: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಶಾಸಕರ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ​ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಬೇಲೂರು (ಸೆ.10) : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಶಾಸಕರ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ​ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಇಲ್ಲಿನ ತಾಲೂಕು ಪಂಚಾಯ್ತಿ ಕಟ್ಟಡ ಮುಂಭಾಗ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಭೋಗಮಲ್ಲೇಶ್‌ ಮಾತನಾಡಿ, ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಹದ್ದುಬಸ್ತಿನಲ್ಲಿಡಲು ವಿಫಲವಾಗಿರುವ ಶಾಸಕರ ವಿರುದ್ಧ ಎಚ್ಚರಿಕೆ ನೀಡುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ತಾಲೂಕಿನ ಯಾವುದೇ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಆಗಬೇಕೆಂದರೆ ಪ್ರತಿ ಕೆಲಸಗಳಿಗೆ ಲಂಚ ನೀಡಬೇಕು. ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ ಅವರನ್ನು ಭೇಟಿ ಮಾಡಲು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಬೊಮ್ಮಾಯಿ ಸರಿಯಾಗಿ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮೀಗೌಡ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹಾಗೂ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟಎದುರಿಸುತ್ತಿದ್ದರೂ ಸಮಸ್ಯೆಗೆ ಸ್ಪಂದಿಸದೆ ಬಾಯಿ ಮಾತಿನಲ್ಲೇ ಭರವಸೆ ನೀಡುತ್ತಿರುವುದು ಅಸಮರ್ಥ ಶಾಸಕರು ಎಂಬುವುದಕ್ಕೆ ಸಾಕ್ಷಿಯಾಗಿದೆ. ಪ್ರತೀ ಇಲಾಖೆಗಳಲ್ಲಿ ಜನಸಾಮಾನ್ಯರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು 100 ರಿಂದ 500 ಲಂಚ ಕೊಟ್ಟು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಬಗ್ಗೆ ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೊಜನವಾಗಿಲ್ಲ. ಅಧಿ​ಕಾರಿಗಳ ಜೊತೆ ಶಾಸಕರು ಶಾಮೀಲಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಇಲ್ಲಿ ನ್ಯಾಯಯುತವಾಗಿ ಪ್ರತಿಭಟನೆ ಮಾಡುತ್ತಿದ್ದರೆ, ಶಾಸಕರ ಹಿಂಬಾಲಕರು ಗುಂಡಾಗಿರಿ ದಬ್ಬಾಳಿಕೆ ಮಾಡುವ ಮೂಲಕ ಪ್ರತಿಭಟನೆಕಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಇನ್ನೂ ಉಗ್ರವಾದ ಹೋರಾಟ ಮುಂದುವರೆಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ್‌, ಸಚಿನ್‌, ಬಸವೇಗೌಡ, ಪ್ರದೀಪ್‌ ಇತರರು ಹಾಜರಿದ್ದರು

ಶಾಸಕರ ಪರ, ರೈತ ಸಂಘದ ವಿರುದ್ಧ ಪ್ರತಿಭಟನೆ:

ಶಾಸಕರ ವೈಫಲ್ಯ ಖಂಡಿಸಿ ರೈತ ಸಂಘದವರು ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವು ಜೆಡಿಎಸ್‌ ಕಾರ್ಯಕರ್ತರು ಶಾಸಕ ಕೆ.ಎಸ್‌. ಲಿಂಗೇಶ್‌ ಪರವಾಗಿ ಜೈಕಾರ ಹಾಕಿ ರೈತ ಸಂಘದ ವಿರುದ್ಧ ಧಿಕ್ಕಾರ ಕೂಗಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕು ಯುವ ಘಟಕದ ಅಧ್ಯಕ್ಷ ಬಿಟ್ರುವಳ್ಳಿ ಉಮೇಶ್‌ ಮಾತನಾಡಿ, ರೈತರ ಹೆಸರಿನಲ್ಲಿ ಹಸಿರು ಶಾಲು ಹೊದ್ದು ನಕಲಿ ರೈತರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಿಜವಾದ ರೈತರು ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶದಲ್ಲಿ ಬೆಳೆ ಹಾಳಾಗಿ ಪರಿಹಾರಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸುತ್ತಿದ್ದಾರೆ ಎಂದರು.

ಇಲ್ಲಿರು ನಕಲಿ ರೈತರು ಕಾಂಗ್ರೆಸ್‌ ಬಿಜೆಪಿ ಏಜೆಂಟರಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಶಾಸಕರು ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈಗಾಗಲೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ ತಾಲೂಕಿನಲ್ಲಿ ಎಷ್ಟುಅಭಿವೃದ್ಧಿ ಕೆಲಸಗಳಾಗಿವೆ ಎಂಬುವುದನ್ನು ಜನರಿಗೆ ಗೊತ್ತಿದೆ. ಯಾವುದೇ ಕೆಲಸಕ್ಕೂ ಶಾಸಕರು ಲಂಚವನ್ನು ಪಡೆದಿರುವುದಿಲ್ಲ. ಅವರು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸಿದ್ದು ಬಂದು ಚರ್ಚೆ ಮಾಡಲಿ ಅದನ್ನು ಬಿಟ್ಟು ಅವರ ರಾಜಕಾರಣ ಏಳಿಗೆ ಸಹಿಸದೆ ಈ ರೀತಿ ಅಪಪ್ರಚಾರ ಮಾಡುತ್ತಿರುವುದುನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಮಹದಾಯಿ ಯಾರಿಗೂ ಬೇಡದ ಕೂಸು ಅನ್ನುವಂತೆ ರಾಜಕೀಯ ಪಕ್ಷಗಳು ಮಾಡ್ತಿವೆ: ವಿರೇಶ ಸೊಬರದಮಠ

ದಿಶಾ ಸಮಿತಿ ಸದಸ್ಯ ನವೀನ್‌ ಹಾಗೂ ಜೆಡಿಎಸ್‌ ಮುಖಂಡ ಹಗರೆ ದಿಲೀಪ್‌ ಮಾತನಾಡಿ, ಶಾಸಕರು ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಇವರೆಲ್ಲಾ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದ ಎಂಜೆಂಟರುಗಳನ್ನೆಲ್ಲಾ ಕರೆದುಕೊಂಡು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ನಿಜವಾದ ರೈತರ ಬಗ್ಗೆ ನಮಗೂ ಗೌರವವಿದ್ದು ಅನ್ಯಾಯ ನಡೆದಿದ್ದರೆ ನಾವೂ ಸಹ ಅವರ ಜೊತೆ ಪಕ್ಷಾತೀತವಾಗಿ ಪ್ರತಿಭಟನೆಯನ್ನು ಮಾಡುತ್ತೇವೆ. ಈ ನಕಲಿ ರೈತರ ವಿರುದ್ಧ ನಾವು ಸಹ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕಾಂತರಾಜ್‌, ದಿಲೀಪ್‌, ವಿಜಯಕುಮಾರ್‌, ಕುಮಾರ್‌, ಮಲ್ಲಿಕಾರ್ಜುನ, ಗಿರೀಶ್‌ ಇತರರು ಹಾಜರಿದ್ದರು.