Asianet Suvarna News Asianet Suvarna News

ಬೊಮ್ಮಾಯಿ ಸರಿಯಾಗಿ ಕೆಲಸ ಮಾಡುತ್ತಿಲ್ಲ: ಸಿದ್ದರಾಮಯ್ಯ

ರಾಜಕಾಲುವೆಗಳ ಒತ್ತುವರಿ ತೆರವು ಮಾಡದಿರುವುದು ಮತ್ತು ಕೆರೆ ಹೂಳು ತೆಗೆಯದಿರುವುದು ಇಂದಿನ ಪ್ರವಾಹ ಪರಿಸ್ಥಿತಿಗೆ ಕಾರಣ. ತನ್ನ ಕೆಲಸವನ್ನು ಸರಿಯಾಗಿ ಮಾಡದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಯೊಂದಕ್ಕೂ ಹಿಂದಿನ ಸರ್ಕಾರಗಳು ಕಾರಣ ಎನ್ನುವ ಮೂಲಕ ನುಣಿಚಿಕೊಳ್ಳುತ್ತಿದ್ದಾರೆ - ಸಿದ್ದರಾಮಯ್ಯ

Basavaraj Bommai is not working properly says Siddaramaiah at bengaluru rav
Author
First Published Sep 9, 2022, 6:39 AM IST

ಬೆಂಗಳೂರು (ಸೆ.9) :ರಾಜಕಾಲುವೆಗಳ ಒತ್ತುವರಿ ತೆರವು ಮಾಡದಿರುವುದು ಮತ್ತು ಕೆರೆ ಹೂಳು ತೆಗೆಯದಿರುವುದು ಇಂದಿನ ಪ್ರವಾಹ ಪರಿಸ್ಥಿತಿಗೆ ಕಾರಣ. ತನ್ನ ಕೆಲಸವನ್ನು ಸರಿಯಾಗಿ ಮಾಡದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಯೊಂದಕ್ಕೂ ಹಿಂದಿನ ಸರ್ಕಾರಗಳು ಕಾರಣ ಎನ್ನುವ ಮೂಲಕ ನುಣಿಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

 

Bengaluru Flood: ಬೆಂಗಳೂರಿನ ನೆರೆಪೀಡಿತ ಪ್ರದೇಶಗಳಲ್ಲಿ ಸಿದ್ದು ಸಂಚಾರ, ಸಮೀಕ್ಷೆ

ಮಹದೇವಪುರದಲ್ಲಿ ಮಳೆ ಹಾನಿಯಿಂದ ತೊಂದರೆಯಾಗಿರುವ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ ಅವರು, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ರಸ್ತೆಗಳನ್ನು ಮಾಡಿಕೊಂಡಿದ್ದಾರೆ. ಕೆರೆಗಳ ಹೂಳು ತೆಗೆದಿಲ್ಲ. ಈ ಬಗೆಗಿನ ತಮ್ಮ ಹೊಣೆಗಾರಿಕೆ ನಿಭಾಯಿಸದೇ ಹಿಂದಿನ ಸರ್ಕಾರಗಳ ಮೇಲೆ ಮುಖ್ಯಮಂತ್ರಿ ದೂರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ ಎಂದು ಹೇಳಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಆಯ್ತು. ಮಳೆಯಿಂದ ಪ್ರವಾಹ ಬಂದರೆ, ಹಾನಿ ತಡೆಗಟ್ಟಲು ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ. ದುಡ್ಡು ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರಾಜಕಾಲುವೆಗೆ 1953 ಒತ್ತುವರಿಗಳನ್ನು ಗುರುತು ಮಾಡಿದ್ದೆವು. ಈ ಪೈಕಿ 1300 ಒತ್ತುವರಿಗಳನ್ನು ತೆರವುಗೊಳಿಸಿದ್ದೆವು. ಉಳಿದ 653 ಒತ್ತುವರಿಗಳನ್ನು ತೆರವುಗೊಳಿಸುವುದರೊಳಗೆ ಅಧಿಕಾರವಧಿ ಮುಗಿದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತೆರವು ಮಾಡಿಸಬೇಕಿತ್ತು. ಅದನ್ನು ಮಾಡದೆ ಈ ಪರಿಸ್ಥಿತಿಗೆ ಹಿಂದಿನ ಸರ್ಕಾರ ಕಾರಣ ಎನ್ನುವುದು ಸಮಂಜಸವಲ್ಲ. ಅಧಿಕಾರದಲ್ಲಿರುವ ನೀವು ಏನು ಮಾಡಿದ್ದೀರಿ?’ ಎಂದು ಪ್ರಶ್ನಿಸಿದರು.

‘ನಮ್ಮ ಸರ್ಕಾರ ಮುಗಿದ ಮೇಲೆ ಏನೂ ಕೆಲಸ ಮಾಡಿಲ್ಲ. ಒತ್ತುವರಿ ತೆರವು ಮಾಡಿಲ್ಲ. ಕೆರೆಗಳ ಹೂಳೆತ್ತುವ ಕೆಲಸ ಮಾಡಿಲ್ಲ. ಅದರ ಪರಿಣಾಮ ಇವತ್ತು ಎಲ್ಲ ಪ್ರತಿಷ್ಠಿತ ಏರಿಯಾಗಳು ಸೇರಿದಂತೆ ಎಲ್ಲ ಕಡೆ ಜನರು ಕಷ್ಟಅನುಭವಿಸುವಂತಾಗಿದೆ. ರಾಜಕಾಲುವೆ ಒತ್ತುವರಿಯಿಂದ ಹಲವೆಡೆ ರಾಜಕಾಲುವೆ ಚಿಕ್ಕದು ಮಾಡಲಾಗಿದೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ಅಪಾರ್ಚ್‌ಮೆಂಟ್‌ಗಳಿಗೆ ಪರವಾನಗಿ ಕೊಡಲಾಗಿದೆ. ಕೆರೆಗಳ ಮತ್ತು ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿಲ್ಲ’ ಎಂದು ಆರೋಪಿಸಿದರು.

Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ

‘ಸೋಮವಾರ ಹಾಗೂ ಮಂಗಳವಾರ 148 ಮಿಮೀ ಮಳೆಯಾಗಿದೆ. ಅನೇಕ ಬಡವಣೆಗಳಿಗೆ ನೀರು ತುಂಬಿಕೊಂಡು ಬೋಟ್‌ಗಳಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬೋಟ್‌ಗಳಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ರಸ್ತೆಗಳಲ್ಲಿ, ಮನೆಗಳಲ್ಲಿ ನೀರು ತುಂಬಿಕೊಂಡಿದ್ದು ಈ ಹಿಂದೆ ಯಮಲೂರಿನ ಎಪ್ಸಿಲಾನ್‌ ಲೇಔಟ್‌ನಲ್ಲಿ ಸುಮಾರು 12 ಅಡಿ ನೀರು ಇತ್ತು. ಈಗ 4 ಅಡಿಗೆ ಇಳಿಕೆಯಾಗಿದೆ. ಹಲವರು ಮನೆಗಳನ್ನು ಖಾಲಿ ಮಾಡಿಕೊಂಡು ಬೇರೆ ಕಡೆಗೆ ಹೋಗಿದ್ದಾರೆ. ಕೆಲವರು ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದಾರೆ’ ಎಂದು ಬೇಸರಿಸಿದರು. ಕೂಡಲೇ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳಿಗೆ ಪರಿಹಾರ ಕೊಡಬೇಕು. ಶೀಘ್ರವೇ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Follow Us:
Download App:
  • android
  • ios