ಮಧ್ಯ ಕರ್ನಾಟಕ ಭಾಗದ ಜನರ ಜೀವನಾಡಿ ಭದ್ರಾ ಬಲದಂಡೆ ನಾಲೆ ಸೀಳಿ ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ದಾವಣಗೆರೆ (ಜೂ.25): ಮಧ್ಯ ಕರ್ನಾಟಕ ಭಾಗದ ಜನರ ಜೀವನಾಡಿ ಭದ್ರಾ ಬಲದಂಡೆ ನಾಲೆ ಸೀಳಿ ಚಿಕ್ಕಮಗಳೂರು, ತರೀಕೆರೆ, ಹೊಸದುರ್ಗ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಾಮಗಾರಿ ವಿರೋಧಿಸಿ ಸಿಡಿದೆದ್ದ ರೈತರು ರಾಷ್ಟ್ರೀಯ ಹೆದ್ದಾರಿ 4 ತಡೆದು ಪ್ರತಿಭಟನೆ ನಡೆಸಿದ್ದಾರೆ. ರೈತ ಪರ ಹೋರಾಟದ ವಿಚಾರದಲ್ಲಿಯೂ ದಾವಣಗೆರೆ ಜಿಲ್ಲಾ ಬಿಜೆಪಿ ಬಣ ಬಡಿದಾಟ ಜೋರಾಗಿದೆ. ಮೊನ್ನೆ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಎಂ.ಪಿ.ರೇಣುಕಾಚಾರ್ಯ & ಟೀಂ ಪ್ರತಿಭಟನೆ ನಡೆಸಿದ್ರೆ, ಇತ್ತ ದಾವಣಗೆರೆ ಡಿಸಿ ಕಚೇರಿಗೆ ತೆರಳಿ ಜಿ.ಎಂ.ಸಿದ್ದೇಶ್ವರ, ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಬಣ ಮನವಿ
ರಾಷ್ಟ್ರೀಯ ಹೆದ್ದಾರಿ ತಡೆದು ನಡೆದ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂ.ಪಿ.ರೇಣುಕಾಚಾರ್ಯ ತಮ್ಮ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ಒಗ್ಗೂಡಿ ಹೋರಾಡಬಹುದಿತ್ತಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ, 'ಇಲ್ಲಿ ಪಕ್ಷ ಇಲ್ಲ, ನಾವು ರೈತರು. ನಾವು ಪ್ರ್ಯಾಕ್ಟಿಕಲ್ ಹೋರಾಟಗಾರರು. ವೈಟ್ ಕಾಲರ್ ಅಲ್ಲ. ಸ್ಥಳವೇ ಗೊತ್ತಿಲ್ಲ ಇವರಿಗೆ, ನಾಟಕ ಮಾಡಲು ಮೊನ್ನೆ ಡಿಸಿ ಕಚೇರಿಗೆ ಮನವಿ ಕೊಡುತ್ತಾರೆ. ನೀವು ನೀರನ್ನು ಚಿತ್ರದುರ್ಗಕ್ಕೆ ಒಯ್ಯಲು ಬಯಸುತ್ತೀರಾ?
ನಾನು ರೈತ ಒಕ್ಕೂಟ ಬಗ್ಗೆ ಮಾತನಾಡಲು ಇಚ್ಚೆ ಪಡಲ್ಲ. ನೀವು ಸ್ಥಳಕ್ಕೆ ಭೇಟಿ ಕೊಟ್ಟಿದ್ದೀರಾ? ನಿಮಗೆ ಕ್ಷೇತ್ರದಲ್ಲಿ ಜನ ಛೂ ತೂ ಅಂತಾರೆ ಅಂತಾ ಫೋಟೋ ಶೂಟ್‌ಗೆ ಅಷ್ಟೇ ಡಿಸಿ ಬಳಿ ಹೋಗಿ ಮನವಿ ಕೊಡ್ತೀರಿ. ಒಬ್ಬರಾದರೂ ಹಸಿರು ಶಾಲು ಹಾಕಿಕೊಂಡಿದ್ದಾರಾ? ಅವರೆಲ್ಲಾ ವೈಟ್ ಕಾಲರ್ಸ್. ಚಿತ್ರದುರ್ಗಕ್ಕೆ ನೀರು ಒಯ್ಯಬೇಕು ಅಂತಾ ಕುತಂತ್ರ ಇದೆ. ಅವರೆಲ್ಲಾ ಪೇಪರ್ ಟೈಗರ್ಸ್. ತಾಕತ್ ಇದ್ರೆ ಹೋರಾಟಕ್ಕೆ ಬರಬೇಕಾಗಿತ್ತು. ನಾವು ಹೋರಾಟ ಮಾಡಿ ರಾಜ್ಯ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ' ಎಂದು ತಿಳಿಸಿದ್ದಾರೆ.
ಭದ್ರಾ ಲಿಫ್ಟ್ ಇರಿಗೇಷನ್‌ಗೆ ನಮ್ಮ ಅಡ್ಡಿಯಿಲ್ಲ: ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಚಿಕ್ಕಮಗಳೂರು, ತರೀಕೆರೆ ಮತ್ತು ಹೊಸದುರ್ಗ ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡಲು ನಮ್ಮ ಪ್ರಬಲ ವಿರೋಧವಿದೆ. ಆದರೆ ಲಿಫ್ಟ್ ಇರಿಗೇಷನ್ ಮೂಲಕ ನೀರು ಕೊಡಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಕಾಮಗಾರಿಗೆ 1600 ಕೋಟಿ ರು. ಮಂಜೂರು ಮಾಡಿದ್ದರು. ಆದರೆ ಬಲದಂಡೆ ನಾಲೆಯನ್ನು ಸೀಳಿ ನೀರು ಕೊಡಿ ಎಂದು ಅವರು ಎಲ್ಲಿಯೂ ಹೇಳಿಲ್ಲ, ಈ ಬಗ್ಗೆ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ನಾನು ಮತ್ತು ಮಾಜಿ ಶಾಸಕ ಬಸವರಾಜನಾಯ್ಕ ಅವರು ಜೂನ್ 21 ರಂದು ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಜಲಾಶಯದ ಬಫರ್ ಜೋನ್ ನ ಕೆಳಗೆ ಕಾಮಗಾರಿ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ನಾಲೆಯನ್ನು ಸೀಳಿ ನೀರು ಕೊಡಲು ಸರ್ಕಾರ ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ. ಸರ್ಕಾರದ ಈ ನಿರ್ಧಾರದಿಂದ ನಮ್ಮ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ನೀರು ಹೋಗುವುದಿಲ್ಲ, ಈ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ ಎಂದು ಹೇಳಿದರು.
