕಾಂಗ್ರೆಸ್‌ ಎಷ್ಟುಸೀಟುಗಳಲ್ಲಿ ಗೆಲುವು ಸಾಧಿಸಿತು? ರಾಷ್ಟ್ರೀಯ ಪಕ್ಷಗಳು ತಮ್ಮ ಕಾರ್ಯತಂತ್ರದ ಭಾಗವಾಗಿ ಯಾವುದೋ ಕಂಪನಿಗಳ ಹೆಸರು ಹಾಕಿ ಸಮೀಕ್ಷೆ ವರದಿ ಎಂದು ಬಿಡುಗಡೆ ಮಾಡುತ್ತಿವೆ. ನಾನು ಸಹ ದುಡ್ಡು ಕೊಟ್ಟು ಈ ರೀತಿ ಮಾಡಬಹುದು. ಅಂತಹ ಅಗತ್ಯ ನನಗಿಲ್ಲ ಎಂದ ಅವರ, ಮುಂದೆ ಬಿಜೆಪಿ, ಕಾಂಗ್ರೆಸ್‌ ಮೈತ್ರಿಯಾದರೂ ಅಚ್ಚರಿ ಇಲ್ಲ. ನನ್ನ ಮೈತ್ರಿ ಸರ್ಕಾರ ತೆಗೆಯಲು ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುವ ಹಣ ಕೊಟ್ಟವ್ಯಕ್ತಿಗೆ ಮದ್ದೂರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೊಡಲು ಮುಂದಾಗಿದೆ. ಅದೇ ವ್ಯಕ್ತಿಯ ಬಿಜೆಪಿ ಜತೆಗಿನ ಸಂಬಂಧ ಎಂತಹದ್ದು? ಆತ ಶ್ರೀಲಂಕಾಗೆ ಓಡಿ ಯಾಕೆ ಓಡಿದ್ದ ಹೋಗಿದ್ದ ಎಂದು ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡರು.

ಎಚ್ಡಿಕೆ ಮುಖ್ಯಮಂತ್ರಿಯಾಗುವುದು ಶತಸಿದ್ಧ: ರವೀಂದ್ರ ಶ್ರೀಕಂಠಯ್ಯ

ಇದೇ ವೇಳೆ ಚುನಾವಣಾ ನೀತಿ ಸಂಹಿತೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೇಲೆ ಹೇರಬೇಡಿ. ಬಡವರ ಚಿಕಿತ್ಸೆಗೆ ನೆರವಾಗಲು ಸಿಎಂ ಪರಿಹಾರ ನಿಧಿ ಬಳಕೆಗೆ ಅವಕಾಶ ನೀಡಬೇಕು. ನೀತಿ ಸಂಹಿತೆ ಹೆಸರಲ್ಲಿ ಬಡವರ ಜೀವ ತೆಗೆಯುವುದು ಬೇಡ. ಇವತ್ತು 10-20 ಲಕ್ಷ ರು. ಕಟ್ಟಲು ಸಾಧ್ಯವಾಗದೆ ನಿತ್ಯ ಜನ ಮನೆ ಮುಂದೆ ಬರುತ್ತಿದ್ದಾರೆ. ಅವರಿಗೆ ನೆರವಾಗಲು ಅವಕಾಶ ಮಾಡಿಕೊಡಬೇಕು ಎಂದು ಚುನಾವಣಾ ಆಯೋಗಕ್ಕೆ ಸಲಹೆ ನೀಡಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.